ರಾಮಾ ರಾಮಾ ರೇ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಥಿಯೇಟರ್ ನಲ್ಲಿ ಬರೋಬ್ಬರಿ 100 ದಿನ ಪೂರೈಸಿದ್ದ ಈ ಚಿತ್ರ ಸಿದ್ಧ ಪಕ್ಕಕ್ಕಿಟ್ಟು ತಯಾರಿಸಲಾಗಿತ್ತು. ಹೊಸ ತಾರಾಗಣ, ಹೊಸ ಕಥೆಯನ್ನು ಸತ್ಯಪ್ರಕಾಶ್ ಸಿನಿಮಾಪ್ರೇಮಿಗಳಿಗೆ ಉಣಬಡಿಸಿದ್ದರು.ಪೊಲೀಸರನ್ನು ಕೊಂದು ನೇಣು ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳುವುದರಿಂದ ಆರಂಭವಾಗುವ ಸಿನಿಮಾ, ಅವನು ತಾನಾಗಿಯೇ ಜೈಲಿಗೆ ಬಂದು ಶರಣಾಗುವ ದೃಶ್ಯದೊಂದಿಗೆ ಮುಗಿಯುತ್ತದೆ. ಇದರ ಮಧ್ಯೆ ಬದುಕಲು ಅವನು ನಡೆಸುವ ಹೋರಾಟ, ಪ್ರೇಮಿಗಳ ಕಷ್ಟ, ಸೈನಿಕನ ಪತ್ನಿಯ ಪ್ರಸವ ವೇದನೆ ಎಲ್ಲವನ್ನೂ ನಿರ್ದೇಶಕ ಸತ್ಯ ಪ್ರಕಾಶ್ ಚೆಂದವಾಗಿ ಕಟ್ಟುಕೊಟ್ಟಿದ್ದರು.
ಅಕ್ಟೋಬರ್ 21 2016ರಂದು ರಿಲೀಸ್ ಆಗಿದ್ದ ಈ ಚಿತ್ರ ಆರು ವರ್ಷದ ಬಳಿಕ ಟಿವಿಯಲ್ಲಿ ಪ್ರದರ್ಶನವಾಗುತ್ತಿದೆ.ದಸರಾ ಹಬ್ಬದ ಪ್ರಯುಕ್ತ ರಾಮಾ ರಾಮಾ ರೇ ಚಿತ್ರ ಜೀ ಪಿಕ್ಚರ್ಸ್ ನಲ್ಲಿ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಸತ್ಯಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶನದಲ್ಲಿ ನಟರಾಜ್, ಧರ್ಮಣ್ಣ ಕಡೂರ್, ಎಂ.ಕೆ.ಮಠ, ಶ್ರೀಧರ್, ರಾಧಾ ರಾಮಚಂದ್ರ, ಪ್ರಿಯಾ ಷಟಮರ್ಶನ್, ಶ್ರೀಧರ್ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು. ತಾಂತ್ರಿಕತೆಯಿಂದಲೂ ಗಮನ ಸೆಳೆದಿದ್ದ ರಾಮಾ ರಾಮಾ ರೇ ಕನ್ನಡದ ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಇಂತಹ ಚಿತ್ರವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿ ನೋಡಬಹುದು.