ಧುತ್ತೆಂದು ಒಸರಿ ಬರುವ
ಕಣ್ಣೀರನ್ನೂ ಹರಿ ಬಿಡುವ
ಮನಸ್ಸಿಲ್ಲ, ಅದು ನೀನನಗೆ ಕೊಟ್ಟ
ಕೊನೆಯ ಉಡುಗೊರೆ…!
ಇಂತಹ ಸಾಲುಗಳು ಹೇಗೆ ಮನಕ್ಕೆ ತಾಕುತ್ತದೋ ಅದೇ ರೀತಿ, ವಿಷ್ಣು ಪ್ರಿಯ ಸಿನಿಮಾವೂ ಮನಸ್ಸನ್ನು ಕಾಡುತ್ತದೆ. ಪ್ರೀತಿ ಮಾಡಬಾರದು.. ಮಾಡಿದರೆ ಜಗಕೆ ಹೆದರಬಾರದು.. ಪ್ರೇಮಿಗಳು ಹೇಳಿರುವ ಮಾತನ್ನು ದಶಕಗಳಿಂದಲೂ ಕೇಳುತ್ತಾ ಬಂದಿದ್ದೇವೆ. ಈ ಡಿಜಿಟಲ್ ಯುಗದಲ್ಲಿ ಲವ್ ಫೇಸ್‌ಬುಕ್‌ನಲ್ಲಿ ಶುರುವಾಗಿ ವಾಟ್ಸ್ಅಪ್‌ನಲ್ಲಿ ಕೊನೆಯಾಗುತ್ತಿರುವಾಗಲೂ, ಪ್ರೇಮಿಗಳು ಸಾಕಷ್ಟು ಫಾಸ್ಟ್ ಫಾರ್ವರ್ಡ್ ಆಗಿದ್ದರೂ.. ಸಿನಿಮಾ ತನ್ನೊಳೆಗೆ ಎಲ್ಲರನ್ನೂ ಸೆಳೆದುಕೊಳ್ಳುತ್ತದೆ ಅಂದರೆ, ಅದೇ `ವಿಷ್ಣು ಪ್ರಿಯ’ ಎಂಬ ದೃಶ್ಯಕಾವ್ಯದ ತಾಕತ್ತು. 90ರ ಕಾಲಘಟ್ಟದಲ್ಲಿನ ಪೋಷಕರ ಆಲೋಚನಾ ಲಹರಿ, ನಿಷ್ಕಲ್ಮರ ಮುಗ್ಧ ಪ್ರೇಮಿಗಳ ಆಕರ್ಷಣೆ, ಸೆಳೆತ, ನೋವು-ನಲಿವು, ಪ್ರೇಮಿಗಾಗಿ ಬದುಕನ್ನೇ ಬಲಿಕೊಡಲು ಸಿದ್ಧವಾಗುವ ನಾಯಕ, ಪ್ರೇಮಿಗಾಗಿ ಕಾತರಿಸುವ ನಾಯಕಿ.. ನಾಯಕನಿಗೆ ಎದುರಾಗುವ ಸಂದಿಗ್ಧ ಪರಿಸ್ಥಿತಿ.. ಹೀಗೆ ಪ್ರೇಕ್ಷಕರನ್ನು ಎಂಗೇಜ್ ಆಗಿಡುವ ಒಂದು ನೀಟ್ ಸಿನಿಮಾ `ವಿಷ್ಣುಪ್ರಿಯ’

ಹಾಗಿದ್ದರೆ `ವಿಷ್ಣುಪ್ರಿಯ’ದಲ್ಲಿ ಇರುವುದಾದರೂ ಏನು? ಹಚ್ಚ ಹಸಿರಿನ ಸುಂದರ ಪರಿಸರದ ಮಡಿಲಲ್ಲಿ ಬೆಳೆದ ಮಿಡಲ್ ಕ್ಲಾಸ್ ಕಾಲೇಜ್ ವಿದ್ಯಾರ್ಥಿ ವಿಷ್ಣು (ಶ್ರೇಯಸ್ ಮಂಜು) ತನ್ನ ಬದುಕಿನಲ್ಲಿ ನಡೆದ ಒಂದು ಕೆಟ್ಟ ಘಟನೆಯನ್ನು ನುಂಗಿಕೊ0ಡು, ತನ್ನ ಕುಚುಕು ಜೊತೆ ಕಾಲ ಕಳೆಯುತ್ತಿರುತ್ತಾನೆ. ತನ್ನ ಕುಚುಕು ಪ್ರೀತಿಸುವ ಹುಡುಗಿ ಪ್ರಿಯ (ಪ್ರಿಯ ವಾರಿಯರ್)ಗೆ ಗೆಳೆಯನ ಲವ್ ಮ್ಯಾಟರ್ ತಿಳಿಸಿಲು ಸೇತುವೆಯಾಗುತ್ತಾನೆ. ಆದರೆ ಇಲ್ಲೇ ಕಹಾನಿಮೆ ಟ್ವಿಸ್ಟ್ ಸಿಗೋದು. ಪ್ರಿಯಳಿಗೆ ವಿಷ್ಣು ಪ್ರಿಯ ಎಂಬ ಸಂಗತಿ ಪ್ರಿಯಳಿಂದಾಲೇ ಬಹಿರಂಗವಾಗುತ್ತದೆ. ಅಲ್ಲಿಂದ ವಿಷ್ಣು ಒಲವಿನ ನಶೆಯಲ್ಲಿ ತನ್ನನ್ನು ತಾನು ಮರೆಯುತ್ತಾನೆ.

