ಈಕೆ ನಾಯಕಿ, ಗಾಯಕಿ, ಚಟ್ ಪಟ್ ಪಟಾಕಿ, ಕೆನ್ನೆಯ ಮೇಲೆ ಕಪ್ಪು ಚುಕ್ಕಿ ಇದೆಯೋ, ದೃಷ್ಟಿ ಬೊಟ್ಟು ಇದೆಯೋ, ಕೇಳಿದರೇ ಅದು ಮಚ್ಚೆ ಅನ್ನುತ್ತಾರೆ. ಬಹುಶಃ ಅದು ಪಾದರಸದಲ್ಲಿ ಇಟ್ಟುಕೊಂಡಿರುವ ಚುಕ್ಕಿ ಇರಬೇಕು. ಅದಕ್ಕೆ ಅಷ್ಟು ಲವಲವಿಕೆ, ಅಷ್ಟು ಚಟುವಟಿಕೆ. ಯಾವ ನಿರ್ದೇಶಕರ ಬಳಿ ಈಕೆ ಕೆಲಸ ಮಾಡಿದರೂ ಪ್ರತೀ ನಿರ್ದೇಶಕರು ಈಕೆಯ ಬಗ್ಗೆ ಹೇಳುವ ಮಾತು “ಇಂಡಸ್ಟಿçಯಲ್ಲಿ ನೀನು ಬಹಳ ಎತ್ತರಕ್ಕೆ ಬೆಳೆಯುತ್ತೀಯ ಅಂತ” ಅಂತಾರೆ. ಯಾಕೆಂದ್ರೇ ಈಕೆ ಅಪ್ಪಟ ಪ್ರತಿಭೆ. ಶಿಸ್ತು, ಶ್ರದ್ಧೆ, ಶ್ರಮ ತುಂಬಿಕೊಂಡ ಪರಿಶುದ್ಧ ಕಲಾವಿದೆ ಚೈತ್ರ ಆಚಾರ್. ಚಂದನವನಕ್ಕೆ ಅಂಬರದಿಂದಿಳಿದು ಬಂದ ಚುಕ್ಕಿ ಚೆಲುವೆ. ಅನಿಸಿದ ಎಲ್ಲ ಕೆಲಸವನ್ನು ಪಟಪಟನೆ ಮಾಡಿ ಮುಗಿಸಬೇಕು ಎನ್ನುವ ಛಲಗಾತಿ. ಈ ಗುಣ ಈಕೆಯ ಜೊತೆಯವರನ್ನು ಚಟುವಟಿಕೆಯಿಂದಿರಲು ಪ್ರೇರೇಪಿಸುತ್ತದೆ. ಇವರು ಪಾದರಸದಂತೆ ಓಡಾಡುವವಳು, ಹರಳು ಹುರಿದಂತೆ ಮಾತಾಡುವವಳು, ದಣಿವರಿಯದಂತೆ ದುಡಿಯುವ ಹೆಣ್ಣು ಮಗಳು. ಇವರ ಈ ಚಟುವಟಿಕೆಯ ಬದುಕಿನ ಹಿಂದಿರುವ ಸ್ಪೂರ್ತಿ ಏನು? ಆಕೆ ನಮ್ಮ ನಿಮ್ಮಂತೆಯೇ ಬೆಳೆದರಾ? ಇವರಿಗೆ ಆ ಚಾಕಚಕ್ಯತೆ, ಆ ಲವಲವಿಕೆ ಎಲ್ಲಿಂದ ಬಂತು. ಬನ್ನೀ ಆಕೆ ತನ್ನ ಬದುಕಿನಲ್ಲಿ ಇಲ್ಲಿಯವರೆಗೂ ನಡೆದು ಬಂದ ಪಯಣದ ಒಂದಿಷ್ಟು ಸ್ವಾರಸ್ಯಕರ ವಿಚಾರವನ್ನು ಚೈತ್ರಾ ಆಚಾರ್‌ರವರು ಚಿತ್ತಾರದೊಂದಿಗೆ ಹಂಚಿಕೊಂಡಿದ್ದಾರೆ.
