ಐಎಂಡಿಬಿ ರೇಟಿಂಗ್‌ನಲ್ಲಿ ʼಕೆಜಿಎಫ್-2ʼ ಸಿನೆಮಾವನ್ನು ಹಿಂದಿಕ್ಕಿ ಮೊದಲನೆ ಸ್ಥಾನ ತನ್ನದಾಗಿಸಿಕೊಂಡ ʼವಿಕ್ರಮ್ʼ
ಈಡೀ ಭಾರತ ಚಿತ್ರರಂಗವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ʼಕೆ.ಜಿ.ಎಫ್-2ʼ ಚಿತ್ರವನ್ನು ತಮಿಳಿನ ವಿಕ್ರಮ್ ಚಿತ್ರ ಐಎಂಡಿಬಿ ರೇಟಿಂಗ್‌ನಲ್ಲಿ ಹಿಂದಿಕ್ಕಿದೆ. 2022ರಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 8.8 ಅಂಕಗಳೊಂದಿಗೆ ಕಮಲ್ ಅಭಿನಯದ ವಿಕ್ರಮ್ ಮೊದಲ ಸ್ಥಾನ ಪಡೆದುಕೊಂಡಿದೆ. ಯಶ್ ಅಭಿನಯದ ‘ಕೆಜಿಎಫ್ 2’ 8.5 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.
ಬಾಕ್ಸ್ ಆಫೀಸಿನಲ್ಲಿ ಬರೋಬ್ಬರಿ 1200 ಕೋಟಿ ರೂ. ಗಳನ್ನು ಬಾಚಿಕೊಂಡಿರುವ ಕೆಜಿಎಫ್-2 ಈಗಾಗಲೇ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ. ವಿಕ್ರಮ್ ಚಿತ್ರ ಒಟ್ಟಾರೆಯಾಗಿ 400 ಕೋಟಿ ರೂ. ಗಳಷ್ಟು ಗಳಿಸಿದೆ. ಐಎಂಡಿಬಿ ರೇಟಿಂಗ್‌ನಲ್ಲೂ ಉತ್ತಮ ಅಂಕಗಳನ್ನು ಗಳಿಸಿಕೊಂಡಿದೆ. ಅದಾಗ್ಯೂ, 2022ರಲ್ಲಿ ರಿಲೀಸ್ ಆದ ಅತ್ಯುತ್ತಮ ಸಿನಿಮಾಗಳ ಪೈಕಿ ವಿಕ್ರಮ ಚಿತ್ರ ಕೆಜಿಎಫ್ ಅನ್ನು ಹಿಂದಿಕ್ಕಿದೆ.
ಇತ್ತೀಚೆಗೆ ರಿಲೀಸ್ ಆದ ‘ವಿಕ್ರಮ್’ ಚಿತ್ರವನ್ನು ಕಮಲ್ ಹಾಸನ್ ಅವರೇ ನಿರ್ಮಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಕೂಡ ಮುಖ್ಯ ಪಾತ್ರ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ಸೂರ್ಯಾ ಕಾಣಿಸಿಕೊಂಡಿದ್ದಾರೆ. ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಮೂರನೇ ಸ್ಥಾನದಲ್ಲಿ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ 8.3 ಅಂಕಗಳನ್ನು ಪಡೆದಿದೆ, 8.1 ಅಂಕದೊಂದಿಗೆ ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಪುತ್ರ ಪ್ರಣವ್ ನಟಿಸಿದ ‘ಹೃದಯಂʼ ನಾಲ್ಕನೇ ಸ್ಥಾನದಲ್ಲಿದ್ದರೆ, 8.0 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿ ‘ಆರ್ಆರ್ಆರ್’ ಚಿತ್ರ ಇದೆ.