ಹೀಗಾಗಬಹುದು ಎಂಬ ಗುಮಾನಿ ಮತ್ತು ನಿರೀಕ್ಷೆ ಎರಡೂ ಇತ್ತು. ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿರುವ ದುಬಾರಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡುವುದರ ಜೊತೆಗೆ ಪಕ್ಕದ ರಾಜ್ಯಗಳಲ್ಲಿರುವಂತೆ ಏಕರೂಪ ಟಿಕೆಟ್ ದರ ನಿಗದಿಪಡಿಸಲು ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ಸಾರ್ವಜನಿಕ ಆಕ್ಷೇಪ, ಸಲಹೆಗಳಿಗೆ 15 ದಿನಗಳ ಕಾಲಾವಕಾಶ ನೀಡಿತ್ತು. 15 ದಿನಗಳಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತವಾಗದಿದ್ದರೆ, ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಏಕರೂಪ ಟಿಕೆಟ್ ದರ ಜಾರಿ ಮಾಡುವುದಾಗಿ ಸೂಚಿಸಿತ್ತು. ಏಕರೂಪ ಟಿಕೆಟ್ ದರ ನಿಗದಿಯಾಗುವುದರಿಂದ ಕನ್ನಡದ ದೊಡ್ಡ ಬಜೆಟ್ ಚಿತ್ರಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪರಭಾಷಾ ಚಿತ್ರಗಳಿಗೆ ಏಟು ಬೀಳುವುದರಿಂದ, ಹೇಗಾದರೂ ಮಾಡಿ ಇದನ್ನು ತಡೆಯುವುದಕ್ಕೆ ಒಂದು ವರ್ಗ ಪ್ರಯತ್ನ ನಡೆಸುತ್ತಿರುವ ಮಾಹಿತಿ ಇತ್ತು.

ಅದೀಗ ನಿಜವಾಗಿದೆ. ಕರ್ನಾಟಕ ಸರ್ಕಾರವು ಇತ್ತೀಚೆಗಷ್ಟೇ ಎಲ್ಲಾ ಮಲ್ಟಿಪ್ಲೆಕ್ಸ್ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಮತ್ತು ಎಲ್ಲಾ ಪ್ರದರ್ಶನಗಳ ಟಿಕೆಟ್ ದರವನ್ನು ಗರಿಷ್ಠ 200 ರೂ.ಗೆ ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಮಲ್ಟಿಪ್ಲೆಕ್ಸ್ ಒಕ್ಕೂಟ ತಕರಾರು ತೆಗೆದಿದೆ. ಸರ್ಕಾರ ನಿಗದಿ ಮಾಡಿರುವ 200 ರೂಪಾಯಿ ಟಿಕೆಟ್ ದರವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆದಿದ್ದು, ಹೈಕೋರ್ಟ್ ಮಧ್ಯಾಂತರ ತೀರ್ಪು ಕಾಯ್ದಿರಿಸಿದೆ. ಬರೀ Multiplex Association of India ಅಷ್ಟೇ ಅಲ್ಲ, ಹೊಂಬಾಳೆ ಫಿಲಂಸ್ ಸಂಸ್ಥೆ ಸಹ ಸರ್ಕಾರದ ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಜನರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದ್ದು, ಹೀಗಿರುವಾಗ ಕನ್ನಡ ಮೂಲದ ಸಂಸ್ಥೆಯೊಂದೇ ಇದರ ವಿರುದ್ಧ ಯಾಕೆ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.
