ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳೆಯರ ಸಾಧನೆಯನ್ನು ಸ್ಮರಿಸುವುದರ ಜೊತೆ ಜೊತೆಗೆ ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಈ ದಿನವನ್ನು ನೆಪ ಮಾಡಿಕೊಳ್ಳಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸರಿ ಸಮನಾಗಿ ಗುರ್ತಿಸಿಕೊಂಡಿದ್ದಾರೆ. ಅದಕ್ಕೆ ಚಿತ್ರರಂಗ ಕೂಡ ಹೊರತಲ್ಲ.
ಡಾ. ರಾಜ್‌ಕುಮಾರ್ ಪತ್ನಿ ಪಾರ್ವತಮ್ಮ ನಿರ್ಮಾಪಕಿಯಾಗಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಕೆಲ ಕಾದಂಬರಿಗಳನ್ನು ಸಿನಿಮಾ ಮಾಡಿದ ಹೆಗ್ಗಳಿಕೆ ಅವರದ್ದು. ಪ್ರೇಕ್ಷಕರ ನಾಡಿ ಮಿಡಿತ ಅರಿತಿದ್ದ ಪಾರ್ವತಮ್ಮ ಅದ್ಭುತ ಕಥೆಗಳನ್ನು ಸಿನಿಮಾ ಆಗಿಸಿದರು. ಜಯಶ್ರೀ ದೇವಿ ಕೂಡ ಸಿನಿಮಾಗಳನ್ನು ನಿರ್ಮಿಸಿ ಸೋಲು, ಗೆಲುವು ಕಂಡರು. ಕೆಲ ನಟಿಯರು ಕೂಡ ಸಿನಿಮಾಗಳನ್ನು ನಿರ್ಮಿಸುವ ಸಾಹಸ ಮಾಡುತ್ತಲೇ ಬರುತ್ತಿದ್ದಾರೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವಂತೆ ಸಿನಿಮಾ ಮಾಡಿ ನೋಡು ಎನ್ನುವ ಮಾತು ಚಿತ್ರರಂಗದಲ್ಲಿದೆ. ಕಾರಣ ಒಂದು ಸಿನಿಮಾ ನಿರ್ಮಾಣ ಅಷ್ಟು ಸುಲಭದ ವಿಚಾರ ಅಲ್ಲ. ಅದರಲ್ಲಿ ಕೂಡ ಮಹಿಳೆಯರು ಈ ಪ್ರಯತ್ನ ಮಾಡುವುದು ಸವಾಲಿನ ಕೆಲಸವೇ ಸರಿ. ಸದ್ಯ ಕನ್ನಡದಲ್ಲಿ ಕೆಲ ನಟಿಯರು ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
1. ರಾಧಿಕಾ ಕುಮಾರಸ್ವಾಮಿ ನಟಿ ರಾಧಿಕಾ ಕುಮಾರಸ್ವಾಮಿ ‘ಲಕ್ಕಿ’ ಚಿತ್ರದ ಮೂಲಕ ಚಿತ್ರ ನಿರ್ಮಾಣ ಆರಂಭಿಸಿದ್ದು ಗೊತ್ತೇಯಿದೆ. ಶಮಿಕಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ‘ಸ್ವೀಟಿ ನನ್ನ ಜೋಡಿ’ ಹಾಗೂ ‘ಭೈರಾದೇವಿ’ ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡಿದ್ದರು. ಮತ್ತಷ್ಟು ಸಿನಿಮಾ ನಿರ್ಮಿಸುವ ಬಗ್ಗೆ ಆಗಾಗ್ಗೆ ಹೇಳುತ್ತಿರುತ್ತಾರೆ.
2. ರಮ್ಯಾ ಮೋಹಕ ತಾರೆ ರಮ್ಯಾ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ‘ನಾಗರಹಾವು’ ಬಳಿಕ ಆಕೆ ನಾಯಕಿಯಾಗಿ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ‘ಸ್ವಾತಿಮುತ್ತಿನ ಮಳೆ ಹನಿಯೇ’ ಚಿತ್ರವನ್ನು ನಿರ್ಮಿಸಿ ನಟಿಸುವುದಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಬಳಿಕ ನಟನೆಯಿಂದ ಹಿಂದೆ ಸರಿದಿದ್ದರು. ಆದರೆ ತಮ್ಮದೇ ಆಪಲ್ ಬಾಕ್ಸ್ ಬ್ಯಾನರ್ ಅಡಿಯಲ್ಲಿ ಆ ಚಿತ್ರ ನಿರ್ಮಿಸಿದ್ದರು. ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸುವ ಮನಸ್ಸು ಮಾಡಿದ್ದಾರೆ.
