ಇದೇ ಐದು ವರ್ಷಗಳ ಹಿಂದೆ ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಗಟ್ಟಿ ನಿರ್ಧಾರ ಮಾಡಿದ್ದರು. ರೆಬೆಲ್ ಸ್ಟಾರ್ ನಿಧನದ ಬಳಿಕ ಸುಮಲತಾ ಚುನಾವಣಾ ಅಖಾಡಕ್ಕೆ ಇಳಿಯಬೇಕು ಅನ್ನೋದು ಅವರ ಅಭಿಮಾನಿಗಳ ಒತ್ತಾಸೆಯಾಗಿತ್ತು. ಆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಕ್ಕೆ ಸುಮಲತಾ ಬಯಸಿದ್ದರು. ಆ ವೇಳೆ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ ಸುಮಲತಾಗೆ ಟಿಕೆಟ್ ಕೊಟ್ಟಿರಲಿಲ್ಲ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಬೇಕಾಯ್ತು. ಈ ಬಾರಿ ಸುಮಲತಾ ಮಂಡ್ಯದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲು ಬಯಸಿದ್ದಾರೆ. ಆದರೆ, ಈ ಬಾರಿ ಕೂಡ ಸುಮಲತಾಗೆ ಬಿಜೆಪಿಯಿಂದ ಟಿಕೆಟ್ ಸಿಗುವುದು ಅನುಮಾನ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಈ ಬಾರಿ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಡುವ ಸಾಧ್ಯತೆಯಿದೆ.
ಇದನ್ನೂ ಓದಿ:Matsyagandha Movie Review; ಕಡಲ ಒಡಲೊಳಗೊಂದು ಕಾಡುವ ಲಹರಿ
ಈ ಎರಡು ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೇ, ಸುಮಲತಾಗೆ ಮತ್ತೆ ಮೈತ್ರಿ ಕಂಟಕ ಎದುರಾಗುತ್ತಿದೆ. ಎರಡೂ ಬಾರಿನೂ ರಾಷ್ಟ್ರೀಯ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದರಿಂದ ಸುಮಲತಾ ಅನಿವಾರ್ಯವಾಗಿ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದೇ? ಇಂತಹದ್ದೊಂದು ಪ್ರಶ್ನೆಯಂತೂ ಎದುರಾಗಿದೆ. ಸದ್ಯ ಚುನಾವಣೆ ಬಗ್ಗೆ ಸುಮಲತಾ ಆಡಿದ ಮಾತಿನ ಝಲಕ್ ಇಲ್ಲಿದೆ. ಇದೇ ವೇಳೆ ದರ್ಶನ್ ಪಕ್ಷ ನೋಡಿ ಪ್ರಚಾರ ಮಾಡೋದಿಲ್ಲ. ವ್ಯಕ್ತಿ ನೋಡಿ ಪ್ರಚಾರ ಮಾಡುತ್ತಾರೆಂದು ಸುಮಲತಾ ಹೇಳಿದ್ದಾರೆ. “ದರ್ಶನ್‌ಗೆ ಪಕ್ಷ ಅಂತಿಲ್ಲ. ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲೂ ದರ್ಶನ್ ಕಾಂಗ್ರೆಸ್ ಪರನೂ ಪ್ರಚಾರ ಮಾಡಿದ್ದರು. ಬಿಜೆಪಿ ಪರನೂ ಪ್ರಚಾರ ಮಾಡಿದ್ದರು. ಸಚ್ಚಿದಾನಂದ ಪರನೂ ಮಾಡಿದ್ದಾರೆ. ರೈತರ ಸಂಘ ದರ್ಶನ್ ಪುಟ್ಟಣ್ಣಯ್ಯ ಪರನೂ ಪ್ರಚಾರ ಮಾಡಿದ್ದಾರೆ. ಪಕ್ಷ ಅವರಿಗೆ ಮುಖ್ಯ ಅಲ್ಲ. ನಾನು ಅಂದರೆ, ಯಾವುದೇ ಪಕ್ಷದಲ್ಲಿ ನಿಂತುಕೊಳ್ಳಿ ಖಂಡಿತಾ ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ.” ಎಂದು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಕ್ಕೂ ಸಿದ್ಧ ಅನ್ನೋದನ್ನು ಸೂಕ್ಷ್ಮವಾಗಿ ಹೇಳಿಕೆ ಕೊಟ್ಟಂತಿದೆ.