ವಿಷಯವೇನೆಂದರೆ, ಹೊಂಬಾಳೆ ಫಿಲಂಸ್ ಸಂಸ್ಥೆಯು ‘ಕಾಂತಾರ – ಚಾಪ್ಟರ್ 1’ ಚಿತ್ರಕ್ಕಾಗಿ ಪಿವಿಆರ್ ಜೊತೆಗೆ ಕೈಜೋಡಿಸಿದೆ. ಹಾಗಾಗಿ, ಈ ಏಕರೂಪ ಟಿಕೆಟ್ ವಿರುದ್ಧ ಹೊಂಬಾಳೆ ಫಿಲಂಸ್ ಸಹ ಪ್ರಶ್ನಿಸಿರುವ ಸಾಧ್ಯತೆ ಇದೆ. ಮೇಲಾಗಿ, ಅಕ್ಟೋಬರ್ 02ರಂದು ‘ಕಾಂತಾರ – ಚಾಪ್ಟರ್ 1’ ಬಿಡುಗಡೆಯಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರವದು. ಮೊದಲಿನ ತರಹ ಟಿಕೆಟ್ ದರವಿದ್ದಿದ್ದರೆ, ಕರ್ನಾಟಕದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಿರುತ್ತಿತ್ತು. ಆದರೆ, ಇದೀಗ 200 ರೂ.ಗಳ ಗರಿಷ್ಠ ದರವಿರುವದರಿಂದ, ಚಿತ್ರದ ಗಳಿಕೆ ಸಾಕಷ್ಟು ಕಡಿಮೆ ಆಗುವುದರ ಜೊತೆಗೆ, ನಷ್ಟದ ಪ್ರಮಾಣವೂ ಹೆಚ್ಚಾಗಲಿದೆ. ಅದೇ ಕಾರಣಕ್ಕೆ, ಸರ್ಕಾರದ ಆದೇಶದ ವಿರುದ್ಧ ಹೊಂಬಾಳೆ ಫಿಲಂಸ್ ನ್ಯಾಯಾಲಯದ ಮೆಟ್ಟಿಲು ಏರಿದೆ.ಇಂದು ಮೊದಲ ಹಂತದ ವಿಚಾರಣೆ ನಡೆದಿದ್ದು, ಪಿವಿಆರ್, ಐನಾಕ್ಸ್ ಮುಂತಾದ ಮಲ್ಟಿಪ್ಲೆಕ್ಸ್ಗಳನ್ನು ಪ್ರತಿನಿಧಿಸುವ Multiplex Association of India, ಈ ರೀತಿ ಏಕರೂಪ ಟಿಕೆಟ್ ನಿಗದಿ ಮಾಡುವುದು ಅಸಮಂಜಸ ಎಂದು ಹೇಳಿದೆ.
ಚಿತ್ರಮಂದಿರಗಳಲ್ಲಿ ಪ್ರವೇಶ ದರ ಎಷ್ಟು ನಿಗದಿಪಡಿಸಬೇಕು ಎಂಬ ಸ್ವಾತಂತ್ರ್ಯ ಪ್ರದರ್ಶಕರಿಗಿರಬೇಕೇ ಹೊರತು ಬೇರೆಯವರಿಗಿಲ್ಲ ಮತ್ತು ಹೀಗೆ ಏಕರೂಪ ಟಿಕೆಟ್ ದರ ನಿಗದಿಪಡಿಸುವ ಮೂಲಕ ಚಿತ್ರಮಂದಿರಗಳ ವ್ಯಾಪಾರಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ವಾದಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಸರ್ಕಾರವು ಚಿತ್ರಮಂದಿರಗಳ ಲೈಸೆನ್ಸ್ ಮತ್ತು ನಿರ್ಮಾಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೇ ಹೊರತು, ಟಿಕೆಟ್ ದರ ನಿಗದಿ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಹೊಂಬಾಳೆ ಫಿಲಂಸ್ ವಾದಿಸಿದೆ. ನಿರ್ಮಾಪಕರು ತಮ್ಮ ಚಿತ್ರಗಳ ಮೇಲೆ ಮಾಡುವ ದೊಡ್ಡ ಹೂಡಿಕೆಯನ್ನು ವಾಪಸ್ಸು ಪಡೆಯುವುದಕ್ಕೆ ಚಿತ್ರಮಂದಿರಗಳ ಪ್ರವೇಶದರದ ಮೇಲೆ ಅವಲಂಬಿಸಿರುತ್ತಾರೆ, ಈ ತರಹದ ಮಿತಿಗಳು ವ್ಯಾಪಾರದ ಮೇಲೆ ದೊಡ್ಡ ಪರಿಣಾಮ ಬೀರಬಹುದು ಮತ್ತು ನಿರ್ಮಾಪಕರ ಹಕ್ಕುಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಸದ್ಯಕ್ಕಂತೂ ನ್ಯಾಯಾಲಯ ಈ ವಿಷಯವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
ಈ ಏಕರೂಪ ಟಿಕೆಟ್ ದರವೆಂಬುದು ಕರ್ನಾಟಕದಲ್ಲಿ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಇದೆ. ಆ ರಾಜ್ಯಗಳ ಕಾನೂನನ್ನು ಒಪ್ಪಿಕೊಂಡಿರುವ ಮಲ್ಟಿಪ್ಲೆಕ್ಸ್ನವರು ಮತ್ತು Multiplex Association of India, ಕರ್ನಾಟಕದಲ್ಲಿ ಮಾತ್ರ ಯಾಕೆ ಪ್ರಶ್ನೆ ಮಾಡುತ್ತಿದೆ ಮತ್ತು ಈ ಸಂಬಂಧ ಯಾಕೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬುದು ಸಹಜವಾಗಿಯೇ ಬರುವ ಪ್ರಶ್ನೆ. ಬೇರೆ ರಾಜ್ಯಗಳಲ್ಲಿ ಕೆಲವು ವರ್ಷಗಳಿಂದಲೇ ಏಕರೂಪ ಟಿಕೆಟ್ ಜಾರಿಯಲ್ಲಿದೆ. ಆದರೆ, ಇದುವರೆಗೂ ಅಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. MAI ಅಲ್ಲಿನ ಸರ್ಕಾರಗಳ ವಿರುದ್ಧ ಕೋರ್ಟ್ ಮೆಟ್ಟಿಲು ಏರಿಲ್ಲ. ಹಾಗಾದರೆ, ರಾಜ್ಯದಲ್ಲಿ ಅಷ್ಟೊಂದು ಲಾಭ ಬರುತ್ತಿದೆಯಾ? ಆ ಲಾಭಕ್ಕೆ ಏಟು ಬಿದ್ದಿದುರಿಂದಲೇ, ರಾಜ್ಯದಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡುವುದರ ಬಗ್ಗೆ MAI ನ್ಯಾಯಾಲಯದ ಮೊರೆ ಹೋಗಿದೆಯಾ?
ಇದು ಪ್ರದರ್ಶಕರ ಮಾತಾದರೆ, ಆಂಧ್ರದಲ್ಲಿ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳುವ ಮುನ್ನ, ಸರ್ಕಾರವು ತೆಲುಗು ಚಿತ್ರರಂಗದ ಪ್ರಮುಖರ ಸಭೆ ಕರೆದು, ಚರ್ಚೆ ಮಾಡಿ ತೀರ್ಮಾನ ತೆಗೆದುಕೊಂಡಿತ್ತು. ಈ ಬಗ್ಗೆ ಕೆಲವರಿಂದ ಅಪಸ್ವರಗಳು ಕೇಳಿಬಂದರೂ, ಅಂತಿಮವಾಗಿ, ಜನರ ಹಿತದೃಷ್ಟಿಯಿಂದ ಒಪ್ಪಿಗೆ ಸೂಚಿಸಿದ್ದರು. ನೂರು ಕೋಟಿಗೂ ಹೆಚ್ಚು ವೆಚ್ಚದ ಚಿತ್ರಗಳು ಬಿಡುಗಡೆಯಾದಾಗ, ಸರ್ಕಾರದ ಅನುಮತಿ ಪಡೆದುಕೊಂಡು ಟಿಕೆಟ್ ದರವನ್ನು ಹೆಚ್ಚಿಸುವುದಕ್ಕೆ ಅನುಮತಿ ಪಡೆದಿದ್ದರು. ಹಾಗೆ ನೋಡಿದರೆ, ಕನ್ನಡಕ್ಕೆ ಹೋಲಿಸಿದರೆ, ತೆಲುಗು ಮತ್ತು ತಮಿಳುನಲ್ಲಿ ದೊಡ್ಡ ಬಜೆಟ್‍ನ ಚಿತ್ರಗಳ ಸಂಖ್ಯೆ ಜಾಸ್ತಿಯೇ ಇದೆ. ನಮ್ಮಲ್ಲಿ ಮೂರು ವರ್ಷಕ್ಕೊಂದು ಅಂತಹ ಚಿತ್ರ ಬಂದರೆ, ಅಲ್ಲಿ ವರ್ಷಕ್ಕೆ ಮೂರ್ನಾಲ್ಕು ನೂರಾರು ಕೋಟಿಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೀಗೆ ಬಹುಕೋಟಿ ವೆಚ್ಚದ ಚಿತ್ರಗಳು ಬಿಡುಗಡೆಯಾದಾಗ, ಸರ್ಕಾರದ ಅನುಮತಿ ಪಡೆದುಕೊಂಡು ಟಿಕೆಟ್ ದರವನ್ನು ಹೆಚ್ಚಿಸಿಕೊಂಡ ಕೆಲವು ನಿರ್ಮಾಪಕರು ಇದ್ದಾರೆ. ಇತ್ತೀಚಿನ ವರ್ಷಗಳಲ್ಲೇ ನೋಡುವುದಾದರೆ, ತೆಲುಗಿನಲ್ಲಿ ‘ಪುಷ್ಪಾ 2’, ‘RRR’, ‘ದೇವರ’, ‘ಕಿಂಗ್‍ಡಮ್’ ಮುಂತಾದ ಚಿತ್ರಗಳ ನಿರ್ಮಾಪಕರು, ಸರ್ಕಾರಕ್ಕೆ ಮನವಿ ಸಲ್ಲಿಸಿ ಟಿಕೆಟ್ ದರವನ್ನು ಹೆಚ್ಚಿಸಿಕೊಂಡಿದ್ದಾರೆ. ಕನ್ನಡದಲ್ಲೂ ಬಹುಕೋಟಿ ವೆಚ್ಚದ ಚಿತ್ರಗಳು ಬಂದಾಗ, ದರ ಪರಿಷ್ಕರಣೆಯಾದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಹಾಗಿರುವಾಗ, ಟಿಕೆಟ್ ದರ ಪರಿಷ್ಕರಣೆ ಮತ್ತು ಏಕರೂಪ ಟಿಕೆಟ್ ದರ ಜಾರಿ ಎಂಬುದು ಯಾಕಿಷ್ಟು ಕಗ್ಗಂಟಾಗುತ್ತಿದೆ? ಬೇರೆ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ಜಾರಿಗೆ ತರಬೇಕು, ಯದ್ವಾತದ್ವಾ ಏರಿಸಲಾಗುತ್ತಿರುವ ಟಿಕೆಟ್ ದರಗಳಿಗೆ ಕಡಿವಾಣ ಹಾಕಬೇಕು ಎಂಬ ಕೂಗು ಒಂದು ದಶಕದಿಂದ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಈ ಏಕರೂಪ ಟಿಕೆಟ್ ಬೆಲೆ ಪರಿಷ್ಕರಿಸುವಲ್ಲಿ ಹೆಜ್ಜೆ ಇಟ್ಟಿದ್ದರು. ರಾಜ್ಯದ ಮಲ್ಟಿಪ್ಲೆಕ್ಸ್ ಹಾಗೂ ಏಕಪರದೆಯ ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಟಿಕೆಟ್ ದರ 200 ರೂ. ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಆದರೆ, ತಾಂತ್ರಿಕ ಸಮಸ್ಯೆಗಳಿಂದ ಇದು ಜಾರಿಗೆ ಬರಲಿಲ್ಲ. ಈಗ ಎರಡನೇ ಬಾರಿ ಆದೇಶ ಜಾರಿಯಾಗಿದ್ದು ಈಗಲೂ ವಿಘ್ನ ಎದುರಾಗಿದೆ. ಈ ಬಾರಿಯಾದರೂ ಇದಕ್ಕೊಂದು ಶಾಶ್ವತ ಪರಿಹಾರ ಸಿಗುತ್ತದಾ? ಅಥವಾ ಇನ್ನಷ್ಟು ಕಗ್ಗಂಟಾಗುತ್ತದಾ? ಎಂಬುದನ್ನು ನೋಡಬೇಕು.
• ಚೇತನ್ ನಾಡಿಗೇರ್
