ಆಪ್ತಮಿತ್ರ, ಆಪ್ತರಕ್ಷಕ, ಕದಂಬ ಸೇರಿದಂತೆ ಡಾ.ವಿಷ್ಣುವರ್ಧನ್ ಅವರ ಬಹುತೇಕ ಸಿನಿಮಾಗಳಿಗೆ ಸಂಭಾಷಣೆಗಾರ, ಕೋ ಡೈರೆಕ್ಟರ್ ಮತ್ತು ಸ್ವತಂತ್ರವಾಗಿ ಏಳು ಸಿನಿಮಾ ನಿರ್ದೇಶನ ಮಾಡಿದ್ದ ವಿ.ಆರ್. ಭಾಸ್ಕರ್ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ತೀರಾ ಹತ್ತಿರದ ನಂಬಿಗಸ್ಥರಾಗಿದ್ದರು. ಇವರ ಮಗ 2007ರಲ್ಲಿ ಮದ್ದೂರಿನ ಜಿ. ಮಾದೇ ಗೌಡರ ವಸತಿ ಶಾಲೆಯಲ್ಲಿ ಕೊಲೆಯಾದಾಗ, ನಾನು ಉದಯ ಟಿವಿಯ ಕ್ರೈಮ್ ಸ್ಟೋರಿ ಯಲ್ಲಿ ಪ್ರಸಾರ ಮಾಡಿದ್ದೆ. ಹಾಸ್ಟೆಲ್ ಹಿರಿಯ ವಿದ್ಯಾರ್ಥಿಯೊಬ್ಬನ ಸಲಿಂಗ ಕಾಮಕ್ಕೆ ಸಹಕರಿಸದಿದ್ದಕ್ಕೆ, ಆತನಿಂದ ಕೊಲೆಗೀಡಾಗಿದ್ದ. ಈ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡು ಗೋಳಾಡುತ್ತಿದ್ದ ಭಾಸ್ಕರ್ ದಂಪತಿಯನ್ನು ಸಾಂತ್ವನಗೊಳಿಸದೇ ಗದರಿಸಿ ಬೆದರಿಸಿ ಕಳುಹಿಸಿದ್ದ ಹಾಸ್ಟೆಲ್ ನಡೆಸುತ್ತಿದ್ದ ಮಂಡ್ಯ ಮಾಜಿ ಲೋಕ ಸಭಾ ಸದಸ್ಯ ಜಿ. ಮಾದೇಗೌಡರ ದುರ್ವರ್ತನೆ ವಿರುದ್ಧ ಸಾಹಸ ಸಿಂಹ ವಿಷ್ಣುವರ್ಧನ್ ಕೋಪಗೊಂಡು ಘರ್ಜಿಸಿದ್ದರು. ಸಾಹಸ ಸಿಂಹ ಘರ್ಜನೆಯನ್ನು ಶೂಟಿಂಗ್ ಮಾಡಿ ಉದಯ ಟಿವಿಯಲ್ಲಿ ಪ್ರಸಾರ ಮಾಡಿದ್ದೆ.
ಇದನ್ನೂ ಓದಿ: Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ಹೀಗೇ ಮಗನನ್ನು ಕಳೆದುಕೊಂಡ ನೋವಲ್ಲೇ ವೃತ್ತಿ ಬದುಕು ಮುಂದುವರೆಸಿದ ನಿರ್ದೇಶಕ ವಿ ಆರ್. ಭಾಸ್ಕರ್, ವಿಷ್ಣುವರ್ಧನ್ ನಿಧನದ ನಂತರ ಉಪೇಂದ್ರ ಅವರ ಗಾಡ್ ಫಾದರ್ ಸಿನಿಮಾಕ್ಕೂ ಸಂಭಾಷಣೆ, ಸಹ ನಿರ್ದೇಶಕ ರಾಗಿ ಕನ್ನಡ ಸಿನಿ ಲೋಕದಲ್ಲಿ ದುಡಿದಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ, ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾಸ್ಕರ್ ದುರಂತ ಬದುಕಿನ ಬಂಡಿಯಲ್ಲಿ ಇದ್ದ ಒಬ್ಬ ಮಗ ಮತ್ತು ಹೆಂಡತಿಯನ್ನ ಇತ್ತೀಚೆಗೆ ಕಳೆದುಕೊಂಡಿದ್ದರು.