Sandalwood Leading OnlineMedia

ಸಂಗೀತ ಲೋಕದ ವೈಭವ : ಯುವ ನಿರ್ದೇಶಕ ವಾಸುಕಿ ವೈಭವ್‌ ಸಂದರ್ಶನ

ವಾಸುಕಿ ವೈಭವ್ ಸಂಗೀತ ಲೋಕದ ಸುಸಂಸ್ಕೃತ ಸಂಗೀತ ನಿರ್ದೇಶಕ. ಇವರು ಮೂಲತಃ ಶಿವಮೊಗ್ಗದವರು. ಇವರು ಕೆ.ಜಯರಾಮ್ ಮತ್ತು ಜಯಂತಿಯವರ ಪುತ್ರ. ಇವರ ತಂದೆ ಕೆ.ಜಯರಾಮ್‌ರವರು ರಂಗಭೂಮಿ ಕಲಾವಿದರು. ವಾಸುಕಿ ವೈಭವ್‌ರವರು ಓದಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ಇವರು ವಿದ್ಯಾಭ್ಯಾಸ ಮಾಡಿದ್ದು ಈಸ್ಟ್-ವೆಸ್ಟ್ ಶಾಲೆ ಮತ್ತು ಜನಸೇವಾ ವಿದ್ಯಾಕೇಂದ್ರದಲ್ಲಿ. ಮುಂದೆ ಇವರು ಪಿ.ಯು.ಸಿ ಗೆ ಸುರಾನ ಕಾಲೇಜಿಗೆ ಸೇರ್ತಾರೆ ಮತ್ತು ಅಲ್ಲಿಯೇ ಇವರು ತಮ್ಮ ಬಿ.ಕಾಂ ಪದವಿಯನ್ನಾ ಮುಗಿಸಿಕೊಳ್ಳುತ್ತಾರೆ. ನಂತರ ಇವರು ದಯಾನಂದ ಸಾಗರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿಕೊಳ್ತಾರೆ. ಇವರು ತಮ್ಮ ಐದನೇ ವಯಸ್ಸಿನಿಂದಲೂ ತಮ್ಮ ತಂದೆಯವರ ಜೊತೆ ನಾಟಕಗಳನ್ನು ಮಾಡುತ್ತಾ ಬೆಳೆದವರು. ಇವರಿಗೆ ಸಂಗೀತವನ್ನು ಚಿಕ್ಕಂದಿನಿಂದಲೂ ಕೇಳುತ್ತಲೆ ಬೆಳೆದುದ್ದರಿಂದ ಸಂಗೀತ ಇವರ ಮೈ ಮನಸ್ಸುಗಳಲ್ಲಿ ತುಂಬಿಕೊಂಡಿತು.

 

ರಂಗಭೂಮಿ ಕುಟುಂಬದ ಕುಡಿ

ತಂದೆ ರಂಗಭೂಮಿ ಕಲಾವಿದರು. ಸೋದರಮಾವ ರಂಗಭೂಮಿ ಕಲಾವಿದರು, ಇವರ ಅಜ್ಜಿ ಇಂದಿರಾ ಕೇಶವನ್‌ರವರು ತಾವೆ ಸ್ವತಃ ದೇವರ ನಾಮಗಳನ್ನು ಬರೆದು ಹಾಡುತ್ತಿದ್ದರು. ವಾಸುಕಿ ವೈಭವ್ ಚಿಕ್ಕವರಿದ್ದಾಗ ಅವರನ್ನು ತೊಡೆಮೇಲೆ ಕೂರಿಸಿಕೊಂಡು ದೇವರ ನಾಮಗಳನ್ನು ಹೇಳಿಕೊಡುತ್ತಿದ್ದರು. ವೈಭವ್ ದೇವರನಾಮ ಕಲಿತ ಮೇಲೆ ಅವರಿಂದಲೇ ದೇವರ ಕೀರ್ತನೆಗಳನ್ನು ಹಾಡಿಸುತ್ತಿದ್ದರು. ಇವರಿಗೆ ಅಲ್ಲಿಂದಲೇ ಸಂಗೀತದ ಜ್ಞಾನ ಬೆಳೆಯುತ್ತಾ ಹೋಯಿತು ಮತ್ತು ಆಸಕ್ತಿಯೂ ಹೆಚ್ಚುತ್ತಾ ಹೋಯಿತು. ಹಾಡು ಮತ್ತು ನಟನೆ ಎರಡೂ ವಿದ್ಯಾಭ್ಯಾಸದ ಜೊತೆ ಜೊತೆಗೆ ಹವ್ಯಾಸವಾಗಿ ನಡೆಯುತ್ತಾ ಹೋಯಿತು. ಇಷ್ಟೆ ಅಲ್ಲದೇ ಇವರೇ ಕೆಲವು ನಾಟಕಗಳನ್ನು ನಿರ್ದೇಶನವನ್ನು ಮಾಡುತ್ತಾ ಬೆಳೆದರು.

