‘ಯುಐ’ ಮೇಲೆ ಕನ್ನಡ ಚಿತ್ರರಂಗ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ, ಮೊದಲ ದಿನವೇ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಉಪ್ಪಿ ಬರೀ ಹುಳ ಬಿಟ್ಟಿದ್ದಾರೆ ಅನ್ನೋ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ. ಈ ವಾರ ಮುಗಿಯುವುದರೊಳಗೆ ಸಿನಿಮಾ ಬಗ್ಗೆ ಅಸಲಿ ರಿಪೋರ್ಟ್ ಸಿಗಬಹುದು. ಉಪ್ಪಿಯ ‘ಯುಐ’ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಮೊದಲ ದಿನದ ಕಲೆಕ್ಷನ್ ಅನ್ನು 8 ರಿಂದ 10 ಕೋಟಿ ರೂ. ಆಗಬಹುದೆಂದು ಇಂಡಸ್ಟ್ರಿ ಎಕ್ಸ್ಪರ್ಟ್ಗಳು ಅಭಿಪ್ರಾಯ ಪಟ್ಟಿದ್ದರು. ಕೊನೆಗೂ ‘ಯುಐ’ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಹೊರಬಿದ್ದಿದೆ. ಇಂಡಸ್ಟ್ರಿ ಟ್ರ್ಯಾಕರ್ sacnilk.com ಮೊದಲ ದಿನದ ಅಂದಾಜು ಮೊತ್ತ ಎಷ್ಟು ಅನ್ನೋದನ್ನು ರಿವೀಲ್ ಮಾಡಿದೆ. ಹಾಗೇ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ರಿವೀಲ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ UI Review: ಪ್ರೇಕ್ಷಕನನ್ನೇ ವಿಮರ್ಶೆಗೆ ಒಡ್ಡುವ ಉಪ್ಪಿ ಪ್ರಪಂಚ!
ಉಪೇಂದ್ರ ಸಿನಿಮಾಗೂ ಮುನ್ನ ಏನನ್ನೂ ಬಿಟ್ಟು ಕೊಡುವುದಿಲ್ಲ. ಈ ಬಾರಿ ಚಿಕ್ಕದೊಂದು ತುಣುಕು ಹಾಗು ಹಾಡುಗಳನ್ನು ರಿಲೀಸ್ ಮಾಡಿ ಕುತೂಹಲ ಕೆರಳಿಸಿದ್ದರು. ಎಂದಿನಂತೆ ಈ ಬಾರಿ ಕೂಡ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತೆ ಅಂತಲೇ ಭಾವಿಸಲಾಗಿತ್ತು. ನಿರೀಕ್ಷೆಯಂತೆ ‘ಯುಐ’ ರಿಲೀಸ್ ಆದರೂ, ಸಿನಿಮಾ ಮಿಶ್ರ ಪತ್ರಿಕ್ರಿಯೆ ಸಿಕ್ಕಿದೆ. sacnilk.com ಪ್ರಕಾರ, ‘ಯುಐ’ ಮೊದಲ ದಿನ 6.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಫಸ್ಟ್ ರಿಪೋರ್ಟ್ ಆಗಿದ್ದರಿಂದ ಮಧ್ಯಾಹ್ನದ ವೇಳೆಗೆ 7 ರಿಂದ 7.5 ಕೋಟಿ ರೂ. ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಉಪೇಂದ್ರ ಇಲ್ಲಿವರೆಗೂ ನಿರ್ದೇಶಿಸಿದ ಸಿನಿಮಾಗಳು ಕೇವಲ ಕರ್ನಾಟಕದಲ್ಲಷ್ಟೇ ರಿಲೀಸ್ ಆಗುತ್ತಿತ್ತು. ಆದರೆ ‘ಯುಐ’ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ರಿಲೀಸ್ ಆಗಿದೆ. ಬೇರೆ ಭಾಷೆಗಳಲ್ಲಿ ಈ ಸಿನಿಮಾಗೆ ಸಾಧಾರಣ ಓಪನಿಂಗ್ ಸಿಕ್ಕಿದೆ. ತೆಲುಗಿನಲ್ಲಿ 70ಲಕ್ಷ ರೂಪಾಯಿ, ತಮಿಳಿನಲ್ಲಿ 4 ಲಕ್ಷ ರೂ. ಹಾಗೂ ಹಿಂದಿಯಲ್ಲಿ 1 ಲಕ್ಷ ರೂ. ಎಂದು sacnilk.com ರಿಪೋರ್ಟ್ನಲ್ಲಿ ಹೇಳಿದೆ.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳಿಗೆ ಟೀಕೆಗಳು ಬರೋದು ಹೊಸದೇನು ಅಲ್ಲ. ಇದು ಅವರು ನಿರ್ದೇಶಿಸಿದ ಮೊದಲ ಸಿನಿಮಾದಿಂದಲೂ ಇದೆ. ಅಷ್ಟೇ ಯಾಕೆ ಹೀರೋ ಆಗಿ ನಟಿಸಿದ್ದ ‘ಎ’, ‘ಉಪೇಂದ್ರ’ ಅಂತಹ ಸಿನಿಮಾಗಳಿಗೂ ಟೀಕೆ ವ್ಯಕ್ತವಾಗಿದ್ದವು. ಆದರೆ. ಆ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆದ್ದಿತ್ತು. ಇಂದಿಗೆ ಆ ಸಿನಿಮಾ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ‘ಯುಐ’ ಕೂಡ ಹಾಗೇ ಆಗಬಹುದೆಂಬ ನಿರೀಕ್ಷೆಯಿತ್ತು. ಯಾರು ಏನೇ ಅಂದರೂ ಉಪೇಂದ್ರ ನಿರ್ದೇಶನದ ಸಿನಿಮಾ ಒಂದು ರೇಂಜ್ಗೆ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಿದೆ. ಅದರಲ್ಲೂ ವೀಕೆಂಡ್ನಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಶನಿವಾರ ಹಾಗೂ ಭಾನುವಾರ ಹೆಚ್ಚು ಕಲೆಕ್ಷನ್ ಮಾಡಬಹುದು. ಯುವಕರನ್ನು ಹೆಚ್ಚಾಗಿ ಈ ಸಿನಿಮಾ ಸೆಳೆಯಬಹುದೆಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ವೀಕೆಂಡ್ನಲ್ಲಿ ಸೂಪರ್ ಕಲೆಕ್ಷನ್ ಆದರೆ, 20 ರಿಂದ 25 ಕೋಟಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.