‘ಬಿಗ್‌ಬಾಸ್ ಕನ್ನಡ 12’ನಿಂದ ಈ ವಾರ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿ ಚಂದ್ರಪ್ರಭ ತಮ್ಮ ಜೀವನದ ಕಠಿಣ ಹಾದಿಯ ಕುರಿತಾಗಿ ಭಾವುಕವಾಗಿ ಮಾತನಾಡಿದ್ದಾರೆ. ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಈ ಕಾಮಿಡಿ ನಟ, ಬಿಗ್‌ಬಾಸ್‌ಗೆ ಹೋಗುವ ಕೆಲವೇ ದಿನಗಳ ಮೊದಲು ಗಾರೆ ಕೆಲಸ ಮಾಡುತ್ತಿದ್ದೆ ಎಂಬ ಅಚ್ಚರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು, “ಜೀವನ ಸಾಗಿಸಲು ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಕರೆ ಬರೋ ಕೆಲ ದಿನಗಳ ಮೊದಲು ನಾನು ಗಾರೆ ಕೆಲಸ ಮಾಡಿದ್ದೆ. ಕರೆ ಬಂದ ತಕ್ಷಣ ಕೆಲಸ ಬಿಟ್ಟು ಬಿಗ್‌ಬಾಸ್‌ಗೆ ಬಂದೆ,” ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಚಂದ್ರಪ್ರಭ, 10ನೇ ತರಗತಿ ನಂತರ ಗಾರೆ ಕೆಲಸವನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು. ಬಳಿಕ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿ, ರಂಗಾಯಣದಲ್ಲಿ ತರಬೇತಿ ಪಡೆದ ಅವರು ಮಜಾಭಾರತ ಕಾಮಿಡಿ ಶೋ ಮೂಲಕ ಮನೆಮಾತಾದರು.
ಕಿರುತೆರೆಯಲ್ಲಿ ಹೆಸರು ಮಾಡಿದರೂ ಕೆಲಸದ ಅಭಾವವಿದ್ದಾಗ ಮತ್ತೆ ಗಾರೆ ಕೆಲಸಕ್ಕೂ ಹಿಂತಿರುಗಿದ್ದೇನೆ ಎಂದು ಅವರು ಸತ್ಯವಾಗಿ ಒಪ್ಪಿಕೊಂಡಿದ್ದಾರೆ. “ಕೆಲಸ ಯಾವುದಾದರೂ ಇರಲಿ, ಕೂತು ತಿನ್ನೋದು ಬೇಡ, ದುಡಿದು ತಿನ್ನಬೇಕು” ಎಂಬ ತತ್ವದಿಂದ ಬದುಕುತ್ತಿರುವೆ ಎಂದು ಹೇಳಿದರು.
ತಂದೆಯೇ ಗಾರೆ ಕೆಲಸ ಮಾಡುತ್ತಿದ್ದ ಕಾರಣ ಅದನ್ನೇ ಮುಂದುವರೆಸಿದ ಚಂದ್ರಪ್ರಭ, “ಇಂದು ಕಾರು, ಮನೆ ಎಲ್ಲವೂ ಇದೆ. ಆದರೂ ಕೆಲಸ ಇಲ್ಲದಿದ್ದರೆ ಗೊತ್ತಿರುವ ಕೆಲಸವನ್ನೇ ಮಾಡುತ್ತೇನೆ. ಪ್ರತಿ ಕಾಮಿಡಿಯನ್ ಹಿಂದೆ ಕಾಣದ ನೋವು ಇರುತ್ತೆ. ಅವನು ಎಷ್ಟು ನಗಿಸುತ್ತಾನೋ ಅಷ್ಟೇ ಅಳಬಲ್ಲ” ಎಂದು ಭಾವುಕವಾಗಿ ಮನಸಾರೆ ಹೇಳಿದರು.
