Sandalwood Leading OnlineMedia

ಧಣಿವರಿಯದ ಬದುಕಿನಲ್ಲಿ ಸಾಗುತ್ತಲೇ ಇದೆ ಉಮಾಶ್ರೀ ಕಲಾ ಪಯಣ..!

ತೆರೆಮೇಲೆ ಅಭಿನಯ ಅಂದ್ರೇನು ಅಂತ ಕಲಿಯಬೇಕು ಅಂದ್ರೆ ಉಮಾಶ್ರೀ ಅವರ ಸಿನಿಮಾ, ಧಾರಾವಾಹಿಗಳನ್ನ ಕುಳಿತು ನೋಡಿದರೆ ಸಾಕು. ಪಾತ್ರವನ್ನು ನಟಿಸುವುದಲ್ಲ ಜೀವಿಸುವುದು ಹೇಗೆ ಎಂಬುದು ಅವರ ಅಭಿನಯದಿಂದ ತಿಳಿಯುತ್ತದೆ. ರಂಗಭೂಮಿಯಲ್ಲಿ ಕಲಿತವರು, ಅಂದಿನ ಕಾಲಕ್ಕೆ ಅತ್ಯುತ್ತಮ ನಟಿ ಎನಿಸಿಕೊಂಡವರು. ಇಂದಿಗೂ ಅವರ ನಟನೆಯೇ ಮೇಲುಗೈ. ಅವರ ಕಲಾಸೇವೆಗೆ ಡಾಕ್ಟರೇಟ್ ಕೂಡ ಬಂದಿದೆ. ಚಿತ್ತಾರದೊಂದಿಗೆ ತಮ್ಮ ರಂಗಭೂಮಿ, ಸಿನಿಮಾಗಳ ಅನುಭವ, ಕಲಾವಿದರೊಂದಿಗಿನ ಬಾಂಧವ್ಯದ ಬಗ್ಗೆ, ಬೇರೆಲ್ಲಿಯೂ ಹೇಳದಂತ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ಉಮಾದೇವಿ ಉಮಾಶ್ರೀಯಾಗಿದ್ದೇಗೆ..?

`ನನ್ನ ಹೆಸರು ಉಮಾದೇವಿ. ರಂಗಭೂಮಿ ನನ್ನನ್ನು ಕರೆದಿದ್ದು ಉಮಾಶ್ರೀ. ಉಮಾದೇವಿ ಆಗಿದ್ದಾಗ ಒಂದು ಹೊಸ ಹೊಳಲು ಬದುಕಿಗೆ ಸಿಕ್ಕಿತ್ತು. ೧೯೭೮ರಲ್ಲಿ ಬಣ್ಣ ಹಚ್ಚಿದ್ದು ನಾನು. ಮದುವೆಯಾಗಿದ್ದು ೧೯೭೫ರಲ್ಲಿ. ಹುಟ್ಟಿದ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲ. ನನ್ನ ಮಗ ಹೇಳುವ ಹಾಗೇ ನಾನೊಬ್ಬ ಅಲೆಮಾರಿ. ಒಂದೇ ಕಡೆ ನಿಂತವಳಲ್ಲ, ಒಂದೇ ಸಮನೇ ಪ್ರಯಾಣ ಮಾಡಿದವಳು. ವೃತ್ತಿ ಪ್ರಯಾಣಗಳು, ರಾಜಕೀಯ ಪ್ರಯಾಣಗಳು, ವೈಯಕ್ತಿಕ ಬದುಕಿನ ಪ್ರಯಾಣಗಳಲ್ಲಿಯೇ ಸಾಗಿದ್ದೇನೆ. ಮನೆ ಹೆಸರಿಗೆ ಆದರೆ ಈ ಬದುಕು ಕಟ್ಟಿಕೊಟ್ಟಿದ್ದು ಕಲಾ ಜಗತ್ತು.

* ನಿಮ್ಮ ಕಲೆಗೆ ಮೊದಲ ಚಪ್ಪಾಳೆ ಸಿಕ್ಕಿದ್ದು ಯಾವಾಗ..?

