ಸಿನಿಮಾ: ಯುಐ.
ನಿರ್ಮಾಣ: ಜಿ. ಮನೋಹರನ್, ಶ್ರೀಕಾಂತ್ ಕೆ.ಪಿ.
ನಿರ್ದೇಶನ: ಉಪೇಂದ್ರ.
ಪಾತ್ರವರ್ಗ: ಉಪೇಂದ್ರ, ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧುಕೋಕಿಲ ಮುಂತಾದವರು.
ಸ್ಟಾರ್: 4/5
“ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿ0ದ ಎದ್ದೋಗಿ..” ಎಂಬ ಒಕ್ಕಣೆಯೊಂದಿಗೆ ಆರಂಭವಾಗುವ ಉಪೇಂದ್ರ ಅವರ ಯು.ಐ ಪ್ರಪಂಚ, ಅವರ `ಎ’ ಚಿತ್ರದ “ಇದು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ” ಎಂಬ ಲೈನ್ ನೆನಪಾಗಿಸುತ್ತೆ. ಅಲ್ಲಿಗೆ, ಉಪ್ಪಿಯೊಳಗಿನ ನಿರ್ದೇಶಕ ಅಪ್ಡೇಟ್ ಆಗಿದ್ದಾನೆ ಎಂಬುದು ಅರ್ಥವಾಗುತ್ತದೆ. ಇನ್ನು ಸಿನಿಮಾ ನೋಡಿದ ಮೇಲೆ ನಿಜಕ್ಕೂ ಉಪ್ಪಿ ಮುಂದಿನ ಹತ್ತಿಪ್ಪತ್ತು ವರ್ಷದಲ್ಲಿ ರಿಲೀಸ್ ಆಗಬಹುದಾದ ಸಿನಿಮಾವನ್ನು ಈಗಲೇ ಮಾಡಿದ್ದಾರೆ. ಸಿನಿಮಾದಲ್ಲಿ ಅವರೇ ಹೇಳಿದಂತೆ `ಮೆದುಳು’ ಎಂಬುದರಿ0ದ ಎಸ್ಕೇಪ್ ಆಗಿ ಚಿತ್ರ ನಿರ್ದೇಶನ ಮಾಡಿದ್ದಾರೆ!
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ “ರಕ್ತ ಕಾಶ್ಮೀರ” ; ಉಗ್ರಗಾಮಿಗಳಿಗೆ ಸಿಹ್ನ ಸ್ವಪ್ನವಾದ ಉಪ್ಪಿ-ರಮ್ಯ
`ಎ’ ಸಿನಿಮಾದಲ್ಲಿ “ಹೋಗು ಈ ಪ್ರಪಂಚ ವಿಶಾಲವಾಗಿದೆ..” ಎಂದು ಹೇಳುತ್ತಾರೆ. ಅಳುತ್ತಿದ್ದ ಮಗು, ಅಲ್ಲಿಂದ ಓಡಿ ಹೋಗುತ್ತಾನೆ. ಆಗ ಉಪೇಂದ್ರ, “ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಸುಭಾಷ್ ಚಂದ್ರ ಬೋಸ್ ಆಗ್ತಾನೆ” ಅಂತ ಹೇಳ್ತಾರೆ. ಆದರೆ ‘ಯುಐ’ “ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಒಸಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಆಗ್ತಾನೆ..” ಅಂತ ಹೇಳ್ತಾರೆ. ಅಲ್ಲಿಗೆ ಒಂದೇ ಮಾತಿನಲ್ಲಿ ಉಪೇಂದ್ರ ತಂದೆ-ತಾಯಿ, ಪೋಷಕರು, ಶಿಕ್ಷಕರು, ಒಟ್ಟು ಸಮಾಜ ಮಕ್ಕಳನ್ನು ಬೆಳೆಸೋ ರೀತಿಯೇ ಅಸಂಬದ್ಧವಾಗಿದೆ ಎಂಬುದನ್ನು ಹೇಳಿದ್ದಾರೆ.
