ಚಿತ್ರಕಲಾ ಪ್ರಪಂಚಕ್ಕೆ ಅದ್ವಿತೀಯ ಕೊಡುಗೆ ನೀಡಿರುವ ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನರಾಗಿದ್ದಾರೆ. ಆರೋಗ್ಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಮೂರು ತಿಂಗಳಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 8.20ಕ್ಕೆ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
76ರ ವಯಸ್ಸಿನ ವರ್ಮಾ ಪರಿಸರ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಮೊದ ಮೊದಲ ತಮ್ಮ ಬೆರಳುಗಳನ್ನೇ ಬಳಸಿ ಚಿತ್ತಾರ ಸೃಷ್ಟಿಸುತ್ತಿದ್ದ ಈ ಕರ್ನಾಟಕದ ಮೇರು ಕಲಾವಿದ ಎಂಬೋಸಿಂಗ್, ಥ್ರೆಡ್ ಪೇಂಟಿಂಗ್ ಮೂಲಕ ಕಲಾಕೃತಿಗಳನ್ನು ರಚಿಸುತ್ತಿದ್ದರು. ಕೆಲವೇ ನಿಮಿಷಗಳಲ್ಲಿ ಅತ್ಯುತ್ತಮವಾದ ಕಲಾಕೃತಿ ಸೃಷ್ಟಿಸಿಬಲ್ಲವರಾಗಿದ್ದ ಡಾ.ವರ್ಮಾ ಅವರು ಸಿನಿ ತಾರೆಗಳಾದ ಡಾ.ರಾಜ್‌ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಅಂತಾರಾಷ್ಟ್ರಿಯ ಸುಪ್ರಸಿದ್ದ ಕಲಾವಿದರಾದ ಡಾ.ರೋರಿಕ್-ದೇವಿಕಾರಾಣಿ ದಂಪತಿ ಹಾಗೂ ಗಣೇಶ ಮತ್ತಿತ್ತರ ಹಿಂದೂ ದೇವಾನುದೇವತೆಗಳು ಚಿತ್ರಗಳು ಕಲಾ ಲೋಕದಲ್ಲಿ ಅದ್ಭುತವೆನಿಸಿಕೊಂಡಿವೆ. ಪರಿಸರ, ವನದೇವತೆ, ಪರಿಸರ ಸಂರಕ್ಷಣೆ, ಹೀಗೆ ಸಾಮಾಜಿಕವಾಗಿ ಅರಿವು ಮೂಡಿಸುವಲ್ಲಿ, ಜಾಗೃತಿ ಹುಟ್ಟಿಸುವಂತಿದ್ದವು ವರ್ಮಾ ಅವರ ಚಿತ್ರಗಳು.
ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಬಿ.ಕೆ.ಎಸ್. ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡಾಂಬೆ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ಬಹುತೇಕರ ಮನೆಯಲ್ಲಿ, ದೇವರ ಕೋಣೆಗಳಲ್ಲಿ ರಾರಾಜಿಸುತ್ತಿವೆ. ದೇಶ ವಿದೇಶಗಳಲ್ಲಿ ಖ್ಯಾತರಾದ ಬಿ.ಕೆ.ಎಸ್ ವರ್ಮಾ ಅವರು ಸಾಕಷ್ಟು ಜನಕ್ಕೆ ಪ್ರೇರಣೆಯಾಗಿದ್ದರು
ಬಿಕೆಸ್ ವರ್ಮಾ ಕಲೆಯನ್ನು ಅರಸಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಅವರ ಸಾಧನೆಗೆ ಲಲಿತಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಲಭಿಸಿದ್ದವು. ಬೆಂಗಳೂರು ವಿವಿ ಯಿಂದ 2011ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. 6ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದ್ದ ಅವರು, ನಿರಂತರವಾಗಿ ಆರೇಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಬಿ.ಕೆ.ಎಸ್ ವರ್ಮಾ ಕ್ಷಣಮಾತ್ರದಲ್ಲಿ ಅಲ್ಲಿರುವ ಸನ್ನಿವೇಶಕ್ಕೆ ತಕ್ಕಂತೆ ಚಿತ್ರ ಬರೆಯುವುದರಲ್ಲಿ ಪ್ರಖ್ಯಾತರು. ಕವಿತೆ, ನೃತ್ಯ ಪ್ರದರ್ಶನವಾಗುತ್ತಿದ್ದಂತೇ, ಅದಕ್ಕೆ ಸಂಬಂಧಿಸಿ ಚಿತ್ರವನ್ನು ವೇದಿಕೆಯಲ್ಲೇ ರಚಿಸುತ್ತಿದ್ದರು. ಇವರು ಚಿತ್ತಾರ ಸಂಸ್ಥೆಗೂ ಕೂಡ ಅನೇಕ ಕೊಡುಗೆ ನೀಡಿದ್ದಾರೆ. ಚಿತ್ತಾರದ ಹಿತೈಷಿಯಾಗಿದ್ದ ಸುಗುಣರು ಪದ್ಮಶ್ರೀ ಬಿ.ಕೆ.ಎಸ್ ವರ್ಮಾರವರಿಗೆ ನಮ್ಮ ನಮನ
ಕುಂಚದ ಮೂಲಕ ಜೀವ ತುಂಬಿದ ಅಪ್ರತಿಮ ಕಲಾವಿದ, ಚಿತ್ರಕಲೆಯನ್ನೇ ಉಸಿರಾಡಿದ ಅವರ ಬದುಕು ಹಲವು ಯುವ ಕಲಾವಿದರಿಗೆ ಸ್ಪೂರ್ತಿ. ಭಗವಂತನು ಆ ಮಹಾನ್ ಚೇತನಕ್ಕೆ ಸದ್ಗತಿ ಕರುಣಿಸಲಿ. ಓಂ ಶಾಂತಿ.