ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟಿಸುತ್ತಿರುವ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಪ್ರೊಡಕ್ಷನ್ ನಂ.2 ಹೆಸರಿನಲ್ಲಿ ಸಿನಿಮಾ ಶುರುವಾಗಿತ್ತು. ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೈಟಲ್ ಘೋಷಣೆಗೆ ಸಿದ್ಧತೆ ನಡೀತಿದೆ. ಜನವರಿ 20ರಂದು ನಟ, ನಿರ್ದೇಶಕ ದುನಿಯಾ ವಿಜಯ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕಿಂತ ಒಂದು ದಿನ ಮುನ್ನ ಆ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್‌ಮನ್’ ಹಾಗೂ ಶರಣ್ ನಟನೆಯ ‘ಗುರುಶಿಷ್ಯರು’ ಚಿತ್ರಗಳಿಗೆ ಜಡೇಶ್ ಹಂಪಿ ಆಕ್ಷನ್ ಕಟ್ ಹೇಳಿದ್ದರು. ದರ್ಶನ್ ನಟಿಸಿದ ‘ಕಾಟೇರ’ ಚಿತ್ರಕ್ಕೆ ಕಥೆ ಒದಗಿಸಿದ್ದರು. ತಮ್ಮ ಮುಂದಿನ ಸಿನಿಮಾದಲ್ಲಿ ‘ಕಾಟೇರ’ ರೀತಿಯಲ್ಲೇ ಒಂದು ದೇಸಿ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ನಗರದ ಮಹಾಲಕ್ಷ್ಮಿಪುರದ ವೀರಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಇದು ದುನಿಯಾ ವಿಜಯ್ ನಟನೆಯ 29ನೇ ಸಿನಿಮಾ ಆಗಿದೆ. ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
“ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ” ಎಂಬ ಟ್ಯಾಗ್‌ಲೈನ್ ಕೂಡ ಚಿತ್ರಕ್ಕಿದೆ. ಕಾರಂತರ ‘ಚೋಮದ ದುಡಿ’ಯ ಚೋಮನ ಪಾತ್ರದಿಂದ ಪ್ರೇರಣೆಗೊಂಡು ಚಿತ್ರದ ನಾಯಕನ ಪಾತ್ರ ಪೋಷಣೆ ಮಾಡಲಾಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ದುನಿಯಾ ವಿಜಯ್ ಪುತ್ರಿ ಮೋನಿಕಾ ತಮ್ಮ ಹೆಸರನ್ನು ರಿತನ್ಯ ಎಂದು ಬದಲಿಸಿಕೊಂಡು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕೂಡ ತಂದೆ-ಮಗಳಾಗಿ ಬಣ್ಣ ಹಚ್ಚಿದ್ದಾರೆ. ಕೆ. ವಿ ಸತ್ಯ ಪ್ರಕಾಶ್ ಹಾಗೂ ಪುತ್ರ ಸೂರಜ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಹಾಗೂ ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದೆ. ಅಂದಹಾಗೆ ಚಿತ್ರದ ಟೈಟಲ್ ಏನು ಎನ್ನುವ ಕುತೂಹಲ ಮೂಡಿದೆ. ಇನ್ನೆರಡು ದಿನಗಳಲ್ಲಿ ಅದು ಗೊತ್ತಾಗಲಿದೆ. ಆದರೆ ಬಹಳ ಹಿಂದೆಯೇ ಒಂದು ಟೈಟಲ್ ಚರ್ಚೆಗೆ ಬಂದಿತ್ತು. ಚಿತ್ರಕ್ಕೆ ‘ರಾಚಯ್ಯ’ ಎಂದು ಟೈಟಲ್ ಫಿಕ್ಸ್ ಮಾಡಿರುವುದಾಗಿ ಗುಸುಗುಸು ಕೇಳಿ ಬಂದಿತ್ತು. ಆದರೆ ಚಿತ್ರತಂಡ ಖಚಿತಪಡಿಸಿರಲಿಲ್ಲ.
ಜನವರಿ 19ರಂದು ಇದೇ ಟೈಟಲ್ ಅನ್ನು ಘೋಷಿಸುತ್ತಾರಾ? ಕಾದು ನೋಡಬೇಕಿದೆ. ಕಥೆಗೆ ತಕ್ಕಂತೆ ‘ರಾಚಯ್ಯ’ ಎನ್ನುವ ಟೈಟಲ್ ಅನ್ನು ಫಿಕ್ಸ್ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗ್ತಿದೆ. ಆದರೆ ಮತ್ತೊಂದು ಟೈಟಲ್ ಅನ್ನು ಕೂಡ ಈ ಕಥೆಗೆ ತಂಡ ಪರಿಗಣನೆಗೆ ತೆಗೆದುಕೊಂಡಿದೆ. ಹಾಗಾಗಿ ಜಡೇಶ್ ಹಂಪಿ ಹಾಗೂ ದುನಿಯಾ ವಿಜಯ್ ಚಿತ್ರಕ್ಕೆ ಎರಡು ಟೈಟಲ್‌ಗಳ ಪರಿಶೀಲನೆ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ‘ರಾಚಯ್ಯ’ ಟೈಟಲ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಕಾಟೇರ’ ರೀತಿಯಲ್ಲೇ ಇದು ಕೂಡ ಪಕ್ಕಾ ದೇಸಿ ಟೈಟಲ್. ನಮ್ಮ ಮಣ್ಣಿನ ಕಥೆ ಹೇಳಲು ಇದಕ್ಕಿಂತ ಒಳ್ಳೆ ಟೈಟಲ್ ಸಿಗಲ್ಲ ಎನ್ನುತ್ತಿದ್ದಾರೆ. ಕೋಲಾರದ ಭಾಗದಲ್ಲಿ ನಡೆಯುವ ಕಥೆ ಇದು. ಭೂಮಿಗಾಗಿ ಹೋರಾಟದ ವಿಚಾರದ ಬಗ್ಗೆ ಚರ್ಚಿಸುತ್ತಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ‘ಲ್ಯಾಂಡ್‌ಲಾರ್ಡ್’ ಎಂಬ ಮತ್ತೊಂದು ಟೈಟಲ್ ಅನ್ನು ಕೂಡ ಚಿತ್ರತಂಡ ಪರಿಶೀಲನೆ ಮಾಡುತ್ತಿದೆ ಎನ್ನಲಾಗ್ತಿದೆ. ಒಟ್ಟಾರೆ ‘ರಾಚಯ್ಯ’ ಅಥವಾ ‘ಲ್ಯಾಂಡ್‌ಲಾರ್ಡ್’ ಎರಡರಲ್ಲಿ ಒಂದು ಟೈಟಲ್ ಅನ್ನುವ ಫಿಕ್ಸ್ ಮಾಡುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ದುನಿಯಾ ವಿಜಯ್ ರಗಡ್ ಪಾತ್ರದಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ‘ಭೀಮ’ ಸಕ್ಸಸ್ ಬಳಿಕ ಸಹಜವಾಗಿಯೇ ವಿಜಯ್ ಮುಂದಿನ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.