Sandalwood Leading OnlineMedia

‘ *ವೃಷಭ* *ಚಿತ್ರತಂಡಕ್ಕೆ ಸೇರ್ಪಡೆಯಾದ ಹಾಲಿವುಡ್‌* *ಕಾರ್ಯಕಾರಿ ನಿರ್ಮಾಪಕ ನಿಕ್ ತರ್ಲೋ*

ಮೋಹನ್ ಲಾಲ್ ಮತ್ತು ರೋಶನ್ ಮೇಕ ಅಭಿನಯದ ‘ವೃಷಭ’ ಚಿತ್ರದ ಚಿತ್ರೀಕರಣ ಕಳೆದ ವಾರವಷ್ಟೇ ಅಧಿಕೃತವಾಗಿ ಪ್ರಾರಂಭವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ನಿಕ್ ತರ್ಲೋ, ಕಾರ್ಯಕಾರಿ ನಿರ್ಮಾಪಕರಾಗಿ ಸೇರ್ಪಡೆಯಾಗಿದ್ದಾರೆ.
ನಿಕ್ ತರ್ಲೋ ಹಲವು ಹಾಲಿವುಡ್ ಚಿತ್ರಗಳ ನಿರ್ಮಾಪಕರಾಗಿ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡವರು. ಆಸ್ಕರ್ ಪ್ರಶಸ್ತಿ ಚಿತ್ರಗಳಾದ ‘ಮೂನ್ಲೈಟ್’, ‘ಮಿಸೌರಿ’, ‘ಥ್ರೀ ಬಿಲ್ಬೋರ್ಡ್ಸ್ ಔಟ್ಸೈಡ್ ಎಬ್ಬಿಂಗ್’ ಮುಂತಾದ ಚಿತ್ರಗಳಿಗೆ ದುಡಿದವರು. ಈಗ ಅವರು ‘ವೃಷಭ’ ಚಿತ್ರದ ಮೂಲಕ ಮೊದಲ ಬಾರಿಗೆ ಭಾರತೀಯ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ.
‘ವೃಷಭ’ ಚಿತ್ರವು ಹಾಲಿವುಡ್ ಚಿತ್ರಗಳ ಮಾದರಿಯಲ್ಲಿ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಚಿತ್ರತಂಡದವರು ಚಿತ್ರಕ್ಕೆ ಹೇಗೆಲ್ಲ ತಯಾರಿಗಳು ನಡೆಯುತ್ತಿದೆ, ಚಿತ್ರೀಕರಣ ಸಮಯದಲ್ಲಿ ಏನೆಲ್ಲಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸುವ 57 ಸೆಕೆಂಡ್‌ಗಳ ಒಂದು ವೀಡಿಯೋ ಬಿಡುಗಡೆ ಮಾಡಲಾಗಿದೆ. ಹಾಲಿವುಡ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ “ವೃಷಭ” ಪಾತ್ರವಾಗಿದೆ.
ಈ ಚಿತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾತನಾಡಿರುವ ನಿಕ್ ತರ್ಲೋ, ‘ಇದು ನನ್ನ ಮೊದಲ ಭಾರತೀಯ ಚಿತ್ರ ಮತ್ತು ನಾನು ಇಲ್ಲಿ ಕೆಲಸ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ. ಒಬ್ಬ ಕಾರ್ಯಕಾರಿ ನಿರ್ಮಾಪಕನಾಗಿ, ಚಿತ್ರದ ಸೃಜನಶೀಲ ಚಟುವಟಿಕೆಗಳು ಸೇರಿದಂತೆ ಹಲವು ವಿಭಾಗಗಳ ಕುರಿತು ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ದೇಶದ ಚಿತ್ರಗಳ ಹೊರತಾಗಿ, ನಾನು ಕೆಲಸ ಮಾಡುತ್ತಿರುವ ಬೇರೆ ದೇಶದ ಮೊದಲ ಚಿತ್ರವಿದು. ಅದರಲ್ಲೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರ ನನಗೆ ಒಂದು ಹೊಸ ಅನುಭವ. ಈ ಚಿತ್ರದಿಂದ ನಾನು ಬಹಳಷ್ಟು ಕಲಿಯುವುದಿದೆ ಮತ್ತು ಈ ಅನುಭವ ಅದ್ಭುತವಾಗಿ ಇರುತ್ತದೆ ಎಂದು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಚಿತ್ರತಂಡಕ್ಕೆ ನಿಕ್ ಸೇರ್ಪಡೆಯ ಕುರಿತು ಮಾತನಾಡಿರುವ ನಿರ್ಮಾಪಕ ವಿಶಾಲ್ ಗುರ್ನಾನಿ, ‘ನಿಕ್ ಸೇರ್ಪಡೆಯಿಂದ ನಮ್ಮ ಚಿತ್ರ ಇನ್ನಷ್ಟು ದೊಡ್ಡದಾಗಿದೆ. ಈ ಚಿತ್ರವನ್ನು ನಾವು ಹಾಲಿವುಡ್ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ನಿಕ್ರಂತಹ ಸಮರ್ಥ ವ್ಯಕ್ತಿ ನಮ್ಮ ಜೊತೆಗೆ ಕೈಜೋಡಿಸಿರುವುದು ತಂಡದ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹೇಳಿಕೊಂಡಿದ್ದಾರೆ.
‘ವೃಷಭ’ ಚಿತ್ರವು ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಂದು ಆಕ್ಷನ್-ಸೆಂಟಿಮೆಂಟ್ ಚಿತ್ರವಾಗಿದ್ದು, ಮೋಹನ್ ಲಾಲ್ ಮತ್ತು ರೋಶನ್ ಮೇಕ ಜೊತೆಗೆ ಶನಾಯ ಕಪೂರ್, ಜಹ್ರ ಎಸ್ ಖಾನ್, ಶ್ರೀಕಾಂತ್ ಮೇಕ, ರಾಗಿಣಿ ದ್ವಿವೇದಿ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಮುಂದಿನ ವರ್ಷದ ನಿರೀಕ್ಷಿತ ಚಿತ್ರಗಳು ಇದು ಸಹ ಒಂದಾಗಿದೆ.
‘ವೃಷಭ’ ಚಿತ್ರವನ್ನು ಬಾಲಿವುಡ್ ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಕನ್ನಡದ ನಂದಕಿಶೋರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವು ಮಲಯಾಳಂ, ಕನ್ನಡ, ತೆಲುಗು, ಹಿಂದಿ ಮತ್ತು ತಮಿಳುಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡು ಬಿಡುಗಡೆಯಾಗುತ್ತಿದೆ.

Share this post:

Related Posts

To Subscribe to our News Letter.

Translate »