ವಿದ್ಯಾಭ್ಯಾಸದ ನಡುವೆ ಇವರ ಸ್ನೇಹ, ಸಲುಗೆ ಪ್ರೀತಿ ಒಂದು ಕ್ಷಣವೂ ಬಿಟ್ಟಿಲಾರದ `ಫೆವಿಕಾಲ್ ಪ್ರೇಮ’ವಾಗಿ ಬದಲಾಗುತ್ತದೆ. ಬರ್ತ್ಡೇ ಸ್ಪೆಶಲ್ ವಿಚಾರದಲ್ಲಿ ಒಂದು ಎಡವಟ್ಟು ಮಾಡಿಕೊಳ್ಳುವ ವಿಷ್ಣುವಿನಿಂದಾಗಿ ಅಮರ ಪ್ರೇಮ ಪುರಾಣ, ಗೊಂದಲಗಳ ಹೂರಣವಾಗಿ ಬಿಡುತ್ತದೆ. ಕೊನೆಯಲ್ಲಿ ಗೊಂದಲಗಳ ಕೊನೆಗಾಣಿಸಲು ಪ್ರಿಯಳ ತಂದೆ ಇಬ್ಬರು ಪ್ರೇಮಿಗಳನ್ನು ದೂರ ಮಾಡುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ವಿಷ್ಣುವಿನ ಅಪ್ಪನಲ್ಲದ ಅಪ್ಪ (ಅಚ್ಯುತ್ ಕುಮಾರ್) ಮಗನ ಬೆಂಬಲಕ್ಕೆ ನಿಲ್ಲುತ್ತಾರೆ. ವಿಷ್ಣುವಿನ ಗೆಳೆಯ ಭಗ್ನ ಪ್ರೇಮಿಯಿಂದಾಗಿ, ಪ್ರೇಮಿಗಳ ವಿರುದ್ಧ ನಿಲ್ಲುವ ಶಕ್ತಿಗಳಿಂದಾಗಿ ಸಿನಿಮಾ ಸೀರಿಯಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಪ್ರೇಮಿಗಳು ಒಂದಾಗ್ತಾರಾ.. ವಿಷ್ಣುಪ್ರಿಯರ ಮುಗ್ಧ ಪ್ರೇಮಕ್ಕೆ ನ್ಯಾಯ ಸಿಗುತ್ತಾ?

ಒಂದು ಸರಳ ವಿರಳ ಪ್ರೇಮ ಕಹಾನಿಯನ್ನು ಮಲಯಾಳಿ ಮಾಯವಿ ನಿರ್ದೇಶಕ ವಿ.ಕೆ.ಪ್ರಕಾಶ್ ಅತ್ಯಂತ ನಾಜೂಕಿನಿಂದ ಕಟ್ಟಿಕೊಟ್ಟಿದ್ದಾರೆ. 90ರ ಕಾಲಘಟ್ಟದ ಪ್ರೇಮಿಗಳ ಮನಸ್ಥಿತಿ ಮನೆಯವರ ಆಲೋಚನೆ, ನೋವು, ನಲಿವಿನ ತಳಮಳದ ಮೂಲಕ climax ಮನಸೆಳೆಯುತ್ತಿದೆ. ಈ ರೀತಿಯ ಪ್ರೇಮ ಕಥೆಗಳು ಬಹಳಷ್ಟು ಬಂದಿದ್ದರೂ ಸಂಗೀತ, ಅಭಿನಯ ಮತ್ತು ವಿಭಿನ್ನ ನರೇಶನ್ ಮೂಲಕ ಚಿತ್ರ ಆಪ್ತವಾಗುತ್ತಾ ಹೋಗುತ್ತದೆ. ಚಿತ್ರದ ಹೈಲೈಟ್ ಎಂದರೆ ವಿನೋದ್ ಭಾರತಿ ಕ್ಯಾಮೆರ ಕೈಚಳಕ, ಗೋಪಿ ಸುಂದರ್ ಹಿನ್ನೆಲೆ ಸಂಗೀತ, ನಿರ್ದೇಶಕ ಡೆಡ್ಲಿ ರವಿ ಶ್ರೀವತ್ಸ ಅವರ ಸಂಭಾಷಣೆ, ಸುರೇಶ್ ಅರಸ್ ಸಂಕಲನ. ಒಂದೇ ಮನೆಯೊಳಗೆ ಬಿ.ಧನಂಜಯ ಮಾಡಿರುವ ಕೋರಿಯೋಗ್ರಫಿ ಅದ್ಭುತವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ 90ರ ದಶಕದ ಪ್ರೇಮಕಥೆಯನ್ನು ನಂಬಿ ದುಡ್ಡು ಹಾಕಿರುವ ಕೆ.ಮಂಜು ಧೈರ್ಯವನ್ನು ಮೆಚ್ಚಬೇಕು.

