ಬೆಂಗಳೂರು: ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಧ್ರುವ ಸರ್ಜಾ ಮಾತ್ರವಲ್ಲದೆ, ಅವರ ಮ್ಯಾನೇಜರ್, ಚಾಲಕ ಹಾಗೂ ಅಭಿಮಾನಿಗಳ ವಿರುದ್ಧವೂ ನೆರೆಮನೆಯ ಮನೋಜ್ ಎಂಬವರು ದೂರು ನೀಡಿದ್ದಾರೆ.

ದೂರು ಪ್ರಕಾರ, ಧ್ರುವ ಸರ್ಜಾ ಅವರ ಮನೆಗೆ ಬರುವ ಅಭಿಮಾನಿಗಳು ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕ್ ಮಾಡುವುದು, ಕೂಗಾಡುವುದು, ಸಿಗರೇಟು ಸೇದುವುದು, ಗುಟ್ಕಾ ಉಗಿಯುವುದು ಸೇರಿದಂತೆ ಅಸಭ್ಯ ವರ್ತನೆ ತೋರಿಸುತ್ತಿದ್ದಾರೆ. ಈ ಎಲ್ಲದಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಮನೋಜ್ ಅವರ ಆರೋಪ.
ಈ ಬಗ್ಗೆ ನಟನ ಮ್ಯಾನೇಜರ್ ಹಾಗೂ ಚಾಲಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಮನೋಜ್ ಅವರು ಪೊಲೀಸರ ಶರಣಾಗಿದ್ದಾರೆ. ಪೊಲೀಸರು ಈ ಕುರಿತು ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ. ಆದರೆ ದೂರುದಾರರು ಧ್ರುವ ಸರ್ಜಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ.
ಪೊಲೀಸರು ವಿಷಯವನ್ನು ಪರಿಶೀಲನೆಗೆ ತೆಗೆದುಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
 
             
        
