Left Ad
ಅಭಿಮಾನಿಗಳಿಗೆ ನಿರಾಸೆ: ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಅನುಮತಿ ನಿರಾಕರಣೆ - Chittara news
# Tags

ಅಭಿಮಾನಿಗಳಿಗೆ ನಿರಾಸೆ: ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಅನುಮತಿ ನಿರಾಕರಣೆ

ಚಿರಸ್ಮರಣೀಯ ನಟ ವಿಷ್ಣುವರ್ಧನ್ ಅವರ 75ನೇ ಜನ್ಮದಿನಾಚರಣೆ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಪ್ರತಿ ವರ್ಷವೂ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿ, ಅನ್ನದಾನ, ರಕ್ತದಾನ, ನೇತ್ರದಾನದಂತಹ ಸಾಮಾಜಿಕ ಸೇವೆಗಳನ್ನು ಕೈಗೊಂಡಿದ್ದರು. ಆದರೆ ಈ ಬಾರಿ ಕೋರ್ಟ್ ಆದೇಶದಿಂದ ಅಭಿಮಾನ್ ಸ್ಟುಡಿಯೋದಲ್ಲಿ ಯಾವುದೇ ರೀತಿಯ ಆಚರಣೆ ನಡೆಯದಂತೆ ನಿರ್ಬಂಧಿಸಲಾಗಿದೆ.

ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವೆಂದರೆ, ಅಭಿಮಾನ್ ಸ್ಟುಡಿಯೋ ಸಮೀಪದಲ್ಲಿಯೂ ಸಹ ಕಾರ್ಯಕ್ರಮ ಮಾಡಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಕೆಂಗೇರಿಯಲ್ಲೂ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆಗೆ ಪೊಲೀಸರು ತಡೆದಿದ್ದಾರೆ ಎನ್ನುವುದು ಮಾಹಿತಿ.

ವಿಷ್ಣು ಅಭಿಮಾನಿ ಸಂಘದ ಮುಖಂಡ ವೀರಕಪುತ್ರ ಶ್ರೀನಿವಾಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದು, “ಕೋರ್ಟ್ ಆದೇಶವನ್ನು ಗೌರವಿಸೋಣ. ಅಭಿಮಾನಿಗಳು ಯಾರೂ ಅಭಿಮಾನ್ ಸ್ಟುಡಿಯೋ ಬಳಿ ಹೋಗಬಾರದು. ಆದರೆ ನಮ್ಮ ಭಾವನೆಗೆ ಕೋರ್ಟ್ ಸ್ಪಂದಿಸಲಿಲ್ಲ. ಮುಂದೆ ಕಾನೂನಿನ ಹೋರಾಟದಿಂದ ಮತ್ತು ಸರ್ಕಾರದ ನೆರವಿನಿಂದ ಆ ಜಾಗ ನಮ್ಮದಾದಾಗ ದೊಡ್ಡಮಟ್ಟದಲ್ಲಿ ಸಂಭ್ರಮಿಸೋಣ” ಎಂದು ಹೇಳಿದ್ದಾರೆ.

ಅವರು ಇನ್ನೂ ಹೇಳಿದರು: “ಅಭಿಮಾನಿಗಳಿಗಾಗಿ ಪಕ್ಕದಲ್ಲಿರುವ ಖಾಸಗಿ ಜಾಗವೊಂದನ್ನು ಬಾಡಿಗೆಗೆ ಪಡೆದು ಪೂಜೆ ಮತ್ತು ಸೇವಾ ಕಾರ್ಯಗಳನ್ನು ಮಾಡಲು ಉದ್ದೇಶಿಸಿದ್ದೆವು. ಆದರೆ ಪೊಲೀಸರು ಅದಕ್ಕೂ ಅಡ್ಡಿ ಪಡಿಸಿದ್ದಾರೆ. ಕೆಂಗೇರಿ ವ್ಯಾಪ್ತಿಯ ಇತರೆ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಿಸಿದ್ದಾರೆ. ಇಂದು ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿದರೂ, ಅವರು ಸಹ ಸ್ಪಂದಿಸಲಿಲ್ಲ. ಅವರಿಗೂ ಏನಾದರೂ ಒತ್ತಡವಿರಬಹುದು. ಈಗ ಮತ್ತೊಂದು ಕಡೆ ಪ್ರಯತ್ನಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಇದರ ಹಿನ್ನೆಲೆಯಲ್ಲಿ, ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಯಾರೋ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸರ್ಕಾರದ ಹಂತದಲ್ಲಿಯೇ ಈ ತಡೆ ನಡೆಯುತ್ತಿದೆ ಎಂಬ ಶಂಕೆ ಅಭಿಮಾನಿಗಳಲ್ಲಿ ಗಟ್ಟಿಯಾಗಿ ವ್ಯಕ್ತವಾಗುತ್ತಿದೆ. ವಿಷ್ಣುವರ್ಧನ್ ಅವರಿಗೆ ಇದೇ ಸರ್ಕಾರ “ಕರ್ನಾಟಕ ರತ್ನ” ಪ್ರಶಸ್ತಿ ನೀಡಿದ್ದರೂ, ಅವರ ಹುಟ್ಟುಹಬ್ಬ ಆಚರಣೆಗೆ ಅನುಮತಿ ನಿರಾಕರಣೆ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟಿಸಿದೆ.

Spread the love
Translate »
Right Ad