– ಉಪ ಸಂಪಾದಕ
ಅಪ್ಪ ಅಮ್ಮನ ಆರೈಕೆಯಲ್ಲಿ
ನಾನು ಹುಟ್ಟಿದ್ದು ಬೆಂಗಳೂರಿನಲ್ಲೇ, ಓದಿದ್ದೂ ಬೆಂಗಳೂರಿನಲ್ಲೇ
ಅಪ್ಪ ಜಗದೀಶ್ ವೃತ್ತಿಯಲ್ಲಿ ಶಿಕ್ಷಕರು ತಾಯಿ ಪ್ರೇಮ, ಮನೆಯೇ ನಮ್ಮಮ್ಮನ ಜಗತ್ತು. ಶಾಲೆಯಲ್ಲಿ ನನಗೆ ಅಪ್ಪನ ಎಚ್ಚರಿಕೆ, ಮನೆಯಲ್ಲಿ ಅಮ್ಮನ ಎಚ್ಚರಿಕೆ. ಹೀಗೆ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡು ಬೆಳೆಸಿದರು ನನ್ನ ಅಪ್ಪ ಅಮ್ಮ. ನಾನು ಮೊದಲಿಗೆ ವಿನಾಯಕ ವಿದ್ಯಾ ಕೇಂದ್ರದಲ್ಲಿ ನಾಲ್ಕನೆ ತರಗತಿಯವರೆಗೆ ಓದಿದೆ ನಂತರ ಐದನೇ ತರಗತಿಯಿಂದ ‘ಪರಿಕ್ರಮ ಹ್ಯೂಮ್ಯಾನಿಟಿ ಫೌಂಡೇಷನ್’ ಸೇರಿಕೊಂಡು ಪಿ.ಯು.ಸಿ ವರೆಗೂ ಓದಿದೆ. ನಾನು ಯಾವಾಗ ಪರಿಕ್ರಮ ಶಾಲೆಗೆ ಸೇರಿಕೊಂಡೆನೋ ಅಲ್ಲಿಂದ ನನ್ನ ದಿನಚರಿಗಳೇ ಬದಲಾಗಿ ಹೋಯಿತು. ಆ ಶಾಲೆಯಲ್ಲಿ ಪ್ರತೀ ದಿನ ಒಂದಲ್ಲಾ ಒಂದು ಚಟುವಟಿಕೆಗಳು ನಡೆಯುತ್ತಲೇ ಇದ್ದವು. ಆ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿನಿಯಾಗಿ ನಾನು ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ. ಕಲ್ಚರಲ್ ಈವೆಂಟ್‌ಗಳಂತೂ ತುಂಬಾ ನಡೆಯುತ್ತಿತ್ತು. ನಾನು ಡ್ರಾಮ ಮಾಡ್ತಿದ್ದೆ, ಹಾಡ್ತಿದ್ದೆ, ಕ್ವಿಜ್, ಪೈಂಟಿಗ್, ಪ್ರಬಂಧ ಬರೆಯುವುದು, ಇಷ್ಟೇ ಅಲ್ಲದೆ ನಾನು ಸ್ಪೋಟ್ಸ್ನಲೂ ಭಾಗವಹಿಸುತ್ತಿದ್ದೆ, ನಾನೊಬ್ಬಳು ಅಥ್ಲೀಟ್ ಆಗಿದ್ದೆ ಅದರಲ್ಲಿ ಎಲ್ಲಾ ತರಹದ ರೇಸ್‌ಗಳಿಗೂ ನಾನ್ ರೆಡಿ. ಹೀಗೆ ಎಲ್ಲದರಲ್ಲೂ ನಾನು ಚಿಕ್ಕಂದಿನಿAದಲೂ ಚೂಟಿ.
I am a glimpse of everything in my school days
ಆ ಕನಸು ಕಂಡಾಗ ನಾನು ಐದನೇ ಕ್ಲಾಸ್!
ಆಗ ನಾನು ಐದನೇ ಕ್ಲಾಸ್‌ನಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಲ್ಲಿ ಆ ವರ್ಷ ಒಂದು ದೊಡ್ಡ ಕಾರ್ಯಕ್ರಮ ನಡೆಯುತ್ತಿತ್ತು ಆ ಕಾರ್ಯಕ್ರಮಕ್ಕೆ ವಸುಂಧರ ದಾಸ್‌ರವರು ನಮ್ಮ ಶಾಲೆಗೆ ಬಂದು ನಮಗೆ ಎಲ್ಲಾ ಕಲ್ಚರಲ್ ಆಕ್ಟಿವಿಟೀಸ್ ಬಗ್ಗೆ ಹೇಳಿಕೊಡುತ್ತಿದ್ದರು. ನಾನು ಆ ಸಮಯದಲ್ಲಿ ಅವರನ್ನು ಅತಿಯಾಗಿ ಗಮನಿಸಿದೆ. ಅವರ ಹಾಡುಗಾರಿಕೆ, ಅವರ ನಟನೆ, ಅವರ ಚಂದದ ಉಡುಗೆ, ಚಂದದ ಮಾತು, ಅವರನ್ನು ಕಂಡಾಗ ನಾನು ಇವರಂತಾಗಬೇಕು ಅನಿಸಿತು. ಆ ಕ್ಷಣಕ್ಕೆ ನಾನು ನಟಿಯಾಗಬೇಕಾ? ನಾನು ಗಾಯಕಿಯಾಗಬೇಕಾ? ಯಾವುದು ಅರ್ಥವಾಗುವಂತಹ ವಯಸ್ಸಲ್ಲ ಆದರೇ ಅವರಂತಾಗಬೇಕು ಅನ್ನುವುದು ಮಾತ್ರ ನಿಶ್ಚಿತವಾಗಿತ್ತು. ನನಗೆ ನಟನೆಯ ಆಸೆ ಬೀಜ ಬಿತ್ತಿದವರು ಅವರೆ. ಆಗ ಅವರು ನನ್ನಲ್ಲಿ ಬಿತ್ತಿದ ಸ್ಪೂರ್ತಿಯ ಬೀಜ ಸಸಿಯಾಗಿ, ಗಿಡವಾಗಿ ಇಂದು ಮರವಾಗಿ ಬೆಳೆದಿದೆ. ಆ ಶಾಲೆ ನನಗೆ ಎಲ್ಲವನ್ನು ಮಾಡಲು ಹೇಳಿಕೊಟ್ಟಿತ್ತು. ಯಾರ ಎದುರಾಗಲೀ, ಎಷ್ಟು ಜನರ ಎದುರಾಗಲೀ ನಾನು ಹಾಡಬಲ್ಲೆ, ನಾನು ನಟಿಸಬಲ್ಲೆ ಈ ಒಂದು ಧೈರ್ಯವನ್ನು ನನಗೆ ಮೊದಲು ಕೊಟ್ಟಿದ್ದೇ ನನ್ನ ಪರಿಕ್ರಮ ಶಾಲೆ. ಅದೇ ಶಾಲೆ ನನಗೆ ಹತ್ತು ಸಾವಿರ ಜನರ ಮುಂದೆ ಹಾಡಲು ಅವಕಾಶ ಮಡಿಕೊಟ್ಟಿತ್ತು. ಇವತ್ತು ನಾನೇನಿದ್ದರೂ ಅದರ ಮೊದಲ ಕ್ರೆಡಿಟ್ ನನ್ನ ಪರಿಕ್ರಮ ಶಾಲೆಗೆ ಸಲ್ಲುತ್ತದೆ.
