ಮಹಿಳಾ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿದೆ. ಇದರ ಬೆನ್ನಲ್ಲಿಯೇ ವಿರಾಟ್ ಕೊಹ್ಲಿ ಹಾಗೂ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ ಅವರ ಹೋಲಿಕೆ ಶುರುವಾಗಿದೆ. ಇದಕ್ಕೆ ಸ್ವತಃ ಸ್ಮೃತಿ ಮಂಧನಾ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು (ಮಾ.19): ರಾಯಲ್ ಚಾಲೆಂಜರ್ಸ್ ತಂಡದ ಪ್ರಸ್ತಿ ಬರ ನೀಗಿದೆ. ಐಪಿಎಲ್‌ನಲ್ಲಿ ಪುರುಷರ ತಂಡ ಮಾಡಲಾಗದ ಸಾಧನೆಯನ್ನು ಮಹಿಳಾ ಐಪಿಎಲ್ ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡ ಮಾಡಿದೆ. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ತಂಡ ಚಾಂಪಿಯನ್ ಆಗಿದೆ. ಕೊನೆಗೂ ಈ ಸಲ ಕಪ್ ನಮ್ದೆ ಎನ್ನುವ ವಾಕ್ಯಕ್ಕೆ ಆರ್‌ಸಿಬಿ ಕ್ರಿಕೆಟಿಗರು ನ್ಯಾಯ ಒದಗಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಹೇಳುತ್ತಿದೆ. ಇದರ ನಡುವ ಆರ್‌ಸಿಬಿ ವುಮೆನ್ಸ್ ತಂಡದ ಕ್ಯಾಪ್ಟನ್ ಸ್ಮೃತಿ ಮಂಧನಾ ಅವರನ್ನು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಅದಲ್ಲದೆ, ಸ್ಮೃತಿ ಮಂದನಾ ಅವರು ಧರಿಸುವ ಜೆರ್ಸಿ ನಂಬರ್ 18. ವಿರಾಟ್ ಕೊಹ್ಲಿ ಕೂಡ ಇದೇ ನಂಬರ್‌ನ ಜೆರ್ಸಿಯನ್ನು ಧರಿಸುತ್ತಾರೆ. ಇದೇ ಕಾರಣಕ್ಕಾಗಿ ಸ್ಮೃತಿ ಮಂಧನಾ ಹಾಗೂ ವಿರಾಟ್ ಕೊಹ್ಲಿಯನ್ನು ಹೋಲಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ವತಃ ಸ್ಮೃತಿ ಮಂಧನಾ ಮಾತನಾಡಿದ್ದಾರೆ.
ಪ್ರಶಸ್ತಿ ಗೆದ್ದಿರುವುದು ಒಂದು ಕಡೆಯಾದರೆ, ಇನ್ನೊಬ್ಬ ನಂ.18 ಭಾರತಕ್ಕೆ ಮಾಡಿರುವ ಸಾಧನೆ ಇದರ ಮುಂದೆ ಏನೇನೂ ಅಲ್ಲ. ಅದು ಬಹಳ ದೊಡ್ಡ ವಿಚಾರ. ನನ್ನ ಪ್ರಕಾರ ಇಂಥದ್ದೊಂದು ಹೋಲಿಕೆಯೇ ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ನನ್ನ ಕ್ರಿಕೆಟ್ ಕೆರಿಯರ್‌ಗೂ ಸಾಧನೆಗಳೇ ತುಂಬಿರುವ ವಿರಾಟ್ ಕೊಹ್ಲಿ ಕೆರಿಯರ್‌ಗೂ ಹೋಲಿಕೆಯೇ ಅಲ್ಲ. ನನಗೆ ಯಾವ ಕಾರಣಕ್ಕಾಗಿ ಈ ಹೋಲಿಕೆ ಇಷ್ಟವಿಲ್ಲ ಎಂದರೆ, ಅವರು ಮಾಡಿರುವ ಸಾಧನೆಗಳು ಬಹಳ ಅದ್ಭುತವಾದವುಗಳು. ಅಲ್ಲದೆ, ದೊಡ್ಡ ಸ್ಪೂರ್ತಿದಾಯಕ ವ್ಯಕ್ತಿ. ಕೇವಲ ಪ್ರಶಸ್ತಿ ಗೆಲ್ಲೋದು ಆಟಗಾರನಲ್ಲಿನ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಾವೆಲ್ಲರೂ ವಿರಾಟ್ ಕೊಹ್ಲಿಯನ್ನು ಗೌರವಿಸ್ತೇವೆ. ಅದಲ್ಲದೆ, ಭಾರತೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗೆ ಇರಬೇಕಾದ ಗೌರವ ಎಂದಿಗೂ ಇರುತ್ತದೆ ಎಂದು ಸ್ಮೃತಿ ಹೇಳಿದ್ದಾರೆ.
ನಾನು ಕೂಡ ಅವರನ್ನು ಬಹಳ ಗೌರವಿಸ್ತೇನೆ. ಕೇವಲ ಇಬ್ಬರೂ ಒಂದೇ ನಂಬರ್‌ನ ಜೆರ್ಸಿ ಹಾಕುತ್ತಾರೆ ಎಂದ ಮಾತ್ರಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಅವರೊಬ್ಬ ಸ್ಫೂರ್ತಿದಾಯಕ ವ್ಯಕ್ತಿ, ಜೆರ್ಸಿ ನಂಬರ್ ಎನ್ನುವುದು ಕೇವಲ ನನ್ನ ವೈಯಕ್ತಿಕ ಆಯ್ಕೆ. ನನ್ನ ಜನ್ಮದಿನ 18. ಅದೇ ಕಾರಣಕ್ಕಾಗಿ ನನ್ನ ಬೆನ್ನಹಿಂದೆ ಈ ನಂಬರ್ ಇದೆ. ಇದು ನಾನು ಹೇಗೆ ಕ್ರಿಕೆಟ್ ಆಡುತ್ತೇನೆ, ಅವರು ಹೇಗೆ ಕ್ರಿಕೆಟ್ ಆಡುತ್ತಾರೆ ಎನ್ನುವುದಕ್ಕೆ ಹೋಲಿಕೆಯಲ್ಲ. ಅವರೊಬ್ಬ ಗೌರವಯುತ ವ್ಯಕ್ತಿ, ಬರೀ ಟೈಟಲ್ ಗೆದ್ದ ಮಾತ್ರಕ್ಕೆ ನಾನು ಕೊಹ್ಲಿಗೆ ಸಮಾನನಾಗಲಾರೆ ಎಂದು ಸ್ಮೃತಿ ಮಂದನಾ ಹೇಳಿದ್ದಾರೆ.