Sandalwood Leading OnlineMedia

ನಾನೇನು ಖಾಲಿ ಕೂತಿಲ್ಲ ಎಂದು ಫ್ಯಾನ್ಸ್ ಗೆ ಖಡಕ್ ಉತ್ತರ ಕೊಟ್ಟ ಯಶ್..

ರಾಕಿಂಗ್ ಸ್ಟಾರ್ ಯಶ್ ಲಂಡನ್‌ನಿಂದ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಬಿಜಿಎಸ್ ಉತ್ಸವ 2023 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಯಶ್‌19 ಅಪ್‌ಡೇಟ್ ಬಗ್ಗೆಯೂ ಮಾತನಾಡಿದ್ದಾರೆ. ರಾಕಿಭಾಯ್ ಖಡಕ್ ಲುಕ್‌ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಶ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊ, ವಿಡಿಯೋಗಳು ವೈರಲ್ ಆಗ್ತಿದೆ. ‘KGF’ ಚಾಪ್ಟರ್‌-2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ಯಶ್ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ನಮ್ ಬಾಸ್ ಹೊಸ ಸಿನಿಮಾ ಅಪ್‌ಡೇಟ್ ಕೊಡೋದು ಯಾವಾಗ? ಸಿನಿಮಾ ಸೆಟ್ಟೇರೋದು ಯಾವಾಗ? ಶೂಟಿಂಗ್ ಮುಗಿಯೋದು ಯಾವಾಗ? ರಿಲೀಸ್ ಆಗೋದು ಯಾವಾಗ? ಅಂತ ತಲೆಕೆಡಿಸಿಕೊಂಡಿದ್ದಾರೆ. ಪರಿಪರಿಯಾಗಿ ಕೇಳಿ ಕೇಳಿ ಸುಮ್ಮನಾಗಿದ್ದಾರೆ.

ಇದನ್ನೂ ಓದಿ “ಸಕ್ಸಸ ಸೂತ್ರ ಅಂತ ಏನು ಇಲ್ಲ. ಪ್ರತಿಯೊಬ್ಬರಿಗೂ ಒಳಗೊಂದು ಧ್ವನಿ ಇರುತ್ತದೆ.” ತಮ್ಮ ಸಕ್ಸಸ್ ಸೀಕ್ರೆಟ್ ಹೇಳಿಬಿಟ್ರು ಯಶ್

ಯಶ್ ತಮ್ಮ ಮುಂದಿನ ಚಿತ್ರಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡುತ್ತಿದ್ದಾರೆ. ‘KGF’ ಸರಣಿ ಬಳಿಕ ಮುಂದಿನ ಚಿತ್ರವನ್ನು ಬಹಳ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ತಡವಾಗುತ್ತಿದೆ. ಯಶ್ ಮುಂದಿನ ಸಿನಿಮಾ ಬಗ್ಗೆ ಬಹಳ ಒತ್ತಡದಲ್ಲಿದ್ದಾರೆ ಎನ್ನುವ ವಾದವೂ ಇದೆ. ಆದರೆ ಇದನ್ನು ಒಪ್ಪಲು ಯಶ್ ಸಿದ್ಧರಿಲ್ಲ. ಒಳ್ಳೆ ಸಿನಿಮಾ ಮಾಡೋಕೆ ಆರಂಭಿಸೋಕೆ ಮತ್ತಷ್ಟು ಸಮಯ ಬೇಕು ಎಂದು ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಬಿಜಿಎಸ್ ಉತ್ಸವ 2023 ವೇದಿಕೆಯಲ್ಲೂ ಯಶ್ ತಮ್ಮ ಮುಂದಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಹೊಸಬರು ಸಾಕಷ್ಟು ಜನ ಚಿತ್ರರಂಗಕ್ಕೆ ಬರ್ತಿದ್ದಾರೆ. ಎಲ್ಲರ ಸಿನಿಮಾಗಳನ್ನು ನೋಡಿ ಬೆನ್ನುತಟ್ಟಿ. ನಮ್ಮ ಸಿನಿಮಾಗಳನ್ನು ನೋಡಿ ಬೆನ್ನುತಟ್ಟಿದ್ದಕ್ಕೆ ನಾವು ಇಲ್ಲಿದ್ದೀವಿ. ನನಗೆ ಗೊತ್ತು ನೀವೆಲ್ಲಾ ಮುಂದಿನ ಸಿನಿಮಾ ಅಪ್‌ಡೇಟ್ ಕೇಳ್ತಾ ಇದ್ದೀರಾ. ಒಂದಂತು ಹೇಳ್ತೀನಿ. ನಾನು ಕೂತಿದ್ದೀನಿ ಅಂದ್ರೆ ನೀವು ಕೊಟ್ಟ ಧೈರ್ಯದಿಂದ. ಹಾಗಂತ ರಿಲ್ಯಾಕ್ಸ್ ಆಗಿ ನಾನು ಕೂತಿಲ್ಲ” “ನೀವು ಕೊಟ್ಟ ಸಕ್ಸಸ್ ಜವಾಬ್ದಾರಿ ಅಂತ ತಿಳ್ಕೊಂಡು ಇನ್ನು ಮುಂದೆ ಹೋಗಿ ಕೆಲಸ ಮಾಡಬೇಕು ಅಂತ ಮುಂದಿನ ಹಂತಕ್ಕೆ ನಾನು ಸಿದ್ಧನಾಗುತ್ತಿದ್ದೀನಿ. ಕೆಲಸ ಮಾಡ್ತೀನಿ. ನನಗೆ ಗೊತ್ತು. ತಾಳ್ಮೆ ಇರಲಿ. ನಾನು ಯಾವತ್ತೂ ಅನೌನ್ಸ್‌ಮೆಂಟ್ ಅಂತ ಹೇಳಲಿಲ್ಲ. ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಯಾವುದೇ ತಿಂಗಳು ಬಂದಾಗ ಈ ತಿಂಗ್ಳು ಅಪ್‌ಡೇಟು, ಈ ತಿಂಗ್ಳು ಅಪ್‌ಡೇಟ್ ಅಂತ ಹೇಳಿ ಹೇಳಿ ನಿಮಗೆ ಆ ತಾಳ್ಮೆ ಕಮ್ಮಿ ಆಗ್ತಿದೆ. ತಪ್ಪು ಸಂದೇಶ ರವಾನೆಯಾಗ್ತಿದೆ.”