ಕೊನೆಯಲ್ಲಿ ಸಿಕ್ಕಿದ ಅವಕಾಶ
ನನ್ನ ಫ್ರೆಂಡ್ ಕಡೆಯಿಂದ ಒಂದು ಅವಕಾಶ ಸಿಕ್ಕಿತು. ‘ಬೆಂಗಳೂರು ಕ್ವೀನ್ಸ್’ ಅಂತಾ ಒಂದು ವೆಬ್ ಸೀರಿಸ್ ಅನೌನ್ಸ್ ಆಯಿತು ಇದನ್ನ ಅನೀಶ್ ತೇಜೇಶ್ವರ್‌ರವರು ವಿಂಕ್ ವಿಶುಯಲ್ಸ್ ಪ್ರೊಡಕ್ಷನ್ ವತಿಯಿಂದ ಶುರುವಾಗಿತ್ತು. ಬೆಂಗಳೂರು ಕ್ವೀನ್ಸ್ ಸೀರಿಸ್ ಆಡಿಷನ್‌ಗೆ, ನನ್ನ ಫ್ರೆಂಡ್ ನನ್ನ ಪ್ರೊಫೈಲ್‌ನ್ನು ನನಗೆ ಗೊತ್ತಿಲ್ಲದೆ ಕಳಿಸಿ ಬಿಟ್ಟಿದ್ದಳು. ಅನೀಶ್‌ರವರು ನನ್ನ ಫ್ರೆಂಡ್‌ಗೆ ಕರೆ ಮಾಡಿ ನನ್ನ ಬಗ್ಗೆ ಕೇಳಿದ್ದಾರೆ. ನನ್ನ ಫ್ರೆಂಡ್ ನನಗೆ ಬಂದು ನಡೆದ ಕಥೆ ಹೇಳಿದಳು, ಏನು ಮಾಡುವುದು ಎಂದು ಯೋಚಿಸಿ ನಾನೇನೆ ಮಾಡಿದ್ರೂ 1೦೦% ಎಫರ್ಟ್ ಹಾಕುವುದಂತು ಸತ್ಯ. ಇದನ್ನು ಹಾಗೆ ಮಾಡಿ ಬರ್ತೀನಿ ಎಂದು ಹೇಳಿ, ಅನೀಶ್ ನೋಡೋದಕ್ಕೆ ಹೋದೆ, ಹೋಗುವಾಗ ತುಂಬಾ ಭಯ ಇತ್ತು , ಸಿನಿಮಾ ಅಂದ್ರೇ ಹಾಗಿರುತ್ತೆ, ಹೀಗಿರುತ್ತೆ ಅಂತಾ ಕೇಳಿದ್ವಿ. ಹಾಗಾಗಿ ಹೋಗುವಾಗ ಜೊತೆಗೆ ನಮ್ಮಮ್ಮನನ್ನು ಕರೆದುಕೊಂಡು ಹೋದೆ. ಹೋಗಿ ನೋಡಿದರೇ ಅಲ್ಲಿ ಎಲ್ಲಾ ತುಂಬಾ ಕೂಲ್ ಆಗಿತ್ತು. ಅನೀಶ್‌ರವರು ಕೂಡ ತುಂಬಾ ಕೂಲ್ ಆಗಿದ್ದರು. ಆಡಿಷನ್‌ನಲ್ಲಿ ನಾನು ಸೈಲೆಂಟ್ ಸ್ವಾತಿ ಅನ್ನುವ ಪಾತ್ರಕ್ಕೆ ಸೆಲೆಕ್ಟ್ ಆದೆ. ಆಗ ಶೂಟಿಂಗ್ ಬಗ್ಗೆ ನನಗೆ ಒಂದು ಸಣ್ಣ ಕಲ್ಪನೆಯೂ ಇರಲಿಲ್ಲ. ಶೂಟಿಂಗ್ ಹೇಗಿರುತ್ತದೆ ಶೂಟಿಂಗ್ ಕ್ಯಾಮೆರಾ ಹೇಗಿರುತ್ತೆ, ಸಿನಿಮಾ ಶೂಟಿಂಗ್ ಯುನಿಟ್ ಹೇಗಿರುತ್ತೆ. ಅಂತಾ ನಾನು ಮೊದಲ ಬಾರಿಗೆ ನೋಡಿದೆ. ನಾನು ಅಲ್ಲಿ ನನ್ನ ಸೈಲೆಂಟ್ ಸ್ವಾತಿ ಪಾತ್ರವನ್ನು ಮಾಡಿದೆ ಒಂದು ಎಪಿಸೋಡ್ ಕೂಡ ಶೂಟ್ ಆಯ್ತು. ಆಮೇಲೆ ಅನೀಶ್‌ರವರು ವೆಬ್ ಸೀರಿಸ್‌ಗಳನ್ನು ಬಿಟ್ಟು ಸಿನಿಮಾ ಮಾಡೋದಕ್ಕೆ ಶುರು ಮಾಡಿದ್ರು. ಆ ಸಿನಿಮಾಗೂ ನನ್ನನ್ನು ಕರೆದರು ಆದರೇ ಆಗ ನಾನು ಫೈನಲ್ ಇಯರ್‌ನಲ್ಲಿದ್ದೆ. ಎಕ್ಸಾಮ್ಸ್ ಎಲ್ಲಾ ಹತ್ತಿರದಲ್ಲಿದ್ದವು. ಆ ವಿಷಯವನ್ನು ಅನೀಶ್‌ರವರಿಗೆ ತಿಳಿಸಿ ಎಕ್ಸಾಮ್‌ಗೆ ಪ್ರಿಪೇರ್ ಆಗಲು ಬಂದೆ.
