ಸಾರಾಂಶ :
ತಾನು ರಾಜಕೀಯಕ್ಕೆ ಬರಬಾರದು ಎಂದೇನಿಲ್ಲ ಎನ್ನುವ ಮೂಲಕ ತನ್ನ ರಾಜಕೀಯ ಎಂಟ್ರಿ ಬಗ್ಗೆ ಹಿಂಟ್ ಕೊಟ್ಟಿದ್ದಾರೆ ಸುದೀಪ್.
‘ಎಲ್ಲರೂ ನಾನು ರಾಜಕೀಯಕ್ಕೆ ಬರೋಲ್ಲ ಅಂದುಕೊಂಡಿದ್ದಾರೆ, ಬಂದಾಗ ಗೊತ್ತಾಗುತ್ತದೆ. ಒಂದೊಮ್ಮೆ ಬರಲಿಲ್ಲ ಎಂದರೆ ಬರಲಿಲ್ಲ ಅಷ್ಟೆ.’ – ಹೀಗೆಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಹೋಟೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ‘ನಾನು ಹೋಟೆಲ್ ಉದ್ಘಾಟನೆಗೆ ಬರುವುದಿಲ್ಲ ಎಂದು ಜನ ಅಂದುಕೊಂಡಿದ್ದರು. ಆದರೆ ಬಂದಿದ್ದೇನೆ.
ಹಾಗೆಯೇ ರಾಜಕೀಯದ್ದು ಏನಾಗುತ್ತದೆಯೋ ನೋಡೋಣ’ ಎಂದಿದ್ದಾರೆ. ಇದು ಸುದೀಪ್ ರಾಜಕೀಯ ಎಂಟ್ರಿ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಜೊತೆಗೆ ಲೋಕಸಭಾ ಚುನಾವಣೆಯ ಪ್ರಚಾರದ ಬಗ್ಗೆಯೂ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
‘ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ. ಕೇಳಿದಾಗ ಆ ಬಗ್ಗೆ ನಿರ್ಣಯ ಮಾಡುತ್ತೇನೆ.
ಸಿನಿಮಾ ಬಿಟ್ಟು ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಈಗಾಗಲೇ ಅಭಿಮಾನಿಗಳು, ಗೆಳೆಯರು ಗಲಾಟೆ ಮಾಡುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ.
ಶೂಟಿಂಗ್ ಬಿಟ್ಟು ರಾಜಕೀಯ ಪ್ರಚಾರಕ್ಕೆ ಹೋದರೆ ಇನ್ನಷ್ಟು ಗಲಾಟೆಗಳಾಗುತ್ತವೆಯೋ ಏನೋ’ ಎಂದೂ ಸುದೀಪ್ ನಗೆ ಚಟಾಕಿ ಹಾರಿಸಿದ್ದಾರೆ.
‘ಮ್ಯಾಕ್ಸ್’ ಬಗ್ಗೆ ಅಪ್‌ಡೇಟ್ ನೀಡಿದ ನಟ, ‘ಎಲ್ಲಾ ಅಂದುಕೊಂಡಂತೆ ನಡೆದರೆ ಮ್ಯಾಕ್ಸ್ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಕೆಲವೇ ದಿನಗಳ ಚಿತ್ರೀಕರಣವಷ್ಟೇ ಬಾಕಿ ಇದೆ’ ಎಂದೂ ಹೇಳಿದರು.