`ನಾನು ಗ್ರಾಮೀಣ ರಂಗಭೂಮಿ, ಹವ್ಯಾಸಿ ರಂಗಭೂಮಿ ಹಾಗೂ ವೃತ್ತಿ ರಂಗಭೂಮಿ, ಕೈಗಾರಿಕ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೀನಿ. ಇದರಲ್ಲಿ ಬಹಳಷ್ಟು ಜನ ಸಿಗುತ್ತಾರೆ. ಹವ್ಯಾಸಿ ರಂಗಭೂಮಿಯಲ್ಲಿ ನಾನು ರಂಗಸಂಪದ ತಂಡದಿಂದ ನಟಿಯಾಗಿದ್ದು. ಆಗ ನಾಗಾಭರಣ ಅವರು ಸಂಧ್ಯಾ ಬಾಳ್ಯ ಎಂಬ ನಾಟಕದ ನಿರ್ದೇಶಕರಾಗಿದ್ದರು. ಹವ್ಯಾಸಿ ರಂಗಭೂಮಿಗೆ ಬರುವುದಕ್ಕೂ ಮುನ್ನ ನಾನು ಪೌರಾಣಿಕ ರಂಗಭೂಮಿಯಲ್ಲಿ ನಟಿಯಾಗಿ ಕೆಲಸ ಮಾಡಿದ್ದೆ. ಯಾವಾಗ ಹವ್ಯಾಸಿ ರಂಗಭೂಮಿಗೆ ಬಂದೆ ಆಗ ಹಿನ್ನಲೆ ಗಾಯಕಿಯಾಗಿ ಬಂದೆ. ಹಿಂದೆ ಒಂದು ಗುಂಪಲ್ಲಿ ಕೂತು ಹಾಡುವುದು. ರಾಗಕ್ಕೆ ರಾಗ ಕೂಡಿಸಿ ಹಾಡುವುದು. ಒಂದು ದಿನ ನಾಗಾಭರಣ ಅವರ ನಾಟಕದಲ್ಲಿ ಪರವನ ಪಾತ್ರ ಮಾಡಿದ್ದ ರಾಮಮೂರ್ತಿಯವರಿಗೆ ಜ್ವರ ಬಂದು ಬಿಡುತ್ತೆ. ಮಾರ್ನಿಂಗ್ ಶೋಗೆ ಬರುವುದಕ್ಕೆ ಆಗುವುದಿಲ್ಲ. ಅಷ್ಟು ಹೊತ್ತಲ್ಲಿ ಆ ಪಾತ್ರ ಮಾಡುವುದಕ್ಕೆ ಯಾವ ನಟರನ್ನು ಹುಡುಕುವುದು ಎಂಬ ಟೆನ್ಶನ್ ಶುರುವಾಗಿತ್ತು. ನಾನಾಗ ಮಾತೇ ಬಾರದೆೆ ಇರುವಂತಹ ಹುಡುಗಿ. ನಂಗಾಗ ೧೯ ವರ್ಷ ಇರಬಹುದು. ಅಷ್ಟರೊಳಗೆ ೨೫ ನಾಟಕ ಮಾಡಿದ್ದೆ ಬಿಡಿ. ಅಲ್ಲಿ ಮರ್ಸಿವಿಟೇಕರ್ ಅಂತ ಮುಖ್ಯ ಸಿಂಗರ್ ಇದ್ರು. ಅವರೊಟ್ಟಿಗೆ ಮಾತಾಡುವಷ್ಟು ಧೈರ್ಯ ಇರಲಿಲ್ಲ. ಆದರೆ ಈ ಮೊದಲೇ ಆ ಪಾತ್ರದ ಬಗ್ಗೆ ನೋಡಿಕೊಂಡಿದ್ದೆ. ಮರ್ಸಿಗೆ ನಾನು ಈ ಪಾತ್ರವನ್ನು ನಾಳೆ ಮಾಡ್ತೀನಿ ಎಂದೆ. ರಿಹರ್ಸಲ್ ಇಲ್ಲ, ಏನಿಲ್ಲ ಹೇಗೆ ಮಾಡ್ತೀಯ ಅಂತ ಮರ್ಸಿ ಗಾಬರಿಯಾದ್ರು. ನೀವೂ ಹೇಳಿ ಮಾಡ್ತೀನಿ ಅಂದೆ. ಆಗ ಮರ್ಸಿ ನಾಗಾಭರಣ ಬಳಿ ಹೋಗಿ ಹೇಳಿದರು. ಕೇಳಿದ ಕೂಡಲೇ ಅವರಿಗೂ ಸಿಟ್ಟು ಬಂತು. ರಿಹರ್ಸಲ್ ಇಲ್ಲ ಎಂಥದು ಇಲ್ಲ, ಹಾಡು ಹೇಳುತ್ತಿದ್ದವಳು ಹೇಗೆ ಮಾಡ್ತಾಳೆ ಎಂದು ಕೈಯಲ್ಲಿದ್ದ ಟವೆಲ್ ಎಸೆದು ಹೊರಟೇ ಹೋದ್ರು. ಆಯ್ತು ಬೆಳಗ್ಗೆ ನಾಟಕ ಶುರುವಾಯ್ತು. ನಾನು ನೇರವಾಗಿ ಸ್ಟೇಜ್ ಮೇಲೆ ಬಂದೆ ಪಾತ್ರ ಮಾಡಿದೆ, ಚಪ್ಪಾಳೆ ಗಿಟ್ಟಿಸಿಕೊಂಡು ಒಳಗೆ ಹೋದೆ. ಹವ್ಯಾಸಿ ರಂಗಭೂಮಿಯಲ್ಲಿ ಮೊದಲನೇಯ ಪಾತ್ರ ಮಾಡಿದ್ದಂತದ್ದು ಅದು’

* ಉಮಾಶ್ರೀ ಅವರನ್ನು ಅದ್ಭುತ ನಟಿಯೆಂದು ಗುರುತಿಸಿದ್ದು ಯಾವಾಗ..?