ಇದನ್ನೂ ಓದಿ:ಫೆಬ್ರವರಿ 23 ರಂದು ತನುಷ್ ಶಿವಣ್ಣ – ಸೋನಾಲ್ ಮೊಂತೆರೊ ಜೋಡಿಯ “Mr ನಟ್ವರ್ ಲಾಲ್” ಚಿತ್ರ ತೆರೆಗೆ .
ಅದೇ ಇನ್ನೊಂದು ಕಡೆ ಸುಮಲತಾ ಹಾಗೂ ದರ್ಶನ್ ಆಪ್ತ ಇಂಡುವಾಳು ಸಚ್ಚಿದಾನಂದ ಮೈತ್ರಿ ಅಭ್ಯರ್ಥಿಯಾಗಿ ನಿಂತರೆ ಮಾತ್ರ ನೀಡುವುದಾಗಿ ಹೇಳಿದ್ದಾರೆಂಬ ಸುದ್ದಿ ಓಡಾಡಿತ್ತು. ಆದರೆ, ಸುಮಲತಾ ಅದೆಲ್ಲ ಸುಳ್ಳು ಎಂದಿದ್ದಾರೆ. “ಇದೆಲ್ಲಾ ಊಹಾಪೋಹಗಳು.. ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಇದು ಇನ್ನೂ ಜಾಸ್ತಿ ಆಗುತ್ತೆ. ಕಳೆದ ಬಾರಿಯೂ ಇದೇ ರೀತಿ ಆಗಿದೆ. ನನಗೆ ಅರ್ಥ ಆಗ್ತಿಲ್ಲ. ಯಾಕಂದ್ರೆ, ನಾನು ಏನೂ ಹೇಳಿಲ್ಲ. ಸಚ್ಚಿನೂ ಏನೂ ಹೇಳಿಲ್ಲ. ಯಾವ ರೀತಿ ಗೊಂದಲ. ಯಾವ ರೀತಿ ಮುನಿಸು ಅನ್ನೋದು ನನಗಂತೂ ಅರ್ಥ ಆಗುತ್ತಿಲ್ಲ. ಇಂತಹ ಸುದ್ದಿಗಳನ್ನು ಕ್ರಿಯೇಟ್ ಮಾಡಿ ಬಿಟ್ಟುಬಿಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೀವಿ. ” ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಪಕ್ಷ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಬಹುದು ಅನ್ನೋ ನಿರೀಕ್ಷೆಯಲ್ಲಿ ಸುಮಲತಾ ಇದ್ದಾರೆ. ಆದರೆ, ಬಿಜೆಪಿಯಿಂದಲೂ ಟಿಕೆಟ್ ಸಿಗುವುದು ಕಷ್ಟವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗಾಗಿ ಸುಮಲತಾ ಮೈತ್ರಿ ಕಂಟಕದಿಂದ ಪಾರಾಗುತ್ತಾರಾ? ಇಲ್ಲಾ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿಯೇ ಚುನಾವಣೆ ಎದುರಿಸುತ್ತಾರಾ? ಯಶ್ ಈ ಬಾರಿಯೂ ಸುಮಲತಾ ಅಂಬರೀಶ್ ಪರ ಬ್ಯಾಟು ಬೀಸುತ್ತಾರಾ? ಅನ್ನೋ ಪ್ರಶ್ನೆ ಅಂತೂ ಹುಟ್ಟಿಕೊಂಡಿದೆ.