 

ಪ್ರೇಮಕವಿಯ ಜೊತೆ ಸಂಗೀತ ಕಲಿಕೆ

ನಟನೆ ಮಾಡುತ್ತಾ ಜೊತೆಗೆ ಹಾಡುತ್ತಾ ಬಂದಿದ್ದ ವೈಭವ್‌ಗೆ ಈಗ ಬರೀ ಸಂಗೀತದ ಜೊತೆ ಸಾಗುವ ಕಾಲ ಬಂದಿತು. `ಕಂಸಾಳೆ ಕೈಸಾಳೆ’ಯಲ್ಲಿ ನಟಿಸುತ್ತಿದ್ದ ಸಮಯದಲ್ಲಿ ವಾಸುಕಿ ವೈಭವ್‌ರವರಿಗೆ ಸಂಗೀತ ನಿರ್ದೇಶಕ ಕೆ. ಕಲ್ಯಾಣ್‌ರವರ ಪರಿಚಯವಾಗುತ್ತೆ. ಆ ಪರಿಚಯ ಹಾಗೆ ಮುಂದುವರೆದು ಇವರು ಪಿ.ಯು.ಸಿ. ಓದುವ ಸಮಯದಲ್ಲಿ ಕೆ.ಕಲ್ಯಾಣ್‌ರವರ ಜೊತೆ ಸಹಾಯಕರಾಗಿ ಸೇರಿಕೊಳ್ಳುತ್ತಾರೆ. ಅಲ್ಲಿ ಇವರು ಕಲ್ಯಾಣ್‌ರವರ ಗೀತೆಗಳಿಗೆ ಟ್ರಾö್ಯಕ್ ಹಾಡುತ್ತಾ ಅವರು ಮಾಡುವ ಸಂಗೀತವನ್ನು ಕೇಳುತ್ತಾ. ಅವರ ಸಂಯೋಜನೆಗಳನ್ನು ನೋಡುತ್ತಾ ಮತ್ತು ಕಲಿಯುತ್ತಾ ಬೆಳೆಯುತ್ತಾರೆ. ಇವರ ಸಂಗೀತ ಜ್ಞಾನ ಹೆಚ್ಚು ಬೆಳೆಯಲು ಇವರಿಗೆ ಸಂಗೀತದ ಎಲ್ಲಾ ವಿಭಾಗಗಳಲ್ಲೂ ಇದ್ದ ಅತೀವ ಆಸಕ್ತಿಯಿಂದ. ಹಾಗಾಗಿಯೇ ಇವರು ಸಂಗೀತ ಲೋಕದ ದಿಗ್ಗಜರಾದ ವಿ.ಮನೋಹರ್‌ರವರು, ಪ್ರವೀಣ್ ಸ್ಟೀಫನ್‌ರವರು, ರಘು ದೀಕ್ಷಿತ್‌ರವರು, ಅನೂಪ್ ಸಿಳೀನ್‌ರವರು ಈ ಎಲ್ಲಾ ದಿಗ್ಗಜರಿಗೂ ಟ್ರಾö್ಯಕ್ ಮತ್ತು ಕೋರಸ್ ಹಾಡುವ ಅವಕಾಶ ಸಿಕ್ಕಿತು. ಅಲ್ಲಿ ಅಷ್ಟೂ ಜನ ಸಂಗೀತ ಮಾಂತ್ರಿಕರನ್ನು ನೋಡಿದ ವಾಸುಕಿ ವೈಭವ್ ಸಂಗೀತದ ಇನ್ನಷ್ಟು ಜ್ಞಾನವನ್ನು ಅವರಿಂದ ಗಳಿಸಿಕೊಂಡರು. ಅಲ್ಲಿಂದ ಸಂಗೀತ ಲೋಕದಲ್ಲಿ ಇನ್ನೊಂದು ಧೃವತಾರೆ ಮಿನುಗೋಕೆ ಶುರುವಾಯ್ತು.

