ನಟ ರವಿಚಂದ್ರನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಎಂ.ಎನ್.ಕುಮಾರ್ ಸುದೀರ್ಘ ಮಾತುಕತೆ ನಡೆಸಿದರು. ವಿವಾದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ರವಿಚಂದ್ರನ್ ಅವರಿಗೆ ನೀಡಿದರು.‘ರವಿಚಂದ್ರನ್ ಅವರನ್ನು ಭೇಟಿಯಾಗಿ ನನ್ನ ಸಮಸ್ಯೆಗಳನ್ನು ಹೇಳಿಕೊಂಡಿರುವೆ. ಅವರು ಎಲ್ಲವನ್ನೂ ಕೇಳಿಸಿಕೊಂಡಿದ್ದಾರೆ. ನಂಬಿಕೆ ಇದ್ದರೆ ವಿವಾದವನ್ನು ನನಗೆ ಬಿಡು, ಸರಿಪಡಿಸುತ್ತೇನೆ ಎಂದಿದ್ದಾರೆ. ಅವರ ಮೇಲೆ ನಂಬಿಕೆ ಇದೆ. ಹೀಗಾಗಿ ಅವರ ಮುಂದಿನ ಸಲಹೆಗಾಗಿ ಕಾಯುತ್ತೇನೆ’ ಎಂದು ಎಂ.ಎನ್.ಕುಮಾರ್ ತಿಳಿಸಿದ್ದಾರೆ ‘ರವಿಚಂದ್ರನ್ ನನಗೆ 40 ವರ್ಷಗಳಿಂದ ಸ್ನೇಹಿತರು. ಈವರೆಗೆ ಅವರಿಂದ ಯಾರಿಗೂ ಅನ್ಯಾಯವಾಗಿದ್ದು ಕೇಳಿಲ್ಲ. ಅವರು ಏನೇ ಸಲಹೆ ನೀಡಿದರೂ ಹಿತದೃಷ್ಟಿಯಿಂದಲೇ ನೀಡುತ್ತಾರೆ. ಹೀಗಾಗಿ ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ. ಇಬ್ಬರ ಸಮಸ್ಯೆ ಆಲಿಸಿದ ನಂತರ ಮುಂದಿನ ತೀರ್ಮಾನ ನೀಡುವುದಾಗಿ ಅವರು ಹೇಳಿದ್ದಾರೆ’ ಎಂದು ಕುಮಾರ್ ಹೇಳಿದರು.
ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಶಿವರಾಜ್ ಕುಮಾರ್ ಅವರನ್ನೂ ಕುಮಾರ್ ಕಂಠೀರವ ಸ್ಟುಡಿಯೋದಲ್ಲಿ ಭೇಟಿಯಾಗಿ ವಾಸ್ತವಾಂಶಗಳನ್ನು ತಿಳಿಸಿದ್ದಾರೆ. ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚಿಸಿ, ಮುಂದಿನ ನಿರ್ಧಾರಕ್ಕೆ ಬರಲಾಗುವುದು. ನಟ ಸುದೀಪ್ ಅವರ ಕಾನೂನು ಹೋರಾಟಕ್ಕೆ ನ್ಯಾಯಾಲಯಕ್ಕೆ ಹಾಜರಾಗಿಯೇ ಉತ್ತರಿಸುತ್ತೇನೆ’ ಎಂದು ಕುಮಾರ್ ತಿಳಿಸಿದ್ದಾರೆ.
ಕುಮಾರ್ ಆರೋಪಕ್ಕೆ ಪ್ರತಿಯಾಗಿ ನಟ ಸುದೀಪ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅದಕ್ಕೆ ಉತ್ತರವಾಗಿ ಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಪ್ರಾರಂಭಿಸಿದ್ದರು. ಇದರ ಬೆನ್ನಲ್ಲೇ ‘ಧರಣಿ ಕೈಬಿಟ್ಟು ಕುಮಾರ್ ದಾಖಲೆಗಳೊಂದಿಗೆ ನನ್ನ ಬಳಿ ಬರಲಿ’ ಎಂದು ರವಿಚಂದ್ರನ್ ಅವರು ಸಲಹೆ ನೀಡಿದ್ದ ಕಾರಣ ಕುಮಾರ್ ರವಿಚಂದ್ರನ್ ಅವರನ್ನು ಭೇಟಿಯಾದರು.
‘ಕರ್ನಾಟಕಕ್ಕೆ ರಾಜ್‌ಕುಮಾರ್ ಕುಟುಂಬವೇ ಮೊದಲು. ಶಿವರಾಜ್ ಕುಮಾರ್ ಅವರ ಬಳಿಯೇ ಮೊದಲು ಹೋಗಬೇಕು. ಮೊದಲು ನಿಮ್ಮ ಮನವಿ ಪತ್ರವನ್ನು ಶಿವರಾಜ್‌ಕುಮಾರ್ ಅವರಿಗೆ ನೀಡಿ ಎಂದು ನಿರ್ಮಾಪಕರಿಗೆ ತಿಳಿಸಿದ್ದೇನೆ. ಅದೇ ನಮಗೆ ಪ್ರಧಾನ ಕಚೇರಿ’ ಎಂದು ರವಿಚಂದ್ರನ್ ಹೇಳಿದ್ದರು. ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ವಿವಾದ ಈಗ ರವಿಚಂದ್ರನ್ ಹಾಗೂ ಶಿವಣ್ಣನ ಮನೆ ತಲುಪಿದೆ. ರವಿಚಂದ್ರನ್ ಅವರನ್ನು ಭೇಟಿಯಾಗಿರುವ ಕುಮಾರ್ ಈಗ ಸಮಸ್ಯೆ ಪರಿಹಾರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ಈಗ ವಿವಾದದ ಚೆಂಡು ಪ್ರಸ್ತುತ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅಂಗಳಕ್ಕೆ ಬಂದಿದೆ. ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಇಬ್ಬರನ್ನೂ ಸಹ ಕುಮಾರ್ ಭೇಟಿ ಆಗಿದ್ದು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಎಂಎನ್ ಕುಮಾರ್, ರವಿಚಂದ್ರನ್ ಕೊಟ್ಟಿರುವ ಭರವಸೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ತಾವು ರವಿಚಂದ್ರನ್ ಮಾತಿನಂತೆ ನಡೆಯುವುದಾಗಿಯೂ ಹೇಳಿದ್ದಾರೆ.