`ಬಿ.ವಿ.ಕಾರಂತ್ ಅವರು ಭೂಪಾಲ್‌ನಿಂದ ಬಂದು ಇಲ್ಲೊಂದು ನಾಟಕ ನಿರ್ದೇಶನ ಮಾಡಿದ್ದರು. ಆಗ ಬೆಳ್ಳಿ ಪಾತ್ರ, ಪರವನ ಪಾತ್ರಗಳಿಗೆ ನಾನು ಗೆಸ್ಟ್ ಆರ್ಟಿಸ್ಟ್. ನನ್ನನ್ನ ದುಡ್ಡು ಕೊಟ್ಟು ಆ ಪಾತ್ರಕ್ಕೆ ಕರೆಸಿದ್ದರು. ನಾನು ಆಗ ರಿಹರ್ಸಲ್‌ಗೆಲ್ಲಾ ಹೋಗುವುದಕ್ಕೆ ಆಗ್ತಾ ಇರಲಿಲ್ಲ. ಯಾಕಂದ್ರೆ ನಾನು ತುಂಬಾ ಬ್ಯುಸಿ ಇದ್ದೆ. ಹಗಲು ರಾತ್ರಿ ನಾಟಕಗಳನ್ನು ಮಾಡಿದ್ದೀನಿ. ಒಂದೆರಡು ಸಲ ರಿಹರ್ಸಲ್ ಮಾಡಿ, ಪಾತ್ರವನ್ನು ನಿಭಾಯಿಸಿ ಬಂದು ಬಿಡುತ್ತಾ ಇದ್ದೆ. ಕಾರಂತರು ನನ್ನ ಬಗ್ಗೆ ಏನು ಅಂದುಕೊAಡರೋ ಗೊತ್ತಿಲ್ಲ. ಭೂಪಾಲ್‌ಗೆ ಹೋಗಿ ಇಂಟರ್ ವ್ಯೂ ಕೊಟ್ಟಾಗ ನನ್ನ ಹೆಸರನ್ನ ಹೇಳಿದ್ದರು. ನೀವೂ ಕನ್ನಡದಲ್ಲಿ ನಾಟಕ ಮಾಡಿ, ನಾಟಕೋತ್ಸವ ಮಾಡಿ ಬಂದ್ರಲ್ಲ, ಕನ್ನಡ ರಂಗಭೂಮಿಯಲ್ಲಿ ಯಾರೂ ಒಳ್ಳೆಯ ನಟ/ನಟಿ ಸಿಗುತ್ತಾರೆ ಅಂತ ನಿಮಗೆ ಅನ್ನಿಸಿದೆ ಎಂಬ ಪ್ರಶ್ನೆಯನ್ನು ಕಾರಂತರಿಗೆ ಕೇಳಿದ್ದರು. ಆಗ ಕಾರಂತರು, ನಟನಾಗಿ ಸಿ.ಆರ್.ಸಿಂಹ ಹಾಗೂ ನಟಿಯಾಗಿ ಉಮಾಶ್ರೀ ಅವರು ಕಾಣಿಸುತ್ತಾರೆ ಎಂದು ಹೇಳಿದ್ದರು. ಆಮೇಲೆ ಬಂದಾಗ ಹೋದಾಗೆಲ್ಲ ಮಾತಾಡುತ್ತಿದ್ದೆವು. ಒಳ್ಳೆಯ ಸಂಬಂಧ ಮುಂದುವರೆದಿತ್ತು’

* ಸೀರಿಯಲ್‌ನಲ್ಲೂ ಅಭಿನಯಿಸಿದ್ದೀರಿ..!

`ಮುಸ್ಸಂಜೆ ಕಥಾ ಪ್ರಸಂಗ, ದುರಾದೃಷ್ಟ ಹೆಣ್ಣು, ಕಿಚ್ಚು, ಅಮ್ಮ ನಿನಗಾಗಿ ಕೂಡ ಒಂದಷ್ಟು ಎಪಿಸೋಡ್‌ಗಳನ್ನ ಮಾಡಿದೆ. ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮಾಡ್ತಾ ಇದ್ದೀನಿ. ಆಗಾಗ ಅಲ್ಲೊಂದು ಇಲ್ಲೊಂದು ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದೀನಿ. ಸೀರಿಯಲ್‌ನಲ್ಲಿ ಹೆಚ್ಚು ತೊಡಗಿಸಿಕೊಂಡವಳಲ್ಲ. ನಾಟಕದಲ್ಲಿ ಇನ್ವಾಲ್ ಆದಂಗೆ ಅಲ್ಲಿ ಇನ್ವಾಲ್ ಆಗ್ತಾ ಇರಲಿಲ್ಲ. ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇನ್ವಾಲ್‌ಮೆಂಟ್ ಇತ್ತು. ಗ್ರಾಮೀಣ ಭಾಗದ ಜನ ಹೆಚ್ಚು ಸೀರಿಯಲ್ ನೋಡ್ತಾರೆ. ಬಡವರು, ಮಧ್ಯಮವರ್ಗದವರ ಬದುಕಿನಲ್ಲಿ ಏನು ನಡೆಯುತ್ತದೆಯೋ ಅದನ್ನೇ ಹೆಚ್ಚಾಗಿ ಸೀರಿಯಲ್ ತಂಡ ಕೂಡ ಕೊಡ್ತಾ ಇದೆ’

* ವಿಷ್ಣುವರ್ಧನ್ ಅವರೊಟ್ಟಿಗೆ `ಬಂಗಾರದ ಜಿಂಕೆ’ಯಲ್ಲಿ ನಟಿಸಿದ್ರಿ..!