ಅಷ್ಟು ಕಷ್ಟ ತಲೆದಂಡ
‘ಆ ದೃಶ್ಯ’ ಸಿನಿಮಾದ ನಂತರ ನನಗೆ ‘ತಲೆದಂಡ’ ಅನ್ನುವ ಸಿನಿಮಾ ಸಿಕ್ಕಿತು. ಆ ಚಿತ್ರದಲ್ಲಿ ನನ್ನದು ಸೋಲಿಗರ ಹುಡುಗಿಯ ಪಾತ್ರ. ನಾನು ಎಂದೂ ನೋಡದ, ಎಂದೂ ಕೇಳಿರದ ಪಾತ್ರ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೆ, ಯಾವಾಗಲಾದರೂ ಒಮ್ಮೆ ನಾನು ನಮ್ಮ ತಾತನ ಊರು ಮಲ್ಲಪ್ಪನಹಳ್ಳಿಗೆ ಹೋಗುತ್ತಿದ್ದೆ. ಹೋದರೇ ಅಲ್ಲೊಂದು ಹತ್ತು ದಿನ ಇರುತ್ತಿದ್ದೆ ಅಷ್ಟೆ. ಇದಿಷ್ಟೆ ನನಗೆ ಹಳ್ಳಿಯ ಅನುಭವ. ಕಾಡಿನ ಜನರ ಅಥವಾ ಬುಡಕಟ್ಟು ಜನರ ಜೀವನದ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಕಾಡಿನಂಚಿನ ಜನರ ಜೀವನ ಪದ್ದತಿ ಇರುವ ಸಿನಿಮಾ ಕಥೆ. ನಾನು ಆ ಪಾತ್ರವನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ ಅಂತಹ ಸನ್ನಿವೇಶದಲ್ಲಿ ನಿರ್ದೇಶಕರಾದ ಪ್ರವೀಣ್ ಕೃಪಾಕರ್‌ರವರು ಆ ಜನರ ಜೀವನ ವ್ಯವಸ್ಥೆಯನ್ನು ನನಗೆ ತೋರಿಸಿದರು ಅವರ ಬಗ್ಗೆ, ಅವರ ಜೀವನದ ಬಗ್ಗೆ ತಿಳಿಸಿದರು, ಆ ಕಾಡಿನಲ್ಲಿ ಸೋಲಿಗರ ಹುಡುಗಿಯ ಮೇಕಪ್ಪಿನೊಂದಿಗೆ, ಅವರ ಭಾಷೆಯಲ್ಲಿ ಮಾತನಾಡುತ್ತ ಎಷ್ಟೋ ಸಮಯ ಕಾಲ ಕಳೆದೆ. ಆ ಸಿನಿಮಾ ಮುಗಿಸುವ ಹೊತ್ತಿಗೆ ನನಗೆ ಸೋಲಿಗರ ಬದುಕು ಅಭ್ಯಾಸವಾಗಿ ಹೋಗಿತ್ತು. ನಾನು ನಿಜವಾಗಿಯೂ ಸಾಕಿಯಾಗಿ ಹೋಗಿದ್ದೆ. ತಲೆದಂಡ ನನ್ನ ಬದುಕಿನಲ್ಲಿ ಬಹು ಮುಖ್ಯವಾದ ಸ್ಥಾನ ಪಡೆದುಕೊಳ್ಳುತ್ತದೆ. ಸಂಚಾರಿ ವಿಜಯ್ ಅಂತಹ ನಟರು, ಮಂಗಳಮ್ಮನಂತಹ ಮಹಾನ್ ಕಲಾವಿದರು ಎಲ್ಲರೂ ನನಗೆ ನನ್ನ ವೃತ್ತಿ ಬದುಕಿಗೆ ಮಹಾನ್ ಶಕ್ತಿ ತಂದುಕೊಟ್ಟವರು.
ಗಿಲ್ಕಿಯಲ್ಲಿ ಗಿರಕಿ ಹೊಡೆಯುತ್ತಾ.
