ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದ ನಟ ಪುನೀತ್ ರಾಜ್‌ಕುಮಾರ್. ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದವರು. ದೊಡ್ಮನೆಯಲ್ಲಿ ಅಣ್ಣಾವ್ರ ಬಳಿಕ ಬಾಲನಟನಾಗಿಯೇ ಸ್ಟಾರ್ ಪಟ್ಟ ಅಲಂಕರಿಸಿದ್ದರು ಅಪ್ಪು. ಶಿವಣ್ಣನಿಗಿಂತ ಮುನ್ನ ಪುನೀತ್ ಕನ್ನಡ ಸಿನಿರಸಿಕರು ಮನಗೆದ್ದುಬಿಟ್ಟಿದ್ದರು. ಹೀರೊ ಆಗಿ ಸಕ್ಸಸ್ ಕಂಡ ಪವರ್ ಸ್ಟಾರ್ ಭಾರೀ ಸಂಭಾವನೆ ಪಡೆಯುತ್ತಿದ್ದರು.
ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪುನೀತ್ ಮುಂದೆ ಹೀರೋ ಆಗಿ ಕೂಡ ಚಿತ್ರರಂಗಕ್ಕೆ ವಾಪಸ್ ಬಂದಿದ್ದರು. ಅಪ್ಪು ದೊಡ್ಡ ಬ್ಯುಸಿನೆಸ್‌ಮನ್ ಆಗುವ ಕನಸು ಕಂಡಿದ್ದು. ಗ್ರಾನೈಟ್ ಬ್ಯುಸಿನೆಸ್ ಮಾಡಬೇಕು ಎಂದು ಹೋಗಿ ಕೈಸುಟ್ಟುಕೊಂಡಿದ್ದರು. ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿ 108 ದಿನಗಳ ಬಿಡುಗಡೆ ಮಾಡಿದ್ದ. ಆ ನಂತರ ಪುನೀತ್ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಕುಟುಂಬಸ್ಥರ ಆಸೆ ಆಗಿತ್ತು.
‘ಯುವರಾಜ’ ಸಿನಿಮಾ ಸಮಯದಲ್ಲಿ ಶಿವಣ್ಣನಿಗೆ ನಿರ್ದೇಶಕ ಪೂರಿ ಜಗನ್ನಾಥ್ ಬೇರೆ 3 ಕಥೆಗಳನ್ನು ಹೇಳಿದ್ದರು. ಅದರಲ್ಲಿ ಒಂದು ಕಥೆ ಸಹೋದರನಿಗೆ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದ್ದರು. ಇದನ್ನು ಮನೆಯಲ್ಲಿ ಹೇಳಿ ಪೂರಿ ಜಗನ್ನಾಥ್ ಕಥೆ ಹೇಳುವಂತಾಯಿತು. ಅಣ್ಣಾವ್ರು, ವರದಪ್ಪ, ಪಾರ್ವತಮ್ಮ ಎಲ್ಲರೂ ಕಥೆ ಮೆಚ್ಚಿದ್ದರು. ಅಷ್ಟರಲ್ಲಿ ಪುನೀತ್ ಸ್ಟಂಟ್, ಡ್ಯಾನ್ಸ್ ಕಲಿಯಲು ಆರಂಭಿಸಿದರು. ತಮ್ಮದೇ ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಯಿತು.
‘ಅಪ್ಪು’ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್ ಹೀರೊ ಆಗಿ ಭರ್ಜರಿ ಎಂಟ್ರಿ ಕೊಟ್ಟಿದ್ದರು. ಗುರುಕಿರಣ್ ಮ್ಯೂಸಿಕ್‌ನಲ್ಲಿ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡು ಶತದಿನೋತ್ಸವ ಆಚರಿಸಿತ್ತು. ಅವತ್ತಿನ ಕಾಲಕ್ಕೆ ಅಂದಾಜು 1 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ‘ಅಪ್ಪು’ ಸಿನಿಮಾ 10ರಿಂದ 12 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