 

ಸಂಗೀತದ ಅಲೆಯ ಮೇಲೆ ತೇಲಬೇಕು

ನಾನು ಯಾವುದೇ ಸಿನಿಮಾದ ಸಂಗೀತವಾಗಲೀ, ಯಾವ ಸಂಗೀತ ನಿರ್ದೇಶಕರ ಸಂಗೀತವಾಗಲಿ ಕೇಳಲು ಇಷ್ಟಪಡ್ತೀನಿ, ನನಗೆ ಇಂತಹದ್ದೇ ಸಂಗೀತವಾಗಬೇಕು ಇಂತಹವರದ್ದೇ ಸಂಗೀತ ಆಗಿರಬೇಕು ಅಂತೇನಿಲ್ಲಾ. ಅಥವಾ ನನಗೆ ಈ ಮೂಡ್‌ನಲ್ಲಿ ಸಂಗೀತ ಕೇಳಬೇಕು, ಇಂತಹ ಮೂಡ್‌ನಲ್ಲಿ ಸಂಗೀತ ಕೇಳಬಾರದು ಅಂತೇನೂ ಇಲ್ಲಾ. ನಾನು ಎಲ್ಲಾ ಮೂಡ್‌ನಲ್ಲೂ ಸಂಗೀತ ಕೇಳುತ್ತೇನೆ. ಜೀವನದಲ್ಲಿ ನನಗೆ ನನ್ನ ಅಜ್ಜಿ ಹಾಡುತಿದ್ದ ಜೋಗುಳ ನನ್ನ ಅತೀ ಇಷ್ಟದ ಸಂಗೀತ. ಅದು ನನ್ನ ಬದುಕಿನ ಸರ್ವ ಶ್ರೇಷ್ಠ ಸಂಗೀತ. ನಾನು ಹೆಚ್ಚಾಗಿ ಕೇಳಿಸಿಕೊಂಡಿದ್ದು ಬಿ.ವಿ.ಕಾರಂತರವರ `ಹಾಡಿದರೆ ಹಾಡಿದಂತಿರಬೇಕು’ ಎನ್ನುವ ಹಾಡು. ನನಗೆ ಯಾವಾಗಲೂ ಕಾಡುವ ಗೀತೆ ಅಂದರೇ ಬಿ.ವಿ.ಕಾರಂತರ ‘ಬಂದಾನೋ ಬಂದಾ ಸವಾರ, ಯಾವ ಊರಿನ ಸರದಾರ’. ಇದು ನಮ್ಮ ಮನೆಯ ಜೋಗುಳ ಪದ. ನನಗೂ ನನ್ನ ಅಜ್ಜಿ ಇದೇ ಹಾಡುತ್ತಿದ್ದರಂತೆ. ಆಮೇಲೆ ಇದೊಂದು ರಂಗಭೂಮಿಗೆ ರಾಷ್ಟ್ರಗೀತೆ ಇದ್ದಂತೆ.

 

ಸಂಗೀತ ಅಂದ್ರೆ..

