Sandalwood Leading OnlineMedia

ರಿಶಭ್ ಶೆಟ್ಟಿ ದೃಷ್ಟಿಯಲ್ಲಿ `ಯಶಸ್ಸು’

ಹೊಸ ವರ್ಷ ಎಲ್ಲರ ಬಾಳಲ್ಲಿ ಹರುಷ ತರಲಿ ಎಂಬುದೇ ಎಲ್ಲರ ಹಾರೈಕೆ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇ ಆದರೆ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ಯಶಸ್ಸು ಅನ್ನುವುದು ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಹಾಗಿದ್ದರೆ ಯಶಸ್ಸಿನ ಮಂತ್ರ ಯಾವುದು? ಒಮ್ಮೆ ದಕ್ಕಿದ ಯಶಸ್ಸನ್ನು ಕಾಪಡಿಕೊಳ್ಳುವುದು ಹೇಗೆ? ಯಶಸ್ಸಿಗಾಗಿ ಯಾವುದಾದರೂ ರೆಡಿಮೆಡ್ ಮಾರ್ಗ ಸೂಚಿ ಇದೆಯಾ? ಈ ಎಲ್ಲಾ ಯಶಸ್ಸಿನ ಬಗೆಗಿನ ಪ್ರಶ್ನೆಗಳಿಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಅನುಭವದ ಮೂಸೆಯಲ್ಲಿ ಕಂಡುಕೊAಡ ಉತ್ತರವನ್ನು ಇಲ್ಲಿ ನೀಡಿದ್ದಾರೆ.

ಅಸಲಿಗೆ `ಯಶಸ್ಸು’ ಅನ್ನುವುದೇ ಇಲ್ಲ!
ನಾವು ಒಂದರ ನಂತರ ಇನ್ನೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತೇವೆ. ಒಂದು ಸಿನಿಮಾ ಅಥವಾ ಜೀವನದ ಒಂದು ಹಂತದಲ್ಲಿ ಯಶಸ್ಸು ಪಡೆಯಬಹುದು. ಆದರೆ, ನಾವು ಅದನ್ನು ಇನ್ನಷ್ಟು ಉತ್ತಮಪಡಿಸುವುದಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಸರಿಯಾದ ದಾರಿಯಲ್ಲಿ ಹೋಗುವ ರೀತಿ ಇದು ಅನ್ನುವುದು ನನ್ನ ಅನಿಸಿಕೆ. ಮನುಷ್ಯ ತಾನು ಯಶಸ್ವಿಯಾಗಿದ್ದೇನೆ ಎಂಬ ಭಾವನೆಯಲ್ಲಿ ಇದ್ದು ಬಿಡದೆ, ಕೆಲಸದ ಪ್ರಕ್ರಿಯೆಯನ್ನು ಉತ್ತಮಪಡಿಸುತ್ತಾ ಇನ್ನೂ ಒಳ್ಳೆಯ ಅವಕಾಶ ಸಿಗುತ್ತವೆ ಅನ್ನುವುದನ್ನು ಯೋಚಿಸಬೇಕು. ಮಾಡುವ ಕೆಲಸ ಯಶಸ್ವಿಯಾದಾಗ ಜವಾಬ್ದಾರಿಯೂ ಜಾಸ್ತಿಯಾಗುತ್ತದೆ, ಯಶಸ್ಸು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಉತ್ತೇಜನ ಕೊಡಬೇಕು. ಬಂದ ದಾರಿಯನ್ನು ಮರೆಯಬಾರದು ಮತ್ತು ಒಂದು ಯಶಸ್ಸಿನಿಂದ ಮೈಮರೆಯಕೂಡದು.

