ಜಾಮೀನು ಪಡೆದು ಹೊರ ಬಂದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ದರ್ಶನ್ ತಮ್ಮ ಜೊತೆಗೆ ನಿಂತವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೇ ತನ್ನ ಬರ್ತ್‌ಡೇ ಆಚರಣೆ ಬಗ್ಗೆ ಫ್ಯಾನ್ಸ್‌ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಮೊದಲ ವಿಡಿಯೋದಲ್ಲಿ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದು, ಹರಿದಾಡುತ್ತಿರುವ ಊಹಾಪೋಹಗಳಿಗೆ ಕಿವಿಗೊಡಬೇಡಿ ಅಂತಾನೂ ಹೇಳಿದ್ದಾರೆ. ಅಷ್ಟಕ್ಕೂ ರೆಗ್ಯೂಲರ್ ಜಾಮೀನು ಪಡೆದು ಹೊರ ಬಂದ ಬಳಿಕ ದರ್ಶನ್ ತಮ್ಮ ಅಭಿಮಾನಿಗಳ ಜೊತೆ ಏನು ಹೇಳಿಕೊಂಡಿದ್ದಾರೆ. ಅನ್ನೋದನ್ನು ನೋಡುವುದಾದರೆ.
“ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ? ಥ್ಯಾಂಕ್ಸ್ ಹೇಳಲಾ? ಏನೇ ಹೇಳಿದರೂ ತುಂಬಾನೇ ಕಮ್ಮಿ. ಯಾಕಂದ್ರೆ, ನೀವು ತೋರಿಸಿರುವ ಪ್ರೀತಿ, ಅಭಿಮಾನವನ್ನು ಯಾವ ರೀತಿ ರಿಟರ್ನ್ ಮಾಡಬೇಕು ಅನ್ನೋದು ಗೊತ್ತಾಗಲ್ಲ. ಇವತ್ತು ಇಲ್ಲಿ ಕೂತುಕೊಳ್ಳುವುದಕ್ಕೆ ಒಂದೇ ಒಂದು ರೀಸನ್ ಏನು ಅಂದರೆ, ಬರ್ತ್‌ಡೇ ಬರುತ್ತಿದೆ. ನೀವು ತುಂಬಾನೇ ಆಸೆ ಪಟ್ಟಿದ್ರಿ. ನನಗೂ ಪ್ರತಿಯೊಬ್ಬರನ್ನೂ ಭೇಟಿ ಮಾಡಿ ಥ್ಯಾಂಕ್ಸ್ ಹೇಳೋಣ ಅಂತ ತುಂಬಾನೇ ಆಸೆಯಿತ್ತು. ಪ್ರತಿ ಸಾರಿ ಬಂದಾಗಲೂ ಎಲ್ಲರಿಗೂ ನಿಂತು ಕೊಂಡೇ ಥ್ಯಾಂಕ್ಸ್ ಹೇಳಿ ವಿಶ್ ತಗೋತಿದ್ದೆ.” ಎಂದು ದರ್ಶನ್ ಹೇಳಿದ್ದಾರೆ.
“ಈ ಸಲ ಒಂದು ಸಮಸ್ಯೆ ಅಂತ ಹೇಳುತ್ತಿಲ್ಲ. ಆರೋಗ್ಯ ಸಮಸ್ಯೆ ಅಷ್ಟೇನೆ. ಮತ್ತೇನೂ ಇಲ್ಲ. ತುಂಬಾ ಹೊತ್ತು ನಿಂತುಕೊಳ್ಳುವುದಕ್ಕೆ ಆಗುವುದಿಲ್ಲ. ಏನು ಸಮಸ್ಯೆ ಅನ್ನೋದು ನಿಮಗೆ ತುಂಬಾನೇ ಚೆನ್ನಾಗಿ ಗೊತ್ತು. ನಿಂತುಕೊಂಡು ಎಲ್ಲರಿಗೂ ವಿಶ್ ಮಾಡುವುದಕ್ಕೆ ನನಗೆ ಆಗಲ್ಲ. ಯಾಕಂದ್ರೆ, ಇಂಜೆಕ್ಷನ್ ತೆಗೆದುಕೊಂಡರೆ, 15 ರಿಂದ 20 ದಿನ ಓಕೆ ಆಮೇಲೆ ಮತ್ತೆ ಅದರ ಪವರ್ ಕಡಿಮೆ ಆಗುತ್ತಿದ್ದಂತೆ ನೋವು ಶುರುವಾಗುತ್ತೆ.”
“ಆಪರೇಷನ್ ಅನ್ನೋದು ಕಟ್ಟಿಟ್ಟ ಬುತ್ತಿ. ಅದು ನಿಮಗೂ ಗೊತ್ತು. ನಮಗೂ ಗೊತ್ತು. ಅದನ್ನಂತೂ ಮಾಡಿಸಲೇಬೇಕು. ಆದರೆ, ಇರುವ ಕೆಲಸಗಳಲ್ಲಿ ನಾನು ಯಾರ ಸಿನಿಮಾಗಳನ್ನು ಒಪ್ಪಿಕೊಂಡಿದ್ದೀನಿ. ನನ್ನ ಎಲ್ಲಾ ನಿರ್ಮಾಪಕರಿಗೂ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಯಾಕಂದ್ರೆ ಇಷ್ಟು ದಿನ ಕಾದ್ರು. ಇಷ್ಟು ದಿನ ಕಾದಿದ್ದಾರೆ. ಅವರಿಗೆ ಅನ್ಯಾಯ ಮಾಡಬಾರದು ಅಂತ ಎಲ್ಲಿವರೆಗೂ ಪುಶ್ ಮಾಡುವುದಕ್ಕೆ ಸಾಧ್ಯವೋ ಅಲ್ಲಿವರೆಗೂ ಪುಶ್ ಮಾಡುತ್ತಿದ್ದೇನೆ. ಅದಕ್ಕಾಗಿ ಸೆಲೆಬ್ರಿಟಿಗಳು ಇದೊಂದು ಸಾರಿ ಕ್ಷಮೆ ಕೊಡ್ರಿ.”
