ಹೊಂಬಾಳೆ ಫಿಲಂಸ್ ನಿರ್ಮಾಣದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.ಇತ್ತೀಚೆಗೆ ಸಲಾರ್ ಗಾಯಕಿ ತೀರ್ಥ ನೀಡಿದ ಹೇಳಿಕೆಯಿಂದ ರಾಕಿ ಭಾಯಿ ಯಶ್ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಮತ್ತಷ್ಟು ದಟ್ಟವಾಗಿತ್ತು. ಆದರೆ ಈಗ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
‘ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಗೂ ಕೆಜಿಎಫ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರವೂ ಇರಲ್ಲ. ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು’ ಎಂದಿದ್ದಾರೆ.
ಆ ಮೂಲಕ ಸಲಾರ್ ನಲ್ಲಿ ರಾಕಿ ಭಾಯಿ ನೋಡಬಹುದು ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಲಾರ್ ಪಾರ್ಟ್ 1 ಸಿನಿಮಾ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.