![]()
ಚಿತ್ರ: ಉಸಿರು
ನಿರ್ಮಾಣ: LAKSHMI HARISH
ನಿರ್ದೇಶನ: ಪ್ರಭಾಕರ್
ತಾರಾಗಣ: ತಿಲಕ್ ಶೇಖರ್, ಪ್ರಿಯಾ ಹೆಗ್ಡೆ, ರಾಘು ರಾಮನಕೊಪ್ಪ, ಬಲ ರಾಜವಾಡಿ, ಸಂತೋಷ್ ನಂದಿವಾಡ, ಅಪೂರ್ವ ನಾಗರಾಜ್ ಮುಂತಾದವರು
ಕನ್ನಡದಲ್ಲಿ ಹೊಚ್ಚ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಕಥೆಯನ್ನು ಆಸಕ್ತಿದಾಯಕವಾಗಿ ಹೇಳುವ ನಿರ್ದೇಶಕರು ಹುಟ್ಟಿಕೊಳ್ಳುತ್ತಲೇ ಇದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಪ್ರಭಾಕರ್. ಹೌದು `ಉಸಿರು’ ಚಿತ್ರದ ಮೂಲಕ ಪ್ರಭಾಕರ್ ತಮ್ಮ ಪ್ರತಿಭಾ ಪ್ರಭೆಯನ್ನು ಬೀರಿದ್ದಾರೆ. ಹಾಗಾದರೆ ಉಸಿರಿನಲ್ಲಿ ಇರುವುದಾದರೂ ಏನು? ಉತ್ತರ ಇಲ್ಲಿದೆ.
ಅವನಿಗೆ ಕೆಲಸದ ಮೇಲೆ ಆಸಕ್ತಿಯೇ ಹೊರಟು ಹೋಗಿರುತ್ತದೆ. ತನ್ನ ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂದು ಸ್ಪಷ್ಟವಾಗಿರುತ್ತದೆ. ಹಾಗಾಗಿ, ಏನೋ ಬೇಕಾಬಿಟ್ಟಿ ಕೆಲಸ ಮಾಡುತ್ತಿರುತ್ತಾನೆ. ಎಸ್ಟೇಟ್‌ನಲ್ಲಿ ಹೆಣ ಬಿದ್ದಿರುವಾಗ, ಅದನ್ನು ತನಿಖೆ ಮಾಡುವುದು ಬಿಟ್ಟು, ಪೇದೆಯನ್ನು ಕರೆದುಕೊಂಡು ‘ಕಾಂತಾರ’ ಸಿನಿಮಾ ನೋಡಲು ಹೋಗುತ್ತಾನೆ. ಇನ್ನೊಮ್ಮೆ ಇನ್ನೊಂದು ಕೊಲೆಯಾದಾಗ, ಹೆಣವನ್ನು ಪೋಸ್ಟ್ ಮಾರ್ಟಂಗೆ ಕಳಿಸಿ, ಭಾರತ-ಪಾಕಿಸ್ತಾನ ಮ್ಯಾಚ್ ನೋಡಲು ಕೂರುತ್ತಾನೆ. ಹೀಗಿರುವವನು, ಇದ್ದಕ್ಕಿದ್ದಂತೆ ಬದಲಾಗುತ್ತಾನೆ. ಅವನಿಗೆ ಕೆಲಸದ ಮೇಲೆ ದಿಢೀರನೆ ಆಸಕ್ತಿ ಬಂದು ಬಿಡುತ್ತದೆ. ತನ್ನ ವ್ಯಾಪ್ತಿಯಲ್ಲಾಗುತ್ತಿರುವ ಕೊಲೆಗಳ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾನೆ. 10 ವರ್ಷಗಳಿಂದ ಆಗುತ್ತಿರುವ ಗರ್ಭಿಣಿಯರ ಕೊಲೆಯನ್ನು ಬೇಧಿಸಲು ಮುಂದಾಗುತ್ತಾನೆ.
