“ರಾಜಕುಮಾರ”, “ಕೆಜಿಎಫ್”, ” ಕಾಂತಾರ” ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯ ಇನ್ನೊಂದು ಕಾಣಿಕೆಯಾದ ‘ಯುವ’ ಚಿತ್ರದ ಮೂಲಕ ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ರವರು ಭರ್ಜರಿಯಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರಕ್ಕೆ ಸಂತೋಷ್ ಆನಂದರಾಮ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೊಕ್‌ನಾಥ್‌ರವರ ಸಂಗೀತ, ಶ್ರೀಶಾ ಕುದುವಲ್ಲಿರವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನು ನಾಯಕಿಯಾಗಿ ಸಪ್ತಮಿ ಗೌಡ ಇನ್ನುಳಿದಂತೆ ಅಚ್ಯುತ್‌ಕುಮಾರ್, ಸುಧಾರಾಣಿ, ಹಿತ, ಗಿರಿರಾಜ್, ಕಿಶೋರ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಯುವ ಚಿತ್ರ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಚಿತ್ರ ಇಂದು ರಾಜ್ಯಾಧ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬೆಂಗಳೂರು, ಹೊಸಪೇಟೆ, ಗಂಗಾವತಿ ಸೇರಿದಂತೆ ಹಲವಾರು ಕಡೆ ಬೆಳಗಿನ ಜಾವದ ಶೋಗಳು ಹೌಸ್ ಫುಲ್ ಗೊಂಡಿದ್ದು ಯುವ ರಾಜ್‌ಕುಮಾರ್ ರವರಿಗೆ ತಮ್ಮ ಮೊದಲ ಸಿನಿಮಾದಲ್ಲೆ ಈ ಪರಿ ರೆಸ್ಪಾನ್ಸ್ ಬಂದಿರುವುದು ದೊಡ್ಮನೆ ಅಭಿಮಾನಿಗಳಿಗೆ ಸಂತಸ ತಂದಿದೆ ಮತ್ತು ಚಂದನವನಕ್ಕೊಬ್ಬ ಮಾಸ್ ಹೀರೋ ಎಂಟ್ರಿ ಕೊಟ್ಟಿರುವ ಮುನ್ಸೂಚನೆ ದೊರೆತಂತಾಗಿದೆ.
ಇನ್ನು ಚಿತ್ರದ ಕಥೆಗೆ ಬಂದರೆ ಇಂದಿನ ಯುವ ಜನತೆಗೆ ಏನು ಬೇಕೋ ಅದೇ ವಿಷಯವನ್ನು ಆಯ್ದುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ಫ್ಯಾಮಿಲಿ ಆಡಿಯನ್ಸ್ನ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ತಂದೆ-ಮಗನ ಸೆಂಟಿಮೆಂಟ್ನ್ ಜೊತೆಗೆ ಒಂದೊಳ್ಳೆ ಲವ್ ಸ್ಟೋರಿ ಕಟ್ಟಿಕೊಡಲು ಅವರು ಯಶಸ್ವಿಯಾಗಿದ್ದಾರೆ.
ಇನ್ನು ಯುವ ರಾಜ್‌ಕುಮಾರ್‌ರವರ ನಟನೆ ವಿಷಯಕ್ಕೆ ಬಂದರೆ ಇದು ಅವರ ಮೊದಲ ಸಿನಿಮಾ ಎಂದು ಎಲ್ಲಯೂ ಅನ್ನಿಸುವುದಿಲ್ಲ. ಚಿತ್ರದ ಮೈ ನವಿರೇಳಿಸುವ ಆಕ್ಷನ್ ಸೀಕ್ವೆನ್ಸ್ಗಳು, ಎನರ್ಜಿಟಿಕ್ ಡ್ಯಾನ್ಸ್ ಈ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗಲಾರದು. ಇನ್ನು ಅಭಿನಯದಲ್ಲೂ ಯುವ ಗೆದ್ದಿದ್ದಾರೆ. ತಂದೆಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟನೆ ಸೊಗಸಾಗಿದೆ, ನಾಯಕಿಯಾಗಿ ಸಪ್ತಮಿ ಗೌಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಿಶೋರ್, ಸುಧಾರಾಣಿ, ಹಿತಾ ಚಂದ್ರಶೇಖರ್ ಉತ್ತಮ ನಟನೆ ತೋರಿದ್ದಾರೆ. ಶ್ರೀಶಾ ರವರ ಛಾಯಾಗ್ರಹಣ, ಅಜನೀಶ್ ರವರ ಸಂಗೀತ ಮತ್ತು ಸಂತೋಷ್ ಆನಂದ್‌ರಾಮ್ ರವರ ಸಂಭಾಷಣೆಗಳಿಗೂ ಸಂಪೂರ್ಣ ಅಂಕ ಎಂದರೆ ತಪ್ಪಾಗಲಾರದು. ಒಟ್ಟಾರೆ ಇದೊಂದು ಮಾಸ್ ಜೊತೆಗೆ ಕುಟುಂಬ ಸಮೇತ ನೋಡಬಹುದಾದ ಚಿತ್ರ.