ಸಿಂಗಾಪುರ್‌ನಲ್ಲಿ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟಿದ್ದ ಅಸ್ಸಾಂ ಮೂಲದ ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರ ಅಂತ್ಯಕ್ರಿಯೆ ಗುವಾಹಟಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಕುಟುಂಬಸ್ಥರು, ಸಾವಿರಾರು ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಗಾರ್ಗ್ ಅವರಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರು ಕಿರಣ್ ರಿಜಿಜು ಮತ್ತು ಸರ್ಬಾನಂದ ಸೋನಾವಾಲ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನಮನ ಸಲ್ಲಿಸಿದರು.

ಅಂತಿಮ ಯಾತ್ರೆಗೆ ಭಾರಿ ಜನಸ್ತೋಮ ಸೇರುವ ಮೂಲಕ, ಇದು ವಿಶ್ವದಲ್ಲೇ ಅತಿ ಹೆಚ್ಚು ಜನರು ಭಾಗಿಯಾದ 4ನೇ ಅಂತಿಮ ಯಾತ್ರೆ ಎಂದು ದಾಖಲೆ ಬರೆದಿದೆ. ಈ ದಾಖಲೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದು, ಮೈಕೆಲ್ ಜಾಕ್ಸನ್, ಪೋಪ್ ಫ್ರಾನ್ಸಿಸ್, ರಾಜಕುಮಾರಿ ಡಯಾನಾ ಮತ್ತು ರಾಣಿ ಎಲಿಜಬೆತ್ ಅಂತಿಮ ಯಾತ್ರೆಗಳ ಪಂಗತಿಗೆ ಸೇರಿದೆ.
ಅಂತಿಮ ಯಾತ್ರೆಯ ವೇಳೆ ಅಭಿಮಾನಿಗಳು “ಜುಬೀನ್‌ಗೆ ಜಯವಾಗಲಿ, ಜುಬೀನ್ ದೀರ್ಘಕಾಲ ಉಳಿಯಲಿ” ಎಂಬ ಘೋಷಣೆಗಳನ್ನು ಕೂಗಿ ಭಾವುಕ ವಾತಾವರಣ ನಿರ್ಮಿಸಿದರು.
ಜುಬೀನ್ ಗಾರ್ಗ್ ಅವರ ಸಾವಿನ ಹಿಂದೆ ಯಾವುದೇ ಸಂಶಯಾಸ್ಪದ ಘಟನೆ ನಡೆದಿಲ್ಲ ಎಂದು ಖಚಿತಪಡಿಸಲು, ಸರ್ಕಾರ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿತ್ತು. ಅದರಂತೆ 2ನೇ ಬಾರಿಗೆ ಮರಣೋತ್ತರ ಪರೀಕ್ಷೆಯ ನಂತರವೇ ಅಂತ್ಯಕ್ರಿಯೆ ನೆರವೇರಿಸಲಾಯಿತು