‘ಉಸಿರು’ ಒಂದು CRIME ಥ್ರಿಲ್ಲರ್ ಚಿತ್ರ. ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಚಿತ್ರದ ಪ್ಲಾಟ್. ಈ ಎಳೆಗೆ ಇನ್ನಷ್ಟು ಎಳೆಗಳನ್ನು ಸೇರಿಸಿ ನಿರ್ದೇಶಕರು ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ತನ್ನ ತಾಯಿಯನ್ನು ಕೊಂದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಯುವಕನ ಕಥೆ. ಗರ್ಭಿಣಿಯರ ನಿಗೂಢ ಮಿಸ್ಸಿಂಗ್ ಪ್ರಕರಣ ಎರಡೂ ಬ್ಲೆಂಡ್ ಆಗಿದೆ. ಒಂದು ಕಾಡುವ, ಸೀಟಿನಂಚಿಗೆ ಕೂರಿಸಿಕೊಳ್ಳಬಹುದಾದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಉಸಿರು. ಮೊದಲಾರ್ಧ ಪಾತ್ರ ಮತ್ತು ಪರಿಸರವನ್ನು RIGISTER ಮಾಡುವ ನಿರ್ದೇಶಕರು, ದ್ವಿತೀಯಾರ್ಧದಲ್ಲಿ ಚಿತ್ರಕ್ಕೊಂದು ವೇಗ ನೀಡಿದ್ದಾರೆ. ಗಲಾಟೆ, ಹಿಂಸೆ, ರಕ್ತಪಾತ, ಹೊಡೆದಾಟ, ಭಾವನೆ, ನೋವು-ನಲಿವು, ಪ್ರೇಮ-ಪ್ರಣಯ ಎಲ್ಲವನ್ನು ಸೇರಿಸಿ `ಉಸಿರು’ ಬಿಗಿಹಿಡಿದು ನೋಡುವಂತೆ ಚಿತ್ರವನ್ನು ಪ್ರಸೆಂಟ್ ಮಾಡಲಾಗಿದೆ. ಕೊಲೆಗಾರನನ್ನು ‘ಉಸಿರು 2’ ಚಿತ್ರದಲ್ಲಿ ನೋಡಿಕೊಳ್ಳಿ ಎನ್ನುವ ನಿರ್ದೇಶಕರು, ಈ ಮೂಲಕ ಎರಡನೆ ಭಾಗ ಬರುವವರೆಗೂ ಉಸಿರು ಬಿಗಿ ಹಿಡಿದು ಕಾಯುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ.
ಈ ಚಿತ್ರದ ಗಮನಸೆಳೆಯುವ ಅಂಶವೆ0ದರೆ ಅದು ತಿಲಕ್. ಅವರಿಲ್ಲಿ ಸಾಕಷ್ಟು ಮಾಗಿದಂತೆ ಕಾಣುತ್ತಾರೆ. ಪಾತ್ರಕ್ಕೆ ತಕ್ಕ ಹಾಗೆ ನಟಿಸಿದ್ದಾರೆ. ಪ್ರಿಯಾ ಹೆಗ್ಡೆಗೆ ಎರಡು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಬಲ ರಾಜವಾಡಿ, ರಾಘು ರಾಮನಕೊಪ್ಪ ತಮ್ಮ ಕೆಲಸವನ್ನು ಸೂಪರ್ ಆಗಿ ಮುಗಿಸಿದ್ದಾರೆ. ಸಂತೋಷ್ ನಂದಿವಾಡ ಅವರಿಗೆ ನಾಯಕ ನಟನಾಗುವ ಎಲ್ಲಾ ಅರ್ಹತೆಯಿದೆ. ಅಪೂರ್ವ ನಾಗರಾಜ್ ಅಭಿನಯದಲ್ಲಿ ಇನ್ನಷ್ಟು ಮಾಗಬೇಕಿದೆ. ಮೋಹನ್ ರಾಮ್ ಛಾಯಾಗ್ರಹಣ ನಯನ ಮನೋಹರ. ಗಣೇಸ್ ನಾರಾಯಣನ್ ಸಂಗೀತ ಚಿತ್ರವನ್ನು ಅಲ್ಲಲ್ಲಿ ಎದ್ದು ನಿಲ್ಲಿಸುತ್ತದೆ. ಕೊನೆಯದಾಗಿ; ಇಡೀ ಚಿತ್ರದ ಬೆನ್ನಿಗೆ ನಿಂದ ಗಟ್ಟಿಗಿತ್ತಿ ನಿರ್ಮಾಪಕಿಯಾದ lakshmi hareesh ಅವರ ಸಿನಿಮಾ ಪ್ರೇಮಕ್ಕೆ ಸೆಲ್ಯೂಟ್. ಅವರಿಂದ ಇನ್ನಷ್ಟು ಇಂತಹ ಉತ್ತಮ ಕೆಲಸಗಳಾಗಲಿ.