ಗಿಲ್ಕಿ ಸಿನಿಮಾವನ್ನು ಜನರು ನೋಡಿರುವುದು ಕಡಿಮೆ. ಆದರೇ ಯಾರು ಸಿನಿಮಾ ನೋಡಿದ್ದಾರೋ ಅವರೆಲ್ಲರಿಗೂ ನ್ಯಾನ್ಸಿ ನೆನಪಿರುತ್ತಾಳೆ. ಆ ಪಾತ್ರ ಎಲ್ಲರಿಗೂ ಅಷ್ಟು ಇಷ್ಟವಾಗುತ್ತದೆ. ಆ ಪಾತ್ರ ಮಾಡುವಾಗ ನಾನು ಅಭಿನಯ ಮರೆತು ನಟಿಸಬೇಕಾಗಿತ್ತು ಅಂತ ಅನ್ನಿಸಿದಂತಹ ಪಾತ್ರ ನ್ಯಾನ್ಸಿ. ನಾನು ಅಭಿನಯಿಸಬೇಕು ಅಂದ್ರೇ ನ್ಯಾನ್ಸಿ ಬರುತ್ತಿರಲಿಲ್ಲ. ನಾನು ನ್ಯಾನ್ಸಿ ಆದಾಗ ಮಾತ್ರ ಅಭಿನಯಿಸುವುದಕ್ಕೆ ಆಗುತ್ತಿತ್ತು. ಆ ಪಾತ್ರ ಅಷ್ಟರಮಟ್ಟಿಗೆ ನನ್ನನ್ನು ಆವರಿಸಿಕೊಂಡಿತ್ತು. ಆ ಪಾತ್ರ ಮುಗಿಸಿ ನಾನು ಮನೆಗೆ ಹೋಗಿ ದಿಂಬಿನ ಮೇಲೆ ತಲೆ ಹಾಕಿ ಮಲಗಿ ನಿದ್ದೆ ಹೋದಾಗಲೇ ಆ ಪಾತ್ರ ನನ್ನಿಂದ ಹೊರ ಹೋಗುತ್ತಿತ್ತು. ಮತ್ತೆ ಬೆಳಿಗ್ಗೆ ಆ ಪಾತ್ರದ ಶೂಟಿಂಗ್‌ಗೆ ಹೋದಾಗ ಆ ಪಾತ್ರ ನನ್ನೊಳಗೆ ಮತ್ತೆ ಇಳಿಯೋದಕ್ಕೂ ಸಮಯ ತೆಗೆದುಕೊಳ್ಳುತ್ತಿತ್ತು ಒಮ್ಮೆ ಆ ಪಾತ್ರ ನನ್ನೊಳಗೆ ಇಳಿದು ಬಿಟ್ಟರೆ ಮುಗಿತು ಮತ್ತೆ ನ್ಯಾನ್ಸಿ ಆವರಿಸಿಕೊಳ್ಳುತ್ತಿದ್ದಳು. ಆ ಪಾತ್ರಕ್ಕಾಗಿ ನಾನು ಮಾಡಿದ ಹೋಮ್ ವರ್ಕ್ ಅಷ್ಟಿಷ್ಟಲ್ಲ. ಆ ಪಾತ್ರಕ್ಕಿರುವ ಖಾಯಿಲೆಯ ಬಗ್ಗೆ ತಿಳಿದುಕೊಂಡೆ ನಾನೆಷ್ಟು ತಿಳಿದುಕೊಳ್ಳುತ್ತೇನೋ ಅದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಅದೇ ನನ್ನ ಖಾಯಿಲೆ ಎಂದು ಭಾವಿಸಿ ಗಿಲ್ಕಿ ಚಿತ್ರವನ್ನು ಪೂರ್ಣಗೊಳಿಸಿದೆ.
ಗಿಲ್ಕಿ ನೋಡಿದ ಮೇಲೆ
ಚಿತ್ರರಂಗದಲ್ಲಿ ನನಗೆ ಅವಕಾಶಗಳು ಹುಡುಕಿ ಬರಲು ಶುರು ಆಗಿದ್ದು ಹೇಗೆ ಅಂತಾ ಮೊದಲಿಗೆ ನನಗೆ ಗೊತ್ತೆ ಆಗಲಿಲ್ಲ. ನಿರ್ದೇಶಕರು ನನಗೆ ಹೊಸ ಹೊಸ ಕಥೆ ಹೇಳಲು ಬರುತ್ತಿದ್ದರು. ನಾನು ಹೊಸ ಹೊಸ ಸಿನಿಮಾಗಳ ಕಥೆ ಕೇಳಿದ ಮೇಲೆ, ಆ ಸಿನಿಮಾದ ನಿರ್ದೇಶಕರೋ, ಸಹ ಕಲಾವಿದರೋ ಅಥವಾ ನಿರ್ಮಾಪಕರೊ ಯಾರೋ ಒಬ್ಬರು ನನಗೆ ನಿಮ್ಮ ಗಿಲ್ಕಿ ಸಿನಿಮಾ ನೋಡಿದ್ವಿ , ಸಿನಿಮಾ ತುಂಬಾ ಚೆನ್ನಾಗಿದೆ ನಿಮ್ಮ ನಟನೆ ಅಂತೂ ಅದ್ಭುತವಾಗಿದೆ ಅನ್ನುತ್ತಿದ್ದರು. ಈ ಸಿನಿಮಾ ಎಲ್ಲಿ ತಲುಪಬೇಕೋ ಅಲ್ಲಿ ತಲುಪಿದೆ ಅಂದುಕೊಂಡೆ. ನಾವು ಪಟ್ಟ ಕಷ್ಟಕ್ಕೆ ಅಲ್ಲೇ ಪೂರ್ತಿ ಪ್ರತಿಫಲ ಸಿಕ್ಕುವುದಿಲ್ಲ. ಆ ಕಷ್ಟಕ್ಕೆ ಪ್ರತಿಫಲ ಎನ್ನುವುದು ನಿರಂತರವಾಗಿ ಸಿಗುತ್ತಾ ಹೋಗುತ್ತದೆ. ನಾವು ಕೆಲಸ ಮಾಡುವಾಗ ನಮ್ಮನ್ನು ನಾವು ಏನೂ ಅಪೇಕ್ಷೆ ಪಡದೆ ಸುಮ್ಮನೆ ತೊಡಗಿಸಿಕೊಂಡರೆ ಸಾಕು. ಈ ಅನುಭವ ನನ್ನಲ್ಲಿ ನನಗೆ ತುಂಬಾ ಆತ್ಮ ವಿಶ್ವಾಸ ಮೂಡಿಸುತ್ತದೆ.
ಗಿಲ್ಕಿ ಕರೆದು ಕೊಡಿಸಿದ ಅವಕಾಶಗಳು…!
