ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್ ಆಗಿದೆ. ಶಿವಣ್ಣ ಕೆರಿಯರ್ ನ ವಿಶೇಷ ಸಿನಿಮಾಗಳಲ್ಲೊಂದಾಗಿದೆ ಈ ಚಿತ್ರ. ಹ್ಯಾಟ್ರಿಕ್ ಹೀರೋ ಸಿನಿ ಕೆರಿಯರ್ ನ 125ನೇ ಸಿನಿಮಾ ಒಂದು ಕಡೆಯಾದ್ರೆ ಗೀತಾ ಶಿವಕುಮಾರ್ ನಿರ್ಮಾಣದ ಮೊದಲ ಸಿನಿಮಾ. ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದ ನಾಲ್ಕನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಯೊಂದಿಗೆ ತೆರೆಕಂಡ ಈ ಚಿತ್ರ ದೊಡ್ಮನೆ ಅಭಿಮಾನಿಗಳ ಮನಗೆದ್ದಿತ್ತು.
ದೊಡ್ಮನೆ ಅಭಿಮಾನಿಗಳಲ್ಲಿ, ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ‘ವೇದ’ ಚಿತ್ರ ಕಳೆದ ವರ್ಷ ಡಿಸೆಂಬರ್ 23ರಂದು ತೆರೆಕಂಡಿತ್ತು. ಎ. ಹರ್ಷ ಹಾಗೂ ಶಿವಣ್ಣ ಹಿಟ್ ಕಾಂಬಿನೇಶನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಚಿತ್ರಮಂದಿರದಲ್ಲಿ ದೊಡ್ಮನೆ ಅಭಿಮಾನಿ ಬಳಗ ಹಾಗೂ ಪ್ರೇಕ್ಷಕ ಪ್ರಭುಗಳ ಮನಗೆದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸೂಪರ್ ಸಕ್ಸಸ್ ಕಂಡಿದ್ದು ಹಿಟ್ ಲಿಸ್ಟ್ ಸೇರಿದೆ. ಇದೀಗ ಒಟಿಟಿ ಪ್ರೇಕ್ಷಕರ ಮನಗೆಲ್ಲಲು ‘ವೇದ’ ಚಿತ್ರ ರೆಡಿಯಾಗಿದ್ದು ಫೆಬ್ರವರಿ 10ಕ್ಕೆ ಜೀ5ನಲ್ಲಿ ಬಿಡುಗಡೆಯಾಗುತ್ತಿದೆ. ಗಾನವಿ ಲಕ್ಷ್ಮಣ್, ಶ್ವೇತ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಬಹುದೊಡ್ಡ ತಾರಗಣ ‘ವೇದ’ ಚಿತ್ರದಲ್ಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು.ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.