ಮೊದಲ ಸಿನಿಮಾ ಸಕ್ಸಸ್ ಬೆನ್ನಲ್ಲೇ ದಿನೇಶ್ ಬಾಬು ನಿರ್ದೇಶನದಲ್ಲಿ ‘ಅಭಿ’ ಸಿನಿಮಾ ಮೂಡಿ ಬಂತು. ರಮ್ಯಾ ನಾಯಕಿಯಾಗಿ ಮಿಂಚಿದ್ದರು. ‘ಅಪ್ಪು’ ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕರು ‘ಅಭಿ’ ಚಿತ್ರಕ್ಕೂ ಜೊತೆಯಾಗಿದ್ದರು. ಈ ಚಿತ್ರವನ್ನು ಕೂಡ ಪಾರ್ವತಮ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಅಷ್ಟರಲ್ಲಿ ಪುನೀತ್ ರಾಜ್‌ಕುಮಾರ್ ಕ್ರೇಜ್ ಶುರುವಾಗಿತ್ತು. ದೊಡ್ಡ ದೊಡ್ಡ ನಿರ್ದೇಶಕರು ನಿರ್ಮಾಪಕರು ಅವರೊಟ್ಟಿಗೆ ಸಿನಿಮಾ ಮಾಡಲು ಮುಗಿಬಿದ್ದರು. ಪುನೀತ್ ಖದರ್ ನೋಡಿದ್ದ ಪೂರಿ ಜಗನ್ನಾಥ್ ತಮ್ಮ ‘ಆಂಧ್ರವಾಲ’ ಚಿತ್ರವನ್ನು ಏಕಕಾಲಕ್ಕೆ ಕನ್ನಡದಲ್ಲಿ ತೆರೆಗೆ ತರಲು ತೀರ್ಮಾನಿಸಿದ್ದರು. ಅತ್ತ ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಹೀರೋ ಆಗಿದ್ದರು. ಸ್ವತಃ ಪೂರಿ ಜಗನ್ನಾಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇತ್ತ ಕನ್ನಡದಲ್ಲಿ ‘ವೀರ ಕನ್ನಡಿಗ’ ಚಿತ್ರವನ್ನು ಅವರ ಶಿಷ್ಯ ಮೆಹರ್ ರಮೇಶ್ ನಿರ್ದೇಶನ ಮಾಡುವುದು ಎಂದು ಫಿಕ್ಸ್ ಆಗಿತ್ತು. ಅದಾಗಲೇ ತಮ್ಮದೇ ಬ್ಯಾನರ್ ಅಡಿಯಲ್ಲಿ ಪುನೀತ್ ಎರಡು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. 3ನೇ ಸಿನಿಮಾ ಬಗ್ಗೆ ಎಕ್ಸ್‌ಪೆಕ್ಟೇಷನ್ ಎವರೆಸ್ಟ್ ಎತ್ತರಕ್ಕಿತ್ತು. ತೆಲುಗು ನಿರ್ಮಾಪಕರು ಅಪ್ಪು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡಲು ಮುಂದಾಗಿದ್ದರು. ತೆಲುಗಿನಲ್ಲಿ ಅದಾಗಲೇ ಸಿನಿಮಾಗಳನ್ನು ನಿರ್ಮಿಸಿ ಗೆದ್ದಿದ್ದ ಕೆ.ಎಸ್. ರಾಮರಾವ್ ಹಾಗೂ ಕೆ. ಎ. ವಲ್ಲಭ ‘ವೀರ ಕನ್ನಡಿಗ’ ಚಿತ್ರಕ್ಕೆ ಬಂಡವಾಳ ಹೂಡಿದ್ದಿತ್ತು. ಅವತ್ತಿನ ಕಾಲಕ್ಕೆ ಪುನೀತ್ ರಾಜ್‌ಕುಮಾರ್ ಅವರಿಗೆ 1 ಕೋಟಿ ರೂ. ಸಂಭಾವನೆ ಕೊಟ್ಟಿದ್ದರು. ಕನ್ನಡ ಚಿತ್ರರಂಗದಮಟ್ಟಿಗೆ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟ ಅಪ್ಪು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ. ಸ್ಲಮ್‌ನಲ್ಲಿರುವ ಮುನ್ನ ಎಂಬ ರಗಡ್ ಯುವಕನ ಪಾತ್ರದಲ್ಲಿ ಪುನೀತ್ ನಟಿಸಿದ್ದರು. ಆತನ ತಂದೆ ಶಂಕರ್ ಎನ್ನುವ ಮತ್ತೊಂದು ಪಾತ್ರದಲ್ಲಿ ಕೂಡ ಅಬ್ಬರಿಸಿದ್ದರು. ಶತದಿನೋತ್ಸವ ಕಂಡಿದ್ದ ಸಿನಿಮಾ ಕನ್ನಡದಲ್ಲಿ ಗೆದ್ದಿತ್ತು. ಈ ಮೂಲಕ ರಾಜರತನ್ ಹ್ಯಾಟ್ರಿಕ್ ಬಾರಿಸಿದ್ದರು. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಮನಗೆಲ್ಲದಿದ್ದರೂ ಅಪ್ಪು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಕಮರ್ಷಿಯಲ್ ಆಗಿ ಸಿನಿಮಾ ಸದ್ದು ಮಾಡಿದ್ದು ಸುಳ್ಳಲ್ಲ. ಆದರೆ ತೆಲುಗಿನಲ್ಲಿ ‘ಆಂಧ್ರವಾಲ’ ಸಿನಿಮಾ ಹೀನಾಯವಾಗಿ ಸೋತಿತ್ತು.