ಸೂತ್ರಕ್ಕೇ ಸಿಗದ ಯಶಸ್ಸು
ಯಶಸ್ಸಿಗೆ ನಿರ್ದಿಷ್ಟ ಸೂತ್ರ ಅಂತ ಇದ್ದಿದ್ದರೆ ಎಲ್ಲರೂ ಯೋಜನೆ ಹಾಕಿಕೊಂಡು, ಅದರ ಪ್ರಕಾರವೇ ಕೆಲಸ ಮಾಡಿ ಯಶಸ್ವಿಯಾಗುತ್ತಿದ್ದರು. ಆದರೆ, ಹಾಗೆ ಸೂತ್ರ ಹಾಕಿ ನಡೆಯಲು ಆಗುವುದಿಲ್ಲ, ತಾತ್ಕಾಲಿಕವಾಗಿ ಇದು ಕೆಲಸ ಮಾಡಬಹುದು. ಆದರೆ, ಎಲ್ಲವನ್ನೂ ಹೀಗೇ ಆಗಬೇಕು, ಹೀಗೇ ಹೋಗಬೇಕು ಎಂದು ಕೆಲಸ ಮಾಡಿದರೆ ದೀರ್ಘಕಾಲಿಕ ಯಶಸ್ಸು ಪಡೆಯಲು ಸಾಧ್ಯವಿಲ್ಲ, ಮಾಡುವ ಕೆಲಸದಲ್ಲಿ ಪ್ರತಿ ಹಂತದಲ್ಲೂ ಹೊಸ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ಪರಿಹರಿಸುತ್ತಾ ಮುಂದೆ ಹೋಗಬೇಕಾಗುತ್ತದೆ. ಸದಾ ಹೊಸತನ್ನು ಎದುರಿಸಬೇಕಾಗಿರುವುದು ಅನಿವಾರ್ಯ. ಹಾಗಾಗಿ ಪ್ರಯತ್ನ ನಿರಂತರವಾಗಿ ಇದ್ದೇ ಇರುತ್ತದೆ.

ಯಶಸ್ಸು ಎಂಬುದು ಒಂದು ಭಾವನೆ
ಯಶಸ್ಸನ್ನು ಯಾವ ಮಾನದಂಡದಲ್ಲಿ ಅಳೆಯುತ್ತೇವೆ ಅನ್ನುವುದು ಕೂಡ ಮುಖ್ಯ, ದುಡ್ಡು ಮಾಡಿದರೆ ಯಶಸ್ಸಾ? ಅಥವಾ ಕೆಲಸ ಪೂರ್ಣವಾಗುವುದು ಯಶಸ್ಸಾ? ಕೆಲವೊಮ್ಮೆ ಸಿನಿಮಾ ದುಡ್ಡು ಮಾಡದೇ ಇರಬಹುದು, ಜನರಿಗೆ ಸಿನಿಮಾ ಹಿಡಿಸದೇ ಇರಬಹುದು. ಆದರೆ, ಆ ಸಿನಿಮಾ ಮಾಡಿದವನಿಗೆ ಖುಷಿ ನೀಡಿರಬಹುದು. ಅವನ ಪಾಲಿಗೆ ಅದೇ ಯಶಸ್ಸು, ಸಿನಿಮಾ ಜನರಿಗೆ ಇಷ್ಟ ಆಗದೇ ಇದ್ದರೂ, ದುಡ್ಡು ಮಾಡಿದರೆ ಅದು ನಿರ್ಮಾಪಕರಿಗೆ ಯಶಸ್ಸು, ಜನರಿಗೆ ಇಷ್ಟ ಆದರೆ ಅದು ನಿರ್ದೇಶಕ ಹಾಗೂ ಜನರ ಲೆಕ್ಕದಲ್ಲಿ ಯಶಸ್ಸು. ನನ್ನ ಪ್ರಕಾರ, ನಿರ್ಮಾಪಕರಿಗೆ ಲಾಭ ಬಂದು, ಕೆಲಸ ಮಾಡಿದವರಿಗೆ ಉತ್ತಮ ವೇತನ ಸಿಕ್ಕಿ, ಜನರಿಗೆ ತಾವು ಕೊಟ್ಟ ಹಣಕ್ಕೆ ಸಮಾಧಾನ ಸಿಕ್ಕಿ ಖುಷಿ ಪಟ್ಟರೆ ಅದು ಒಂದು ಯಶಸ್ವಿ ಸಿನಿಮಾ ಅಂತ ಒಟ್ಟಾಗಿ ಹೇಳಬಹುದು. ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದು ನಿರ್ಮಾಪಕ, ನಿರ್ದೇಶಕರಿಗೆ ಹೆಸರು ಬಂದು ಕಲಾವಿದರಿಗೆ ಅಷ್ಟೇನು ಹೆಸರು ಬರದೇ ಇದ್ದರೆ ಅವರಿಗೆ ಅದು ಯಶಸ್ಸು ಅಂತ ಅನಿಸುವುದಿಲ್ಲ, ಹಾಗಾಗಿ, ಸಕ್ಸಸ್ ಅನ್ನುವುದು ಅವರವರ ಭಾವಕ್ಕೆ ತಕ್ಕಂತೆ ಎಂದೂ ಹೇಳಬಹುದು.

