Left Ad
Gharga Movie Review ; ವಿಧಿಯ ಚೇಷ್ಟೆ, ರೋಚಕತೆಯ ಪರಕಾಷ್ಠೆ - Chittara news
# Tags

Gharga Movie Review ; ವಿಧಿಯ ಚೇಷ್ಟೆ, ರೋಚಕತೆಯ ಪರಕಾಷ್ಠೆ

ಅನಾದಿಕಾಲದಿಂದಲೂ ನಮ್ಮ ದೇಶ-ರಾಜ್ಯಗಳು ಅಪಾರ ಸಿರಿ-ಸಂಪತ್ತು, ನಿಧಿ, ವಜ್ರ, ವೈಡೂರ್ಯಗಳಂತಹ ಐತಿಹಾಸಿಕ ವೈಭವವನ್ನು ಹೊತ್ತಿವೆ. ಇಂತಹ ಪಳೆಯುಳಿಕೆಗಳ ಸಂಶೋಧನೆ, ಉತ್ಖನನ, ಸಂರಕ್ಷಣೆಗಳ ಸುತ್ತ ಹೆಣೆದಿರುವ ನಿಗೂಢತೆ, ದಂತಕಥೆ, ಅತೀಂದ್ರಿಯ ನಂಬಿಕೆಗಳನ್ನೇ ಆಧಾರವನ್ನಾಗಿ ಮಾಡಿಕೊಂಡು ಮೂಡಿಬಂದಿರುವ ಚಿತ್ರವೇ “ಫಾರ್ಗಾ”. ಸಾಹಸ, ಕ್ರೈಂ, ಹಾರರ್, ಥ್ರಿಲ್ಲರ್ ಅಂಶಗಳನ್ನು ಸಮಪಾಲಿನಲ್ಲಿ ಮಿಶ್ರಣ ಮಾಡಿದ ಈ ಚಿತ್ರ ಪ್ರೇಕ್ಷಕರಿಗೆ ರೋಚಕ ಅನುಭವ ನೀಡುತ್ತದೆ.

ದಟ್ಟ ಕಾಡಿನ ನಡುವೆ ಇರುವ “ಫಾರ್ಗಾ” ಎಂಬ ಕುಗ್ರಾಮಕ್ಕೆ ಪುಸ್ತಕ ಸಂಶೋಧನೆಗಾಗಿ ಬರುವ ವಿಕ್ರಂ ಅಡಿಗ (ಅರುಣ್ ರಾಮಪ್ರಸಾದ್) ಅವರ ಪ್ರಯಾಣದಿಂದ ಕಥೆ ಆರಂಭವಾಗುತ್ತದೆ. ಅವರ ಜೊತೆ ವಾಹನ ಚಾಲಕ ಪುಂಡಲಿಕ (ಅರುಣ್ ನಾಗರ್) ಇರುತ್ತಾರೆ. ಖ್ಯಾತ ಇತಿಹಾಸ ತಜ್ಞ ಹಾಗೂ ಬರಹಗಾರ ಗಜಾನನ ಐತಾಳ್ (ಸಾಯಿ ಕುಮಾರ್) ಅವರನ್ನು ಭೇಟಿ ಮಾಡುವ ಮಾರ್ಗ ಮಧ್ಯೆ ಎದುರಾಗುವ ಅಗೋಚರ ಸದ್ದುಗಳು, ರಹಸ್ಯಮಯ ದಾಳಿ ಘಟನೆಗಳು ಕಥೆಗೆ ಸಸ್ಪೆನ್ಸ್ ಛಾಯೆ ನೀಡುತ್ತವೆ.

ವಿಕ್ರಂ ಸಂಶೋಧನೆಗೆ ಐತಾಳ್ ಬೆಂಬಲ ನೀಡುತ್ತಾ ಹೋಗುವಂತೆ, ನಿಗೂಢ ಸ್ಥಳ “ಚಂದ್ರಗಿರಿ ಗುಡ್ಡ” ಹಾಗೂ ಅಲ್ಲಿ ಇರುವ ಅಮೂಲ್ಯ “ಪರಮ ಲಿಂಗ” ವಿಗ್ರಹದ ರಹಸ್ಯ ಹೊರಬೀಳುತ್ತದೆ. ಅಪಾರ ಮೌಲ್ಯದ ಈ ವಿಗ್ರಹದ ಸುತ್ತ ಅಂಡರ್‌ವರ್ಲ್ಡ್ ಡಾನ್‌ಗಳು, ಸಂಚು ಗ್ಯಾಂಗ್‌ಗಳು, ರಹಸ್ಯ ಶಕ್ತಿಗಳು ಸೇರಿ ಹೆಣೆಯುವ ಕುತಂತ್ರಗಳು ಕಥೆಗೆ ಮತ್ತಷ್ಟು ರೋಚಕ ತಿರುವು ನೀಡುತ್ತವೆ. ಕ್ಲೈಮ್ಯಾಕ್ಸ್‌ವರೆಗೂ ಕುತೂಹಲ ಕಾಪಾಡಿಕೊಂಡು ಹೋಗುವ ನಿರೂಪಣೆ ಚಿತ್ರದ ಪ್ಲಸ್‌ ಪಾಯಿಂಟ್‌ ಆಗಿದೆ.

ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಶೇಷವಾಗಿ ಗಮನ ಸೆಳೆಯುತ್ತದೆ. ವಿಗ್ರಹ ಅಪಹರಣದ ತಂತ್ರ, ಅದರ ಸುತ್ತ ಹೆಣೆದ ಸಂಚು, ನಿಗೂಢ ನಂಬಿಕೆಗಳ ಬಳಕೆ ಎಲ್ಲಾ ಸೇರಿ ವಿಭಿನ್ನ ಅನುಭವ ನೀಡುತ್ತವೆ. ನಿರೂಪಣೆಯಲ್ಲಿನ ಹೊಸತನ ನಿರ್ದೇಶಕರ ದೊಡ್ಡ ಶಕ್ತಿ.

ತಾಂತ್ರಿಕ ವಿಭಾಗ ಚಿತ್ರದ ಮತ್ತೊಂದು ದೊಡ್ಡ ಶಕ್ತಿ. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಸಸ್ಪೆನ್ಸ್ ಓಟವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಛಾಯಾಗ್ರಹಣ ದಟ್ಟ ಕಾಡು, ನಿಗೂಢ ಸ್ಥಳಗಳ ವಾತಾವರಣವನ್ನು ಅದ್ಭುತವಾಗಿ ಹಿಡಿದಿಟ್ಟಿದೆ. ಸಾಹಸ ದೃಶ್ಯಗಳು, ಸಂಕಲನ, ಗ್ರಾಫಿಕ್ಸ್ ಚಿತ್ರಕ್ಕೆ ಮೆರುಗು ತಂದಿವೆ.

ನಟನೆಯಲ್ಲಿಅರುಣ್ ರಾಮಪ್ರಸಾದ್ ಸಂಶೋಧಕ-ಬರಹಗಾರನ ಪಾತ್ರದಲ್ಲಿ ಸಹಜ ಅಭಿನಯ ನೀಡಿ ಗಮನ ಸೆಳೆಯುತ್ತಾರೆ. ರಿಹಾನ ಶೇಖ್ ಸೀಮಿತ ಅವಕಾಶದಲ್ಲೂ ಮಿಂಚಿದ್ದಾರೆ; ವಿಶೇಷವಾಗಿ ರೀಮಿಕ್ಸ್ ಹಾಡಿನಲ್ಲಿ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಗಜಾನನ ಐತಾಳ್ ಪಾತ್ರಕ್ಕೆ ಗಂಭೀರತೆ ತುಂಬಿದ್ದಾರೆ. ಅರುಣ್ ಸಾಗರ್, ಸಂಪತ್ ರಾಜ್, ರಾಹುಲ್ ದೇವ್, ಮಿತ್ರ, ದೇವ್ ಗಿಲ್, ಸರ್ವಣ್ ಸೇರಿದಂತೆ ಉಳಿದವರು ನಿರ್ದೇಶಕರ ಕನಸಿಗೆ ಸಾಥ್‌ ನೀಡಿದ್ದಾರೆ.

ಒಟ್ಟಿನಲ್ಲಿ “ಫಾರ್ಗಾ” ಒಂದು ಅಡ್ಡೆಂಚರ್-ಡ್ರಾಮಾ ಥ್ರಿಲ್ಲರ್ ಅನುಭವ ನಿಡುತ್ತದೆ. ನಿಗೂಢತೆ, ಸಂಶೋಧನೆ, ನಿಧಿ ರಹಸ್ಯ, ಸಂಚು, ಅತೀಂದ್ರಿಯ ನಂಬಿಕೆ ಎಲ್ವನ್ನೂ ಸೇರಿಸಿ, ಸಸ್ಪೆನ್ಸ್ ಪ್ರಿಯರಿಗೆ ರೋಚಕ ಮನೋರಂಜನಾ ಪ್ಯಾಕೇಜ್ ನೀಡುತ್ತದೆ. ಥ್ರಿಲ್ಲರ್, ಕ್ರೈಂ, ಹಾರರ್ ಜಾನರ್ ಇಷ್ಟಪಡುವ ಪ್ರೇಕ್ಷಕರು ಮಿಸ್‌ ಮಾಡದೆ ನೋಡಲೇಬೇಕಾದ ಚಿತ್ರ  “ಫಾರ್ಗಾ”. ಇಂತಹ ವಿಭಿನ್ನ ಚಿತ್ರವನ್ನು ನಿರ್ಮಿಸಿದ ಆಶ್ವಿನಿ ರಾಮ್‌ಪ್ರಸಾದ್‌ ಅವರ ಸಿನಿಮಾ ಒಲವಿಗೊಂದು ಸೆಲ್ಯೂಟ್‌.

ರೆಟಿಂಗ್: 3.5 / 5

Spread the love
Translate »
Right Ad