Left Ad
ಸಿನಿಮಾ ಪೋಸ್ಟರ್ ಎಂಬ ಮೊದಲ ಆಮಂತ್ರಣ - Chittara news
# Tags

ಸಿನಿಮಾ ಪೋಸ್ಟರ್ ಎಂಬ ಮೊದಲ ಆಮಂತ್ರಣ

 
 
ನಮಗೆಲ್ಲಾ ಅಂದರೇ ನಿರ್ದೇಶಕರುಗಳಿಗೆ ಪೋಸ್ಟರ್ ವಿನ್ಯಾಸವೇ ಒಂದು ಸಿನಿಮಾದ ಕಥೆ ಚಿತ್ರಕಥೆ ರಚಿಸುವಷ್ಟು ಶ್ರಮ ಬೇಡುತ್ತದೆ. ಹಾಗೇ ನೋಡಿದರೇ ಪ್ರೊಮೊ ಎಷ್ಟು ಮುಖ್ಯವೋ ಅದರ ಪೋಸ್ಟರ್ ಕೂಡ ಅಷ್ಟೇ ಮುಖ್ಯ ಎನ್ನಬಹುದು. ಯಾಕೆಂದರೆ ಪ್ರೊಮೊ ಹಾಡುಗಳಿಗಿಂತ ಮೊದಲಿಗೆ ಚಿತ್ರದ ಬಗ್ಗೆ ಸಣ್ಣ ಸುಳಿವು ಕೊಡುವುದು ಕುತೂಹಲ ಕೆರಳಿಸುವುದು ಈ ಪೋಸ್ಟರ್ ಗಳು ಎನ್ನಬಹುದು. ಅದರಲ್ಲೂ ಒಂದು ಚಿತ್ರದ ಪೋಸ್ಟರ್ ಆ ಚಿತ್ರದ ಬಗ್ಗೆ ಕುತೂಹಲ ಕೆರಳಿಸಬಹುದು, ಕತೆಯ ವಸ್ತುವನ್ನು ಬಿಚ್ಚಿಡಬಹುದು. ಹಾಗಾಗಿಯೇ ಒಬ್ಬ ನಿರ್ದೇಶಕ ಸಿನಿಮಾ ಮಾಡುವ ಆಷ್ಟೇ ಅಸ್ಥೆಯಿಂದ ಪೋಸ್ಟರ್ ಕೂಡ ವಿನ್ಯಾಸ ಮಾಡಿಸುತ್ತಾನೆ.
 
ಉಪೇಂದ್ರರ ಎ ಚಿತ್ರದ ಪೋಸ್ಟರ್ ಕೂಡ ಅದ್ಭುತಗಳ ಸಾಲಿಗೆ ಸೇರುತ್ತದೆ ಎನ್ನಬಹುದು. ಚಿತ್ರದಲ್ಲಿರುವ ನಾಯಕನ ತುಮುಲ, ನಿರೂಪಣೆಯಲ್ಲಿನ ಗೊಂದಲವನ್ನು ಪೋಸ್ಟರ್ ನಲ್ಲೆ ಸೂಕ್ಷ್ಮವಾಗಿ ವಿವರಿಸಿದ್ದು ಆ ಚಿತ್ರದ ಪೋಸ್ಟರ್ ವಿನ್ಯಾಸದ ವಿಶೇಷ ಎನ್ನಬಹುದು. ಸ್ಟಾರ್ ಸಿನಿಮಾಗಳಲ್ಲಿ ವಿನ್ಯಾಸಕ್ಕಿಂತಲೂ ತಾರಾಗಣದ ಮೇಲೆಯೇ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಇಲ್ಲಿ ಥೀಮ್ ಜೊತೆಗೆ ಹೀರೋ ಮುಖ ಇರಲೇಬೇಕು…
 