`ಭರಣ, ಬಂಗಾರದ ಜಿಂಕೆ ಸಿನಿಮಾವನ್ನು ನಿರ್ದೇಶನ ಮಾಡಿದರು. ನನ್ನ ಮೊದಲ ಸಿನಿಮಾ ಪಟ್ಟಣಕ್ಕೆ ಬಂದ ಪತ್ನಿಯರು. ಆನಂತರ ಮರಳಿ ಗೂಡಿಗೆ, ಕುತೂಹಲವನ್ನು ಮಾಡಿದ್ದೆ. ಬಂಗಾರದ ಜಿಂಕೆಯಲ್ಲಿ ಒಂದು ಸಾಂಗ್ ಶೂಟಿಂಗ್‌ನಲ್ಲಿ ನಿಂತಿದ್ದೆ. ಬಹಳಷ್ಟು ದಿವಸ ಸಾಂಗ್ ಶೂಟಿಂಗ್‌ಗೆ ಕರೆದುಕೊಂಡು ಹೋಗಿದ್ದರು. ವಿಷ್ಣುವರ್ಧನ್ ಸರ್ ನಮ್ಮ ಜೊತೆಗೆಲ್ಲಾ ಚೆನ್ನಾಗಿಯೇ ಇದ್ರು. ಶೂಟಿಂಗ್‌ನಲ್ಲಿ ತುಂಬಾನೇ ಚೇಡಿಸ್ತಾ ಇದ್ರು. ನಂಗೆ ಮದುವೆಯಾಗಿ ಮಕ್ಕಳಿದ್ದದ್ದು ಅವರಿಗೆ ಗೊತ್ತಿತ್ತು. ಏನೋ ರೇಗಿಸಿದ್ದರು. ನಾನು ಕೂಡ ವಾಪಾಸ್ ಅವರಿಗೆ ಏನೋ ಅಂದುಬಿಟ್ಟಿದ್ದೆ. ಆಗ ಬಲವಾಗಿ ನನ್ನ ಕೆನ್ನೆಗೆ ಒಂದು ಏಟು ಹೊಡೆದಿದ್ದರು. ವಿಷ್ಣುವರ್ಧನ್ ಸರ್ ಕೈಯಿಂದ ಬಲವಾಗಿ ತಿಂದ ಮೇಲೆ ನಾನೊಬ್ಬ ಒಳ್ಳೆ ಕಲಾವಿದೆಯಾಗಿ ಬೆಳೆದೆ ಅನ್ನಿಸಿದೆ. ಹೊಡೆದಾಗ ನಂಗೆ ಕಣ್ಣಲ್ಲಿ ನೀರು ಬಂದಿತ್ತು. ಆಮೇಲೆ ಭಾರತೀಯವರು ಬಂದು ಹಾಗೆಲ್ಲ ಮಾಡಬಾರದು ನೀವೇನೋ ಅಂದಿದ್ದಕ್ಕೆ ಅವಳು ಅಂದಿದ್ದಾಳೆ ಅಂತ ನನಗೆ ಸಮಾಧಾನ ಮಾಡಿದ್ದರು. ಅವತ್ತು ನಾನು ಬರೀ ಜೂನಿಯರ್ ಆರ್ಟಿಸ್ಟ್ ಆಗಿದ್ದೆ. ಅಷ್ಟು ದೊಡ್ಡ ಹೀರೋ ಏನೋ ತಮಾಷೆ ಮಾಡಿದಾಗ ಮುಖದ ಮೇಲೆ ಹೊಡೆದಂಗೆ ಮಾತಾಡಿದರೆ ತಡೀತಾರಾ. ಅದಕ್ಕೆ ಹೊಡೆದಿದ್ದರು’

* ಕಾಶಿನಾಥ್ `ಅನುಭವ’ ಹೇಗಿತ್ತು..?