ನನಗೆ ಅವರು ಪರಿಚಯ ಇದ್ದಾರೆ ಅಂತ ನಾನು ಪಾತ್ರಗಳನ್ನು ಕೇಳಿಕೊಂಡು ಹೋದವಳಲ್ಲ. ಆದರೆ ಬಂದ ಅವಕಾಶಗಳನ್ನೆಲ್ಲ ಗೌರವಿಸಿದ್ದೇನೆ. ಮತ್ತೆ ರಾಜ್ ಬಿ ಶೆಟ್ಟಿಯವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ಸುರಭಿ ಪಾತ್ರಕ್ಕಾಗಿ ಹುಡುಕಾಟ ಮಾಡುತ್ತಿದ್ದಾಗ ರಾಜ್ ರವರು ನನ್ನನ್ನು ಕರೆದರು ಆದರೆ ನಾನು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೆ ನನ್ನನ್ನು ಕರೆದಿಲ್ಲ, ಆಗಲೇ ಆ ಪಾತ್ರ ರುಕ್ಮಿಣಿ ವಸಂತ್‌ರವರು ಮಾಡುತ್ತಿದ್ದಾರೆ. ನನ್ನನ್ನು ಬೇರೆ ಯಾವುದೋ ಸಿನಿಮಾಗಾಗಿ ಕರೆದಿದ್ದಾರೆ ಎಂದುಕೊAಡು ಹೋದೆ. ಅಲ್ಲಿ ನೋಡಿದರೇ ನಿರ್ದೇಶಕ ಹೇಮಂತ್‌ರವರು ಚಿತ್ರದ ಕಥೆ ಹೇಳಲು ಶುರು ಮಾಡಿದರು ನಾನು ಕಥೆ ಕೇಳುತ್ತಾ ಕೇಳುತ್ತಾ ಇದು ರುಕ್ಮಿಣಿ ವಸಂತ್ ಅವರು ಮಾಡುತ್ತಾ ಇಲ್ಲವಾ ? ಅಂದೆ ಅವರು ಸೈಡ್ ‘ಎ’ ನೀವು ಸೈಡ್ ಬಿ ಯಲ್ಲಿ ರಕ್ಷಿತ್‌ರವರ ಜೊತೆ ಲೀಡ್ ಕ್ಯಾರೆಕ್ಟರ್ ಸುರಭಿ ಎಂದು ಹೇಳಿದರು. ನನಗೆ ಸಪ್ತ ಸಾಗರದಾಚೆಯ ಸೈಡ್ ಬಿ ಯಲ್ಲಿನ ಸುರಭಿ ಪಾತ್ರಕ್ಕೇ ಅಂತಾ ಗೊತ್ತಾದದ್ದೆ ಆವಾಗ.
ಸುರಭಿ ಪಾತ್ರಕ್ಕೆ ಸೀರೆ
ಆ ದಿನ ನಾನು ಸುರಭಿ ಪಾತ್ರದ ಮಾತುಕಥೆಗೆ ಲೂಸ್ ಟೀ ಶರ್ಟ್ ಮತ್ತು ಲೂಸ್ ಜೀನ್ಸ್ ಹಾಕಿಕೊಂಡು ಹೋಗಿದ್ದೆ. ಹೇಮಂತ್ ಸರ್ ನನ್ನನ್ನು ಕರೆದು “ನಿಮ್ಮ ಪಾತ್ರ ಮೆಚ್ಯೂರ್ಡ್ ಆಗಿದೆ. ನೀವು ಸೀರೆ ಉಟ್ಟು ಬರಬಹುದಾ”..? ಎಂದರು ನಾನು ಸರಿ ಸರ್ ಎಂದು ಸೀರೆ ಉಟ್ಟು ಹೋದೆ. ನನಗೆ ಆಗ ಸಿಕ್ಕ ಕಾಂಪ್ಲಿಮೆಂಟ್ ತುಂಬಾ ದೊಡ್ಡದಿತ್ತು. ಅದೇನೆಂದರೇ ನಾನು ಸೀರೆ ಉಟ್ಟರೆ ತುಂಬಾ ಮೆಚ್ಯೂರ್ಡ್ ಆಗಿಯೂ ಜೀನ್ಸ್ ಹಾಕಿದರೆ ಬಬ್ಲಿ ಹುಡುಗಿಯಾಗಿಯೂ ಮತ್ತು ತುಂಬಾ ಟೈಟ್ ಬಟ್ಟೆಗಳನ್ನು ಹಾಕಿದರೆ ಇನ್ನೂ ಚಿಕ್ಕ ಹುಡುಗಿಯಂತೆ ಕಾಣುತ್ತೇನಂತೆ, ಈ ತರಹ ನಟನೆ ಬಲ್ಲವರು ಸಿಕ್ಕರೆ ಅವರಿಗೆ ಯಾವ ಪಾತ್ರವನ್ನಾದರೂ ಹಾಕಿಸಬಹುದಂತೆ. ಆ ಮಾತು ಕೇಳಿ ನನಗೆ ಇನ್ನೊಂದಷ್ಟು ಆತ್ಮ ವಿಶ್ವಾಸ ಹೆಚ್ಚಾಯಿತು.