ಇದನ್ನೂ ಓದಿ ‘ಯುವರಾಜ’ ನಿಖಿಲ್ ಸೆಟ್‌ಗೆ ‘ಭೀಮ’ ವಿಜಯ್ ಭೇಟಿ..

“ನಾನೇ ಹೇಳ್ತೀನಿ. ಸರಿಯಾಗಿ ಅಡಿಗೆ ಬೆಂದಮೇಲೆ ಬಡಿಸ್ಬೇಕು. ಮುಂಚೇನೆ ಮಾಡೋದು ನನಗೆ ಇಷ್ಟವಿಲ್ಲ. ತಾಳ್ಮೆ ಇಟ್ಕೊಳ್ಳಿ. ಕಂಡಿತ ನೀವೆಲ್ಲ ಇಷ್ಟಪಡುವಂತಹ ಕೆಲಸ ಆಗುತ್ತದೆ” ಎಂದು ನಟ ಯಶ್ ಹೇಳಿದ್ದಾರೆ. ಎರಡು ವರ್ಷಗಳಿಂದ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅಂತೆ ಕಂತೆ ಸುದ್ದಿಗಳು ಸಾಕಷ್ಟು ಹರಿದಾಡಿತ್ತು. ಆದರೆ ಅಧಿಕೃತವಾಗಿ ಯಾವುದೇ ಸುದ್ದಿ ಬರಲಿಲ್ಲ. ಮೊದಲಿಗೆ ಯಶ್‌19 ಚಿತ್ರವನ್ನು ನರ್ತನ್ ನಿರ್ದೇಶನ ಮಾಡ್ತಾರೆ ಎನ್ನಲಾಗಿತ್ತು. ಬಳಿಕ ನಿರ್ದೇಶಕಿ ಗೀತು ಮೋಹನ್ ದಾಸ್ ಹೆಸರು ಚಾಲ್ತಿಗೆ ಬಂತು. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡುತ್ತದೆ ಎನ್ನಲಾಯಿತು. ಈ ನಡುವೆ ಯಶ್ ಬಾಲಿವುಡ್‌ಗೆ ಹೋಗ್ತಾರೆ. ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಯಶ್ ಮಾತ್ರ ಮೌನವಾಗಿಯೇ ಇದ್ದಾರೆ. ಮುಂದಿನ ಚಿತ್ರಕ್ಕಾಗಿ ದೇಶ ವಿದೇಶ ಸುತ್ತಾಡುತ್ತಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಮಾಡ್ತಾರಾ? ಕಾದು ನೋಡಬೇಕಿದೆ.

 

 

Share this post:

Related Posts

To Subscribe to our News Letter.

Translate »