ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಎಲ್. ರಾಮಚಂದ್ರನ್ ಪ್ರತಿವರ್ಷ ನವ ಹಾಗೂ ವಿಭಿನ್ನ ಪರಿಕಲ್ಪನೆಯ ಕ್ಯಾಲೆಂಡರ್ ಮೂಲಕ ಗಮನ ಸೆಳೆಯುತ್ತಾರೆ. ತಮ್ಮ ವಿಶೇಷ ಪರಿಕಲ್ಪನೆಯಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಬೆರಗುಗೊಳಿಸುವಂತೆ ಚೆಂದಗಾಣಿಸಿ ಕ್ಯಾಲೆಂಡರ್ ರೂಪ ನೀಡುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ಎಲ್. ರಾಮಚಂದ್ರನ್ ಖ್ಯಾತ ನಟ ವಿಜಯ್ ಸೇತುಪತಿ ಜೊತೆಗೂಡಿ 2023ಕ್ಕೆ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಹೊರತಂದಿದ್ದಾರೆ.
ಕಳೆದೆರಡು ವರ್ಷದಿಂದ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಹಾಗೂ ಎಲ್. ರಾಮಚಂದ್ರನ್ ಹೊಸ ಪರಿಕಲ್ಪನೆಯಡಿ ಹೊಸ ವರ್ಷಕ್ಕೆ ಕ್ಯಾಲೆಂಡರ್ ನಿರ್ಮಾಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದೆ ‘ಹ್ಯೂಮನ್’ ಮತ್ತು ‘ಕಲೈಜ್ಞಾನ್’ ಎಂಬ ಶೀರ್ಷಿಕೆಯಡಿ ಎರಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಎಲ್ಲರ ಚಿತ್ತ ಸೆಳೆದಿತ್ತು ಈ ಜೋಡಿ. ಇದೀಗ ಸತತ ಮೂರನೇ ಬಾರಿ ಈ ಜೋಡಿ ಒಂದಾಗಿ 2023ಕ್ಕೆ ಹೊಸ ಥೀಮ್ ನಡಿ ಕ್ಯಾಲೆಂಡರ್ ಒಂದನ್ನು ಹೊರತಂದಿದೆ. ಈ ಬಾರಿಯ ಕ್ಯಾಲೆಂಡರ್ ಗೆ ‘ದಿ ಆರ್ಟಿಸ್ಟ್’ ಎಂಬ ಶೀರ್ಷಿಕೆ ಇಡಲಾಗಿದೆ.

‘ದಿ ಆರ್ಟಿಸ್ಟ್’ ಪರಿಕಲ್ಪನೆಯಡಿ ಚಿತ್ರಕಲೆ ಕಲಾವಿದ, ಶಿಲ್ಪಿ, ಗ್ರಾಫಿಟಿ ಕಲಾವಿದ ಹೀಗೆ ಹಲವು ಆಯಾಮದಲ್ಲಿ ವಿಜಯ್ ಸೇತುಪತಿ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಈ ಎಲ್ಲಾ ಫೋಟೋಗಳಿಗೂ ಸುಂದರ ಸ್ಪರ್ಶ ನೀಡಿ 2023ಕ್ಕೆ ಕಲರ್ ಫುಲ್ ಕ್ಯಾಲೆಂಡರ್ ತಯಾರಿಸಲಾಗಿದೆ. ಈ ಫೋಟೋಗಳನ್ನು ಸೆರೆ ಹಿಡಿಯಲು 12 ವಿಭಿನ್ನ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು, ನೂರಕ್ಕು ಹೆಚ್ಚು ಜನ ಹಗಲಿರುಳೆನ್ನದೇ ಹತ್ತು ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ದುಡಿದಿರೋದು ಗಮನಾರ್ಹ.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಎಲ್. ರಾಮಚಂದ್ರನ್ ಕಲೆ ಮತ್ತು ಕಲ್ಪನೆ ಅನೇಕ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಈ ಕ್ಯಾಲೆಂಡರ್ ಒಂದೊಳ್ಳೆ ಕಾರ್ಯಕ್ಕೆ ಅಡಿಪಾಯವಾಗಿದೆ. ಹಲವು ಜನರ ಸಂತೋಷಕ್ಕೂ ಇದು ಕಾರಣವಾಗಿದೆ. ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಪ್ರತಿಯೊಬ್ಬ ಸೃಷ್ಟಿಕರ್ತ ಕಲಾವಿದನಿಗೂ ಅರ್ಪಣೆ ಎಂದಿದ್ದಾರೆ.
ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಈ ಬಾರಿಯ ವಿಶಿಷ್ಟ ಪರಿಕಲ್ಪನೆ ಹೊಂದಿದ ಕ್ಯಾಲೆಂಡರ್ ಹೊರತರಲು ಸಮಯ ನೀಡಿದ್ದಕ್ಕಾಗಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಲ್. ರಾಮಚಂದ್ರನ್. ದೃಢಸಂಕಲ್ಪ, ಆತ್ಮ ಸ್ಥೈರ್ಯ, ಕೆಲಸದಲ್ಲಿನ ಬದ್ಧತೆ ವಿಜಯ್ ಸೇತುಪತಿ ಅವರನ್ನು ಇತರೆ ಸಮಕಾಲೀನ ನಟರಿಗಿಂತ ಎತ್ತರಕ್ಕೆ ನಿಲ್ಲಿಸಿದೆ. ವಿಶೇಷ ಸ್ಥಾನಮಾನಕ್ಕೂ ಅವರು ಅರ್ಹರು. ಈ ಬಾರಿಯ ಪರಿಕಲ್ಪನೆಗಾಗಿ ವಿಜಯ್ ಸೇತುಪತಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ್ದಾರೆ. ‘ದಿ ಆರ್ಟಿಸ್ಟ್’ ಪರಿಕಲ್ಪನೆ ಹಾಗೂ ಅದರ ವಿಭಿನ್ನತೆಯನ್ನು ಇಂಚಿಂಚೂ ಅರ್ಥ ಮಾಡಿಕೊಂಡು ಪರಿಣಿತರ ಬಳಿ ಚರ್ಚೆ ನಡೆಸಿ ತಾವೇ ಒಂದು ಪಾತ್ರವಾಗಿ ಮಾರ್ಪಾಡಾಗಿದ್ರು, ಅಷ್ಟರ ಮಟ್ಟಿಗೆ ತಲ್ಲೀನರಾಗಿದ್ರು ಎಂದು ವಿಜಯ್ ಸೇತುಪತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಲ್.ರಾಮಚಂದ್ರನ್.
2021ರ ಲಾಕ್ ಡೌನ್ ನಲ್ಲಿ ಬಿಡುಗಡೆಯಾದ ‘ಹ್ಯೂಮನ್’, 2022ರಲ್ಲಿ ಬಿಡುಗಡೆಯಾದ ‘ಕಲೈಜ್ಞಾನ್’ ಶೀರ್ಷಿಕೆಯ ಕ್ಯಾಲೆಂಡರ್ ಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. 2023ರ ‘ದಿ ಆರ್ಟಿಸ್ಟ್’ ಶೀರ್ಷಿಕೆ ಹೊತ್ತ ಕ್ಯಾಲೆಂಡರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಕ್ಯಾಲೆಂಡರ್ ಮಾರಾಟದಿಂದ ಸಂಗ್ರಹವಾದ ಹಣ ವಿಜಯ್ ಸೇತುಪತಿ ಚಾರಿಟೇಬಲ್ ಟ್ರಸ್ಟ್ ಗೆ ಸೇರಲಿದ್ದು, ಸಾಮಾಜಿಕ ಕಲ್ಯಾಣಕ್ಕಾಗಿ ಈ ಆದಾಯವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹಿಂದಿನ ಎರಡು ವರ್ಷಕ್ಕಿಂತ ಈ ಬಾರಿಯ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ. ತಿಂಗಳಿಗೆ ಎರಡು ಫೋಟೋ ಒಳಗೊಂಡಂತೆ ಒಟ್ಟು 24 ಫೋಟೋ ವಿನ್ಯಾಸವಿರುವ 2023ರ ಕಲರ್ ಫುಲ್ ‘ದಿ ಆರ್ಟಿಸ್ಟ್’ ಕ್ಯಾಲೆಂಡರ್ ಖಂಡಿತ ಎಲ್ಲರ ಹೃದಯ ಗೆಲ್ಲುತ್ತೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.