3. ಮಿಲನಾ ನಾಗರಾಜ್ ‘ಲವ್ ಮಾಕ್ಟೇಲ್’ ಹಾಗೂ ಅದರ ಸೀಕ್ವೆಲ್ ಸಿನಿಮಾಗಳನ್ನು ನಿರ್ಮಿಸಲು ಡಾರ್ಲಿಂಗ್ ಕೃಷ್ಣ ಜೊತೆ ಪತ್ನಿ ಮಿಲನಾ ಕೈ ಜೋಡಿಸಿದ್ದರು. ಇಬ್ಬರು ಸೇರಿ ಕಥೆ, ಚಿತ್ರಕಥೆ, ನಿರ್ದೇಶನ ಹೀಗೆ ಎಲ್ಲಾ ಜವಾಬ್ದಾರಿ ವಹಿಸಿಕೊಂಡಿದ್ದರು. ಕೃಷ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ಮಿಲನಾ ಕೂಡ ಹಣ ಹೂಡಿದ್ದರು.
4. ಶೃತಿ ನಾಯ್ಡು ಕನ್ನಡ ಕಿರುತೆರೆಯಲ್ಲಿ ಬಹಳ ದೊಡ್ಡ ಹೆಸರು ಶೃತಿ ನಾಯ್ಡು. ಹಲವು ಧಾರಾವಾಹಿಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಬಣ್ಣ ಹಚ್ಚಿ ನಟಿಸಿರುವುದು ಇದೆ. ‘ಪ್ರೀಮಿಯರ್ ಪದ್ಮಿನಿ’ ಸಿನಿಮಾವನ್ನು ನಿರ್ಮಿಸಿ ಸಕ್ಸಸ್ ಕಂಡಿದ್ದರು. ಜಗ್ಗೇಶ್ ಹಾಗೂ ಪ್ರಮೋದ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
5. ಶರ್ಮಿಳಾ ಮಾಂಡ್ರೆ ನಟಿ ಶರ್ಮಿಳಾ ಮಾಂಡ್ರೆ ತಮಿಳಿನಲ್ಲಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ‘ದಸರಾ’ ಎಂಬ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು. ನೀನಾಸಂ ಸತೀಶ್ ನಟನೆಯ ಈ ಚಿತ್ರದಲ್ಲಿ ಶರ್ಮಿಳಾ ಪತ್ರಕರ್ತೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ನಟಿ ರಮ್ಯಾ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.
6. ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಾರ್ವತಮ್ಮ ಬಳಿಕ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. 2019ರಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಕವಲುದಾರಿ’ ಸಿನಿಮಾ ಬಂದಿತ್ತು. ಬಳಿಕ ಹಲವು ಸಿನಿಮಾಗಳು ಈ ಬ್ಯಾನರ್‌ನಲ್ಲಿ ನಿರ್ಮಾಣವಾಯಿತು. ಅಪ್ಪು ಅಗಲಿಕೆ ಬಳಿಕ ಸಂಸ್ಥೆ ಜವಾಬ್ದಾರಿ ಸಂಪೂರ್ಣವಾಗಿ ಅಶ್ವಿನಿ ಅವರ ಹೆಗಲೇರಿದೆ. ಯುವ ರಾಜ್‌ಕುಮಾರ್ ನಟನೆಯ ‘ಎಕ್ಕ’ ಚಿತ್ರವನ್ನು ಕೆಆರ್‌ಜಿ ಹಾಗೂ ಜಯಣ್ಣ ಫಿಲ್ಮ್ಸ್ ಜೊತೆ ಸೇರಿ ಅಶ್ವಿನಿ ನಿರ್ಮಿಸುತ್ತಿದ್ದಾರೆ.
ಇನ್ನುಳಿದಂತೆ ಪ್ರಿಯಾಂಕ ಉಪೇಂದ್ರ(ಉಪ್ಪಿ- 2), ಗೀತಾ ಶಿವರಾಜ್‌ಕುಮಾರ್(ಭೈರತಿ ರಣಗಲ್) ಹೀಗೆ ಹಲವು ಮಹಿಳೆಯರು ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.