ಸತತ 8-9 ವರ್ಷ ಗ್ಯಾಪ್ ನಂತರ ಉಪೇಂದ್ರ, `ಯುಐ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಸಿನಿಮಾ ಘೋಷಣೆ ಆದಾಗಿನಿಂದ ಟೈಟಲ್, ಕಂಟೆ0ಟ್ ಎಲ್ಲದರ ಬಗ್ಗೆಯೂ ಕುತೂಹಲವಿತ್ತು. ಆದರೆ ಹುಳ ಬಿಡುತ್ತಲೇ ಉಪ್ಪಿ ಕಂಟೆ0ಟ್ ಎಂಬ ಡೈನೋಸರಸ್ ಆನ್ನೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರಕಥೆ ವಿಚಾರದಲ್ಲಿ ಹೇಳೋದಾದ್ರೆ ಈ ಹಿಂದೆ ಪಾತ್ರಗಳ ಮೂಲಕ ತನ್ನ ಇಂಗಿತವನ್ನು ಹೇಳುತ್ತಿದ್ದ ಉಪ್ಪಿ. ಈ ಬಾರಿ ಸಾಕಷ್ಟು ಮನಸ್ಸಿಗೆ ನಾಟುವ ರೂಪಕಗಳ ಮೂಲಕ ಕಥೆ ಹೇಳಿದ್ದಾರೆ. ಅಲ್ಲಲ್ಲಿ ರೂಪಕಗಳ ಮೂಲಕವೇ ತನ್ನ `ಪ್ರಜಾಕೀಯ’ದ ಆಶಯವನ್ನೂ ಎತ್ತಿಹಿಡಿಯುವ ಪ್ರಯತ್ನ ಮಾಡಿದ್ದಾರೆ.
ಅಚ್ಚರಿ ಎಂದರೆ ಸಿನಿಮಾ ನೋಡಿದ ಪ್ರೇಕ್ಷಕ `ಯುಐ’ ಸಿನಿಮಾದ ಕಥೆಯನ್ನು ಸುಲಭವಾಗಿ ಹೇಳಲಾಗುವುದಿಲ್ಲ. ಏಕೆಂದರೆ ಇಲ್ಲಿ ಒಂದು ಕಥೆ ಇಲ್ಲ, ನಮ್ಮದೇ ತಪ್ಪಿಗೆ ನಾವು ಅನುಭವಿಸುತ್ತಿರುವ ಸಾವಿರ ವ್ಯಥೆಯೇ ಕಥೆಯಾಗಿದೆ. `ಯುಐ’ ಸಿನಿಮಾ ಒಂದು ರೀತಿಯಲ್ಲಿ ಚಕ್ರವ್ಯೂಹ ಇದ್ದಂತೆ, ಪ್ರೇಕ್ಷಕ ಸುಲಭವಾಗಿ ಕಥೆಯೊಳಗೆ ಹೊಕ್ಕಬಹುದು. ಆದರೆ ಕಥೆಯಿಂದ ಹೊರ ಬರುವುದು ಸುಲಭವಲ್ಲ! ಒಂದು ಸಾರಿ `ಯುಐ’ ಪ್ರಪಂಚದೊಳಗೆ ಹೊಕ್ಕರೆ, ಸಿನಿಮಾ ಮುಗಿಯುವರೆಗೂ, ಮುಗಿದ ಮೇಲೂ ಉಪ್ಪಿಸಂ ಪ್ರೇಕ್ಷಕನ ಮೆದುಳನ್ನು ಆಳುತ್ತಿರುತ್ತದೆ.
`ಯುಐ’ ಸಿನಿಮಾದಲ್ಲಿ ಹತ್ತು ಸಿನಿಮಾಗಾಗುವಷ್ಟು ಕಂಟೆ0ಟ್ ಇದೆ! ಅದು ಸಿನಿಮಾದ ಪ್ಲಸ್ ಆಗಬಹುದು, ಅಥವಾ ಮೈನಸ್ ಕೂಡಾ ಆಗಬಹುದು. ದೇವರು, ಜಾತಿ, ಧರ್ಮ, ಪ್ರಕೃತಿ, ಸಮಾಜ, ಮಹಿಳೆ, ಬುದ್ಧ, ಬಸವ, ಭ್ರಷ್ಟಾಚಾರ, ಕಲ್ಕಿ ಯುಗ & ಸತ್ಯ ಯುಗ, ಭವಿಷ್ಯ, ಮೀಡಿಯಾ, ಕಾಮ, ಡಿಜಿಟಲ್ ಯುಗ, ಅಧಿಕಾರಶಾಹೀ ಧೋರಣೆ.. ಹೀಗೆ ಉಪ್ಪಿ ಒಂದೇ ಚಿತ್ರದಲ್ಲಿ ಎಲ್ಲವನ್ನೂ ಹೇಳಿದ್ದಾರೆ. `ಪೋಕಸ್’ ಮಾಡೋದಿಕ್ಕೆ ಸಾಕಷ್ಟು ಅಂಶಗಳನ್ನು ಉಪ್ಪಿ ಇಟ್ಟಿರುವುದರಿಂದ ಕೆಲವು ಸಂಗತಿಗಳು ಔಟ್ ಆಫ್ ಫೋಕಸ್ ಆಗುವ ಸಾಧ್ಯತೆ ಇದೆ.
