ನಿಂತ ನಿಲುವಿನಲ್ಲೇ ಆವರಿಸಿಕೊಳ್ಳಬಲ್ಲ ಹಾಡೊಂದಕ್ಕಾಗಿ ಅನುಕ್ಷಣವೂ ಹಾತೊರೆಯುವ ದೊಡ್ಡದೊಂದು ಸಂಗೀತ ಪ್ರೇಮಿಗಳ ದಂಡು ನಮ್ಮ ನಡುವಲ್ಲಿದೆ. ಯಾವ ಸುಳಿವೂ ಕೊಡದೆ ಚೆಂದದ್ದೊಂದು ಹಾಡು ಅಚಾನಕ್ಕಾಗಿ ಕಿವಿ ಸೋಕಿದರೆ ಅವರಿಗೆಲ್ಲ ಅಕ್ಷರಶಃ ರೋಮಾಂಚನ. ಬೃಂದಾ ಆಚಾರ್ಯ ಮತ್ತು ಭರತ್ ಬೋಪಣ್ಣ ನಟಿಸಿರುವ ಆಲ್ಬಂ ಸಾಂಗ್ ಇದೀಗ ಅಂಥಾದ್ದೊಂದು ಅನುಭೂತಿಯನ್ನು ಬೇಷರತ್ತಾಗಿ ಕೊಡಮಾಡಿದೆ. ಸಾಹಿತ್ಯ, ಸಂಗೀತ, ಪರಿಕಲ್ಪನೆ, ನಟನೆ ಸೇರಿದಂತೆ ಎಲ್ಲದರಲ್ಲಿಯೂ ವಿಶೇಷವಾಗಿರುವ `ಸಾವಿರ ಗುಂಗಲ್ಲಿ’ ಆಲ್ಬಂ ಸಾಂಗ್ ಈಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.
ಇತ್ತೀಚಿನ ದಿನಮಾನದಲ್ಲಿ ಸಿನಿಮಾಗಳಾಚೆಗೆ ಹಾಡುಗಳು ರೂಪುಗೊಳ್ಳೋದೇ ಅಪರೂಪ. ಆಲ್ಬಂ ಸಾಂಗ್ ಅನ್ನೋ ರೋಮಾಂಚಕ ಪರಿಕಲ್ಪನೆ ಅದೇಕೋ ಬರಬರುತ್ತಾ ನೇಪಥ್ಯಕ್ಕೆ ಸರಿದುಬಿಟ್ಟಿದೆ. ಇಂಥಾ ಹೊತ್ತಲ್ಲಿ `ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್ ತನ್ನ ನವಿರು ಶೈಲಿಯೊಂದಿಗೆ ಕೇಳುಗರನ್ನೆಲ್ಲ ಸೋಕುತ್ತಿದೆ. ಮತ್ತಷ್ಟು ಮನಸುಗಳನ್ನು ಆವರಿಸಿಕೊಳ್ಳುತ್ತಾ ಮುಂದುವರೆಯುತ್ತಿದೆ. ಅಂದಹಾಗೆ, ಕೃಷ್ಣ ನಂಜುಂಡಯ್ಯನವರ ಪರಿಕಲ್ಪನೆ, ನಿರ್ದೇಶನದಲ್ಲಿ ಮೂಡಿ ಬಂದಿದೆ. ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಸದರಿ ಆಲ್ಬಂ ಹಾಡಿನ ಭಾಗವಾಗಿದ್ದಾರೆ.
ಅದೆಲ್ಲದರಲ್ಲಿ ಒಂದಿಡೀ ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಾರೆ. ಹಾಡಿನ ನೆರಳಲ್ಲಿ ಕಥೆಯೊಂದು ಸರಿಯುವಂತೆ ಭಾಸವಾಗುವ ಈ ಆಲ್ಬಂ ಸಾಂಗ್, ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಸೆಳೆಯುವಂತಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿದೆ. ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಹಾಡು ಅದ್ದೂರಿಯಾಗಿ, ಅರ್ಥವತ್ತಾಗಿ ಮೂಡಿ ಬಂದಿದೆ. ಹೆಚ್ಚಿನ ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿರುವ ಸದರಿ ಆಲ್ಬಂ ಸಾಂಗಿನ ಸವಾರಿಯೀಗ ಟ್ರೆಂಡಿಂಗಿನತ್ತ ಮುಖ ಮಾಡಿದೆ. ಆ ಮೂಲಕ ಇದರ ಹಿಂದಿರುವ ಕನಸು, ಶ್ರಮ, ಶ್ರದ್ಧೆಗಳೆಲ್ಲವೂ ಸಾರ್ಥಕವಾದಂತಾಗಿದೆ.
ಬೃಂದಾ ಆಚಾರ್ಯ ಇದೀಗ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಇಂಥಾದ್ದೊಂದು ನವಿರು ಹಾಡಿಗೆ ಜೀವ ತುಂಬುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೀರಿಯಲ್ ಜಗತ್ತಿನಿಂದ ಬಂದು, ಇದೀಗ ನಾಯಕನಾಗಿ ನೆಲೆಗಾಣುತ್ತಿರುವ ಭರತ್ ಬೋಪಣ್ಣ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ. ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ ರಾಜ್ ಛಾಯಾಗ್ರಹಣ, ತಮಿಳರಸನ್ ಎಂ. ಸಂಕಲನ, ಅನಿಲ್ ಸಹ ನಿರ್ದೇಶನದೊಂದಿಗೆ ಈ ವೀಡಿಯೋ ಸಾಂಗ್ ಕಳೆಗಟ್ಟಿಕೊಂಡಿದೆ. ದಿನದಿಂದ ದಿನಕ್ಕೆ ಈ ಹಾಡು ಹೆಚ್ಚೆಚ್ಚು ಜನರನ್ನು ತಲುಪಿಕೊಳ್ಳುತ್ತಿದೆ. ಪ್ರಚಾರದ ಭರಾಟೆ ಇಲ್ಲದೆಯೂ ಕೇಳುಗರನ್ನು ವಶವಾಗಿಸಿಕೊಳ್ಳುತ್ತಿದೆ. ಸಂಗೀತದ ಧ್ಯಾನದೊಂದಿಗೆ ಇಂಥಾದ್ದೊಂದು ಸಾಹಸ ಮಾಡಿರುವ ಒಂದಿಡೀ ತಂಡದ ಕಣ್ಣಲ್ಲೀಗ ಖುಷಿಯ ಹೊಳಪು ಮಿರುಗಲಾರಂಭಿಸಿದೆ!