ಝೈದ್ ಖಾನ್ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಬನಾರಸ್’ ಈಗಾಗಲೇ ‘ಮಾಯಗಂಗೆ’ ಎಂಬ ಮೋಹಕ ಹಾಡಿನ ಮೂಲಕ ಎಲ್ಲರನ್ನೂ ಆವರಿಸಿಕೊಂಡಿದೆ. ಸಾಮಾನ್ಯವಾಗಿ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ಚಿತ್ರ ಸಹ ದೊಡ್ಡ ಗೆಲುವು ಸಾಧಿಸುತ್ತದೆ ಎಂಬ ನಂಬಿಕೆ ಚಿತ್ರರಂಗದಲ್ಲಿದೆ. ‘ಬನಾರಸ್’ ವಿಚಾರದಲ್ಲಿ ಅದು ನಿಜವಾಗುವ ಲಕ್ಷಣಗಳು ದಟ್ಟವಾಗಿವೆ. ‘ಬನಾರಸ್’ ಚಿತ್ರವು ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಯೊಂದು ಕಳೆದ ಕೆಲವು ದಿನಗಳಿಂದ ಚಿತ್ರಪ್ರೇಮಿಗಳಲ್ಲಿ ಮನೆಮಾಡಿತ್ತು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದೇ ನವೆಂಬರ್ ನಾಲ್ಕರಂದು ಚಿತ್ರವು ಜಗತ್ತಿನಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ.ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬನಾರಸ್’, ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ.. ಇತ್ತೀಚಿನ ದಿನಗಳಲ್ಲಿ ಕೆಲವು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂಲಕ ಕನ್ನಡದ ಕೀರ್ತಿಪತಾಕೆ ರಾಷ್ಟ್ರಮಟ್ಟದಲ್ಲಿ ಹಾರುತ್ತಿದೆ. ಬನಾರಸ್ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡಲಿದೆ.
ಭಾರತೀಯ ಅಂಚೆ ಇಲಾಖೆಯಿಂದ ಕಿಚ್ಚ ಸುದೀಪ್ಗೆ ವಿಶೇಷ ಗೌರವ
ಆ ನಂಬಿಕೆ ನಿಜವಾಗುವಂತೆ ಮೂಡಿಬಂದಿರುವ ಈ ಚಿತ್ರವನ್ನು ತಿಲಕ್ ರಾಜ್ ಬಲ್ಲಾಳ್ ಪ್ರೀತಿಯಿಂದ, ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದರೊಳಗಿನ ಕಥೆ ಎಷ್ಟು ಕಾಡಲಿದೆಯೋ, ಚಿತ್ರ ತನ್ನ ಅದ್ಧೂರಿತನದಿಂದ ಸಹ ಗಮನಸೆಳೆಯಲಿದೆ. ಒಟ್ಟಾರೆಯಾಗಿ ಇದೊಂದು ವಿಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದೆ. ಸದ್ಯದಲ್ಲೇ ಚಿತ್ರದ ಪ್ರಚಾರಕಾರ್ಯ ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಲಿದ್ದು, ಚಿತ್ರತಂಡವು ‘ಬನಾರಸ್’ ಬಗೆಗಿನ ಇನ್ನಷ್ಟು ಆಸಕ್ತಿಕರ ಸಂಗತಿಗಳನ್ನು ಜಾಹೀರು ಮಾಡಲು ತಯಾರಿ ನಡೆಸಿದೆ.
ದೊಡ್ಡ ತಾರಾಗಣ, ಪಳಗಿದ ತಾಂತ್ರಿಕ ವರ್ಗ ಮತ್ತು ಪ್ರತಿಭಾವಂತ ಕಲಾವಿದರಿಂದ ತುಂಬಿರುವ ಬನಾರಸ್, ಆರಂಭದಿಂದ ಇಲ್ಲಿಯವರೆಗೂ ಕುತೂಹಲ ಕಾಯ್ದಿಟ್ಟುಕೊಂಡು ಬಂದಿದೆ. ಅದರಲ್ಲೂ ವಿಶೇಷವಾಗಿ, ಬನಾರಸ್ ಮೂಲಕ ಝೈದ್ ಖಾನ್ ಎಂಬ ಅಪ್ಪಟ ಕನ್ನಡಿಗನ, ಪ್ರತಿಭಾವಂತ ಹೀರೋನ ಆಗಮನವಾಗುತ್ತಿದೆ.. ಝೈದ್ ಈ ಚಿತ್ರಕ್ಕಾಗಿ ಪಟ್ಟಿರುವ ಪರಿಶ್ರಮ, ತಯಾರಾಗಿರುವ ರೀತಿಯೇ ಅವರ ಬಗ್ಗೆ ಭರವಸೆ ಹೆಚ್ಚಿಸಿದೆ. ಮಾಯಗಂಗೆ ಹಾಡಿನ ಮೂಲಕ ಅದು ಮತ್ತಷ್ಟು ಗಟ್ಟಿಗೊಂಡಿದೆ. ಒಟ್ಟಾರೆ, ‘ಬನಾರಸ್’ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿದ್ದು, ವರ್ಷದ ಬಹುದೊಡ್ಡ ಹಿಟ್ ಚಿತ್ರವಾಗಿ ದಾಖಲಾಗುವ ಎಲ್ಲ ಸುಳಿವನ್ನು ಬಿಡುಗಡೆಗೆ ಮುಂಚೆಯೇ ನೀಡಿದೆ.