“ಯಾವ ಊಹಾ ಪೋಹಗಳನ್ನು ನನ್ನ ಸೆಲೆಬ್ರಿಟಿಗಳು ಕಿವಿಗೆ ಹಾಕೋಬೇಡಿ. ಯಾರೋ ನಿರ್ಮಾಪಕರಿಗೆ ದುಡ್ಡು ಕೊಟ್ಟರು ಅಂತೆಲ್ಲ ಇತ್ತು. ಹೌದು ಸೂರಪ್ಪ ಬಾಬು ಅವರಿಗೆ ವಾಪಾಸ್ ಕೊಟ್ಟಿದ್ದೇನೆ. ಏನಕ್ಕೆ ಅಂದರೆ, ಅವರು ಸಿನಿಮಾ ಮಾಡುವುದಕ್ಕೆ ಬಂದಾಗ ಅವರಿಗೆ ತುಂಬಾನೇ ಕಮಿಟ್‌ಮೆಂಟ್ ಇತ್ತು. ಈಗ ನಡೆದಿದ್ದೆಲ್ಲ ನಿಮಗೂ ಗೊತ್ತು. ಟೈಮ್ ಎಲ್ಲಾ ವೇಸ್ಟ್ ಆಯ್ತು. ಈ ಟೈಮ್‌ನಲ್ಲಿ ಅವರ ದುಡ್ಡು ಇಟ್ಟುಕೊಳ್ಳುವುದರಿಂದ ಅವರ ಕಮಿಟ್‌ಮೆಂಟ್ ಇನ್ನೂ ಜಾಸ್ತಿ ಆಗುತ್ತೆ. ಈಗ ನಿಮ್ಮ ಕಮಿಟ್‌ಮೆಂಟ್ ಮುಗಿಸಿಕೊಳ್ಳಿ ಮುಂದೆ ಒಳ್ಳೆ ಸಬ್ಜೆಕ್ಟ್ ಸಿಕ್ಕಾಗ ಮಾಡೋಣ ಅಂತ ಹೇಳಿದ್ದೆ.
“ಈ ಮೂಲಕ ನಾನು ಮೂರು ಜನಕ್ಕೆ ತುಂಬಾನೇ ಥ್ಯಾಂಕ್ಸ್ ಹೇಳಬೇಕು. ನಮ್ಮ ಹೀರೋ ಧನ್ವೀರ್ ಅವರಿಗೆ. ಆತ ಪಾಪ ಯಾವಾಗಲೂ ಜೊತೆಯಲ್ಲೇ ಇದ್ದು, ನಮ್ಮ ಬೆನ್ನೆಲುಬು ಆಗಿದ್ದರು. ಧನ್ವೀರ್ ಅವರಿಗೂ ಥ್ಯಾಂಕ್ಸ್. ಹಾಗೇ ಬುಲ್ ಬುಲ್ ರಚಿತಾ ರಾಮ್ ಅವರಿಗೆ ತುಂಬಾನೇ ಥ್ಯಾಂಕ್ಸ್. ಹಾಗೇ ನನ್ನ ಪ್ರಾಣ ಸ್ನೇಹಿತೆಯಾದ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳಿಗೂ ಅನಂತ ಧನ್ಯವಾದ ಅಂದರೂ ಚಿಕ್ಕದಾಗುತ್ತೆ.”
“ಇನ್ನು ಬೇರೆ ಭಾಷೆ ಹೋಗ್ತಾರೆ ಅಂತ ಸುದ್ದಿ. ಇಲ್ಲೇ ಇಷ್ಟು ಅಭಿಮಾನ ತೋರಿಸಿದ್ದೀರ. ಸುಮ್ಮನೆ ಎಲ್ಲಿಗೆ ಅಂತ ಹೋಗಲಿ. ಸಾಯೋವರೆಗೂ ಇಲ್ಲೇನೆ. ಇಲ್ಲಿ ಬಿಟ್ಟು ನಾನು ಎಲ್ಲೂ ಹೋಗುವುದಕ್ಕೆ ಆಗೋದಿಲ್ಲ. ಕಾವೇರಿ ಹುಟ್ಟಿದ ಕೊಡಗುನಲ್ಲೇ ನಾನು ಹುಟ್ಟಿದ್ದು. ಅಲ್ಲಿ ಹುಟ್ಟುತ್ತಾಳೆ ಕಾವೇರಿ. ಎಲ್ಲಾ ಕಡೆ ಹರಿದುಕೊಂಡು ಬರುತ್ತಾಳೆ. ನನ್ನ ಸೀಮಿತ ಇರೋ ಮೇಕೆದಾಟು ವರೆಗೂ ಅಷ್ಟೇನೇ. ಅದರ ಮುಂದೆ ಹೇಗೆ ಹರಿದುಕೊಂಡು ಹೋದರೂ ನನಗೂ ಅದಕ್ಕೂ ಸಂಬಂಧವಿಲ್ಲ. ಹಾಗೇ ಏನೇ ಸಿನಿಮಾ ಮಾಡಿದರೂ ಇಲ್ಲೇನೆ. ಅದು ಕನ್ನಡ ಸಿನಿಮಾನೇ.”