ಸಂಗೀತ ಅಂದ್ರೆ.. ಅದೊಂದು ಭಾವನೆ.. ಅದೊಂದು ಭಾಷೆ ಅದೊಂದು ಎಕ್ಸ್‌ಪ್ರೆಷನ್. ಮಾತಿನಲ್ಲಿ ಹೇಳಲಾಗದ್ದನ್ನ ಅಥವಾ ಅರ್ಥ ಮಾಡಿಸಲಾಗದ್ದನ್ನ ಸಂಗೀತದ ಮೂಲಕ ಮುಟ್ಟಿಸಬಹುದು. ಮಾತಿಗೊಂದು ಸ್ವರ ಬೆರೆತರೆ ಎಷ್ಟು ಕೇಳಲು ಚಂದ ಅಲ್ಲವಾ? ಗಮನ ಎಲ್ಲೇ ಇದ್ದರೂ ಆ ಸ್ವರವನ್ನು ಕರೆದು ತನ್ನ ಕಿವಿಯೊಳಗೆ ತುಂಬಿಸಿಕೊಳ್ಳುತ್ತದೆ. ಅದು ಸಂಗೀತಕ್ಕಿರುವ ಶಕ್ತಿ. ಇನ್ನೂ ಹೇಳಬೇಕೆಂದರೆ ಅಳುವ ಕಂದ ಜೋಗುಳ ಕೇಳಿ ಮಲಗುವುದಿಲ್ಲವಾ ಹಾಗೆ ಅದು ಸಂಗೀತಕ್ಕಿರುವ ಶಕ್ತಿ ಅಲ್ಲವಾ, ಸಂಗೀತಕ್ಕೆ ಮೇಲು ಕೀಳಿಲ್ಲ ಪ್ರಾಣಿ.. ಸಸ್ಯ ಅಂತಿಲ್ಲಾ ಸಕಲ ಜೀವ ನಿರ್ಜೀವ ತೃಣ ಕಣದಲ್ಲೂ ಸಂಗೀತದ ದಾಹವಿದೆ. ಅವುಗಳು ಹಾಡುವುದು ಮತ್ತು ನುಡಿಸುವುದು ನಮಗೆ ಕೇಳಿಸಿಲ್ಲದಿರಬಹುದು.. ಕೇಳಿಸಿದ್ದು ಇಷ್ಟವಾಗದೆ ಇರಬಹುದು. ನನ್ನ ಪ್ರಕಾರ ಸಂಗೀತಾ ಎಲ್ಲೆಲ್ಲೂ ಇದೆ.  ಸಂಗೀತ ಅಂದರೇ ಇದೊಂದು ಭಾವನೆಗಳನ್ನು ಮುಟ್ಟಿಸುವ ಸಾಧನ. ಮಾತು ಅರ್ಥವಾಗುವುದು ಇಷ್ಟೇ, ಮೌನ ಅರ್ಥವಾಗುವುದು ಬೇಕಾದಷ್ಟು. ಆದರೇ ಸಂಗೀತ ಹಾಗಲ್ಲ ಅದೇ ಮಾತನ್ನು ಸಂಗೀತದ ಮೂಲಕ ಹೇಳಿದರೆ ನಿಮ್ಮಲ್ಲಿ ಬದಲಾವಣೆಗಳಾಗುತ್ತವೆ. ಮೌನಕ್ಕೆ ಸಂಗೀತ ಬೆರೆಸಿ ತೋರಿಸಿದರೇ ಏನು ಅರ್ಥ ಆಗಬೇಕೋ ಅದೇ ಅರ್ಥವಾಗುತ್ತೆ ಅಲ್ಲವೇ.. ಹಾಗೆ ಸಂಗೀತಕ್ಕೇ ವ್ಯಾಪ್ತಿನೇ ಇಲ್ಲಾ ಇರುವುದು ಏಳು ಸ್ವರವಾದರೂ ನುಡಿಯುತಲಿರುವುದು ಯುಗ ಯುಗ ಉರುಳುತಲಿದ್ದರೂ ಅನ್ನುವ ಹಾಗೆ ಸಂಗೀತಕ್ಕೆ ಕೊನೆ ಇಲ್ಲಾ. ಸಂಗೀತದ ಎಲ್ಲೇ ನನಗೆ ಗೊತ್ತೆ ಇಲ್ಲಾ.

 

ಸಿನಿಮಾ ಸಂಗೀತ ನಿರ್ದೇಶಕನಾಗಿದ್ದೇ ಅಚ್ಚರಿ

‘ರಾಮಾ ರಾಮಾ ರೇ’ ನಾನು ಮೊದಲು ಸಂಗೀತ ನಿರ್ದೇಶನ ಮಾಡಿದ ಸಿನಿಮಾ. ಇಡೀ ರಾಮಾ ರಾಮಾ ರೇ ಸಿನಿಮಾ ತಂಡ ನಾನು ಎಲ್ಲಾ ಒಂದೇ ಟೀಮ್. ನಾವೆಲ್ಲಾ ಆ ಸಿನಿಮಾ ಮಾಡುವ ಮೊದಲು ಎಲ್ಲರೂ ಒಂದೊದು ಕಡೆ ಕೆಲಸ ಮಾಡುತ್ತಿದ್ದೆವು. ನಾವೆಲ್ಲಾ ಆ ಸಿನಿಮಾ ಮಾಡುವ ಹೊತ್ತಿಗೆ ಹತ್ತದಿನೈದು ವರ್ಷದ ಗೆಳೆತನ. ಹಾಗಾಗಿ ನಾವೆಲ್ಲ ಒಟ್ಟಿಗೆ ಸೇರಿ ಆ ಸಿನಿಮಾ ಮಾಡಿದ್ದು. ಅದರಲ್ಲಿ ನಿರ್ದೇಶಕ ಸತ್ಯಪ್ರಕಾಶ್‌ರವರು ನನ್ನ ಕೈಯಲ್ಲಿ ಸಂಗೀತ ಮಾಡಿಸಿದರು ನನಗೆ ಸಿನಿಮಾ ಸಂಗೀತದ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲಾ. ನಿರ್ದೇಶಕರು ಧೈರ್ಯ ತುಂಬಿ ಮಾಡಿಸಿದರು ನಾನು ಮಾಡಿದೆ. ಅದರಲ್ಲಿನ ಕೇಳು ಪಾರ್ಥ ಹೇಳು ಕೃಷ್ಣ. ಈ ಹಾಡು ನನಗಿಷ್ಟದ ಹಾಡು. ಈ ಹಾಡು ಆ ಸಮಯದಲ್ಲಿ ಬಹಳ ಹಿಟ್ ಆಯಿತು. ಸಿನಿಮಾ ಕೂಡ ಹಿಟ್ ಆಗಿ ಇಡೀ ಟೀಮ್‌ಗೆ ಒಳ್ಳೆ ಹೆಸರು ತಂದುಕೊಟ್ಟಿತು.

