ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇ ದಿನ ಫ್ಲೆಕ್ಸ್ ಕಟ್ಟಲು ಹೋಗಿ ಕರೆಂಟ್ ಶಾಕ್ ತಗುಲಿ ಮೃತಪಟ್ಟ ಯಶ್ ಅಭಿಮಾನಿಗಳು ಕುಟುಂಬಕ್ಕೆ ನಟನ ಸ್ನೇಹಿತರು ಪರಿಹಾರದ ಚೆಕ್ ತಲುಪಿಸಿದ್ದಾರೆ. ಯಶ್ ಸ್ನೇಹಿತರಾದ ರಾಕೇಶ್, ಚೇತನ್ ಹಾಗೂ ಗದಗ ಜಿಲ್ಲೆಯ ಯಶ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಮೃತ ಮೂವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ. ಮೃತಪಟ್ಟ ಹನಮಂತ ಹರಿಜನ (21), ಮುರಳಿ ನಡವಿನಮನಿ (20) ನವೀನ್ ಗಾಜಿ (19) ಕುಟುಂಬಕ್ಕೆ ಪರಿಹಾರ ನೀಡಿದ್ದಾರೆ. ಇನ್ನು ಗಾಯಾಳುಗಳಿಗೂ ಪರಿಹಾರದ ಭರವಸೆಯನ್ನು ನೀಡಿದ್ದಾರೆ.
ಚೆಕ್ ವಿತರಿಸಿದ ಬಳಿಕ ಮಾತನಾಡಿದ ಯಶ್ ಸ್ನೇಹಿತರು, ಅಭಿಮಾನಿಗಳ ಸಾವು ಆಗಬಾರದಾಗಿತ್ತು. ಆದರೆ ಅದು ಆಗಿ ಹೋಗಿದೆ. ಯಶ್ ಅವರ ಸೂಚನೆಯಂತೆ ಮೃತ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಗಾಯಾಳುಗಳ ಡಿಟೈಲ್ ಪಡೆದಿದ್ದೇವೆ. ಎರಡು ದಿನದಲ್ಲಿ ಅವರಿಗೂ ಪರಿಹಾರ ನೀಡಲಾಗುತ್ತದೆ. ಮನೆಗೆ ಹೋಗಿ ಹಣ ತಲುಪಿಸಿ ಬನ್ನಿ. ನಾವು ಇದೀವಿ ಅಂತಾ ಹೇಳಿದ್ದರು. ಗಾಯಾಳುಗಳು ಮಾತನಾಡುವ ಸ್ಥಿತಿಯಲ್ಲಿಲ್ಲ. ನೋವಿನಿಂದ ಹೊರ ಬಂದಿಲ್ಲ ಎಂದಿದ್ದಾರೆ.
ಜನವರಿ 8 ರಂದು ನಟ ಯಶ್ ಜನ್ಮದಿನ ಹಿನ್ನೆಲೆ ಅದರ ಹಿಂದಿನ ದಿನ ಅಭಿಮಾನಿಗಳು ಸೆಲೆಬ್ರೇಷನ್ಗಾಗಿ ಕಟೌಟ್ ನಿಲ್ಲಿಸುವಾಗ ನಡೆದ ವಿದ್ಯುತ್ ಅವಘಡದಲ್ಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ನಡೆದ ಮರುದಿನವೇ ಅಂದರೆ ತಮ್ಮ ಜನ್ಮದಿನದಂದು ನಟ ಯಶ್ ಮೃತ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.