 

`ಕಾಂತಾರ’ ಎಂಬ ತೀರ್ಥ ಪ್ರಸಾದ
`ಕಾಂತಾರ’ದ ಈ ಮಟ್ಟಿಗಿನ ಯಶಸ್ಸು ಅನಿರೀಕ್ಷಿತ ಆಗಿದ್ದರೂ. ಮಾಡುವ ಕೆಲಸದಲ್ಲಿ ನಂಬಿಕೆ, ಧೈರ್ಯ, ಭರವಸೆ, ಪ್ರೀತಿ ಇತ್ತು. ಜನರಿಗೆ ಇಷ್ಟವಾಗುತ್ತದೆ ಅನ್ನುವ ವಿಶ್ವಾಸ ಇತ್ತು. ಕನ್ನಡದಲ್ಲೇ ಒಂದು ದೊಡ್ಡ ಯಶಸ್ಸು ಪಡೆದ ಚಿತ್ರ `ಕಾಂತಾರ’, ಜನರಿಗೆ ಇಷ್ಟ ಆದರೆ, ಅವರು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗುತ್ತಾರೆ. ಈ ಯಶಸ್ಸನ್ನು ನಾವು ವಿನೀತರಾಗಿ, ದೇವರ ತೀರ್ಥ ಪ್ರಸಾದದ ರೀತಿ ಸ್ವೀಕರಿಸಿ ಮುಂದಕ್ಕೆ ಹೋಗಬೇಕು. ಮುಂದಿನ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡುವುದಕ್ಕೆ ಪ್ರಯತ್ನಿಸಬೇಕು.

 

ಅವಕಾಶಗಳೇ `ಯಶಸ್ಸು’
ಒಂದು ಸಣ್ಣ ಪಾತ್ರ ಸಿಕ್ಕಿ, ನಾಲ್ಕು ಜನ ಗುರುತಿಸಿದರೆ ಅದು ನಮಗೆ ದೊಡ್ಡ ಸಕ್ಸಸ್ ಆಗಿತ್ತು. ತುಘಲಕ್, ಲೂಸಿಯಾದಲ್ಲಿ ಮಾಡಿದ ಪಾತ್ರಗಳನ್ನು ಜನ ಗುರುತಿಸಿದಾಗಲೂ ಖುಷಿಪಡುತ್ತಿದ್ದೆ. `ಉಳಿದವರು ಕಂಡAತೆ’ಯಲ್ಲಿ ಪ್ರಮುಖ ಪಾತ್ರ ಸಿಕ್ಕ ಖುಷಿ ಇದೆ. ಒಟ್ಟಿನಲ್ಲಿ ಅವಕಾಶ ಸಿಕ್ಕಿತಲ್ಲ ಅನ್ನುವುದು ಆಗ ಒಂದು ದೊಡ್ಡ ಸಕ್ಸಸ್‌ಗೆ ಸಮವಾಗಿತ್ತು. `ರಿಕ್ಕಿ’ಯಲ್ಲಿ ನಿರ್ದೇಶನದ ಅವಕಾಶ ಸಿಕ್ಕಿದ್ದೇ ದೊಡ್ಡ ವಿಷಯ. ಅವಕಾಶಗಳೇ ನಮ್ಮ ಪಾಲಿನ ಯಶಸ್ಸು ಆಗಿತ್ತು ಮತ್ತು ಆಗಿರುತ್ತದೆ ಕೂಡ.