`೧೯ ನಾಟಕಗಳಲ್ಲಿ ೧೭ ನಾಟಕವನ್ನು ಆಗ ಉಮಾಶ್ರೀಯೇ ಮಾಡುತ್ತಿದ್ದದ್ದು. ಅಷ್ಟು ಡಿಮ್ಯಾಂಡ್ ಇತ್ತು. ಬೆಸ್ಟ್ ಆಕ್ಟರ್ ಎಂಬ ಅವಾರ್ಡ್ ನಾಟಕದಲ್ಲಿ ಸಾಕಷ್ಟು ತೆಗೆದುಕೊಂಡಿದ್ದೀನಿ. ಆಗ ವಿಜಯಮ್ಮ ಅವರು ಪುಟ್ಟಣ್ಣ ಕಣಗಾಲ್ ಅವರಿಗೆ ಇವಳು ಒಳ್ಳೆ ನಟಿ, ಸಿನಿಮಾದಲ್ಲಿ ಒಂದು ಒಳ್ಳೆ ಅವಕಾಶ ಕೊಡಿ ಎಂದು ರೆಕಮೆಂಡ್ ಮಾಡಿದ್ದರು. ಆ ಸಮಯದಲ್ಲಿ ನಂಗೆ ಸಿನಿಮಾ ಟೆಕ್ನಿಕ್ ಗೊತ್ತಿರಲಿಲ್ಲ. ಏನೇ ಪಾತ್ರ ಕೊಟ್ಟರು ಮಾಡ್ತಾ ಇದ್ದೆ ಅಷ್ಟೆ. ಕ್ಯಾಮೆರಾ ವ್ಯಾಪ್ತಿ ತುಂಬಾ ಕಡಿಮೆ ಇರುತ್ತದೆ. ನಾವೂ ನಾಟಕದವರು ಹೇಗೆ ಬೇಕೋ ಹಾಗೇ ಜಾಗವನ್ನು ಬಳಕೆ ಮಾಡಿಕೊಳ್ಳುತ್ತಾ ಇದ್ದೆವು. ನಿರ್ದೇಶಕರು ಹೇಳಿಕೊಟ್ಟು ಹೇಳಿಕೊಟ್ಟು ಸಾಕಾಗಿ ಹೋಗಿದ್ದರು. ನನಗೂ ಆ ಟ್ರಿಕ್ಸ್ ಅರ್ಥವಾಗಲಿಲ್ಲ. ಈ ಹುಡುಗಿ ಸಿನಿಮಾಗೆ ಲಾಯಕ್ಕಿಲ್ಲ, ರಂಗಭೂಮಿಗಷ್ಟೇ ಲಾಯಕ್ಕು ಅಂತ ಹೇಳಿ ಕಳುಹಿಸಿದ್ದರು. ಆದರೆ ಆಮೇಲೆ ಸಿನಿಮಾದಲ್ಲೂ ನಟಿಸುವುದನ್ನು ಚೆನ್ನಾಗಿಯೇ ಕಲಿತೆ. ಅನುಭವ ಸಿನಿಮಾದಲ್ಲಿ ನಾನು ಮಾಡಿದ ಪಾತ್ರಕ್ಕೆ ಬಹಳಷ್ಟು ಜನರನ್ನು ಕೇಳಿದ್ದರು. ಆದರೆ ಯಾರೂ ಕೂಡ ಒಪ್ಪಿಕೊಂಡಿರಲಿಲ್ಲ. ಪೊದೆ ಸೀನ್, ಗಂಡು ಹೆಣ್ಣು ಸೇರುವುದು, ನಟಿಗೆ ಆಮೇಲೆ ಅರಿವಾಗುವುದು, ಹೀಗೆ ಆ ಸೀನ್‌ಗಳೆಲ್ಲಾ ಇದ್ದಿದ್ದರಿಂದ ಯಾರೂ ಕೂಡ ಒಪ್ಪುತ್ತಾ ಇರಲಿಲ್ಲ. ಮುಕ್ತವಾಗಿ ಪಾತ್ರ ಮಾಡುವಂತವರು ಬೇಕಿತ್ತು. ಪಾತ್ರಕ್ಕೆ ತಕ್ಕನಾಗಿ ಅಭಿನಯಿಸಬೇಕು ಅಂತಾನೇ ನಮ್ಮನ್ನ ಹವ್ಯಾಸಿ ರಂಗಭೂಮಿಯಲ್ಲಿ ತಯಾರು ಮಾಡಿರುವುದು. ಕಾಶೀನಾಥ್ ಅವರು ನನ್ನ ನಾಟಕಗಳನ್ನ ನೋಡಿದ್ರು. ಈ ಹುಡುಗಿಗೆ ಸಾಮರ್ಥ್ಯ ಇದೆ ಎನಿಸಿತ್ತು. ಆಮೇಲೆ ನನ್ನ ಬಳಿ ಬಂದು ಕೇಳಿದ್ರು. ನೋಡಮ್ಮ ಪಾತ್ರ ಹೀಗಿದೆ. ನಾನು ಸುಮ್ಮನೆ ಸುಳ್ಳು ಹೇಳಲ್ಲ. ಯಾರು ಕೂಡ ಈ ಪಾತ್ರವನ್ನು ಮಾಡಲ್ಲ ಅಂತಿದ್ದಾರೆ. ನೀನಾದ್ರೂ ಮಾಡ್ತೀಯ ನೋಡು ಅಂದ್ರು. ನಾನದಕ್ಕೆ ಪಾತ್ರ ತಾನೇ ಅದರಲ್ಲೇನಿದೆ. ಸಿನಿಮಾದಲ್ಲಿ ಈ ಥರಾನೇ ಮಾಡಬೇಕು, ಆ ಥರದ ಪಾತ್ರಗಳನ್ನು ಮಾಡಬಾರದು ಎಂಬುದೆಲ್ಲ ನನಗೆ ಗೊತ್ತೆ ಇಲ್ಲ. ಸಿನಿಮಾದ ಒಳ ಹೊರಗು ನನಗೆ ಗೊತ್ತೆ ಇಲ್ಲ. ನಾನು ಆ ಫೀಲ್ಡ್ಗೆ ಹೋಗಿಲ್ಲ. ಬರೀ ರಂಗಭೂಮಿ ಅಂತ ಇದ್ದವಳು. ಪಾತ್ರ ತಾನೇ ಅದಕ್ಕೇನಂತೆ ಮಾಡ್ತೀನಿ ಬಿಡಿ ಎಂದೆ. ಮೂವತ್ತು ದಿನ ಕೆಲಸ ಮಾಡಿದೆ. ಒಂದು ಸಾವಿರ ರೂಪಾಯಿ ಕೊಟ್ರು. ಆ ಕಾಲಕ್ಕೆ ಬಹಳ ದೊಡ್ಡ ಅಮೌಂಟ್ ಅದಾಗಿತ್ತು. ಎರಡು ವರ್ಷಗಳ ಕಾಲ ಎಲ್ಲಾ ಥಿಯೇಟರ್‌ಗಳಲ್ಲಿ ಓಡಿತು. ಬಹಳ ಒಳ್ಳೆಯ ಹೆಸರು ಬಂತು. ಆ ಕಾಲಕ್ಕೆ ಕಾಶೀನಾಥ್ ಅವರು ನನ್ನನ್ನ ಬೆಳಕಿಗೆ ತಂದ್ರು. ಆಗಲೇ ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿತ್ತು.

* ಕಾಮಿಡಿ ಪಾತ್ರಗಳಿಗೆ ಬಂದಿದ್ದೇಗೆ..?