kinopoisk.ru
ಈಗಂತೂ ನಾಯಕ, ಸುತ್ತಿಗೆ, ಲಾಂಗು, ದೊಡ್ದ ದೊಡ್ಡ ಮಶಿನ್ ಗನ್, ರಕ್ತ ಸಿಕ್ತ ದೇಹ…ಹೀಗೆ ಟ್ರೆಂಡ್ ನಡೆಯುತ್ತಿದೆ. ಬಹುತೇಕ ಸ್ಟಾರ್ ಸಿನಿಮಾ ಪೋಸ್ಟರ್ ಗಳ ಸರಕು ಇದೆಯೇ. ಅ ಮೂಲಕ ಅದೊಂದು ಆಕ್ಷನ್ ಸಿನಿಮಾ ಎನ್ನುವ ಸೂಚನೆ ಕೊಡುತ್ತವೆ. ಒಂದಷ್ಟು ದಿನಗಳ ಹಿಂದೆ ಬಾಲಿವುಡ್ ನಲ್ಲಿ ಪ್ರಣಯಭರಿತ ದೃಶ್ಯಗಳನ್ನು ಪೋಸ್ಟರ್ ನಲ್ಲಿ ವಿನ್ಯಾಸಗೊಳಿಸಲಾಗುತ್ತಿತ್ತು.
ಹಾಗೆಯೇ ಹಾಲಿವುಡ್ನ ಹ್ಯಾರಿಸನ್ ಫೋರ್ಡ್ ಅಭಿನಯದ ಫ್ಯೂಜಿಟಿವ್ ಚಿತ್ರದ ಪೋಸ್ಟರ್ ಗಮನಿಸಿ. ಚಿತ್ರದ ತುಂಬಾ ತಪ್ಪಿಸಿಕೊಂಡು ಓಡುವ ನಾಯಕ ಪೋಸ್ಟರ್ ನಲ್ಲೂ ಓಡುತ್ತಿರುತ್ತಾನೆ.
ಚಿತ್ರದ ಕತೆಗೆ ತಕ್ಕಂತೆ ಆ ಪೋಸ್ಟರ್ ಇದೆ ಎನ್ನಬಹುದು. ಅದೇ ಟ್ರೆಂಡ್ ಕೆಲದಿನಗಳ ಹಿಂದೆ ಓಡುವ ನಾಯಕರ ಪೋಸ್ಟರ್ ಗಳು ಬಂದಿದ್ದವು. ಮಹೇಶ್ ಬಾಬು ಅಭಿನಯದ ಪೋಕಿರಿ ಚಿತ್ರದಿಂದ ಪ್ರಾರಂಭವಾದ ಪೋಸ್ಟರ್ ಓಟ ಸುಮಾರು ದಿನ ನಡೆಯಿತು. ಆ ಸಮಯದಲ್ಲಿ ಕನ್ನಡವೂ ಸೇರಿದಂತೆ ಸುಮಾರಷ್ಟು ಚಿತ್ರಗಳ ನಾಯಕರು ಓಡುತ್ತಲೇ ಇರುವುದನ್ನು ನಾವು ಕಾಣಬಹುದು.
ಅದೆಲ್ಲಿಗೆ ಓಡುತ್ತಿದ್ದಾರೆ, ಅದ್ಯಾಕೆ ಓಡುತ್ತಿದ್ದಾರೆ. ಇವರೇ ಯಾರನ್ನಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..? ಅಥವಾ ಇವರನ್ನು ಯಾರಾದರೂ ಅಟ್ಟಿಸಿಕೊಂಡು ಹೋಗುತ್ತಿದ್ದಾರಾ..?
ಅಥವಾ ತಮಾಷೆಗೆ ಹೇಳುವುದಾದರೆ ಯಾವುದಾದರೂ ಸ್ಪರ್ದೆಯಲ್ಲಿ ಭಾಗವಹಿಸುತ್ತಿದ್ದಾರಾ? ಎಂಬ ಪ್ರಶ್ನೆ ಎದುರಾಗದೆ ಇರದು.
 