ಪ್ರಯತ್ನವೊಂದೇ ದಾರಿ
ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಟ-ನಿರ್ದೇಶಕರು ತಮ್ಮ ಕೆಲಸ ನಿಲ್ಲಿಸುವುದಿಲ್ಲ. ಇನ್ನೊಂದು ಪ್ರಯತ್ನ ಮಾಡುತ್ತಾರೆ. ಯಶಸ್ಸಿನಿಂದ ಅಹಂಕಾರವನ್ನು ಬೆಳೆಸಿಕೊಂಡರೆ ಸಮಸ್ಯೆಯಾಗುತ್ತದೆ. ಸ್ಥಿತಪ್ರಜ್ಞವಾಗಿ ಕೆಲಸ ಮಾಡಬೇಕು. ನಮ್ಮ ಕೈಯಲ್ಲಿ ಪ್ರಯತ್ನಪಡುವುದಷ್ಟೇ ಇರುವುದು, ಬಾಕಿ ಎಲ್ಲವೂ ಜನರ ಕೈಯಲ್ಲಿದೆ. ಯಶಸ್ಸು ತಲೆಗೆ ಹತ್ತಿಬಿಟ್ಟರೆ, ದಾರಿಯಲ್ಲಿ ಸಿಕ್ಕ ಎಲ್ಲದಕ್ಕೂ ಗುದ್ದಿ ಬಿಡುತ್ತೇವೆ. ಆಗ ತಲೆ ಊದಿಕೊಂಡರೆ ಅದನ್ನು ಆರೈಕೆ ಮಾಡುವುದಕ್ಕೂ ಯಾರೂ ಬರುವುದಿಲ್ಲ!

ಎಚ್ಚರಿಕೆಯ ನಡೆ ಅತ್ಯಗತ್ಯ
ತುಂಬಾ ಸಕ್ಸಸ್ ಸ್ಟೋರಿಗಳನ್ನು ಹೇಳಬಾರದು. ಇನ್ನೊಬ್ಬರನ್ನು ಕಾಪಿ
ಮಾಡಿ ಏನಾದರೂ ಆಗುತ್ತೇವೆ ಎಂದರೆ ಸಾಧ್ಯವಿಲ್ಲ. ನಾವು ನಡೆದು ಕೊಳ್ಳುವ ರೀತಿ, ಹೋಗುವ ದಾರಿ, ಮಾಡುವ ಕೆಲಸ ಇನ್ನೊಬ್ಬರಿಗೆ ಸ್ಫೂರ್ತಿ ನೀಡಲಿ. ನಾವು ಕೂಡ ಅಣ್ಣಾವ್ರು, ವಿಷ್ಣು ಸರ್, ಪುಟ್ಟಣ್ಣ, ಪಂತುಲು, ಶಂಕರಣ್ಣ ಮೊದಲಾದ ಲೆಜೆಂಡ್‌ಗಳಿAದ ಸ್ಫೂರ್ತಿ ಪಡೆದಿದ್ದೇವೆ. ಎಷ್ಟು ದೊಡ್ಡ ನಟರಾಗಿದ್ದರೂ ಅಣ್ಣಾವ್ರ ಯಶಸ್ಸು ಮತ್ತು ನಟನೇ ದೇವರಾದ ರೀತಿ, ಅವರ ವಿನಮ್ರತೆ ನಮ್ಮ ನಡವಳಿಕೆಯ ಬಗ್ಗೆ ಎಚ್ಚರಿಕೆ ನೀಡುತ್ತವೆ. ನಮ್ಮನ್ನು ಎಚ್ಚರಿಸುವುದಕ್ಕೆ ಅಂತಹ ವ್ಯಕ್ತಿತ್ವಗಳು ಬೇಕು.

 

 

Share this post:

Related Posts

To Subscribe to our News Letter.

Translate »