ಸಿನಿಮಾ ತಾರೆಯರ ಲವ್, ಬ್ರೇಕಪ್, ಮ್ಯಾರೇಜ್, ಡಿವೋರ್ಸ್ ಸುದ್ದಿ ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಯಾರು ಯಾರೊಟ್ಟಿಗೆ ಯಾವಾಗ ಡೇಟ್ ಮಾಡುತ್ತಾರೆ? ದೂರಾಗುತ್ತಾರೆ ಎಂದು ಹೇಳುವುದು ಕಷ್ಟ. ಇನ್ನು ಸೋಶಿಯಲ್ ಮೀಡಿಯಾ ಬಂದಮೇಲೆ ಇಲ್ಲ ಸಲ್ಲದ ಊಹಾಪೋಹಗಳು ಶುರುವಾಗಿಬಿಡುತ್ತದೆ. ಕೆಲವರು ಸೋಶಿಯಲ್ ಮೀಡಿಯಾ ತಮ್ಮ ಕನ್ನಡಿ ಎಂದು ಭಾವಿಸುತ್ತಾರೆ. ತಮ್ಮ ಮನಸ್ಸಿನಲ್ಲಿರುವ ಎಲ್ಲಾ ವಿಚಾರಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ನಲ್ಲಿ ತೆರೆದಿಡುತ್ತಾರೆ. ಅದರಲ್ಲೂ ಇನ್‌ಸ್ಟಾಗ್ರಾಮ್ ತಾರೆಯರ ನೆಚ್ಚಿನ ಸೋಶಿಯಲ್ ಮೀಡಿಯಾ ತಾಣವಾಗಿಬಿಟ್ಟಿದೆ. ನಟಿ ತಮನ್ನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಕಳೆದ ವರ್ಷ ಆಕೆ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿರುವುದು ಬಹಿರಂಗವಾಗಿತ್ತು.
ಕೆಲ ತೆಲುಗು ಸಿನಿಮಾಗಳಲ್ಲಿ ಕೂಡ ವಿಜಯ್ ವರ್ಮಾ ನಟಿಸಿದ್ದಾರೆ. ‘ಲಸ್ಟ್ ಸ್ಟೋರೀಸ್’-2 ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರ ಪರಿಚಯವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇಬ್ಬರೂ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಒಟ್ಟೊಟ್ಟಿಗೆ ಕೈ ಕೈ ಹಿಡಿದು ಓಡಾಡುತ್ತಿದ್ದರು. ಆದರೆ ಇತ್ತೀಚೆಗೆ ತಮನ್ನಾ ಮಾಡಿರೋ ಪೋಸ್ಟ್‌ವೊಂದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಮಿಲ್ಕಿ ಬ್ಯೂಟಿ ಮಾಡಿರುವ ಗೂಡಾರ್ಥದ ಪೋಸ್ಟ್ ನೋಡಿ ಲವ್ ಬ್ರೇಕಪ್ ಆಯ್ತಾ? ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರೆ. “ಪ್ರೀತಿಸಲ್ಪಡುವುದರ ರಹಸ್ಯ ಪ್ರೀತಿಸುವುದು ಅಂತ ನಾನು ಭಾವಿಸುತ್ತೇನೆ. ಅದೇ ರೀತಿ ಆಸಕ್ತಿದಾಯಕವಾಗಿರುವುದರ ರಹಸ್ಯವೆಂದರೆ ಆಸಕ್ತಿ ಹೊಂದಿರುವುದು. ಇತರರು ನಿಮ್ಮಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವುದರ ರಹಸ್ಯವೆಂದರೆ ಇತರರಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವುದು. ಇನ್ನು ಸ್ನೇಹಿತನನ್ನು ಹೊಂದುವ ರಹಸ್ಯವೆಂದರೆ ಸ್ನೇಹಿತನಾಗಿರುವುದು” ಎಂದು ತಮನ್ನಾ ಬರೆದುಕೊಂಡಿದ್ದರು.
ಇತ್ತೀಚೆಗೆ ತಮನ್ನಾ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುವುದು ಹೆಚ್ಚಾಗಿದೆ. ಅದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಸದ್ಯ ‘ಓಡೆಲ- 2’ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ನಟಿಸುತ್ತಿದ್ದಾರೆ. ಕಳೆದ ವರ್ಷ ಬಂದ ‘ಸ್ತ್ರೀ- 2’ ಹಾಗೂ ‘ವೇದ’ ಚಿತ್ರದ ಐಟಂ ಸಾಂಗ್‌ನಲ್ಲಿ ತಮನ್ನಾ ಮಿಂಚಿದ್ದರು.