ನಟಿಸಿದರೆ ಇವರ ಜೊತೆ ನಟಿಸಬೇಕು;
ಸಿನಿಮಾ ಇಂಡಸ್ಟಿçಗೆ ಬಂದು ನಟಿಸಲು ಶುರು ಮಾಡಿದ ಮೇಲೆ ಇಂತವರ ಜೊತೆ ನಟಿಸಬೇಕೆಂದು ಒಂದು ಕನಸು ಹುಟ್ಟಿಕೊಳ್ಳುತ್ತದೆ ಹಾಗೆಯೇ ನನಗೆ ನಿರ್ದೇಶಕ ಹೇಮಂತ್‌ರವರು ಅವರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನೋಡಿ ನಾನು ಒಮ್ಮೆ ಇವರ ಸಿನಿಮಾದಲ್ಲಿ ನಟಿಸಬೇಕೆಂದುಕೊಂಡಿದ್ದೆ. ಆಮೇಲೆ ರಕ್ಷಿತ್ ಶೆಟ್ಟಿಯವರ ಜೊತೆ ಅಭಿನಯಿಸಬೇಕು ಎಂದುಕೊAಡಿದ್ದೆ. ಇವೆರಡು ಆಸೆ ಒಂದೇ ಸಿನಿಮಾದಲ್ಲಿ ನೆರವೇರಿದಂತೆ ಆಯಿತು. ಹಾಗೆ ನಾನು ಯಾರ ಜೊತೆ ನಟಿಸಬೇಕು ಅಂದುಕೊಂಡಿದ್ದೆನೋ ಅವರೆಲ್ಲರ ಜೊತೆ ನಟಿಸಿಕೊಂಡು ಬರುತ್ತಿದ್ದೇನೆ. ಈ ಖುಷಿಯಲ್ಲಿದ್ದ ನನಗೆ ರಾಜ್ ಬಿ ಶೆಟ್ಟಿಯವರು ಕರೆ ಮಾಡಿದ್ರು. ಚೈತ್ರ ನಾನು ಟೋಬಿ ಅನ್ನುವ ಸಿನಿಮಾ ಮಾಡ್ತಾ ಇದ್ದೀನಿ, ಅಲ್ಲಿ ನಿಮಗೆ ಜನ್ನೀ ಅನ್ನೋ ಪಾತ್ರ ಇದೆ ನೀವ್ ಮಾಡ್ಬೇಕು ಅಂದ್ರು ಅಷ್ಟೆ. ಅಷ್ಟರ ಮಟ್ಟಿಗೆ ಸಲುಗೆ ಇದೆ. ಅಷ್ಟರ ಮಟ್ಟಿಗೆ ರಾಜ್ ಮೇಲೆ, ಅವರ ಕೆಲಸದ ಮೇಲೆ ನನಗೆ ಅತೀವವಾದ ನಂಬಿಕೆ ಇದೆ. ಅವರಿಗೂ ಕೂಡ. ಅದಕ್ಕಾಗಿಯೆ ನಾನು ಜನ್ನೀ ಪಾತ್ರವೇನು ಟೋಬಿಯ ಕಥೆಯೇನು ನಾನು ಏನೂ ಅಂತಾ ಒಂದೂ ಕೇಳಲಿಲ್ಲ ಸುಮ್ಮನೆ ಕಣ್ಮುಚ್ಚಿಕೊಂಡು ಒಪ್ಪಿಕೊಂಡೆ. ಅಷ್ಟು ಖುಷಿಯಿಂದ ಒಪ್ಪಿಕೊಂಡ ಪ್ರಾಜೆಕ್ಟ್ ಟೋಬಿ. ಒಳ್ಳೆಯ ಟೀಮ್ ಒಳ್ಳೆಯ ಟೆಕ್ನಿಷಿಯನ್ ಇದ್ದ ಸಿನಿಮಾ ತಂಡ ಟೋಬಿ.
ಪಾತ್ರಕ್ಕಾಗಿ ಎಷ್ಟ್ ಹೋಮ್ ವರ್ಕ್ ಮಾಡೋಕು ರೆಡಿ.
ಯಾವ ಪಾತ್ರದ ಕಾಂಪ್ಲೆಕ್ಸ್ಸಿಟಿ ಎಷ್ಟಾದರೂ ಇರಲಿ. ಆ ಪಾತ್ರವನ್ನು ನಿರ್ವಹಿಸಲು ಎಷ್ಟು ಕಷ್ಟವಾದರೂ ಸರಿಯೇ, ನಾನು ಆ ಪಾತ್ರ ಮಾಡೋಕೆ ರೆಡಿ. ನನಗೆ ನಾನ್ ಫೇಮಸ್ ಆಗ್ತೀನೋ, ಜನಕ್ಕೆ ರೀಚ್ ಆಗ್ತೀನೋ ಯಾವುದೂ ನನ್ನ ಕೈಲಿಲ್ಲ ಆದರೇ ನಾನು ಆ ಪಾತ್ರವನ್ನು ಹೇಗೆ ಮಾಡ್ತೀನಿ ಅನ್ನುವುದು ನನ್ನ ಕೈಲಿದೆ. ನಾನು ಆ ಪಾತ್ರವನ್ನು ಕಥೆಯ ತೂಕಕ್ಕೆ ತಂದು ನಿಲ್ಲಿಸುವ ಮತ್ತು ನಿರ್ದೇಶಕರ ಭಾವಕ್ಕೆ ತಲುಪಿಸುವ ಶ್ರಮ ಹಾಕುತ್ತೇನೆ ಅದಕ್ಕಾಗಿ ನಾನು ಎಷ್ಟು ಬೇಕಾದರೂ ಹೋಮ್ ವರ್ಕ್ ಮಾಡೊಕೆ ರೆಡಿ. ನಾನು ನಿರ್ದೇಶಕರ ಕಲ್ಪನೆಯ ಪಾತ್ರವನ್ನು ನಿಭಾಯಿಸಿ ಕಥೆಗೆ ನ್ಯಾಯ ಕೊಡಬೇಕು. ಒಂದು ಕಥೆ ಮತ್ತು ಒಂದು ಸಿನಿಮಾದ ಹಿಂದೆ ಅದೆಷ್ಟೋ ಜನರ ಶ್ರಮವಿದೆ, ನಾವು ಪಾತ್ರಕ್ಕೆ ಕೊಡುವ ನ್ಯಾಯದಿಂದ ಅವರೆಲ್ಲರ ಶ್ರಮ ಎದ್ದು ಕಾಣುತ್ತದೆ.
