ನಟಿ ಉಮಾಶ್ರೀಯವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ. ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ಪ್ರತಿಭೆ ಉಮಾಶ್ರೀಗೆ ಯಾವ ಪಾತ್ರಗಳೂ ಸವಾಲಲ್ಲ. ಭಾವನೆ, ಹಾವ ಭಾವ, ಅಭಿವ್ಯಕ್ತಿ ಎಲ್ಲದರಲ್ಲೂ ಅತ್ಯುತ್ತಮ. ಕನ್ನಡ ಚಿತ್ರರಂಗ ಕಂಡ ಅದ್ಭುತವಾದ ಪ್ರತಿಭೆ.
ನಟಿ ಉಮಾಶ್ರೀ ಮೇ 10, 1957 ರಂದು ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ ಜನಿಸಿದರು. ಬಹಳ ಬಡ ಕುಟುಂಬದಲ್ಲಿ ಜನಿಸಿದ್ದ ಉಮಾಶ್ರೀ ಅವರ ಮನೆಯಲ್ಲಿ ದಿನನಿತ್ಯದ ಆಹಾರಕ್ಕೂ ಕಷ್ಟಪಡುವ ಪರಿಸ್ಥಿತಿ ಇತ್ತು.
ರಂಗಭೂಮಿಗೆ ಸೇರಿದರೆ ತಿನ್ನಲು ಊಟ ಕೊಡುತ್ತಾರೆ ಎಂಬ ಕಾರಣಕ್ಕೆ ರಂಗಭೂಮಿಗೆ ಕಾಲಿಟ್ಟವರು ಉಮಾಶ್ರೀ. ಪ್ರೀತಿಸಿ ಮದುವೆಯಾಗಿದ್ದ ಉಮಾಶ್ರೀ ಅವರ ವೈವಾಹಿಕ ಜೀವನ ತುಂಬಾ ದಿನ ಚೆನ್ನಾಗಿರಲಿಲ್ಲ.
ಬಡ ಕುಡುಂಬದಲ್ಲಿ ಹುಟ್ಟಿದ ಉಮಾಶ್ರೀ, “ನಾನು ನಾಟಕಕ್ಕೆ ಸೇರಿದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ” ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಕಷ್ಟಪಟ್ಟು ದುಡಿದು ತಮ್ಮಿಬ್ಬರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಿಸಿರುವ ಉಮಾಶ್ರೀ ತಮ್ಮ ಬದುಕಿನ ಜವಾಬ್ಧಾರಿಗಳನ್ನು ಕೂಡಾ ಸಮರ್ಥವಾಗಿ ಪೂರೈಸಿದ್ದಾರೆ. ಉಮಾಶ್ರೀ ಅವರದ್ದು ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಹೆಸರು.
ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ.ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರುಗಳ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದಾಕೆ ಉಮಾಶ್ರೀ. ಅವರ ಒಡಲಾಳ ನಾಟಕದ ಸಾಕವ್ವನ ಅಭಿನಯ ಅಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.
1984ರಲ್ಲಿ ತೆರೆಗೆ ಬಂದ ಅನುಭವ ಸಿನಿಮಾ ಉಮಾಶ್ರೀ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಸಿನಿಮಾ. ಕಾಶಿನಾಥ್ ಅಭಿನಯಿಸಿ, ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಪದ್ದಿಯಾಗಿ ಮೋಡಿ ಮಾಡಿದವರು. ಆ ಸಿನಿಮಾದಲ್ಲಿ ತಮ್ಮ ಬೋಲ್ಡ್ ಅಭಿನಯದಿಂದ ಉಮಾಶ್ರೀ ಕನ್ನಡ ಕಲಾ ರಸಿಕರ ಮನಸು ಸೊರೆ ಮಾಡಿದವರು.
ಅನುಭವದ ಬಳಿಕ ಉಮಾಶ್ರೀ ಬರೀ ಡಬಲ್ ಮೀನಿಂಗ್ನ ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾದರು. ಆಗ ಬಂದಿದ್ದೇ ಪುಟ್ನಂಜ ಸಿನಿಮಾ. 1995 ರಲ್ಲಿ ಕ್ರೇಜಿಸ್ಟಾರ್ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಪುಟ್ಮಲ್ಲಿಯಾಗಿ ಉಮಾಶ್ರೀ ಪರಕಾರ ಪ್ರವೇಶ ಮಾಡಿದರು. ಈ ಚಿತ್ರವು 25 ವಾರಗಳಿಗೂ ಹೆಚ್ಚು ಕಾಲ ಓಡಿ, ಬ್ಲಾಕ್ ಬಸ್ಟರ್ ಆಯಿತು. ಉಮಾಶ್ರೀ ಪುಟ್ಮಲ್ಲಿಯಾಗಿ ಕನ್ನಡಿಗರ ಮನಸ್ಸಲ್ಲಿ ನೆಲೆಯೂರಿದ್ದರು.
ಉಮಾಶ್ರೀ ಬರೀ ರಂಗಭೂಮಿ, ಸಿನಿಮಾ ಅಷ್ಟೇ ಅಲ್ಲ ರಾಜಕೀಯದಲ್ಲೂ ಕೆಲಸ ಮಾಡಿದ ಅನುಭವಸ್ಥೆ. ಕಾಂಗ್ರೆಸ್ ಪಕ್ಷದ ಸದಸ್ಯೆಯಾಗಿರುವ ಉಮಾಶ್ರೀ, ಶಾಸಕಿಯಾಗಿ, ಸಚಿವೆಯಾಗಿ ಜನಸೇವೆ ಮಾಡಿದ್ದಾರೆ. ಉಮಾಶ್ರೀ ಅವರು ನೋವು-ನಲಿವನ್ನು ಸಮನಾಗಿ ಉಂಡವರು.
ಅವರ ಬಗ್ಗೆ, ಅವರ ಪಾತ್ರಗಳ ಬಗ್ಗೆ ಆಡಿಕೊಂಡು ಡಬಲ್ ಮೀನಿಂಗ್ ಜೋಕ್ ಮಾಡಿದ್ದ ಅದೇ ಪ್ರೇಕ್ಷಕರು ಅವರ ಅಮೋಘ ಅಭಿನಯ ನೋಡಿ ಎದ್ದುನಿಂತು ಚಪ್ಪಾಳೆ ತಟ್ಟಿದರು. ಗುಲಾಬಿ ಟಾಕೀಸ್ ಎಂಬ ಸಿನಿಮಾಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿಯೂ ಬಂತು. ಸದ್ಯ ಉಮಾಶ್ರೀ ಅವರು ಕಿರುತೆರೆಯಲ್ಲಿ ಪುಟ್ಟಕ್ಕನಾಗಿ ಮಿಂಚುತ್ತಿದ್ದಾರೆ. ಅದರಲ್ಲೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಸತ್ತು ಹೋಗಿದ್ದಾಗಿನ ಎಪಿಸೋಡ್ನಲ್ಲಿ ಉಮಾಶ್ರೀ ಅಭಿನಯ ಕಂಡು ಕಣ್ಣೀರು ಹಾಕಿದವರೇ ಹೆಚ್ಚು.