ವಿಷ್ಣುವಾಗಿ ಶ್ರೇಯಸ್ ಮಂಜು ಮನೋಜ್ಞ ಅಭಿನಯ ನೀಡಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಯಾಗಿ ಅಲ್ಲಲ್ಲಿ `ನಾಗರಹಾವು’ ಚಿತ್ರದ ರಾಮಾಚಾರಿ ಅವತರಿಸಿದ್ದಾರೆ. ಆಕ್ಷನ್‌ಗೂ ಸೈ, ಅದ್ಭುತ ಅಭಿನಯಕ್ಕೂ ಸೈ ಅಂದಿರುವ ಶ್ರೇಯಸ್‌ನಿಂದ ಕನ್ನಡ ಚಿತ್ರರಂಗಕ್ಕೆ ಮುಂದಿನ ದಿನಗಳಲ್ಲಿ ಖಂಡಿತಾ ಶ್ರೇಯಸ್ಸಾಗಲಿದೆ. ಇನ್ನು, ಪ್ರಿಯಾ ವಾರಿಯರ್ ತನ್ನ ಸಹಜ ಅಭಿನಯದಿಂದ ಕನ್ನಡಿಗರ ಮನಸ್ಸಲ್ಲಿ ಅಚ್ಚೊತ್ತಿದ್ದಾರೆ. ನಾಯಕಿಯ ತಂದೆಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅದ್ಭುತವಾಗಿ ನಡೆಸಿದ್ದು, ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಕೂಡ ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕನ ತಾಯಿಯಾಗಿ ಅಶ್ವಿನಿ ಗೌಡ, ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದಾರ್ ಸೇರಿದಂತೆ ನವೀನ್ ಡಿ. ಪಡಿಲ್, ಗೆಳೆಯನ ಪಾತ್ರಧಾರಿ, ಅಕ್ಕನ ಪಾತ್ರದಾರಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಈಗಾಗಲೇ ಪ್ರೇಮದಲ್ಲಿ `ಎದ್ದವರು’, ಭಗ್ನ ಪ್ರೇಮಿಗಳು.. ಹೀಗೆ ಕುಂಟು0ಬ ಸಮೇತರಾಗಿ ಅನಾಯಾಸವಾಗಿ ಸಿನಿಮಾ ನೋಡಿ ಸಂತಸ ಪಡಬಹುದು.

ಕೊನೆಯಲ್ಲಿ: `ವಿಷ್ಣುಪ್ರಿಯ’ ಎಂಬ ಹೆಸರಿನ ಕೆತ್ತನೆಯನ್ನು ಪ್ರೊಫೆಶನಲ್ ಆಚಾರಿ ಕೈಯಲ್ಲಿ ಕೆಚ್ಚಿಸುವುದಕ್ಕಿಂತ, ಮುಗ್ಧ ವಿಷ್ಣುವೇ ತನಗೆ ತೋಚಿದ ರೀತಿಯಲ್ಲಿ ಕೆತ್ತಿದ್ದರೆ ಇನ್ನಷ್ಟು ಅರ್ಥಪೂರ್ಣವಾಗುತ್ತಿತ್ತು. ಇನ್ನು, ತಮಿಳಿನ `ಅಮರ ಕಾವ್ಯಂ’ ಸಿನಿಮಾ ಅಲ್ಲಲ್ಲಿ ನೆನಪಾದರೂ ಆದೀತು.