ಅವರನ್ನು ವೃದ್ದ ತಾಯಿಯೇ ಹಣ ಹೊಂದಿಸಿ, ಶುಶ್ರೂಷೆ ಮಾಡುತ್ತಿದ್ದರು. ವಿಷಯ ಗೊತ್ತಾದಾಗ ನಾನು ವಾಟ್ಸಾಪ್ ಮೂಲಕ ಚಿತ್ರರಂಗದವರು ಭಾಸ್ಕರ್ ಕಷ್ಟಕ್ಕೆ ಸ್ಪಂದಿಸುವಂತೆ ಕೋರಿದ್ದೆ. ನಿರ್ದೇಶಕರಾದ ಬಿ. ಸುರೇಶ್ ಒಬ್ಬರೇ ಸಹಾಯ ಮಾಡಲು ಅವರ ಬ್ಯಾಂಕ್ ಅಕೌಂಟ್ ನಂಬರ್ ಕೇಳಿದ್ದರು. ಆದರೇ ಭಾಸ್ಕರ್ ಬಳಿ ಯಾವ ಬ್ಯಾಂಕ್ ಅಕೌಂಟ್ ಇರಲಿಲ್ಲ. ವಯೋವೃದ್ಧ ತಾಯಿಗೆ ಇದ್ಯಾವ ಪರಿಚಯವೂ ಇರಲಿಲ್ಲ. ಹೀಗೇ ವಯೋವೃದ್ಧ ತಾಯಿ ಆರ್ಥಿಕ ಸಂಕಷ್ಟದಲ್ಲೇ, ಯಾರ ನೆರವು ಸಿಗದೇ ಮಗ ಭಾಸ್ಕರ್ ಶುಶ್ರುಷೆ ಮಾಡುತ್ತಿದ್ದರು. ಆದರೇ ನಿನ್ನೆ ಗುರುವಾರ ನಿರ್ದೇಶಕ ವಿ ಭಾಸ್ಕರ್ ನಿಧನರಾದರು. ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಚಿತ್ರರಂಗದವರಾರು ಇರಲಿಲ್ಲ.
ಇದನ್ನೂ ಓದಿ: ಸೆ.18 ಸ್ಯಾಂಡಲ್ವುಡ್ ಗೆ ಸೈಕ್ ಡೇ ಗೌರಿ ಗಣೇಶ ಹಬ್ಬಕ್ಕೆ ಭೀಮನ ಬ್ಯಾಡ್ ಬಾಯ್ಸ್ ಸಾಂಗ್ ರಿಲೀಸ್
ವಯೋ ವೃದ್ಧ ತಾಯಿಯೇ ಮಗನ ಅಂತ್ಯ ಸಂಸ್ಕಾರ ನಡೆಸಿದ್ದನ್ನು ಕಂಡಾಗ ಹೃದಯ ಹಿಂಡಿದಂತಾಯಿತು. ಒಬ್ಬ ಮನುಷ್ಯನಿಗೆ ಕೊನೆಗಾಲದಲ್ಲಿ ಅವನ ಬಳಿ ನಾಲ್ಕು ಕಾಸು ಇಲ್ಲದಿದ್ದರೆ, ಆತನ ಬಳಿ ನಾಲ್ಕು ಜನ ಸಹ ಸುಳಿಯೋಲ್ಲ ಅನ್ನೋ ಸತ್ಯ ಸಹ ತಿಳಿಯಿತು. ವಿ. ಆರ್. ಭಾಸ್ಕರ್ ರಂತೆ ಚಿತ್ರ ರಂಗದ ಮಯಾ ಲೋಕಕ್ಕೆ ಬಂದು ಹೀಗೇ ಬರಿಗೈ ಆಗಿ ಇಹ ಲೋಕ ಬಿಟ್ಟು ಹೋದವರೇಷ್ಟೋ ಎಂದು ನೆನೆದಾಗ, ಈಗ ಜೀವ ಜೀವನದ ಹಾದಿಯ ಅಂತಿಮ ಅಂಚಿನಲ್ಲಿರುವ ಅದೆಷ್ಟು ಮಂದಿ ಸಂಕಷ್ಟದಲ್ಲಿದ್ದಾರೋ, ಯಾವ ಸಂಕಟದಲ್ಲಿ ಬೇಯುತ್ತಿದ್ದರೋ? ಇಂದು ಭಾಸ್ಕರ್, ನಾಳೆ ಇನ್ಯಾರೋ ಅಂತ ಆತಂಕವಾಯಿತು. ಈಗ ಮಾಯಾ ಭ್ರಮೆಯಲ್ಲಿ ತೇಲುತ್ತಿರುವ ಚಿತ್ರ ಮಂದಿ ಈಗಿನಿಂದಲೇ ಎಚ್ಚರಿಕೆಯಿಂದ ಜೀವನದ ಭದ್ರತೆಯತ್ತ ಹೆಜ್ಜೆ ಇಡುವುದು ಒಳಿತು. ಇಲ್ಲದಿದ್ದರೆ, ಭ್ರಾಮಕ ಜಗತ್ತು ನಿಮ್ಮನು ನುಂಗಿ ನೀರು ಕುಡಿಯಬಹುದು, ಎಚ್ಚರವಿರಲಿ.
– ಎಸ್. ಪ್ರಕಾಶ್ ಬಾಬು, ಪತ್ರಕರ್ತ-ಲೇಖಕ, ಮೈಸೂರು
https://x.com/Chittaramedia/status/1702610939726712969?s=20