ಸ್ಯಾಂಡಲ್ ವುಡ್ ನ ಭರವಸೆಯ ನಿರ್ದೇಶಕ ಕಮ್ ನಾಯಕನಾಗಿ ಗುರುತಿಸಿಕೊಂಡ ರಿಷಬ್, ಮೊನ್ನೆಯ ದಿವಸ ಮಹಾರಾಷ್ಟ್ರದವರ ಹೀರೋ ಶಿವಾಜಿ ಮಹಾರಾಜ್ ಅವರ ಜೀವನಾಧಾರಿತ ಚಿತ್ರವನ್ನು ಒಪ್ಪಿಕೊಂಡ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡದವರಾಗಿ ಶಿವಾಜಿಯ ಅವತಾರವೆತ್ತುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಪರ ವಿರೋಧದ ಚರ್ಚೆ ಕೂಡ ನಡೆದಿತ್ತು. ರಿಷಬ್ ಶೆಟ್ಟಿ ಯಾವುದೇ ಕಾರಣಕ್ಕೂ ಶಿವಾಜಿ ಮಹಾರಾಜ್ ಪಾತ್ರ ಮಾಡಬಾರದೆನ್ನುವ ಕೂಗು ಕೂಡ ಕೇಳಿ ಬಂದಿತ್ತು. ಆದರೆ, ಇದಕ್ಕೆ ರಿಷಬ್ ಶೆಟ್ಟಿ ತಲೆ ಕೆಡಿಸಿಕೊಂಡಿಲ್ಲ. ಕೆಡಿಸಿಕೊಳ್ಳುವುದು ಇಲ್ಲ. ಬದಲಿಗೆ ಶಿವಾಜಿ ಪಾತ್ರ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಸಂದರ್ಶನದಲ್ಲಿ ರಿಷಬ್ ಹೇಳಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ಬರೆದುಕೊಂಡಿದ್ದರು. ಇದರ ನಡುವೆ ಈಗ ಸುದೀಪ್ ಈ ವಿಚಾರದ ಕುರಿತು ಮಾತನಾಡಿದ್ದಾರೆ. ಈ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ ಶಿವಣ್ಣ ಚಿಕಿತ್ಸೆ
ಹೌದು, ತಮ್ಮ ಮ್ಯಾಕ್ಸ್ ಚಿತ್ರ ಈ ಡಿಸೆಂಬರ್ 26ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಸುದೀಪ್ ಮಾಧ್ಯಮದವರಿಗೆ ಸಂದರ್ಶನ ನೀಡುತ್ತಿದ್ದಾರೆ. ಸಂದರ್ಶನದಲ್ಲಿ ಸುದೀಪ್ ಅವರಿಗೆ ಮ್ಯಾಕ್ಸ್ ಚಿತ್ರದ ಬದಲು ಶಿವಾಜಿ ಮಹಾರಾಜ್ ಅವರ ಬಯೋಪಿಕ್ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಸುದೀಪ್ ಉತ್ತರವನ್ನು ನೀಡಿದ್ದಾರೆ. ಶಿವಾಜಿಯ ಪಾತ್ರವನ್ನು ರಿಷಬ್ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ. ಗೌರವ ಎಂದಿದ್ದಾರೆ. ಮಾಡಲಿ ಅದರಲ್ಲಿ ತಪ್ಪೇನು ಎಂದಿದ್ದಾರೆ. ನಮ್ಮಲ್ಲಿರುವ ವ್ಯಕ್ತಿಯನ್ನು ಈ ಪಾತ್ರಕ್ಕೆ ನೀವೆ ಸೂಕ್ತ ಎಂದು ಅವರು ಕರೆದ ಕಾರಣಕ್ಕೆ ನಾವು ಖುಷಿ ಪಡಬೇಕು ಎಂದಿದ್ದಾರೆ. ಸುದೀಪ್ ಅವರ ಈ ಮಾತು ಈಗ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡ್ತಾ ಇರೋದಕ್ಕೆ ವಿರೋಧ ಎದ್ದಿರೋದು ಶಿವಾಜಿ ಬೇರೆ ರಾಜ್ಯದ ರಾಜ ಅಂತಲ್ಲ ಎನ್ನುತ್ತಿರುವ ಅನೇಕರು, ಶಿವಾಜಿ ಕನ್ನಡಿಗರ ಪಾಲಿಗೆ ಕೇವಲ ಒಬ್ಬ ಅನ್ಯರಾಜ್ಯದ ದೊರೆ ಮಾತ್ರ ಅಲ್ಲ ಅವನು ನಮ್ಮ ಪಾಲಿಗೆ ಒಬ್ಬ ದರೋಡೆಕೋರ, ವಿಧ್ವಂಸಕ, ದಾಳಿಕೋರ, ಸುದೀಪ್ ಅವರಿಗೆ ಈ ವಿಚಾರ ಗೊತ್ತಿಲ್ವಾ ಎಂಬ ಪ್ರಶ್ನೆ ಕೆಲವರು ಕೇಳಿದರೆ, ಬೆಳವಡಿ ಸಂಸ್ಥಾನದ ಹೆಮ್ಮೆಯ ದೊರೆ ಈಶಪ್ರಭುವನ್ನು ಮೋಸದಿಂದ ಕೊಂದ ಧೂರ್ತ ಶಿವಾಜಿಯನ್ನು ಸ್ವಾಭಿಮಾನಿ ಕನ್ನಡಿಗರು ಕ್ಷಮಿಸಲು ಸಾಧ್ಯವೇ ಇಲ್ಲ. ಬೆಳವಡಿ ಮಲ್ಲಮ್ಮ ಇದೇ ಶಿವಾಜಿಯನ್ನು ಹೆಡೆಮುರಿ ಕಟ್ಟಿ ಹಿಡಿದಾಗ ಆಕೆಯ ಪಾದಕ್ಕೆ ಎರಗಿ ಕ್ಷಮಾಭಿಕ್ಷೆ ಪಡೆದು ಜೀವ ಉಳಿಸಿಕೊಂಡ ಶಿವಾಜಿ ಕನ್ನಡಿಗರ ಪಾಲಿಗೆ ಯಾವತ್ತಿಗೂ ದುಷ್ಟನೇ ಎಂದು ಅಭಿಪ್ರಾಯವನ್ನು ಮತ್ತೊಬ್ಬರು ವ್ಯಕ್ತಪಡಿಸಿದ್ದಾರೆ. ಇನ್ನು ಶಿವಾಜಿ ಬಗ್ಗೆ ಮಾತನಾಡುವ ಮೊದಲು ಸುದೀಪ್ ಓದಿಕೊಳ್ಳಬೇಕಿತ್ತು ಎಂದು ಇನ್ನೊಬ್ಬರು ಹೇಳಿದರೆ ಈ ತರಹದ ಪ್ರಶ್ನೆಗಳು ಎದುರಾದಾಗ ಸುದೀಪ್ ಸಾಮಾನ್ಯವಾಗಿ ಮಾತನಾಡುವುದಿಲ್ಲ ಆದರೆ ಈ ಬಾರಿ ಯಾಕೆ ಮಾತನಾಡಿದರು ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ನೀವು ಎಷ್ಟೇ ದೊಡ್ಡವರಾಗಿ, ಬೆಳೆಯಿರಿ. ಮೊದಲು ನೀವು ನಿಂತ ನೆಲಕ್ಕೆ ನಿಯತ್ತಾಗಿರೋದನ್ನು ಕಲಿಯಿರಿ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ .