ಥಲಾ ಅಜಿತ್ ನಟನೆಯ ‘ವಿಡಮುಯರ್ಚಿ’ ಸಿನಿಮಾ ಈ ವಾರ ತೆರೆಗೆ ಬಂದಿದೆ. ಸ್ಟೈಲಿಶ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಭಿಮಾನಿಗಳು ದೊಡ್ಡದಾಗಿಯೇ ಚಿತ್ರವನ್ನು ಸ್ವಾಗತಿಸಿದ್ದಾರೆ. ಮಗಿಳ್ ತಿರುಮೇನಿ ನಿರ್ದೇಶನದ ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅಜಿತ್ ಜೋಡಿಯಾಗಿ ತ್ರಿಷಾ ನಟಿಸಿದ್ದಾರೆ. ಅಷ್ಟಕ್ಕೂ ‘ವಿಡಮುಯರ್ಚಿ’ ಕಥೆಯೇನು?
ಅರ್ಜುನ್ ಹಾಗೂ ಕಯಲ್ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಾರೆ. ಮುಂದೆ ಕಯಲ್ ಮತ್ತೊಬ್ಬನ ಪ್ರೀತಿಯಲ್ಲಿ ಬೀಳುತ್ತಾಳೆ. ಈ ವಿಚಾರ ಹೇಳಿ ಆಕೆ ಅರ್ಜುನ್ ಬಳಿ ಡಿವೋರ್ಸ್ ಕೇಳುತ್ತಾಳೆ. ಒಲ್ಲದ ಮನಸ್ಸಿನಿಂದಲೇ ಅದಕ್ಕೆ ಒಪ್ಪುತ್ತಾನೆ. ಡಿವೋರ್ಸ್ ಸಿಗುವರೆಗೂ ತಾನು ತಮ್ಮ ತಾಯಿ ಮನೆಯಲ್ಲಿ ಇರುವುದಾಗಿ ಕಯಲ್ ಹೇಳಿದಾಗ ತಾನೇ ಖುದ್ದು ಕರೆದುಕೊಂಡು ಹೋಗಿ ಬಿಡಲು ಅರ್ಜುನ್ ಮುಂದಾಗುತ್ತಾನೆ. ರಸ್ತೆ ಮಾರ್ಗವಾಗಿ ಪತ್ನಿಯನ್ನು ಅತ್ತೆ ಮನೆಗೆ ಕರೆದುಕೊಂಡು ಕಾರಿನಲ್ಲಿ ಹೊರಡುತ್ತಾನೆ. ಈ ಹಾದಿಯಲ್ಲಿ ರಕ್ಷಿತ್(ಅರ್ಜುನ್ ಸರ್ಜಾ) ಹಾಗೂ ದೀಪಿಕಾ(ರೆಜಿನಾ ಕಸೆಂದ್ರಾ) ದಂಪತಿಯ ಪರಿಚಯವಾಗುತ್ತದೆ. ಅರ್ಜುನ್ ಕಾರು ಕೆಟ್ಟು ನಿಂತಾಗ ರಕ್ಷಿತ್ ಹಾಗೂ ದೀಪಿಕಾ ಜೊತೆ ಕಯಲ್ ಹೊರಡುತ್ತಾಳೆ. ಇದ್ದಕ್ಕಿದಂತೆ ಆಕೆಯ ಅಪರಹರಣವಾಗುತ್ತದೆ. ಅಷ್ಟಕ್ಕೂ ಕಯಲ್ ಕಣ್ಮರೆ ಆಗಿದ್ದು ಹೇಗೆ? ಕಾರಣ ಯಾರು? ಪತ್ನಿಯನ್ನು ಮರಳಿ ಕರೆದುಕೊಂಡು ಬರಲು ಅರ್ಜುನ್ ಮಾಡುವ ಸಾಹಸ ಇನ್ನುಳಿದ ಕಥೆ.