ನನ್ನ ಸಿನಿಮಾಗಳು.
ಸದ್ಯಕ್ಕೆ ರಿಲೀಸ್‌ಗೆ ರೆಡಿ ಇರುವ ಚಿತ್ರಗಳು ಅಂದ್ರೇ ಅರ್ಜುನ್ ಲೂಯಿಸ್‌ರವರು ನಿರ್ದೇಶಸಿರುವ ‘ಸ್ಟಾçಬರ‍್ರಿ’ ಸಿನಿಮಾದಲ್ಲಿ ನಟಿಸಿದೆ, ‘ಬ್ಲಿಂಕ್’, ಅನ್ನುವ ಟೈಮ್ ಟ್ರಾವೆಲ್ ಸ್ಟೋರಿ ಇರುವ ಚಿತ್ರದಲ್ಲಿ ನಟಿಸಿದೆ. ಈ ಚಿತ್ರವನ್ನು ಶ್ರೀನಿಧಿ ಬೆಂಗಳೂರು ಇವರು ನಿರ್ದೇಶಿಸಿದ್ದರೆ. ‘ಹ್ಯಾಪಿ ಬರ್ತ್ ಡೇ ಟು ಮಿ’.ಯಲ್ಲಿ ಗಾಂಜ ಮಾರುವ ಹುಡುಗಿಯ ಪಾತ್ರದಲ್ಲಿ ನಟಿಸಿದೆ. ಈ ಚಿತ್ರವನ್ನು ರಾಕೇಶ್ ಕದ್ರಿಯವರ ನಿರ್ದೇಶನದಲ್ಲಿ ಅಭಿನಯಿಸಿದ್ದೇನೆ.
ನನ್ನ ಹಾಡುಗಳು ..
ಮಾದೇವಾ ಮಾದೇವ ಮಾದೇವ ಮಾದೇವಾ, ಸೋಜುಗದ ಸೂಜು ಮಲ್ಲಿಗೆ. ಇದು ನಾನು ಹಾಡಿದ ಮೊದಲ ಹಾಡು ಆಮೇಲೆ , ‘ಸೋಲ್ ಆಫ್ ಬೆಂಕಿ’ ಅನೀಶ್ ತೇಜೇಶ್ವರ್‌ರವರ ಸಿನಿಮಾಗೆ ಹಾಡಿದ್ದೀನಿ. ಇನ್ನು ಹ್ಯಾಪಿ ಬರ್ತ್ ಡೆ ಟು ಮಿ. ಅನ್ನುವ ಸಿನಿಮಾಗೆ ಎರಡು ಬಿಟ್ ಸಾಂಗ್‌ಗಳನ್ನಾ ಹಾಡಿದ್ದೀನಿ. ‘ಶಾಖಾಹಾರಿ’ ಅನ್ನುವ ಸಿನಿಮಾದಲ್ಲಿ ಒಂದು ಹಾಡು ಹಾಡಿದ್ದಿನಿ. ನಾನು ತುಂಬ ಕೋರಸ್‌ಗಳನ್ನು ಹಾಡಿದ್ದೀನಿ.ಪಾತ್ರಗಳೇ ಪಾಠ ಕಲಿಸಿಕೊಡುತ್ತವೆ.
ಒಂದು ದಿನಕ್ಕೂ ಸಿಗರೇಟ್ ಸೇದದ ಹುಡುಗಿ ನಾನು. ಇಂತಹ ಪಾತ್ರಗಳನ್ನು ಮಾಡುವಾಗ ತುಂಬಾ ಚಾಲೆಂಜಿಂಗ್ ಆಗಿರುತ್ತೆ. ನಾನಲ್ಲದ ಪಾತ್ರಗಳನ್ನು ಮುನ್ನೆಡೆಸುವಾಗ ತುಂಬಾ ಖುಷಿಯಾಗುತ್ತೆ. ನನಗೆ ಭಾಷೆಯ ಗಡಿಯಿಲ್ಲ, ಯಾವ ಬಾಷೆಯಾದರೂ ಸರಿನೇ ಎಂತಹದೇ ಪಾತ್ರವಾದರೂ ಸರಿನೇ ನನಗೆ ಹೊಂದುವಂತೆ ಇದ್ದರೆ ಖಂಡಿತಾ ನಟಿಸುತ್ತೇನೆ. ನನಗೆ ಈಗ ಭಾಷೆಯ ಗಡಿ ಮೀರಿ ಚಿತ್ರಗಳ ಅವಕಾಶಗಳು ಬರುತ್ತಿವೆ. ನಾನು ಭಾಷೆ ಕಲಿತು ಪಾತ್ರ ಮಾಡಿದ್ರೇ ಸರಿ ಅನ್ನೋದು ನನ್ನ ಅಭಿಪ್ರಾಯ. ಏನಾಗುತ್ತೋ ನೋಡೋಣ ಕನ್ನಡದಲ್ಲೂ ಅವಕಾಶಗಳು ಬರುತ್ತಿವೆ. ಒಳ್ಳೆ ಒಳ್ಳೆಯ ಪಾತ್ರಗಳೇ ಸಿಗುತ್ತಿವೆ ನನಗಂತೂ ಸದ್ಯಕ್ಕೆ ಖುಷಿಯಿದೆ.
– ಖ್ಯಾತ ನಟಿ. ಚೈತ್ರಾ ಜೆ ಆಚಾರ್