ನಟ ದರ್ಶನ್ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಒಂದೆರಡು ಸಿನಿಮಾಗಳನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಕೆವಿಎನ್, ಸೂರಪ್ಪ ಬಾಬು ನಿರ್ಮಾಣದ ಚಿತ್ರಗಳಲ್ಲಿ ನಟಿಸದೇ ಇರಲು ತೀರ್ಮಾನಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ತೆಲುಗು ನಿರ್ಮಾಣ ಸಂಸ್ಥೆವೊಂದು ದರ್ಶನ್ ಜೊತೆ ಸಿನಿಮಾ ಮಾಡಲು ಕಾಯುತ್ತಿದೆ. ಹೌದು 4 ವರ್ಷಗಳ ಹಿಂದೆಯೇ ತೆಲುಗಿನ ‘ಶ್ರೀ ವೆಂಕಟೇಶ್ವರ ಸಿನಿ ಚಿತ್ರ’ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ದರ್ಶನ್ ಮಾತುಕತೆ ನಡೆಸಿದ್ದರು. 2021ರಲ್ಲಿ ದರ್ಶನ್ ಹುಟ್ಟುಹಬ್ಬದ ದಿನ ಸಂಸ್ಥೆ ಶುಭಕೋರಿ ಪೋಸ್ಟ್ ಮಾಡಿತ್ತು. ಅದೇ ಸಮಯದಲ್ಲಿ ‘ಶ್ರೀ ವೆಂಕಟೇಶ್ವರ ಸಿನಿ ಚಿತ್ರ’ ಸಂಸ್ಥೆಯ ಚಿತ್ರದಲ್ಲಿ ದರ್ಶನ್ ನಟಿಸುವುದು ಪಕ್ಕಾ ಎನ್ನಲಾಗಿತ್ತು. ಆದರೆ ಯಾವ ಸಿನಿಮಾ? ನಿರ್ದೇಶಕ ಯಾರು? ಯಾವಾಗ ಸಿನಿಮಾ ಶುರುವಾಗುತ್ತದೆ? ಎನ್ನುವ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ.
‘ಶ್ರೀ ವೆಂಕಟೇಶ್ವರ ಸಿನಿ ಚಿತ್ರ’ ಬ್ಯಾನರ್ ಚಿತ್ರದಲ್ಲಿ ದರ್ಶನ್ ನಟಿಸುತ್ತಾರೆ ಎಂದು ಇತ್ತೀಚೆಗೆ ತೆಲುಗು ಪಿಆರ್ ವಂಶಿ ಕಾಕ ಖಚಿತಪಡಿಸಿದ್ದರು. ಆ ಸಿನಿಮಾ ಇನ್ನು ಮಾತುಕತೆಯಲ್ಲಿ ಇದೆ. ಅದನ್ನು ಕೈ ಬಿಟ್ಟಿಲ್ಲ ಎಂದಿದ್ದರು. ಅದರ ಬೆನ್ನಲ್ಲೇ ನಿರ್ದೇಶಕರು ಯಾರು? ಎನ್ನುವ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ತೆಲುಗು ನಿರ್ದೇಶಕ ಶ್ರೀಕಾಂತ್ ಅಡ್ಡಾಲ ಕಾಂಬಿನೇಷನ್‌ನಲ್ಲಿ ದರ್ಶನ್ ನಟಿಸೋ ಸಾಧ್ಯತೆಯಿದೆ. ಕಳೆದ ವರ್ಷವೇ ತೆಲುಗು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಆಗಿತ್ತು.
ತೆಲುಗಿನಲ್ಲಿ ಶ್ರೀಕಾಂತ್ ಅಡ್ಡಾಲ ಸೂಪರ್ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಸದ್ಯ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. ದರ್ಶನ್ ಸಿನಿಮಾ ಸ್ಟ್ರಿಪ್ಟ್ ಕೆಲಸಗಳಲ್ಲಿ ಮುಳುಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಗುಲ್ಲಾಗಿದೆ. ದರ್ಶನ್ ಇನ್‌ಸ್ಟಾಗ್ರಾಮ್ ಖಾತೆಯನ್ನು ಶ್ರೀಕಾಂತ್ ಅಡ್ಡಾಲ ಫಾಲೋ ಮಾಡುತ್ತಿದ್ದಾರೆ. ಹಾಗಾಗಿ ಇದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವುದು ಕನ್ಫರ್ಮ್ ಎಂದು ಅಭಿಮಾನಿಗಳು ಫಿಕ್ಸ್ ಆಗಿದ್ದಾರೆ. ‘ಕೊತ್ತ ಬಂಗಾರುಲೋಕಂ’ ಚಿತ್ರದ ಮೂಲಕ ಶ್ರೀಕಾಂತ್ ಸ್ವತಂತ್ರ ನಿರ್ದೇಶಕರಾಗಿದ್ದರು. ಬಳಿಕ ‘ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು’, ‘ಮುಕುಂದ’, ‘ಬ್ರಹ್ಮೋತ್ಸವಂ’, ‘ನಾರಪ್ಪ’ ಹಾಗೂ ‘ಪೆದ್ದ ಕಾಪು-1’ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಮಹೇಶ್ ಬಾಬು ನಟನೆಯ ‘ಬ್ರಹ್ಮೋತ್ಸವಂ’ ಸಿನಿಮಾ ಹೀನಾಯವಾಗಿ ಸೋತಿತ್ತು. ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾಗಳನ್ನು ನಿರ್ದೇಶಿಸುವುದರಲ್ಲಿ ನಿರ್ದೇಶಕರು ಸಿದ್ಧಹಸ್ತರು. ದರ್ಶನ್ ಕಾಂಬಿನೇಷನ್‌ನಲ್ಲಿ ಕೂಡ ಇಂತದ್ದೇ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಚಿತ್ರಕ್ಕೆ ಶ್ರೀಕಾಂತ್ ಅಡ್ಡಾಲ ಆಕ್ಷನ್ ಕಟ್ ಹೇಳುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಇಂತಾದೊಂದು ಚರ್ಚೆ ಫಿಲ್ಮ್ ನಗರ್‌ನಲ್ಲಿ ನಡೆದಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಈ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ. ‘ಡೆವಿಲ್’ ಚಿತ್ರಕ್ಕೆ ಮಿಲನಾ ಪ್ರಕಾಶ್ ಸಾರಥ್ಯ ವಹಿಸಿದ್ದಾರೆ. ಬಳಿಕ ಪ್ರೇಮ್ ಹಾಗೂ ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಬೇಕಿದೆ.