ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್ ಇದೀಗ ದುಬಾರಿ ಬೆಲೆಯ ಕಾರು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ.ತುಕಾಲಿ ಸಂತೋಷ್ ಈ ಮೊದಲು ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನರಿಗೆ ಚಿರಪರಿಚಿತರಾದವರು. ಬಳಿಕ ಧಾರವಾಹಿ, ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದರು. ಆದರೆ ಬಿಗ್ ಬಾಸ್ ಶೋಗೆ ಹೋದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿತ್ತು.
ಬಿಗ್ ಬಾಸ್ ಫೈನಲ್ ತನಕ ಬಂದಿದ್ದ ತುಕಾಲಿ ಬಳಿಕ ಕಪ್ ಗೆಲ್ಲಲು ಸಾಧ‍್ಯವಾಗಲಿಲ್ಲ. ಆದರೆ ತುಕಾಲಿ ಮತ್ತು ಅವರ ಪತ್ನಿ ಮಾನಸಾ ಕಾಮಿಡಿ ಜನರ ಮನಗೆದ್ದಿತ್ತು. ಬಿಗ್ ಬಾಸ್ ಶೋನಲ್ಲಿ ಅವರಿಗೆ ಉತ್ತಮ ಸಂಭಾವನೆಯನ್ನೇ ನೀಡಲಾಗುತ್ತಿತ್ತು. ಅಲ್ಲದೆ, ಫೈನಲ್ ತನಕ ಬಂದಿದ್ದರಿಂದ ಹೆಚ್ಚುವರಿ ಬಹುಮಾನ ಹಣ ಸಿಕ್ಕಿತ್ತು.
ಇದೀಗ ಅದೇ ಹಣದಿಂದ ಕಿಯಾ ಮಾಡೆಲ್ ಕಾರು ಖರೀದಿ ಮಾಡಿದ್ದಾರೆ. ಇದರ ಬೆಲೆ ಸುಮಾರು 20 ಲಕ್ಷ ರೂ.ಗಳವರೆಗಿದೆ. ಪತ್ನಿ ಜೊತೆಗೆ ಶೋ ರೂಂಗೆ ತೆರಳಿ ಬಿಳಿ ಬಣ್ಣದ ಕಿಯಾ ಕಾರು ಪಡೆದುಕೊಳ್ಳುತ್ತಿರುವ ಕ್ಷಣಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.