Sandalwood Leading OnlineMedia

ದುಬೈನಲ್ಲೂ ನಡೆಯಿತು ದ್ವಿಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ “ವೀರ ಕಂಬಳ” ಚಿತ್ರದ ಚಿತ್ರೀಕರಣ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಹಾಗೂ ಅರುಣ್ ರೈ ತೊಡರ್ ಅವರ ನಿರ್ಮಾಣದಲ್ಲಿ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಮೂಡಿಬರುತ್ತಿರುವ “ವೀರ ಕಂಬಳ” ಚಿತ್ರಕ್ಕೆ ದೂರದ ದುಬೈನಲ್ಲೂ ಚಿತ್ರೀಕರಣವಾಗಿದೆ. ಇತ್ತೀಚೆಗೆ ದುಬೈನಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಬೆಂಗಳೂರಿಗೆ ವಾಪಸಾಗಿದೆ. ನಟ ಆದಿತ್ಯ, ನಿರ್ಮಾಪಕ ಅರುಣ್ ರೈ ತೊಡರ್, ಶೋಭ್ ರಾಜ್ ಮುಂತಾದವರು ದುಬೈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

“ಕಂಬಳ” ದಕ್ಷಿಣ ಕನ್ನಡದ ಪ್ರಸಿದ್ಧ ಕ್ರೀಡೆ. ಇದನ್ನೇ ಮುಖ್ಯವಾಗಿಟ್ಟುಕೊಂಡು ರಾಜೇಂದ್ರ ಸಿಂಗ್ ಬಾಬು ಅವರು “ವೀರ ಕಂಬಳ” ಚಿತ್ರದ ಕಥೆ ಬರೆದಿದ್ದಾರೆ. ಈ ಚಿತ್ರ ಕನ್ನಡದಲ್ಲಿ “ವೀರ ಕಂಬಳ” ಎಂಬ ಹೆಸರಿನಿಂದ ಹಾಗೂ ತುಳುವಿನಲ್ಲಿ “ಬಿರ್ದುದ ಕಂಬಳ” ಎಂಬ ಹೆಸರಿನಲ್ಲಿ ಮೂಡಿ ಬರುತ್ತಿದೆ.

ಇನ್ನೂ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಮಂಗಳೂರು, ಮೂಡುಬಿದಿರೆ ಹಾಗೂ ಬೆಂಗಳೂರಿನಲ್ಲಿ ಮಾತ್ರವಲ್ಲದೆ ದುಬೈನಲ್ಲೂ ಈ ಚಿತ್ರದ ಚಿತ್ರೀಕರಣವಾಗಿದೆ. ಕಂಬಳ ಆರಂಭವಾಗುವುದು ಒಂದು ಮನೆತನದಿಂದ. ಆ ಮನೆತನದವರು ದುಬೈನಲ್ಲಿ ನೆಲೆಸಿರುತ್ತಾರೆ. ಹಾಗಾಗಿ ಈ ಚಿತ್ರಕ್ಕೆ ದುಬೈನಲ್ಲೇ ಚಿತ್ರೀಕರಣ ಮಾಡಲಾಗಿದೆ. ಆದಷ್ಟು ಬೇಗ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿ ಏಪ್ರಿಲ್ ಮಧ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

“ವೀರ ಕಂಬಳ” ಕ್ಕೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಆರ್ ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಸಾಹಸ ನಿರ್ದೇಶನ,‌ ಚಂದ್ರಶೇಖರ ಸುವರ್ಣ ಮುಲ್ಕಿ ಕಲಾ ನಿರ್ದೇಶನ ಹಾಗೂ ಬೆನಕ ಕೊಟ್ರೇಶ್, ಅಕ್ಷತ ವಿಟ್ಲ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ರಾಜೇಶ್ ಕುಡ್ಲ.

ಆದಿತ್ಯ, ಪ್ರಕಾಶ್ ರೈ, ರವಿಶಂಕರ್, ಶೋಭ್ ರಾಜ್, ನವೀನ್ ಪಡಿಲ್, ಗೋಪಿನಾಥ್ ಭಟ್, ರಾಧಿಕಾ ಚೇತನ್, ಅರುಣ್ ರೈ ತೊಡರ್, ಭೋಜರಾಜ್ ವಾಮಂಜೂರ್, ಉಷಾ ಭಂಡಾರಿ, ಮೈಮ್ ರಮೇಶ್, ಗೀತಾ ಸುರತ್ಕಲ್, ಸುರೇಶ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Share this post:

Translate »