ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿರುವ, ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರಕ್ಕಾಗಿ ಯೋಗರಾಜ್ ಭಟ್ “ಫ್ರೆಂಡ್ಸ್ ಇದ್ರೇನೆ ಜೀವನ” ಎಂಬ ಸ್ನೇಹದ ಮಹತ್ವ ಸಾರುವ ಅದ್ಭುತ ಹಾಡೊಂದನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಫ್ರೆಂಡ್ ಶಿಪ್ ಡೇ ಗೆ “ಪದವಿಪೂರ್ವ” ಚಿತ್ರತಂಡ ನೀಡಿರುವ ಉಡುಗೊರೆ ಈ ಹಾಡು ಎಂದರೆ ತಪ್ಪಾಗಲಾರದು. ಅಷ್ಟು ಸುಮಧುರವಾಗಿದೆ ಈ ಗೀತೆ. ತಂದೆ-ತಾಯಿ ಬಳಿ ಹೇಳಿಕೊಳ್ಳಲಾಗದ್ದ ಅನೇಕ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತೇವೆ. ಹಾಗಾಗಿ ನನ್ನ ಪ್ರಕಾರ ಸ್ನೇಹ ಸಂಬಂಧ ಎನ್ನುವುದು ಬಹಳ ದೊಡ್ಡದು. ಈ ಚಿತ್ರಕ್ಕೆ “ಫ್ರೆಂಡ್ಸ್ ಇದ್ರೇನೆ ಜೀವನ” ಎನ್ನುವ ಗೀತೆ ಬರೆದಿದ್ದೇನೆ. ನನ್ನ ಎಲ್ಲಾ ಸ್ನೇಹಿತರಿಗೆ ಈ ಹಾಡನ್ನು ಅರ್ಪಿಸುತ್ತೇನೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಕೇಳುವುದೆ ಖುಷಿ. ನಿರ್ದೇಶಕ ಹರಿಪ್ರಸಾದ್ ಸೇರಿದಂತೆ ನನ್ನ ಸಹೃದಯಿ ಸ್ನೇಹಿತರ ತಂಡ ಈ ಚಿತ್ರದಲ್ಲಿ ಭಾಗಿಯಾಗಿದೆ. ಎಲ್ಲರಿಗೂ ಶುಭವಾಗಲಿ ಎಂದು ಯೋಗರಾಜ್ ಭಟ್ ಹಾರೈಸಿದರು.
ಯೋಗರಾಜ್ ಸರ್ ಬಳಿ ನಾನು ಕೆಲಸ ಮಾಡುತ್ತಿದ್ದಾಗ , ಅವರು ನನ್ನನ್ನು ಪರಿಚಯ ಮಾಡುವಾಗ ಒಂದು ದಿನ ಕೂಡ ಅಸಿಸ್ಟೆಂಟ್ ಎನುತ್ತಿರಲಿಲ್ಲ. ನನ್ನ ಗೆಳೆಯ ಎಂದು ಪರಿಚಯಿಸುತ್ತಿದ್ದರು. ಸ್ನೇಹದ ತಳಹದಿ ಮೇಲೆ, ಅನೇಕ ಸ್ನೇಹಿತರ ಪಾಲ್ಗೊಳ್ಳುವಿಕೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಉತ್ತಮ ಹಾಡನ್ನು ಯೋಗರಾಜ್ ಸರ್ ಬರೆದುಕೊಟ್ಟಿರುವುದಕ್ಕೆ ಧನ್ಯವಾದ. ಇನ್ನು “ಪದವಿ ಪೂರ್ವ” 1995-96 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚಿನ ಸ್ನೇಹವನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಚಿತ್ರೀಕರಣ ಬಹುತೇಕ ಮುಗಿದಿದೆ. ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ ಎಂದರು ನಿರ್ದೇಶಕ ಹರಿಪ್ರಸಾದ್. ನಾವು ಮಕ್ಕಳಿಗೆ ಇಂತಹದ್ದೇ ಮಾಡು ಎನ್ನುವುದಕ್ಕಿಂತ ಅವರಿಗೆ ಇಷ್ಟವಿರುವ ಕಡೆ ಮುಂದುವರೆಯಲು ಬಿಡಬೇಕು. ನನ್ನ ಮಗ ನಾಯಕನಾಗುತ್ತೀನಿ ಅಂದ. ನಾನು ಸರಿ ಎಂದೆ. ನಾನೇ ನಿರ್ಮಾಪಕನೂ ಆದೆ ಎಂದರು ನಿರ್ಮಾಪಕ ರವಿ ಶಾಮನೂರು
ಕಲಾವಿದನಾಗಬೇಕು. ಅದರಲ್ಲೂ ನಾಯಕನಾಗಬೇಕೆಂಬ ಕನಸು ಹೊತ್ತು ಬಂದವನು ನಾನು. ಮೊದಲ ಚಿತ್ರದಲ್ಲೇ ಇಂತಹ ಉತ್ತಮ ತಂಡ ಸಿಕ್ಕಿರುವುದು ನನ್ನ ಪುಣ್ಯ. “ಪದವಿ ಪೂರ್ವ” ದಲ್ಲಿ ಪಿ.ಯು.ಸಿ ಹುಡುಗನಾಗಿ ಕಾಣಿಸಿಕೊಂಡಿದ್ದೀನಿ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ನಾಯಕ ಪೃಥ್ವಿ ಶಾಮನೂರುಛಾಯಾಗ್ರಹಕರ ಸಂತೋಷ್ ರೈ ಪಾತಾಜೆ, ಸಂಕಲನಕಾರ ಮಧು, ಕಾಸ್ಟಿಂಗ್ ಡೈರೆಕ್ಟರ್ ಯೋಗಿ, ನಟ ನಟರಾಜ್ ಹಾಗೂ ನೃತ್ಯ ನಿರ್ದೇಶಕ ಧನು “ಪದವಿಪೂರ್ವ” ಚಿತ್ರದ ಬಗ್ಗೆ ಮಾತನಾಡಿದರು. “ಗರಡಿ” ಚಿತ್ರದ ನಾಯಕ ಯಶಸ್ ಸೂರ್ಯ ಹಾಗೂ ನಾಯಕಿ ಸೋನಾಲ್ ಮೊಂತೆರೊ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಪೃಥ್ವಿ ಶಾಮನೂರು “ಪದವಿಪೂರ್ವ” ದ ನಾಯಕ. ಅಂಜಲಿ ಅನೀಶ್ ಹಾಗೂ ಯಶ ಶಿವಕುಮಾರ್ ನಾಯಕಿಯರು.