Sandalwood Leading OnlineMedia

ಕಲರ್ಸ್ ಕನ್ನಡದಲ್ಲಿ 2 ಹೊಸ ಸೀರಿಯಲ್ : ಶ್ರುತಿ ಮತ್ತು ಸಪ್ತಮಿ ಗೌಡರಿಂದ ಪರಿಚಯ

ವೀಕ್ಷಕರ ಅಚ್ಚುಮೆಚ್ಚಿನ ಶೋ ಬಿಗ್‌ ಬಾಸ್‌ ಮುಕ್ತಾಯವಾಗುತ್ತಿದೆ. ಆ ಸಮಯವನ್ನು ತುಂಬಲು ಕಲರ್ಸ್‌ ಕನ್ನಡದ ಎರಡು ಧಾರಾವಾಹಿಗಳು ರೆಡಿಯಾಗಿವೆ.  ಕನ್ನಡ ವೀಕ್ಷಕರ ಮನಸಿಗೆ ಲಗ್ಗೆಯಿಡುವ ಕತೆಗಳನ್ನು ಹೇಳುತ್ತಾ ಬಂದಿರುವ ಕಲರ್ಸ್ ಕನ್ನಡ ಚಾನೆಲ್, ಇದೀಗ ಮತ್ತೆರೆಡು ಹೊಸ ಧಾರಾವಾಹಿಗಳನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜನವರಿ 27ರಂದು ಶುರುವಾಗಲಿವೆ. ಜೋಡಿ ಕತೆಗಳಾದ ಡಿವೋರ್ಸ್ ಲಾಯರ್ ಮದುವೆ ಕತೆ ‘ವಧು’ ರಾತ್ರಿ 9.30ಕ್ಕೆ ಪ್ರಸಾರವಾದರೆ, ಕಾಂಟ್ರಾಕ್ಟ್ ಮದುವೆ ಕತೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.

ವಧು

ಸಂಬಂಧಗಳನ್ನು ಪ್ರೀತಿಸೋ, ಅಷ್ಟೇ ಗೌರವಿಸುವ ‘ವಧು’ ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದ್ರೂ ತಪ್ಪಾಗಲ್ಲ. ಗಂಡ ಹೆಂಡ್ತಿ ನಡುವೆ ಬಿರುಕು ಮೂಡಿ ಡಿವೋರ್ಸ್ ಕೇಳಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವ್ರನ್ನ ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ. ಹೀಗಿರುವಾಗ ಒಂದು ಮಹತ್ವದ ಕೇಸು ಎಲ್ಲವನ್ನೂ ತಲೆಕೆಳಗು ಮಾಡುತ್ತದೆ. ಮೋಸ್ಟ್ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಸಾರ್ಥಕ್ ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ಡಿವೋರ್ಸ್ ಕೇಸ್ ಫೈಲ್ ಮಾಡಿದಾಗ ವಧು ಹತ್ತಿರ ಸಹಾಯ ಕೋರಿ ಬರ್ತಾನೆ. ಈ ವೇಳೆ ಕತೆ ಕುತೂಹಲಕರ ತಿರುವು (ಟರ್ನ್) ಪಡೆಯುತ್ತದೆ.

 

ಸಂಬಂಧಗಳನ್ನು ಪರೀಕ್ಷೆಗೊಳಪಡಿಸುವ ‘ವಧು’ ಧಾರಾವಾಹಿಯು ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟವನ್ನು ಹೇಳುತ್ತದೆ. ಪ್ರೀತಿ, ಮೋಸ ಮತ್ತು ನಂಬಿಕೆಗಳು ನಮ್ಮನ್ನು ಹೇಗೆಲ್ಲಾ ಘಾಸಿಗೊಳಿಸಬಹುದೆಂಬುದನ್ನು ಬಿಡಿಸಿಡುತ್ತದೆ. ತನ್ನ ಭಾವನೆಗಳ ಜೊತೆಗೆ ಗುದ್ದಾಡುತ್ತಲೇ ತನಗೆ ಸಿಕ್ಕಿರುವ ಈ ಹೊಸ ಕೇಸನ್ನು ವಧು ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ ಮತ್ತು ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಕೇಸ್ ಬದಲಾಯಿಸುತ್ತಾ ಅನ್ನುವುದೇ ಕತೆಯನ್ನು ಮುನ್ನೆಡೆಸುವ ಎಳೆ. ಹೆಸರಾಂತ ಕಲಾವಿದರಾದ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಅಭಿನಹಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ಲಕ್ಷಣ ಧಾರಾವಾಹಿ ಖ್ಯಾತಿಯ ಅಭಿಷೇಕ್‌ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಲಿದ್ದಾರೆ. ಕುತೂಹಲ ಮತ್ತು ನಾಟಕೀಯ ಸನ್ನಿವೇಶಗಳ ಸಂಗಮವಾಗಿರುವ ‘ವಧು’ ವೀಕ್ಷಕರ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ.ಈಗಾಗಲೇ ಪ್ರೊಮೊ ಮೂಲಕ ಸಿಎಸ್ ಪಿ ಪಾತ್ರ ಎಲ್ಲರ ಮನಸನ್ನ ಗೆದ್ದಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಯಜಮಾನ

ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ.

ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ದ ಕತೆಯನ್ನು ಬೆಳೆಸುತ್ತಾ ಹೋಗುವ ತಂತು. ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಅಥವಾ ಅವರ ವ್ಯಕ್ತಿತ್ವದಲ್ಲಿರುವ ಭಿನ್ನತೆಯೇ ಅವರನ್ನು ದೂರಾಗಿಸುತ್ತದೆಯಾ? ಉತ್ತರಕ್ಕೆ ಸಂಚಿಕೆಗಳನ್ನು ಕಾದು ನೋಡಬೇಕು. ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಇಲ್ಲಿದ್ದಾರೆ. ‘ವಧು’ ಮತ್ತು ‘ಯಜಮಾನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಹೊಸ ಸಂಕೀರ್ಣತೆಯನ್ನು ಎಳೆಎಳೆಯಾಗಿ ಬಿಡಿಸಿಡುವ ಹೊಸ ಬಗೆಯ ಕತೆಗಳು. 

ಕಲರ್ಸ್ ಕನ್ನಡ

ಕಲರ್ಸ್ ಕನ್ನಡ ಒಂದು ಕುಟುಂಬ ಮನರಂಜನಾ ಚಾನಲ್ ಆಗಿದ್ದು, ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುಣಮಟ್ಟದ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಒದಗಿಸುತ್ತದೆ. ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ನಿನಗಾಗಿ, ದೃಷ್ಟಿಬೊಟ್ಟು, ಕರಿಮಣಿ, ನೂರು ಜನ್ಮಕೂ, ಗಿಚ್ಚಿ ಗಿಲಿ ಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್‌ಸ್ಟಾರ್, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್ ಮತ್ತು ಬಿಗ್ ಬಾಸ್ ಕನ್ನಡ ಚಾನಲ್‌ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲವು.

Share this post:

Related Posts

To Subscribe to our News Letter.

Translate »