ಇನ್ನು, ಉಪ್ಪಿ ಹಿಂದಿನ ಶೈಲಿ, ಸಿನಿಮಾದೊಳಗೆ ಸಿನಿಮಾ ಟ್ರೀಟ್‌ಮೆಂಟ್ ಇಲ್ಲಿಯೂ ಮುಂದುವರಿದಿದೆ. ಈ ದೃಶ್ಯಗಳಿಗಾಗಿ ಉಪ್ಪಿ ಮತ್ತು ಛಾಯಾಗ್ರಹಕ ಎಚ್ ಸಿ ವೇಣು, ಡಿಐ ಟೀಮ್, ಸಂಕಲನಕಾರರು ಸಾಕಷ್ಟು ಶ್ರಮ ಪಟ್ಟಿರೋದು ತೆರೆಯ ಮೇಲೆ ಕಾಣುತ್ತದೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಉಪ್ಪಿಯ ಭ್ರಮಾ ಲೋಕದ ಸೃಷ್ಟಿಯ ಕನಸನ್ನು ನನಸಾಗಿಸಿದೆ. ಸಿನಿಮಾದಲ್ಲಿ ಸಾಕಷ್ಟು ಅಂಶಗಳಿದ್ದರೂ ಎಲ್ಲೂ ಲ್ಯಾಗ್ ಆಗದಂತೆ ಉಪ್ಪಿ ಎಚ್ಚರವಹಿಸಿದ್ದು ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್.
ನಟನೆಯ ವಿಚಾರಕ್ಕೆ ಬರೋದಾದ್ರೆ, ಉಪ್ಪಿ ಸತ್ಯನಾಗಿಯೂ ಕಲ್ಕಿಯಾಗಿಯೂ ಉತ್ತಮ ಅಭಿನಯ ನೀಡಿದ್ದಾರೆ. ಸತ್ಯ ಮತ್ತು ಕಲ್ಕಿ ನಡುವಿನ ವ್ಯತ್ಯಾಸವನ್ನು ಉಪ್ಪಿ ಧ್ವನಿ, ಮ್ಯಾನರಿಸಂ, ಭಾವನೆಯ ಮೂಲಕ ಸಮರ್ಥವಾಗಿ ವ್ಯಕ್ತ ಪಡಿಸಿದ್ದಾರೆ. ಇನ್ನು ಸಾಧು ಕೋಕಿಲ, ರವಿಶಂಕರ್ ಅಚ್ಯುತ್ ಕುಮಾರ್, ಗುರುಪ್ರಸಾದ್.. ಹೀಗೇ ಎಲ್ಲಾ ನಟರೂ ಉಪ್ಪಿಯ ಪ್ರಪಂಚದೊಳಗೆ ಭಿನ್ನವಾಗಿ ಕಾಣುತ್ತಾರೆ. ಇನ್ನು, ರೀಷ್ಮಾ ನಾಣಯ್ಯ ನಿಭಾಯಿಸಿರುವ ನಾಯಕಿ ಪಾತ್ರಕ್ಕೂ ಸ್ಕೋಪ್ ಇದೆ. ಅಚ್ಚರಿಯೆಂದರೆ ಚಿತ್ರದಲ್ಲಿ ನಾಯಕಿಯನ್ನೂ ರೂಪಕವಾಗಿ ತೋರಿಸಿರುವ ಉಪ್ಪಿ ಬುದ್ದಿವಂತಿಗೆಗೆ ಉಘೇ.