ಯಾಕೆಂದರೆ ಆ ಪೋಸ್ಟರ್ ಚಿತ್ರಗಳನ್ನೆಲ್ಲಾ ನಾನು ನೋಡಿದ್ದೇನೆ. ಅವುಗಳಲ್ಲಿ ಅಂತಹ ಓಟ ಇಲ್ಲ. ನಾಯಕ ಯಾವುದೋ ಹೊಡೆದಾಟದ ಸಂದರ್ಭದಲ್ಲಿ ಓಡಿರಬಹುದೇನೋ? ಅದು ಬಿಟ್ಟರೆ ಚಿತ್ರದ ಕತೆಗೆ ಓಟಕ್ಕೆ ಸಂಬಂಧವಿಲ್ಲ. ಪೋಸ್ಟರ್ ನಲ್ಲಿ ಅಷ್ಟು ಫೋರ್ಸ್ ನಿಂದ ಓಡುವ ನಾಯಕನ ಸಿನಿಮಾ ಎಷ್ಟೋ ಸಾರಿ ಆಮೆವೇಗದಲ್ಲಿದ್ದು ಜನರೇ ಚಿತ್ರಮಂದಿರದಿಂದ ಹೊರಕ್ಕೆ ಓಟಕಿತ್ತ ಉದಾಹರಣೆ ಇಲ್ಲದಿಲ್ಲ. ಹಾಗೆಯೇ ನಾಯಕಿ ಕೈಹಿಡಿದು ಕೊಂಡು ಓಡುತ್ತಿರುವ, ಗುಂಪು ಕಟ್ಟಿಕೊಂಡು ಓಡುತ್ತಿರುವ, ಕೈ ಯಲ್ಲಿ ಆಯುಧ ಹಿಡಿದು ಓಡುತ್ತಿರುವ, ಖುಷಿಯಿಂದ ಓಡುತ್ತಿರುವ,
ಕೋಪದಿಂದ ಮುನ್ನುಗ್ಗಿ ಓಡುತ್ತಿರುವ, ತಪ್ಪಿಸಿಕೊಂಡು ಓಡುತ್ತಿರುವ ಹೀಗೆ ತರಹೇವಾರಿ ಓಟಗಾರರನ್ನು ಕಾಣಬಹುದು. ಈ ಓಟ ಸಿನಿಮಾದ ಪೋಸ್ಟರ್ ಗೆ ಒಂದು ಫೋರ್ಸ್ ಕೊಡುತ್ತದೆ ಎಂದು ಆವಾಗ ಹೇಳಲಾಗುತ್ತಿತ್ತು. ಆದರೆ ಸಿನಿಮಾದ ಕತೆಯಲ್ಲಿ ಆತರಹದ ಪಲಾಯನ, ತಪ್ಪಿಸಿಕೊಳ್ಳುವಿಕೆ ಇಲ್ಲ. ಸಾಮಾನ್ಯ ಪ್ರೇಮಕತೆಯ ಚಿತ್ರವಾದರೂ ನಾಯಕ ಓಡಿದರೆ ಏನು ಮಾಡೋಣ.
ಅಥವಾ ಬೇಗ ಬನ್ನಿ ಇಲ್ಲವಾದರೆ ನಾನೂ ಚಿತ್ರಮಂದಿರದಿಂದಲೇ ಓಡಿಬಿಡುತ್ತೇನೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಿರಬಹುದಾ? ಹಾಗೆಯೇ ಕೆಜಿಎಫ್ ನಂತರ ಕತ್ತಲು ಕತ್ತಲು ಪೋಸ್ಟರ್ ಟ್ರೆಂಡ್ ಶುರುವಾದದ್ದೆ, ನಾಯಕ ನಾಯಕಿ ಯಾರೂ , ಏನು ಮಾಡುತ್ತಿದ್ದಾರೆ ಎನ್ನುವುದೇ ಕಾಣದಷ್ಟು ಕತ್ತಲು ಕತ್ತಲು ಪೋಸ್ಟರ್ ಗಳೂ ಬಂದದ್ದು ನಿಮಗೆ ಗೊತ್ತೇ ಇದೆ.
 
 
 
 
Spread the love
Translate »
Right Ad