Left Ad
ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ ಇಬ್ಬರು ಆರೋಪಿಗಳ ಎನ್‌ಕೌಂಟರ್ - Chittara news
# Tags

ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ಮಾಡಿದ ಇಬ್ಬರು ಆರೋಪಿಗಳ ಎನ್‌ಕೌಂಟರ್

 

ನಟಿ ದಿಶಾ ಪಟಾನಿ ಅವರ ಮನೆ ಎದುರು ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ಇಬ್ಬರು ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದಿದ್ದಾರೆ. ಸೆಪ್ಟೆಂಬರ್ 17 ರಂದು ಘಾಜಿಯಾಬಾದ್‌ನಲ್ಲಿ ನಡೆದ ಈ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಅರುಣ್ ಮತ್ತು ರವೀಂದ್ರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಮತ್ತು ದೆಹಲಿ ಕ್ರೈಂ ಬ್ರಾಂಚ್ ಜಂಟಿ ಕಾರ್ಯಾಚರಣೆಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚೆಗೆ ಸೆಪ್ಟೆಂಬರ್ 12ರ ಬೆಳಗಿನ ಜಾವ ಬರೇಲಿಯಲ್ಲಿರುವ ದಿಶಾ ಪಟಾನಿ ಮನೆ ಎದುರು ಗುಂಡಿನ ದಾಳಿ ನಡೆದಿದೆ. ನಟಿಯ ಸಹೋದರಿ ಖುಷ್ಬೂ ಪಟಾನಿ ಅವರು ಸನಾತನ ಧರ್ಮದ ಸಂತರ ಬಗ್ಗೆ ಮಾಡಿದ ಹೇಳಿಕೆಗೆ ಪ್ರತಿಯಾಗಿ ಈ ದಾಳಿ ನಡೆದಿತ್ತೆಂದು ಪೊಲೀಸರು ಶಂಕಿಸಿದ್ದರು. ಘಟನೆಯ ನಂತರ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ತ್ವರಿತ ಕ್ರಮಕ್ಕೆ ಸೂಚಿಸಿದ್ದರು.

ಸಿಸಿಟಿವಿ ದೃಶ್ಯಗಳು ಹಾಗೂ ಗುಪ್ತಚರ ಮಾಹಿತಿಯನ್ನು ಆಧರಿಸಿ STF ಆರೋಪಿಗಳನ್ನು ಪತ್ತೆಹಚ್ಚಿ ಎನ್‌ಕೌಂಟರ್ ನಡೆಸಿತು. ಮೃತರಾದ ಅರುಣ್ ಮತ್ತು ರವೀಂದ್ರ ರೋಹಿತ್ ಗೋದಾರ ಮತ್ತು ಬೋಲ್ಡಿ ಬ್ರಾರ್ ಗ್ಯಾಂಗ್‌ಗೆ ಸಂಬಂಧ ಹೊಂದಿದ್ದರು. ಆರೋಪಿಗಳಿಂದ ಪಿಸ್ತೂಲ್ ಸೇರಿ ಹಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ರವೀಂದ್ರ ಈ ಮೊದಲು ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದು ತಿಳಿದುಬಂದಿದೆ.

ದಾಳಿಯ ಹೊಣೆಗಾರಿಕೆಯನ್ನು ಗ್ಯಾಂಗ್ ಸದಸ್ಯರು ಸ್ವತಃ ಸ್ವೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ “ಸನಾತನ ಧರ್ಮ ಹಾಗೂ ಸಂತರ ಬಗ್ಗೆ ಯಾರಾದರೂ ಅವಮಾನ ಮಾಡಿದರೆ ಪರಿಣಾಮಕ್ಕೆ ಸಿದ್ಧರಾಗಿರಿ” ಎಂಬ ಸಂದೇಶವನ್ನು ಹಂಚಿಕೊಂಡಿದ್ದರು. ಪೊಲೀಸರು ಇದೀಗ ಈ ಗ್ಯಾಂಗ್ ಜೊತೆ ಸಂಪರ್ಕ ಹೊಂದಿರುವ ಇತರರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Spread the love
Translate »
Right Ad