`ಮೊದಲೆಲ್ಲಾ ಪುರುಷರಿಂದ ತುಳಿತಕ್ಕೊಳಗಾದಂತ ಪಾತ್ರಗಳನ್ನೇ ಮಾಡುತ್ತಾ ಇದ್ದೆ. ನೆಗೆಟಿವ್ ಪಾತ್ರಗಳಿಗೆ ಜೀವ ತುಂಬುತ್ತಾ ಇದ್ದೆ. ಫಸ್ಟ್ ಟೈಮ್ ನನ್ನ ಉಮೇಶ್ ಅಣ್ಣನನ್ನ ಬಾಳೊಂದು ಉಯ್ಯಾಲೆ ಎಂಬ ಕಾಮಿಡಿ ಪಾತ್ರಕ್ಕೆ ಹಾಕಿದ್ದರು. ಮೆಂಟಲೀ ರಿಟೈಡ್ ಮಕ್ಕಳ ರೀತಿ ನಾವೂ ಪಾತ್ರ ಮಾಡಿದ್ದೆವು. ತುಂಬಾ ಚೆನ್ನಾಗಿ ಮೂಡಿ ಬಂದಿತ್ತು. ಆ ಸಿನಿಮಾವನ್ನು ಇಂದಿಗೂ ಹುಡುಕುತ್ತಾ ಇದ್ದೀನಿ ಇನ್ನು ಸಿಕ್ತಿಲ್ಲ’
* ಅಣ್ಣಾವ್ರ ಬ್ಯಾನರ್ ನಂಟು.. ಸಿನಿಮಾ ಜರ್ನಿ..?
`ಡಾ.ರಾಜ್‌ಕುಮಾರ್ ಹಾಗೂ ಪಾರ್ವತಕ್ಕ ಅವರ ವಜ್ರೇಶ್ವರಿ ಫಿಲಂಸ್‌ನಲ್ಲಿ ನಾನು ಮಾಡಿದ್ದು ಬಹಳ ಕಡಿಮೇನೆ. ಶಬ್ದವೇದಿ, ಒಡಹುಟ್ಟಿದವರು ಮಾಡಿದೆ. ಅವರ ಮಕ್ಕಳ ಜೊತೆಯಲ್ಲಿ ರಾಘಣ್ಣ ಜೊತೆ ಮೃತ್ಯುಂಜಯ, ನಂಜುAಡಿ ಇತ್ತೀಚೆಗೆ ವೇದ ಮಾಡಿದ್ದೀನಿ. ಅವರ ಬ್ಯಾನರ್‌ನಲ್ಲಿ ಕೆಲಸ ಮಾಡುವುದು ಖುಷಿ ಇದೆ. ಶಿವ ರಾಜ್‌ಕುಮಾರ್ ಅವರಿಗೆ ಅನಾರೋಗ್ಯದ ಸಮಸ್ಯೆ ಎಂಬುದನ್ನು ಕೇಳಿ ನಿಜಕ್ಕೂ ಬೇಸರ ಆಯ್ತು. ಈಗ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಗುಣಮುಖರಾಗಲಿ. ಬಿಕಾಸ್ ಅವರು ನಮ್ಮ ಇಂಡಸ್ಟಿçಗೆ ಬೇಕು’

* ಕನಸ್ಸೆಂಬ ಕುದುರೆಯನ್ನೇರಿ ಎಷ್ಟು ಮುಖ್ಯವಾಯ್ತು..?

`ಗಿರೀಶ್ ಕಾಸರವಳ್ಳಿ ಅವರು ಗುಲಾಬಿ ಟಾಕೀಸ್‌ನಲ್ಲಿ ನನ್ನನ್ನ ಆಯ್ಕೆ ಮಾಡಿಕೊಂಡರು. ಅವರ ಜೊತೆಗೆ ಪಾತ್ರ ಮಾಡಬೇಕು ಅಂದ್ರೆ ನನಗೆ ತುಂಬಾ ಭಯ ಇತ್ತು. ಯಾಕಂದ್ರೆ ಅವರು ಅಭಿನಯ ಮಾಡಿಸುವ ದಾಟಿ ಬೇರೆ. ನಿಜಕ್ಕೂ ಈಗಲೂ ಅನ್ನಿಸುತ್ತೆ, ಅವರು ಹೇಳಿಕೊಟ್ಟಿದ್ದು ಸರಿಯಾಗಿ ಅರ್ಥವಾಗಲಿಲ್ಲವೇನೋ, ನಾನು ಏನೋ ಮಾಡಿದ್ನೇನೋ, ಆದರೂ ಬೆಸ್ಟ್ ಆಕ್ಟೆçಸ್ ನ್ಯಾಷನಲ್ ಅವಾರ್ಡ್ ಬಂತು. ಅವರಿಗೆ ತೃಪ್ತಿ ಆಗಿತ್ತೋ ಆಗಿಲ್ಲ. ನನಗೆ ಅನ್ನಿಸಿದ್ದು ಇನ್ನು ಚೆನ್ನಾಗಿ ನಟಿಸಬಹುದಿತ್ತು ಅಂತ. ಕನಸೆಂಬ ಕುದುರೆಯನ್ನೇರಿ ಬಿರಾದರ್ ಜೊತೆಗೆ ಮಾಡಿದೆ. ಆತನು ಅದ್ಭುತವಾದ ನಟ. ಆತನಿಗೂ ಇಂಟರ್ ನ್ಯಾಷನಲ್ ಅವಾರ್ಡ್ ಬಂದಿದೆ. ಅವರ ಜೊತೆಗೆಲ್ಲಾ ಕೆಲಸ ಮಾಡುವುದು ಒಂದೊಳ್ಳೆಯ ಅನುಭವ ನೀಡಿದೆ. ನಾವೇನು ಅಲ್ಲಿ ಮಾಡಬೇಕಾಗಿನೇ ಇಲ್ಲ. ತಾನಾಗಿಯೇ ಎಲ್ಲವೂ ಆಗಿ ಬಿಡುತ್ತದೆ’
* ತಾಯವ್ವ ಸಿನಿಮಾದಲ್ಲೂ ಪೋಷಕ ನಟಿಯಾಗಿ ಕಾಣಿಸಿಕೊಂಡ್ರಿ..!
`ತಾಯವ್ವ ಸಿನಿಮಾ ಸುದೀಪ್‌ಗೆ ಮೊದಲ ಸಿನಿಮಾ ಇರಬಹುದು. ತುಂಬಾ ಚೆನ್ನಾಗಿ ಹಾಡುತ್ತಿದ್ದ. ಒಂದಿನ ಮನೆಗೆ ಬಂದ ಕ್ಯಾಸೆಟ್ ಎಲ್ಲಾ ಕೊಟ್ಟಿದ್ದ. ತುಂಬಾ ಇಂಟ್ರೆಸ್ಟೆಡ್ ಹುಡುಗ. ತುಂಬಾ ನಾಲೆಡ್ಜ್ ಇರುವಂತ ಹುಡುಗ. ನನ್ನತ್ರ ಬಂದು ಅಕ್ಕ ನೀವೂ ಮಾಡಲೇಬೇಕು ಎಂದು ಹೇಳಿದ. ಮಣಿ ಸಿನಿಮಾದಲ್ಲೂ ಯೋಗರಾಜ್ ಭಟ್ ನಾನು ಮಾಡಲ್ಲ ಅಂದ್ರು ತುಂಬಾ ರಿಕ್ವೆಸ್ಟ್ ಮಾಡಿ ಮಾಡಿಸಿದ್ದರು. ಅದಕ್ಕೂ ಬೆಸ್ಟ್ ಸಪೋರ್ಟಿಂಗ್ ಕ್ಯಾರೆಕ್ಟರ್ ಅವಾರ್ಡ್ ಬಂತು. ಅವರು ದೊಡ್ಡ ನಿರ್ದೇಶಕರಾದ್ರು. ನಮ್ಮ ಸುದೀಪ ಬಂದ್ರು ಅವರು ದೊಡ್ಡ ನಟರಾದ್ರು. ಹೀಗೆ ರವಿಚಂದ್ರನ್ ಜೊತೆಗೂ ಅಭಿನಯಿಸಿದೆ. ಸುಮಾರು ನಟರ ಮೊದಲ ಸಿನಿಮಾದಲ್ಲಿ ನಟಿಸಿದ್ದೀನಿ’

