ಮಲಯಾಳಂನಲ್ಲಿ ಇತ್ತೀಚೆಗೆ ಬಂದ ಭಾರೀ ಸದ್ದು ಮಾಡಿದ ಸಿನಿಮಾ ‘ಮಾರ್ಕೊ’. ಉನ್ನಿ ಮುಕುಂದನ್ ನಟನೆಯ ಆಕ್ಷನ್ ಥ್ರಿಲ್ಲರ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 30 ಕೋಟಿ ರೂ. ಬಜೆಟ್ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ಸಿನಿಮಾ ಓಟಿಟಿಗೆ ಬರಲು ಸಜ್ಜಾಗಿದೆ.
ಬಾಕ್ಸಾಫೀಸ್ ಕೊಳ್ಳೆ ಹೊಡೆದ ‘ಮಾರ್ಕೊ’ ಸಿನಿಮಾ ಇದೀಗ ಓಟಿಟಿಗೆ ಬರ್ತಿದೆ. ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಫೆಬ್ರವರಿ 14ಕ್ಕೆ ಸೋನಿಲಿವ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿತ್ತು. ಹಾಗಾಗಿ ಓಟಿಟಿಯಲ್ಲಿ ಕನ್ನಡ ವರ್ಷನ್ ಕೂಡ ನೋಡಲು ಸಿಗುತ್ತದೆ. 5 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರಲಿದೆ.
ಕ್ರಿಸ್‌ಮಸ್ ಸಂಭ್ರಮದಲ್ಲಿ ‘ಮಾರ್ಕೊ’ ಸಿನಿಮಾ ತೆರೆಗೆ ಬಂದಿತ್ತು. ಅನೀಫ್ ಅದೆನಿ ನಿರ್ದೇಶನದ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗಿತ್ತು. ಮೋಹನ್ ಲಾಲ್ ನಟನೆಯ ‘ಬರೋಜ್’ ಸಿನಿಮಾ ಪೈಪೋಟಿ ನಡುವೆಯೂ ‘ಮಾರ್ಕೊ’ ಸದ್ದು ಮಾಡಿತ್ತು. ಉನ್ನಿ ಮುಕುಂದನ್ ಖಡಕ್ ಲುಕ್‌ನಲ್ಲಿ ಅಬ್ಬರಿಸಿ ಗಮನ ಸೆಳೆದಿದ್ದರು. ಸಿದ್ದಿಕಿ, ಜಗದೀಶ್, ಕಬೀರ್ ದುಹಾನ್ ಸಿಂಗ್, ಅನ್ಸೋನ್ ಪಾಲ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಟೋನಿ ಹಾಗೂ ಜಾರ್ಜ್ ಚಿನ್ನದ ಕಳ್ಳಸಾಗಣೆ ಮಾಫಿಯಾ ನಡೆಸುತ್ತಿರುತ್ತಾರೆ. ಇನ್ನು ಜಾರ್ಜ್‌ನ ಮಗ ವಿಕ್ಟರ್ ಅಂಧ ಆಗಿರುತ್ತಾನೆ. ವಿಕ್ಟರ್ ಹಾಗೂ ಆತನ ಸ್ನೇಹಿತ ವಾಸಿಮ್‌ನನ್ನು ಕೆಲವರು ಕೊಲ್ಲುತ್ತಾರೆ. ಈ ವಿಚಾರ ಲಂಡನ್‌ನಲ್ಲಿರುವ ಮಾರ್ಕೊಗೆ ಗೊತ್ತಾಗುತ್ತದೆ. ವಿಕ್ಟರ್ ಸಾವಿಗೆ ಸೇಡು ತೀರಿಸಿಕೊಳ್ಳಲು ಮಾರ್ಕೊ ಭಾರತಕ್ಕೆ ಬರ್ತಾನೆ. ಇನ್ನು ಮರಿಯಾ ಜೊತೆ ಮಾರ್ಕೊಗೆ ಮದುವೆ ನಿಶ್ಚಯವಾಗಿರುತ್ತದೆ. ಅಷ್ಟಕ್ಕೂ ವಿಕ್ಟರ್‌ಗೂ ಮಾರ್ಕೊಗೂ ಏನು ಸಂಬಂಧ? ವಿಕ್ಟರ್ ಹತ್ಯೆಗೆ ಮಾರ್ಕೊ ಹೇಗೆ ಪ್ರತಿಕಾರ ತೀರಿಸಿಕೊಳ್ತಾನೆ? ಆತನ ಮದುವೆ ಕಥೆ ಏನಾಗುತ್ತದೆ? ಇದೆಲ್ಲದ್ದಕ್ಕೂ ಉತ್ತರ ಬೇಕು ಅಂದರೆ ‘ಮಾರ್ಕೊ’ ಸಿನಿಮಾ ನೋಡಬೇಕು.