ಯಾವುದೇ ಚಿತ್ರದ ಯಶಸ್ಸಿಗೆ ಕತೆಯೇ ಮೂಲಾಧಾರ. ಯಾವುದೇ ಹೀರೋ ನಗಣ್ಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಚಿತ್ರಕ್ಕೆ ಬೇಕಾದ ಕತೆ ಬಿಟ್ಟು, ಏನೆಲ್ಲಾ ಮಾಡಿದರೂ ಚಿತ್ರದ ಯಶಸ್ಸು ಠುಸ್ಸಾಗುತ್ತದೆ. ಈ ಸತ್ಯ ಅರಿತಿರುವ ಯುವ ನಿರ್ದೇಶಕ ಗೌತಮ್ ಬಸವರಾಜು ತಮ್ಮ ಮೊದಲ ಚಿತ್ರಕ್ಕೆ ‘ಯಥಾಭವ’ಕ್ಕೆ ಹೀರೋನೇ ಸೆಲೆಕ್ಟ್ ಮಾಡಿಲ್ಲ. ಚಿತ್ರದಲ್ಲಿ ಕತೆಯೇ ನಾಯಕನಾಗಿರುವುದರಿಂದ, ಉಳಿದವರು ಪಾತ್ರಧಾರಿಗಳಷ್ಟೆ ಆಗಿದ್ದಾರೆ.
ಇದನ್ನೂ ಓದಿ ವಿನಯ್ ಪ್ರೇಮಕಥೆಯ ಮತ್ತೊಂದು ಹಾಡು ಬಿಡುಗಡೆ…ಕೇಳಿ ಸೂಫಿ ಶೈಲಿ ಸರಳ ಗೀತೆ…
೧೯೧೧ರಲ್ಲಿ ಖ್ಯಾತ ತೆಲುಗು ನಟ ಅಕ್ಕಿನೇನಿ ನಾಗೇಶ್ವರರಾವ್ ಮತ್ತು ಇವರ ಮಗ ಅಕ್ಕಿನೇನಿ ನಾಗಾರ್ಜುನ ಅವರ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸ್ಥಾಪಿಸಿರುವ “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ” ದಲ್ಲಿ ನಿರ್ದೇಶನದ ತರಬೇತಿ ಕೋರ್ಸ್ ಮಾಡಿರುವ ಗೌತಮ್ ಬಸವರಾಜು ಒಂದೊಳ್ಳೆ ಕನ್ನಡ ಚಿತ್ರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಭಾರತದ ಪ್ರತಿಷ್ಟಿತ ಸಿನಿಮಾ ತರಬೇತಿ ಕಾಲೇಜ್ ಆಗಿ ರೂಪುಗೊಳ್ಳುತ್ತಿರುವ “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ”ದಲ್ಲಿ 1919-1922ರವರೆಗೆ ನಿರ್ದೇಶನದ ತರಬೇತಿ ಪಡೆದರು. ನಂತರ ಅವರು ೨೦೨೨ರ ಜೂನ್‌ನಲ್ಲಿ “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ” ದಲ್ಲಿ ತಮ್ಮ ಸಹಪಾಠಿಗಳಾಗಿದ್ದವರೊಂದಿಗೆ ಸೇರಿ ನಿರ್ಮಿಸಿದ “ಭೂಮಿ” ಎಂಬ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದರು. ಇದರ ಅನುಭವದ ಆಧಾರದ ಮೇಲೆ ಗೌತಮ್ ಬಸವರಾಜು “ಗಮ್ಯ” ಎಂಬ ಕಿರು ಚಿತ್ರವನ್ನು ನಿರ್ದೇಶಿಸಿ “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ”ದವರಿಂದ ಪ್ರಶಂಸೆ ಪತ್ರ ಪಡೆದರು.
ಇದನ್ನೂ ಓದಿ ಬಿಡುಗಡೆಯಾಯ್ತು ಪ್ರೇಕ್ಷಕರನ್ನು ಬೆರಗಾಗಿಸುವಂಥ `ಸಾರಾಂಶ’ ಟ್ರೈಲರ್!
ಹೀಗೆ ಎರಡು ವರ್ಷಗಳ ನಿರ್ದೇಶನ ತರಬೇತಿ ಪಡೆದ ನಂತರ ಸ್ವತಂತ್ರವಾಗಿ ಚಿತ್ರ ನಿರ್ದೇಶಿಸಲು ಗೌತಮ್ ಬಸವರಾಜು ಕತೆ ಸಿದ್ದಪಡಿಸಲು ಮುಂದಾದರು. “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ”ದಲ್ಲಿ ವಿದ್ಯಾರ್ಥಿಗಳಿಗೆ ಮೊದಲು ಕಲಿಸುತ್ತಿದ್ದುದೇ ಕತೆ ಸಿದ್ದಪಡಿಸುವುದನ್ನ. ಕತೆ ಒಂದು ಸಿದ್ದವಾದರೆ, ಚಿತ್ರ ತಾನಾಗೇ ನಿರ್ಮಾಣ ಹಂತಕ್ಕೆ (ಪ್ರೊಡಕ್ಷನ್) ಬರುತ್ತೆ. ಇದಕ್ಕಾಗಿ ಒಳ್ಳೇ ಕತೆ ತಯಾರಿಸುವ ಬಗೆಯನ್ನು ಹೇಳಿಕೊಟ್ಟಿದ್ದರು. ಅದರಂತೆ ಕಳೆದೊಂದು ವರ್ಷದಿಂದ ಗೌತಮ್ ಬಸವರಾಜು ಕತೆ ತಯಾರಿಯಲ್ಲಿ ತಲ್ಲೀನರಾಗಿದ್ದರು. ಪ್ರಸ್ತುತ ಸಮಾಜದಲ್ಲಿ ಕಾಣುತ್ತಿರುವ ವೈರುಧ್ಯ ಭಾವಗಳನ್ನು ಕ್ರೋಢೀಕರಿಸಿ ವಿಭಿನ್ನ ಚಿತ್ರಕತೆ ಸಿದ್ದಪಡಿಸಿದರು. ನಂತರ ಚಿತ್ರದ ಪ್ರೊಡಕ್ಷನ್‌ಗೆ ಕೈ ಹಾಕಿದರು. ಎಂ.ಆರ್. ಸುಜಾತಕುಮಾರಿ ಮತ್ತು ಬಿ.ಎನ್.ಅನಿಲ್ ಕುಮಾರ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಪವನ್ ಶಂಕರ್ ಮತ್ತು ಡಾ. ಸಹನಾ ಸುಧಾಕರ್ ಇದ್ದರೆ, ಚಿತ್ರದ ಪ್ರಧಾನ ಆಕರ್ಷಣೆಯಾಗಿ ಹಿರಿಯ ನಟ ದತ್ತಣ್ಣ ಇದ್ದಾರೆ.
ಇದನ್ನೂ ಓದಿ ಹೀರೋ ಶರಣ್ “ಜಸ್ಟ್ ಪಾಸ್ “ಗೆ ಫಸ್ಟ್ ಕ್ಲಾಸ್ ಹಾಡೋದನ್ನ ಹಾಡಿದ್ದಾರೆ
ಚಿತ್ರದ ಶೀರ್ಷಿಕೆ ಹೇಳುವಂತೆ ‘ಯಥಾಭವ’ ಮಾಡಿದ್ದುಣ್ಣೋ ಮಾರಾಯ ಅನ್ನೋ ಗಾದೆ ಮಾತನ್ನು ಪುನರುಚ್ಛರಿಸುತ್ತದೆ. ಎಲ್‌ಎಲ್‌ಎಂ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಯುವತಿಯೊಬ್ಬಳ ‘ರೇಪ್ ಅಂಡ್ ಮರ್ಡರ್’ ಪ್ರಕರಣದಲ್ಲಿ ಆರೋಪಿಯಾಗಿ ಕಾನೂನಿನ ಕುಣಿಕೆಯಿಂದ ಹೇಗೆ ಪಾರಾದ ಅನ್ನೋದೇ ಕತೆಯ ಮೂಲ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಕಾನೂನು ವಿದ್ಯಾರ್ಥಿ ಮೇಲೆ ಬಂದ ಆರೋಪಕ್ಕಿಂತ ಭಯಾನಕವಾದುದು ‘ರೇಪ್ ಅಂಡ್ ಮರ್ಡರ್’ ಆದ ಯುವತಿ ಗೃಹಮಂತ್ರಿ ಕಾಳಭೈರವನ ಮಗಳು ಎಂಬುದು. ಇಲ್ಲಿ ನಿರಾಪರಾಧಿ ಮತ್ತು ನಿಷ್ಪಾಪಿಯೂ ಆದ ಕಾನೂನು ವಿದ್ಯಾರ್ಥಿ ಪಡುವ ಸಂಕಟ-ಅವಮಾನಗಳು ಪ್ರೇಕ್ಷಕರ ಹೃದಯ ಹಿಂಡುವAತಿದೆ ಅನ್ನುತ್ತಾರೆ ನಿರ್ದೇಶಕ ಗೌತಮ್ ಬಸವರಾಜು.