* ವಯಸ್ಸಿಗೂ ಮೀರಿದ ಪಾತ್ರ ಪುಟ್ಮಲ್ಲಿ..!

`ಆ ಪಾತ್ರದ ಮೇಕಪ್ ಬಗ್ಗೆ ಹೇಳಲೇಬೇಕು. ಅಂದು ಮೇಕಪ್‌ಗಾಗಿ ನಮ್ಮ ನಾಣಿ ಇದ್ರು. ಈಗ ಶಿವರಾಜ್‌ಕುಮಾರ್ ಜೊತೆಗೆ ಇರ್ತಾರೆ. ಅವರನ್ನ ಬಹುರೂಪಿ ನಾಣಿ ಅಂತಾರೆ. ಅವರು ಮುಂಚೆ ನಾಟಕಗಳಿಗೆ ಬಣ್ಣ ಹಚ್ತಾ ಇದ್ರು. ಆಮೇಲೆ ಸಿನಿಮಾಗೆ ಬಂದ್ರು. ಈಗಲೂ ಸಿನಿಮಾದಲ್ಲಿಯೇ ಇದ್ದಾರೆ. ನನ್ನ ಒಡಲಾಳ ನಾಟಕಕ್ಕೆ ನಾಣಿಯವರು ಮೇಕಪ್ ಮಾಡ್ತಾ ಇದ್ರು. ಆಗ ನನಗಿನ್ನು ೨೪ ವಯಸ್ಸು ಆಗಲೇ ೭೪ ವರ್ಷದ ಮುದುಕಿಯ ಪಾತ್ರ ಮಾಡಿದ್ದೆ. ಪುಟ್ನಂಜ ಮಾಡಿದ್ದಾಗ ನಂಗೆ ೩೪ ಇರಬಹುದು. ಆ ಪಾತ್ರಕ್ಕೆ ನನ್ನನ್ನ ಹಾಕಿಕೊಳ್ಳಬೇಕು ಎಂಬ ವಿಚಾರದಲ್ಲಿ ರವಿಚಂದ್ರನ್ ಅವರಿಗೆ ಅರೆ ಮನಸ್ಸಿತ್ತು. ಡಬ್ಬಲ್ ಮೀನಿಂಗ್ ಸೇರಿದಂತೆ ಬೇರೆ ಥರದ ಪಾತ್ರಗಳನ್ನೇ ಮಾಡಿದ್ದೆ. ಹೀಗಾಗಿ ಜನಗಳಿಗೆ ಉಮಾಶ್ರೀ ಅಂದ್ರೆನೆ ಹೀಗೆ ಎಂಬ ಅಭಿಪ್ರಾಯ ಗಟ್ಟಿಯಾಗಿ ಕೂತಿತ್ತು. ಅಂತವಳನ್ನ ಕರೆದುಕೊಂಡು ಬಂದು ಇಂಥ ಸೀರಿಯಸ್ ಪಾತ್ರ ಹೇಗೆ ಮಾಡಿಸುವದು..? ಎಂಬ ಪ್ರಶ್ನೆ ಇತ್ತು. ಆದರೆ ಬಿ.ಸುರೇಶ್ ಅವರಿಗೆ ಕಾನ್ಫಿಡೆಂಟ್ ಇತ್ತು. ಆತ ಕೂಡ ಥಿಯೇಟರ್‌ನಿಂದ ಬಂದಿದ್ದು ಅಲ್ವಾ. ಹೀಗಾಗಿ ಅವರೇ ಕನ್ವೆನ್ಸ್ ಮಾಡಿ, ಆ ಪಾತ್ರಕ್ಕೆ ನನ್ನನ್ನೆ ಹಾಕಿಕೊಂಡರು. ಆಮೇಲೆ ಸಿನಿಮಾ ಆದ್ಮೇಲೆ ಪುಟ್ಮಲ್ಲಿ ಪಾತ್ರಕ್ಕೆ ಅವಾರ್ಡ್ ಬರಬೇಕಿತ್ತು ಅಂತ ರವಿಚಂದ್ರನ್ ನೊಂದುಕೊAಡು, ಗಲಾಟೆ ಎಲ್ಲಾ ಮಾಡಿದ್ರು. ರಿಮೇಕ್ ಅಂತ ಹೇಳಿ ಅವಾರ್ಡ್ ಕ್ಯಾನ್ಸಲ್ ಆಗಿತ್ತು. ರಿಮೇಕ್‌ನಲ್ಲಿ ಆ ಪಾತ್ರವೇ ಅಷ್ಟೊಂದು ಇರಲಿಲ್ಲ. ಬರೀ ಒಂದೇ ಸೀನ್ ಇದ್ದದ್ದು. ಆದರೆ ಕನ್ನಡದಲ್ಲಿ ಆ ಪಾತ್ರವನ್ನು ಡೆವಲಪ್ ಮಾಡಿದ್ದರು. ಆಗ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಅವರಿಗೂ ಹೋಗಿ ತೋರಿಸಿದ್ದೆ. ಅವರು ಕೂಡ ಹೌದಲ್ಲ ಈ ಪಾತ್ರಕ್ಕೆ ಬರಬೇಕಿತ್ತು ಎಂದರು. ಆದರೆ ಅಷ್ಟರಲ್ಲಾಗಲೇ ಅವಾರ್ಡ್ ಅನೌನ್ಸ್ ಆಗಿ ಬಿಟ್ಟಿತ್ತು.

