ರಜನಿಕಾಂತ್ ಭಾರತದ ಸೂಪರ್ ಸ್ಟಾರ್. ರಜನಿಕಾಂತ್ ಮನಸ್ಸು ಮಾತ್ರ ಹುಟ್ಟೂರಿನ, ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಈಗ ತಮಗೆ ಅಕ್ಷರಾಭ್ಯಾಸವನ್ನು ಮಾಡಿಸಿದ ತಮ್ಮ ಶಾಲೆಯ ಕುರಿತು ತುಂಬಾ ಹೆಮ್ಮೆಯಿಂದ ಮಾತನಾಡಿದ್ದಾರೆ. ಬ್ಯಾಂಕಾಕ್‌ನಲ್ಲಿ ಕುಳಿತು ಎಪಿಎಸ್ ಶಾಲೆಯಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಎಪಿಎಸ್ ಶಾಲೆಯ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ, ವಿಡಿಯೋ ಮೂಲಕ ಸಂದೇಶವನ್ನು ರವಾನೆ ಮಾಡಿರುವ ರಜನಿಕಾಂತ್, ಬೆಂಗಳೂರಿನ ಎಪಿಎಸ್ ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ಓದಿದ್ದಕ್ಕೆ ನನಗೆ ಇವತ್ತು ಕೂಡ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಗವಿಪುರದ ಗಂಗಾಧರೇಶ್ವರ ದೇವಸ್ಥಾನದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದೇ ಎಂದಿರುವ ರಜಿನಿ ಆಗೆಲ್ಲ ನಾನೇ ಕ್ಲಾಸ್‌ಗೆ ಫಸ್ಟ್ ಎಂದು ಹೇಳಿದ್ದಾರೆ. ಶಾಲೆಯ ಬೆಸ್ಟ್ ಸ್ಟುಡೆಂಟ್ ಎಂದು ಹೇಳಿದ್ದಾರೆ. ಇನ್ನು ನಾನೇ ಕ್ಲಾಸ್‌ಗೆ ಮಾನಿಟರ್ ಕೂಡ ಆಗಿದ್ದೆ ಮಿಡ್ಲ್ ಸ್ಕೂಲ್‌ನಲ್ಲಿ 98 % ಮಾರ್ಕ್ಸ್ ಪಡೆದಿದ್ದೆ ಎಂದು ಕೂಡ ರಜನಿ ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ನಮ್ಮ ಅಣ್ಣ ನನ್ನನ್ನು ಎಪಿಎಸ್ ಹೈಸ್ಕೂಲ್‌ನಲ್ಲಿ ಇಂಗ್ಲೀಷ್ ಮೀಡಿಯಂಗೆ ಸೇರಿಸಿದರು, ಇದರಿಂದ ನಾನು ವಿಚಲಿತನಾದೆ, ಮೊದಲ ಬೆಂಚ್‌ನಲ್ಲಿದ್ದ ನಾನು ಆ ನಂತರ ಕೊನೆಯ ಬೆಂಚ್ ಸ್ಟೂಡೆಂಟ್ ಆದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಖಿನ್ನತೆಗೆ ಕೂಡ ಒಳಗಾಗಿದ್ದೆ, ಆದರೆ ಎಪಿಎಸ್ ಶಾಲೆಯ ಶಿಕ್ಷಕರು ನನ್ನ ಕಷ್ಟವನ್ನು ಅರ್ಥ ಮಾಡಿಕೊಂಡರು ನನಗೆ ಸಹಾಯವನ್ನು ಮಾಡಿದರು ತುಂಬಾನೇ ಕಾಳಜಿ ವಹಿಸಿ ನನಗೆ ಪಾಠವನ್ನು ಹೇಳಿ ಕೊಟ್ಟರು ಎಂದಿರುವ ರಜನಿ ಈ ಕಾರಣಕ್ಕೆ ನಾನು 8,9ನೇ ತರಗತಿಯಲ್ಲಿ ಪಾಸ್ ಆದೆ ಆದರೆ ಪಬ್ಲಿಕ್ ಎಕ್ಸಾಂನಲ್ಲಿ ಪಿಸಿಎಂ ವಿಷಯದಲ್ಲಿ ನಾನು ತುಂಬಾ ವೀಕ್ ಇದ್ದ ಕಾರಣ ಫೇಲ್ ಆದೆ ಎಂದಿದ್ದಾರೆ. ಆಗಲೂ ನಮ್ಮ ಕೆಮೆಸ್ಟ್ರೀ ಟೀಚರ್ ಮನೆಗೆ ಬಂದು ಆರು ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು, ಅವರು ಉಚಿತವಾಗಿ ನೀಡಿದ ಈ ಸ್ಪೆಷಲ್ ಕ್ಲಾಸ್‌ನಿಂದ ನಾನು ಹತ್ತನೇ ಕ್ಲಾಸ್ ಪಾಸ್ ಮಾಡಿದೆ ಆ ನಂತರ ಅಲ್ಲೇ ಎಪಿಎಸ್ ಕಾಲೇಜ್‌ಗೆ ಸೇರಿಕೊಂಡೆ ಎಂದು ಹೇಳಿರುವ ರಜನಿ ಆ ನಂತರ ಕೆಲ ಕಾರಣಗಳಿಂದ ಕಾಲೇಜ್ ಕಂಟಿನ್ಯೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇನ್ನು ನಾನು ಶಾಲೆಯಲ್ಲಿದ್ದಾಗ ಇಂಟರ್ ಸ್ಕೂಲ್ ಕಾಂಪಿಟೇಷನ್‌ನಲ್ಲಿ ಭಾಗವಹಿಸುತ್ತಿದ್ದೆ, ಅದಕ್ಕೂ ಮೊದಲು ನಾನು ಕ್ಲಾಸ್‌ನಲ್ಲಿ ಬಗೆಬಗೆಯ ಕಥೆ ಹೇಳುತ್ತಿದ್ದೆ ನೋಡಿದ ಸಿನಿಮಾಗಳನ್ನು ಗೆಳೆಯರ ಮುಂದೆ ನಟಿಸಿ ತೋರಿಸುತ್ತಿದ್ದೆ ಅದು ನಮ್ಮ ಶಿಕ್ಷಕರಿಗೆ ಗೊತ್ತಾಗಿತ್ತು ಎಂದಿರುವ ರಜನಿಕಾಂತ್, ಆಗ ನನಗೆ ನಾಟಕಗಳಲ್ಲಿ ಅಭಿನಯಿಸಲು ಅವರು ಅವಕಾಶ ಮಾಡಿ ಕೊಟ್ಟರು ಆದಿ ಶಂಕರ ಚಂಡಾಲನ ನಾಟಕದಲ್ಲಿ ನಾನು ಚಂಡಾಲನಂತೆ ಕಂಡಿದ್ದಕ್ಕೋ ಏನೋ ಚಂಡಾಲನ ಪಾತ್ರವನ್ನು ನನಗೆ ನೀಡಿದರು ಎಂದು ಹೇಳಿದ್ದಾರೆ.