 

ಸಂಗೀತದ ತಾಕತ್ತದು

ನಾನು ಸ್ವಲ್ಪ ದಿನದ ಹಿಂದೆ ನನ್ನ ಮನೆಯವರ ಜೊತೆ ಶಾಪಿಂಗ್ ಮಾಲ್ ಒಂದಕ್ಕೆ ಹೊಗಿದ್ದೆ. ಬಹುಶಃ ಆ ಮಾಲ್‌ನವರು ನಾನು ಬಂದಿರುವುದನ್ನು ನೊಡಿ ನನ್ನನ್ನು ಗುರುತು ಹಿಡಿದು ನನ್ನದೇ ಹಾಡನ್ನು ಹಾಕಿದರು. ನಾನು ಸುಮ್ಮನೆ ಕೇಳುತ್ತಾ ನಡೆಯುತ್ತಿದ್ದೆ. ನಮ್ಮ ಮನೆಯವರಿಗೆ ಮೊದ-ಮೊದಲು ಅದು ಗೊತ್ತಾಗಲಿಲ್ಲಾ ಆಮೇಲೆ ನಾನು ಹಾಡಿನ ಜೊತೆ ದನಿಗೂಡಿಸುತ್ತಾ ನಡೆಯುತ್ತಿದ್ದೆ. ಅವರು ನಾನು ಹಾಡಿನ ಜೊತೆಗಿದ್ದನ್ನು ನೋಡಿ ಆಮೇಲೆ ಆ ಹಾಡು ನನ್ನದು, ನಾನು ಬಂದಮೇಲೆ ಹಾಕಿದ್ದು ಎಂದು ಗೊತ್ತಾಗಿ ಅವರೂ ತುಂಬಾ ಖುಷಿಪಟ್ಟರು. ನೋಡಿ ಒಂದು ಹಾಡು ಎಷ್ಟು ಜನರಿಗೆ ಖುಷಿ ಕೊಟ್ಟಿತು ಎಷ್ಟು ಜನರನ್ನು ರೋಮಾಂಚನಗೊಳಿಸಿತ್ತು. ಇದು ಸಂಗೀತದ ತಾಕತ್ತು ಅಲ್ಲವಾ…..!? 

 

ಇಂದು ಸಂಗೀತ ಲೋಕದಲ್ಲಿ ವಾಸುಕಿಗೆ ಕೈ ತುಂಬಾ ಕೆಲಸವಿದೆ ಕೈ ತುಂಬಾ ಸಿನಿಮಾಗಳಿವೆ. ಇವರಿಗೆ ನಟನೆ ಗೊತ್ತು.. ಹಾಡುವುದು ಗೊತ್ತು.. ಸಂಗೀತ ಮಾಡುವುದು ಗೊತ್ತು ಈ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಕೈಚಳಕ ತೋರಬಲ್ಲ ಪ್ರತಿಭಾವಂತ ವ್ಯಕ್ತಿ. ಈಗ ಚಂದನವನದಲ್ಲಿ ಬಿಡುವಿಲ್ಲದ ನಿರ್ದೇಶಕರಲ್ಲಿ ಇವರೂ ಒಬ್ಬರು. ಇವರ ಗೆಲುವಿನ ಓಟ ಹೀಗೆ ಓಡುತ್ತಿರಲಿ.

Share this post:

Related Posts

To Subscribe to our News Letter.

Translate »