* ಡಬ್ಬಲ್ ಮೀನಿಂಗ್ ಮಾತು.. ಯಾರು ಮಾಡದಂತ ಚಾಲೆಂಜಸ್ ಪಾತ್ರಗಳ ಬಗ್ಗೆ ಈಗ ಗಿಲ್ಟ್ ಫೀಲ್ ಇದ್ಯಾ..?

`ಗಿಲ್ಟ್ ಫೀಲ್ ಯಾಕಿರಬೇಕು. ಅಂದು ನನಗೆ ಹಣ ಬೇಕಿತ್ತು, ಪಾತ್ರ ಮಾಡಿದೆ. ಸುಮಾರು ಹತ್ತು ವರ್ಷ ಅದನ್ನೇ ಮಾಡಿದೆ. ನನ್ನ ಜೊತೆಗಿದ್ದವರು ಸಾಕಷ್ಟು ಜನ ಹೇಳ್ತಾ ಇದ್ರು. ಅಷ್ಟೊಳ್ಳೆ ಕಲಾವಿದೆ ಅಲ್ಲಿ ಹೋಗಿ ಗಲೀಜು ಗಲೀಜು ಮಾತನಾಡುವ ಪಾತ್ರ ಮಾಡುತ್ತಿದ್ದಾಳೆ ಅಂತ. ಆದ್ರೆ ನಂಗೆ ಹಣ ಸಂಪಾದಿಸಲೇಬೇಕಿತ್ತು. ಎನ್ ಎಸ್ ರಾವ್ ಹೋದ ನಂತರ ಒಂದು ವರ್ಷ ನಂಗೆ ಸಿನಿಮಾಗಳೇ ಇರಲಿಲ್ಲ. ಎನ್ ಎಸ್ ರಾವ್ ಇಲ್ಲ ಅಂದ್ರೆ ಈಕೆಗೆ ಸಿನಿಮಾಗಳೇ ಇಲ್ಲ ಎನ್ನುವಂತೆ ಆಗಿತ್ತು. ಆದ್ರೆ ಒಂದು ವರ್ಷವಾದ ಮೇಲೆ ರಿಮೇಕ್ ಸಿನಿಮಾವನ್ನ ಒಪ್ಪಿಕೊಂಡೆ. ಆದರೆ ಅಂದು ನಿರ್ದೇಶಕರಿಗೆ ಹೇಳಿದ್ದೆ. ಡಬ್ಬಲ್ ಮೀನಿಂಗ್ ಎಲ್ಲಾ ನಾನು ಮಾಡಲ್ಲ. ಆ ರೀತಿಯ ಸಂಭಾಷಣೆಗಳಿದ್ದರೆ ನಾನು ಹೇಳುವುದಿಲ್ಲ ಎಂದಿದ್ದೆ. ಅಲ್ಲಿಂದ ನನ್ನ ಸಿನಿಮಾದ ರೀತಿ ಬದಲಾಯಿಕೊಂಡೆ’

ಅಭಿನಯ ಶಾರದೆ.. ಕಲಾ ಸರಸ್ವತಿ.. ಕಲಾದೇವಿ.. ಕಲೆಗೆ ಅದೆಷ್ಟು ಹೆಸರುಗಳಿದ್ದಾವೋ ಅಷ್ಟು ಹೆಸರುಗಳನ್ನು ಉಮಾಶ್ರೀ ಅವರಿಗೆ ಹೇಳಬಹುದು. ಅಷ್ಟು ಅದ್ಭುತ ಅಭಿನಯೇತ್ರಿ ಇವರು. `ಚಿತ್ತಾರ’ದೊಂದಿಗೆ ತಮ್ಮ ಜರ್ನಿಯ ಬಗ್ಗೆ ಸಂಪೂರ್ಣವಾಗಿ ಮನಬಿಚ್ಚಿ ಮಾತಾಡಿದ್ದಾರೆ. ಅವರ ಅಂದಿನ ಅನುಭವಗಳೇ ಇಂದಿನ ಯುವ ನಟಿಯರಿಗೆ ಸ್ಪೂರ್ತಿ. `ಚಿತ್ತಾರ ಮೀಡಿಯಾ’ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ಸಂಪೂರ್ಣ ಎಪಿಸೋಡ್ ಲಭ್ಯವಿದೆ. ಒಮ್ಮೆ ಕೇಳಿ, ಆ ಕಥೆಯಲ್ಲಿ ನಮ್ಮನ್ನೇ ನಾವೂ ಕಳೆದೋಗಿಸುವಂತ ವಿಚಾರಗಳು ಅಡಗಿದ್ದಾವೆ.

Share this post:

Translate »