ಕಲಾ ನಿರ್ದೇಶಕ ಶಿವಕುಮಾರ್ ಅವರ ಕೆಲಸ ಶಿವ.. ಶಿವಾ..! ಅದ್ಭುತ ಲೋಕವನ್ನೇ ಸೃಷ್ಟಿಸಿದ್ದಾರೆ. ಥ್ರಿಲ್ಲರ್ ಮಂಜು, ರವಿವರ್ಮ ಮತ್ತು ಚೇತನ್ ಡಿಸೋಜಾ ಮೂವರೂ ಸೇರಿ ಉಪ್ಪಿಯ ಕಲ್ಕಿ ಅವತಾರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಚೇತನ್ ಡಿಸೋಜಾ ಸಾಹಸ ನಿರ್ದೇಶನದ `ಮಾಸ್ಕ್’ ಫೈಟ್ ನಿಜಕ್ಕೂ ಅದ್ಭುತ, ಏಕೆಂದರೆ ವೃಷ್ಠ ಭಾಗದಲ್ಲಿರುವ ಸಣ್ಣ ಮಾಸ್ಕಿನೊಳಗೆ ಬ್ಲಡ್ ಬ್ಲಾಸ್ಟ್ ಮಾಡುವುದು ಸುಲಭದ ಮಾತು ಅಲ್ಲವೇ ಅಲ್ಲ. ತಮ್ಮ ಎಂದಿನ ಫಾರ್ಮುಲಾ ಬಿಟ್ಟು ಉಪ್ಪಿಗಾಗಿ ವಿಭಿನ್ನ ರೀತಿಯ ನೃತ್ಯ ನಿರ್ದೇಶನ ಮಾಡಿದ್ದಾರೆ ಚಿನ್ನಿ ಪ್ರಕಾಶ್ ಮತ್ತು ಇಮ್ರಾನ್ ಸರ್ದಾರಿಯಾ. ಇನ್ನು, Costume Designers ಭರತ್ ಸಾಗರ್ ಮತ್ತು ವರ್ಷಿಣಿ ಜಾನಕಿರಾಮ್ ಕುಸುರಿ ಕೆಲಸ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಕೊಡುಗೆ ನೀಡಿದೆ.
ಒಟ್ಟಿನಲ್ಲಿ `ಯುಐ’ ಸಿನಿಮಾ ಪ್ರೇಕ್ಷಕನನ್ನು ರಂಜಿಸುವ ಜೊತೆಗೆ ತನನ್ನು ತಾನು ವಿಮರ್ಶಿಸುವಂತೆ ಮಾಡುತ್ತದೆ, ಆಲೋಚನೆಗೆ ಒಡ್ಡುತ್ತದೆ. ಒಂದು ರೀತಿಯಲ್ಲಿ ಉಪ್ಪಿ ತನ್ನೊಳಗೆ ಇರುವ ಸಿಗಲಾರದ ಪ್ರಶ್ನೆಗಳನ್ನು, ದಂದ್ವಗಳನ್ನು ದಿಟ್ಟತನದಿಂದ ಜನರ ಮುಂದಿಟ್ಟಿದ್ದಾರೆ. ಕೊನೆಯಲ್ಲಿ: ಕನ್ನಡದಲ್ಲಿ ಬರಹಗಾರರಿಲ್ಲ.. ಒಳ್ಳೆಯ ಕಥೆ ಇಲ್ಲ.. ಕನ್ನಡಿಗರು ಬೇರೆ ಭಾಷೆಯ ಚಿತ್ರವನ್ನು ಥೀಯೇಟರ್‌ಗೆ ಹೋಗಿ ನೋಡುತ್ತಾರೆ.. ಕನ್ನಡ ಚಿತ್ರವನ್ನು ಓಟಿಟಿಯಲ್ಲೇ ನೋಡುತ್ತಾರೆ.. ಎಂಬುದನೆಲ್ಲಾ ಮೆದುಳಿನಿಂದ ಕಿತ್ತು ಹಾಕಿ `ಯು.ಐ’ ನೋಡಿ. ನಿಮ್ಮ `ಫೋಕಸ್’ಗೆ `ಸತ್ಯ’ ಸಿಕ್ಕರೂ ಸಿಗಬಹುದು!