ತಡಮ್, ತಡೆಯರ ತಾಕ, ಮೀಗಾಮನ್ ಸಿನಿಮಾಗಳ ಖ್ಯಾತಿಯ ಮಗಿಳ್ ತಿರುಮೇನಿ ಅಜಿತ್ ಕುಮಾರ್ ಜೊತೆ ಮೊದಲ ಬಾರಿಗೆ ಕೈ ಜೋಡಿಸಿರುವ ಸಿನಿಮಾ ವಿಡಾಮುಯರ್ಚಿ. ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತ್ರಿಷಾ ನಾಯಕಿ. ಆರವ್ ಮತ್ತು ಅರ್ಜುನ್ ಖಳನಾಯಕರು. ರೆಜಿನಾ ಕಸಂದ್ರಾ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು ಹಾಸ್ಯ ನಟರಾಗಿ ನಟಿಸಿದ್ದಾರೆ. ನೀರವ್ ಶಾ ಮತ್ತು ಓಂ ಪ್ರಕಾಶ್ ಛಾಯಾಗ್ರಹಣ, ಅನಿರುದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹಾಲಿವುಡ್‌ನ ಬ್ರೇಕ್‌ಡೌನ್ ಸಿನಿಮಾದ ರಿಮೇಕ್ ಆಗಿರುವ ಈ ಚಿತ್ರ ಇಂದು ತೆರೆ ಕಂಡಿದೆ. ರೆಡ್ ಜೈಂಟ್ ಮೂವೀಸ್ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡಿದೆ. ಸುಮಾರು 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.
* ಅದ್ಭುತ ಸಸ್ಪೆನ್ಸ್ ಚಿತ್ರ ವಿಡಾಮುಯರ್ಚಿ ಕಥೆ ಚೆನ್ನಾಗಿದೆ. ಪ್ರತಿ ದೃಶ್ಯವೂ ಕುತೂಹಲ ಹೆಚ್ಚಿಸುತ್ತದೆ. ಅಜಿತ್ ಪತ್ನಿಯನ್ನು ಕಳೆದುಕೊಂಡು ಹುಡುಕುವ ದೃಶ್ಯಗಳು, ಟ್ವಿಸ್ಟ್‌ಗಳು ಪ್ರೇಕ್ಷಕರನ್ನು ಕ್ಲೈಮ್ಯಾಕ್ಸ್‌ವರೆಗೂ ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಅಜಿತ್ ಅಭಿನಯ ಅದ್ಭುತ. ಅನಿರುದ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ. ವಿಡಾಮುಯರ್ಚಿ ಒಂದು ಹೊಸ ಅನುಭವ.
* ವಿಡಾಮುಯರ್ಚಿ ಹೊಸ ರೀತಿಯ ಪ್ರಯತ್ನ. ಮಾಸ್ ಹೀರೋ ಅಜಿತ್‌ಗೆ ಯಾವುದೇ ಬಿಲ್ಡಪ್ ದೃಶ್ಯಗಳಿಲ್ಲದಿದ್ದರೂ, ಚಿತ್ರವು ರೋಚಕವಾಗಿದೆ. ಇದು ಸಾಮಾನ್ಯ ಮಸಾಲಾ ಚಿತ್ರವಲ್ಲ. ಏನನ್ನು ನಿರೀಕ್ಷಿಸಬೇಡಿ.
* ವಿಡಾಮುಯರ್ಚಿ ಚೆನ್ನಾಗಿದೆ, ಆದರೆ ಅಜಿತ್‌ರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿದ್ದೆ. ಬ್ರೇಕ್‌ಡೌನ್ ಚಿತ್ರದ ರಿಮೇಕ್ ಇದು. ಆದರೆ ಅಜಿತ್-ತ್ರಿಷಾ ಕಥೆಯನ್ನು ಸೇರಿಸಲಾಗಿದೆ. ಸರಳವಾದ ಕಥೆ, ಎಲ್ಲಾ ನಟರ ಅಭಿನಯ ಚೆನ್ನಾಗಿದೆ. ಸಾಹಸ ದೃಶ್ಯಗಳು ಅದ್ಭುತವಾಗಿವೆ. ಹೀಗೆ ಅನೇಕ ರೀತಿಯಲ್ಲಿ ಟ್ವಿಟ್ಟರ್ ರಿವ್ಯೂ ಅನ್ನು ಸಿನಿ ಪ್ರೇಮಿಗಳು ನೀಡುತ್ತಿದ್ದಾರೆ.