ಮಲಯಾಳಂ ಚಿತ್ರದಲ್ಲಿ ಕಣ್ಸನ್ನೆಯಿಂದ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ಪ್ರಕಾಶ್ ವಾರಿಯರ್, ರೇಲ್ವೆ ಸ್ಟೇಷನ್‌ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹಾಡುತ್ತಿದ್ದ ರಾಣು ಮಂಡಾಲ್ ಅವರದ್ದು ಅದೃಷ್ಟವೇ. ಯಾರಿಗೆ, ಯಾವಾಗ, ಯಾವ ರೀತಿಯ ಅದೃಷ್ಟ ಕೈಹಿಡಿಯುತ್ತೆ ಎಂಬುದು ಗೊತ್ತಾಗಲ್ಲ. ಈ ಸಾಲಿಗೆ ಈಗ ಮಹಾಕುಂಭ ಮೇಳದ ಮೊನಾಲಿಸಾ ಕೂಡ ಸೇರಿಕೊಂಡಿದ್ದಾರೆ.ಕುಂಭ ಮೇಳಕ್ಕೆ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮೊನಾಲಿಸಾ ಸದ್ಯ ಸೆಲ್ಫಿ, ಜನರ ಕಿರಿಕಿರಿ ಮತ್ತು ಸಂದರ್ಶನಗಳಿಂದ ಬೇಸತ್ತು ಪ್ರಯಾಗ್ ರಾಜ್‌ದಿಂದ ಮರಳಿ ಇಂಧೋರ್‌ಗೆ ಬಂದಿದ್ದಾರೆ. ಆದರೆ ಹೀಗೆ ಬಂದ ಮೊನಾಲಿಸಾ ಈಗ ಮಣಿ ಮಾರುವ ಹುಡುಗಿಯಾಗಿ ಉಳಿದಿಲ್ಲ. ಬದಲಿಗೆ ಮಾಡೆಲ್ ಆಗಿದ್ದಾರೆ.
ಇಂಧೋರ್‌ಗೆ ಬಂದ ಮೊನಾಲಿಸಾ ಪಾರ್ಲರ್‌ನಲ್ಲಿ ಕುಳಿತು ಮೇಕಪ್ ಮಾಡಿಕೊಂಡಿದ್ದಾರೆ.ಮೊನಾಲಿಸಾ ಅವರ ಈ ಮೇಕಪ್ ವಿಡಿಯೋ ವೈರಲ್ ಆಗಿದೆ. ಮಾಡೆಲಿಂಗ್ ಪ್ರಪಂಚದಲ್ಲಿ ಮೊನಾಲಿಸಾ ಹೆಸರು ಮಾಡ್ತಾರಾ, ಅವರನ್ನು ಯಾರಾದರೂ ಮಾಡೆಲ್ ಆಗುವಂತೆ ಹೇಳಿದ್ದಾರಾ ? ಮೊನಾಲಿಸಾಗೆ ಬಾಲಿವುಡ್‌ನಲ್ಲಿ ಮಿಂಚುವ ಆಸೆ ಬೇರೆ ಇದೆ. ಯಾರಾದರೂ ನಿಮ್ಮನ್ನು ಚಿತ್ರದ ನಾಯಕಿಯನ್ನಾಗಿ ಮಾಡುವುದಾಗಿ ಹೇಳಿ ಅವಕಾಶವನ್ನು ನೀಡಿದರೆ ನೀವೇನು ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿರುವ ಮೊನಾಲಿಸಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಐಶ್ವರ್ಯ ರೈ ಅವರಂತೆ ಮಿಂಚುವ ಆಸೆ ಇದೆ ಎಂದು ಹೇಳಿದ್ದಾರೆ.
ಮೊನಾಲಿಸಾ ಮಾಡೆಲ್ ಮಾತ್ರ ಅಲ್ಲ ಕಂಟೆಂಟ್ ಕ್ರಿಯೇಟರ್ ಕೂಡ ಆಗಿದ್ದಾರೆ.ಯೂಟ್ಯೂಬ್ ಚಾನೆಲ್‌ನವರ ಹಾವಳಿಯಿಂದ ಬೇಸತ್ತು ಪ್ರಯಾಗ್‌ರಾಜ್‌ದಿಂದ ನೊಂದು ಬೆಂದು ಕಣ್ಣೀರು ಹಾಕುತ್ತಾ ತಮ್ಮ ಮನೆಗೆ ಬಂದ ಮೊನಾಲಿಸಾ ಈಗ ತಮ್ಮದೇ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಎಲ್ಲರೂ ನನ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವಾಗ ನಾನ್ಯಾಕೇ ನನ್ನದೇ ಒಂದು ಯೂಟ್ಯೂಬ್ ಚಾನೆಲ್ ಮಾಡಬಾರದೆಂದು ಯೂಟ್ಯೂಬ್ ತೆರೆದ ಮೊನಾಲಿಸಾ ತಮ್ಮ ಚಾನೆಲ್‌ನ ಸಬ್‌ಸ್ಕ್ರೈಬ್ ಮಾಡುವಂತೆ ಎಲ್ಲರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.