ಇದನ್ನೂ ಓದಿ ಅನೀಶ್ ಮೀಟ್ ಚಿರು…ಆರಾಮ್ ಅರವಿಂದ ಸ್ವಾಮಿ ಸಿನಿಮಾ ಕಂಟೆಂಟ್ ನೋಡಿ ಏನಂದ್ರು ಮೆಗಾಸ್ಟಾರ್..?
‘ಯಥಾಭವ’ ಆಳುವ ವರ್ಗದ ನಿರಂಕುಶ ಅಧಿಕಾರ ಮತ್ತು ಭ್ರಷ್ಟಾಚಾರಗಳ ‘ಯಥಾಭಾವ’ಗಳನ್ನು ಅನಾವರಣಗೊಳಿಸುತ್ತದೆ. ಇದೇ ಮೊದಲ ಬಾರಿ ಅಭಿನಯಿಸುತ್ತಿರುವ ಡಾ.ಸಹನಾ ಸುಧಾಕರ್ ಮೂಲತಃ ಬೆಂಗಳೂರಿನ ಆಯರ್ವೇದ ವೈದ್ಯೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ (ಪಿಆರ್‌ಕೆ) ಪ್ರೊಡಕ್ಷನ್‌ನಲ್ಲಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ಗೌತಮ್ ಬಸವರಾಜು ತಮ್ಮ ನೂತನ ಚಿತ್ರ ‘ಯಥಾಭವ’ಕ್ಕೆ ಕನ್ನಡದ ನೇಟಿವಿಟಿಗೆ ಹೊಂದುವ ನಾಯಕಿ ಬೇಕಾಗಿದ್ದಾರೆಂದು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಇದಕ್ಕೆ ಸ್ಪಂದಿಸಿ ಫೋಟೋ ಕಳುಹಿಸಿದ ಡಾ.ಸಹನಾ ಸುಧಾಕರ್ ಅವರನ್ನು ಸ್ಮಿತಾ ಪಾತ್ರಕ್ಕೆ ಆಯ್ಕೆ ಮಾಡಿದರು. ಚಿತ್ರದಲ್ಲಿ ನ್ಯಾಯಾಧೀಶ ಫಣೀಂದ್ರರಾವ್ ಪಾತ್ರ ಪ್ರಮುಖವಾಗಿದ್ದರಿಂದ ಹಿರಿಯ ನಟ ಹೆಚ್.ಜಿ.ದತ್ತಾತ್ರೇಯರನ್ನೇ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ನಿರ್ದೇಶನ ಜವಾಬ್ದಾರಿ ಹೊತ್ತಿರುವ ಗೌತಮ್ ಬಸವರಾಜು ತಮ್ಮ ಸ್ಕೃಪ್ಟ್ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ತಮ್ಮ ಕತೆಗೆ ತಕ್ಕಂತೆ ಯೋಚಿಸಿ ಸಂಭಾಷಣೆ ಬರೆದಿರುವುದರಿಂದ, ಸ್ಕೃಪ್ಟ್ನಲ್ಲಿರುವ ಸಂಭಾಷಣೆ ಬದಲು, ತಮ್ಮದೇ ಶೈಲಿಯ ಸಂಭಾಷಣೆ ಬಳಸಲು ಹಿರಿಯ ನಟ ದತ್ತಣ್ಣ ಯೋಚಿಸಿದ್ದರು. ಆದರೆ, ಇದಕ್ಕೆ ಅವಕಾಶ ನೀಡದ ನಿರ್ದೇಶಕ ಗೌತಮ್ ಬಸವರಾಜು ತಾವು ಬರೆದಂತೆಯೇ ಡೈಲಾಗ್ ಬರಬೇಕೆಂದು ಪಟ್ಟು ಹಿಡಿದು ಮಾಡಿಸಿದ್ದಾರೆ. ತಮ್ಮ ಬಿಗಿ ನಿಲುವಿನಿಂದ ಹಿರಿಯ ನಟ ದತ್ತಣ್ಣನವರಿಗೆ ಬೇಸರವಾಗುತ್ತೆ ಅನ್ನೋ ಅರಿವು ಗೌತಮ್‌ಗೆ ಇದ್ದರೂ, ಸ್ಕೃಪ್ಟ್ ವಿಷಯದಲ್ಲಿ ಕಠಿಣ ನಿಲುವು ತಾಳಿದ್ದಾರೆ. ಇದರಿಂದ ತಾವು ಮನಸ್ಸಿನ ಪರದೆಯಲ್ಲಿ ಕಲ್ಪಿಸಿದ ರೀತಿಯಲ್ಲೇ ಚಿತ್ರ ಮೂಡಿಬಂದಿದೆ ಅನ್ನೋ ಸಂತಸದಲ್ಲಿದ್ದಾರೆ ನಿರ್ದೇಶಕ ಗೌತಮ್ ಬಸವರಾಜು.
ಚಿತ್ರದ ಮತ್ತೊಂದು ಹೈಲೈಟ್ ಪಾತ್ರವಾದ ಗೃಹಮಂತ್ರಿ ಪಾತ್ರವನ್ನು ಬಾಲರಾಜ್ ವಾಡಿ ಮಾಡಿದ್ದಾರೆ. ದಿವಂಗತ ನಟ ರಾಕ್‌ಲೈನ್ ಸುಧಾಕರ್ ಪುತ್ರ ಗೌತಮ್ ಸುಧಾಕರ್ ಚಿತ್ರದಲ್ಲಿ ಸಬ್‌ಇನ್‌ಸ್ಪೆಕ್ಟರ್ ಗೌತಮ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಂದೆ ಸುಧಾಕರ್ ನುರಿತ ಕಲಾವಿದರಾಗಿದ್ದರೂ, ಮಗ ಗೌತಮ್ ಮೈಚಳಿ ಬಿಟ್ಟು ಅಭಿನಯಿಸಲು ಬಹಳ ಕಷ್ಟಪಟ್ಟರು. ಅಭಿನಯ ತಮ್ಮಿಂದ ಸಾಧ್ಯವೇ ಇಲ್ಲ ಅನ್ನೋ ಮನಸ್ಥಿತಿಗೆ ಬಂದಿದ್ದ ಗೌತಮ್ ಸುಧಾಕರ್ ಮನವೊಲಿಸಿ, ಅವರಿಂದ ಉತ್ತಮ ಅಭಿನಯ ಹೊರತೆಗೆದಿದ್ದಾರೆ. ಹಾಗೇ, ಪಬ್ಲಿಕ್ ಪ್ರಾಸಿಕ್ಯೂಟರ್ ಹಿರೇಮಠ್ ಪಾತ್ರವನ್ನು ಗೋಪಾಲಕೃಷ್ಣ ದೇಶಪಾಂಡೆ ಮಾಡಿದ್ದರೆ, ನೀನಾಸಂ ಆನಂದ್, ಉಮಾ ಹೆಬ್ಬಾರ್,ಯಶಸ್ವಿನಿ ರವೀಂದ್ರ, ಮಹೇಶ್ ಕಲ್ಲಿ ಮತ್ತು ಮಾಸ್ಟರ್ ಸುಮಂತ್ ತಮಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಹುತೇಕ ಚಿತ್ರದ ತಾಂತ್ರಿಕ ವರ್ಗ ನಿರ್ದೇಶಕ ಗೌತಮ್ ಬಸವರಾಜು ಅವರ “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ”ದ ಸಹಪಾಠಿ ಮಿತ್ರರೇ ಮಾಡಿದ್ದಾರೆ. ಕ್ಯಾಮೆರಾ ವರ್ಕ್ ಮಾಡಿರುವ ಹರ್ಷ್ಮಿಶ್ರಾ ಮತ್ತು ಹರ್ಷ ಮಲ್ಲಿಕ್, ಸಂಕಲನ ಮಾಡಿರುವ ಹರೀಶ್ ಚೌಧರಿ, ಕಾಸ್ಟೂö್ಯಮ್ ಡಿಸೈನರ್ ಅನಘ ರಾವತ್, ಮೇಕಪ್ ಮ್ಯಾನ್ ರಾಜ್ ಎಲ್ ಕಮಲ್, ಪ್ರೊಡಕ್ಷನ್ ಡಿಸೈನರ್ ಸ್ಮಿತಾ ಕುಲಕರ್ಣಿ ಎಲ್ಲರೂ “ಅನ್ನಪೂರ್ಣ ಕಾಲೇಜ್ ಆಫ್ ಫಿಲಂ ಅಂಡ್ ಮೀಡಿಯಾ”ದವರೇ ಆಗಿದ್ದಾರೆ. ಕ್ಯಾಮೆರಾ ವರ್ಕ್ ಮಾಡಿರುವ ಹರ್ಷ್ಮಿಶ್ರಾ ಹಿಂದಿಯಲ್ಲಿ ಸನ್ನಿ ಡಿಯೋಲ್ ಮತ್ತು ಸಿಮ್ರಾನ್ ಅಭಿನಯದ ಚಿತ್ರವೊಂದನ್ನು ಚಿತ್ರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಸಂಗೀತ ನಿರ್ದೇಶನ ಮುಂಬೈನ ಉತ್ಸವ್ ಶ್ರೇಯ್ ನೀಡಿದ್ದಾರೆ. ಸುನಿಧಿ ಗಣೇಶ್ ಮತ್ತು ಚಿನ್ಮಯಿ ಶ್ರೀಪಾದ ಹಾಡಿದ್ದಾರೆ. ಅಭಿಷೇಕ್ ಅಕ್ಕನವರ್ ಮತ್ತು ಸುರೇಶ್‌ರೆಡ್ಡಿ ತಲಾ ಎರಡು ಹಾಡುಗಳನ್ನು ಬರೆದಿದ್ದಾರೆ. ಅಭಿಷೇಕ್ ಅಕ್ಕನವರ್ ಅಮೆರಿಕಾದಲ್ಲಿ ‘ಸುರಭಿ’ ಎಂಬ ಕನ್ನಡ ಯುಟ್ಯೂಬ್ ನಡೆಸುತ್ತಿದ್ದಾರೆ. ಸುರೇಶ್‌ರೆಡ್ಡಿ ಹಾಡುಗಳನ್ನು ಬರೆಯುವುದರ ಜೊತೆಗೆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ನಿರ್ಮಿಸಿರುವ ‘ಯಥಾಭವ’ ಚಿತ್ರದ ಟೀಸರ್ ಕಳೆದ ಆಗಸ್ಟ್.೨೫ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಮುಂದಿನ ಡಿಸೆಂಬರ್.೧ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಮೊದಲ ಪ್ರೊಮೋ ನೋಡಿದ ಹಿರಿಯ ನಟ ದತ್ತಣ್ಣ ಚಿತ್ರ ತುಂಬಾ ಚೆನ್ನಾಗಿ ಬಂದಿದೆ ಅಂತ ಚಿತ್ರತಂಡವನ್ನು ಹೊಗಳಿದ್ದಾರೆ. ಮುಖ್ಯವಾಗಿ ಸ್ಕೃಪ್ಟ್ನಲ್ಲಿರುವಂತೆ ಡೈಲಾಗ್ ಬರಬೇಕು ಅಂತ ನಿರ್ದೇಶಕರು ಏಕೆ ಹಠಹಿಡಿದು ಮಾಡಿಸಿದರು ಎಂಬುದು ಚಿತ್ರವನ್ನು ತೆರೆಮೇಲೆ ನೋಡಿದ ನಂತರ ತಮಗೆ ಅರ್ಥವಾಯಿತು ಅಂತ ಹೊಸ ನಿರ್ದೇಶಕ ಗೌತಮ್ ಬಸವರಾಜು ಅವರನ್ನು ಬೆನ್ನು ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.